Hassan Scandal: ಪ್ರಜ್ವಲ್‌ಗೆ ನೊಟೀಸ್, ವಿದೇಶದಿಂದ ಕರೆ ತರಲು ಸಿದ್ದತೆ, ಕೇಂದ್ರ ನೆರವು ಪಡೆಯಲು ಯತ್ನ: ಗೃಹ ಸಚಿವ
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಹೊರ ದೇಶದಿಂದ ಕರೆ ತರಲಯ ಪ್ರಯತ್ನಿಸಲಾಗುತ್ತಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ದಾವಣಗೆರೆ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋದ ತಕ್ಷಣ ಪ್ರಕರಣದಿಂದ ಬಿಟ್ಟು ಬಿಡಲು ಸಾಧ್ಯವಿಲ್ಲ. ಪ್ರಜ್ವಲ್‌ಗೆ 41ಎ ಅಡಿ ನೋಟಿಸ್ ನೀಡಲಾಗಿದೆ. ವಿಚಾರಣೆಗಾಗಿ ಎಸ್ಐಟಿ ಮುಂದೆ ಹಾಜರಾಗಬೇಕು. ಆತನನ್ನು ವಿದೇಶದಿಂದ ಹೇಗೆ ಕರೆತರಬೇಕು ಎಂಬ ನಿಟ್ಟಿನಲ್ಲಿ ಎಸ್ಐಟಿ ಕೆಲಸ ಮಾಡುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರದ ನೆರವು ಬೇಕಾಗುತ್ತದೆ. ದೇಶ ಬಿಟ್ಟು ಪರಾರಿಯಾಗದಂತೆ ತಡೆಯುವಲ್ಲಿ ಕೇಂದ್ರ ಗುಪ್ತದಳ ವಿಫಲವಾಗಿದೆ. ಏರ್‌ಪೋರ್ಟ್, ಪಾಸ್‌ಪೋರ್ಟ್ ಕಚೇರಿ ಯಾರ ಅಧೀನದಲ್ಲಿ ಕೆಲಸ ಮಾಡುತ್ತಿವೆ. ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗುತ್ತಿರುವ ಮಾಹಿತಿ ಕೇಂದ್ರ ಗುಪ್ತದಳಕ್ಕೆ ಇರಲಿಲ್ಲವೇ? ದೇಶ ಬಿಟ್ಟು ಹೋಗದಂತೆ ಪ್ರಜ್ವಲ್‌ನನ್ನು ನೀವೇಕೆ ತಡೆಯಲಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಪ್ರಶ್ನಿಸಿದ್ದಾರೆ.
ದಾವಣಗೆರೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವಸ್ಯಸ್ಥೆ ಹಾಳಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಮಾಹಿತಿ ಕೊರತೆ ಇದೆ. ತಮ್ಮ ಪಕ್ಷದ ರಾಜ್ಯ ಮುಖಂಡರಿಂದ ಮಾಹಿತಿ ತರಿಸಿಕೊಂಡು ಮಾತನಾಡಬೇಕಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಎಷ್ಟು ಕೊಲೆ ಸುಲಿಗೆ, ಅತ್ಯಾಚಾರ ಪ್ರಕರಣಗಳಾಗಿವೆ. ಡ್ರಗ್ಸ್ ದಂಧೆ ಯಾವ ಮಟ್ಟದಲ್ಲಿತ್ತು ಎಂಬುದನ್ನು ಅಂಕಿ-ಅಂಶ ಸಮೇತ ಸದನದಲ್ಲಿ ಉತ್ತರಿಸುತ್ತೇನೆ ಎಂದು ಹೇಳಿದರು.
ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳ ಕುರಿತು ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಕೂಡಲೇ ಪ್ರಕರಣದ ಸೂಕ್ಷ್ಮತೆ ಮತ್ತು ಗಂಭೀರತೆಯನ್ನು ಅರಿತು ಎಡಿಜಿಪಿ ನೇತೃತ್ವದ ಎಸ್‌ಐಟಿ ತಂಡ ರಚಿಸಲಾಗಿದೆ. ತ್ವರಿತಗತಿಯಲ್ಲಿ ಕೂಲಂಕುಷವಾಗಿ ತನಿಖೆಗೆ ಸೂಚಿಸಿದ್ದೇವೆ. ಪ್ರಕರಣದಲ್ಲಿ ಯಾರನ್ನು ರಕ್ಷಣೆ ಮಾಡುವ ಅಗತ್ಯವಿಲ್ಲ ಎಂದರು.
ಪ್ರಕರಣದ ಎಲ್ಲ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡಲಾಗುವುದು. ಅಶ್ಲೀಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡದಂತೆ ಕ್ರಮ ಕೈಗೊಳ್ಳಲಾಗುವುದು. ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿಯೂ ಸಹ ಪೋಸ್ಟ್ ಆಗದಂತೆ ತಡೆಯುವ ನಿಟ್ಟಿನಲ್ಲಿ ಏಜೆನ್ಸಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ಅವಧಿಗಿಂತಲೂ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಶಂಕಿತ ಉಗ್ರರನ್ನು ತ್ವರಿತಗತಿಯಲ್ಲಿ ಹಿಡಿಯುವಲ್ಲಿ ರಾಜ್ಯ ಪೊಲೀಸರ ಪಾತ್ರ ದೊಡ್ಡದಿದೆ. ಶಂಕಿತರು ಚೆನ್ನೈನಲ್ಲಿ ಟೋಪಿ ಖರೀದಿಸಿರುವ ಮಾಹಿತಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ಕಲೆಹಾಕಿ, ಎನ್ಐಎ ಜೊತೆ ಹಂಚಿಕೊಳ್ಳಲಾಗಿತ್ತು. ರಾಜ್ಯ ಪೊಲೀಸರು ಮತ್ತು ಎನ್ಐಎ ಅಧಿಕಾರಿಗಳು ಜಂಟಿಯಾಗಿ ಆರೋಪಿಗಳನ್ನು ಹಿಡಿದಿದ್ದಾರೆ ಎಂದು ತಿಳಿಸಿದರು.
ಹುಬ್ಬಳ್ಳಿ ಯವತಿ ನೇಹಾ ಹತ್ಯೆ ಪ್ರಕರಣದ ಆರೋಪಿಯನ್ನು ಘಟನೆ ನಡೆದ ಒಂದು ಗಂಟೆಯೊಳಗೆ ಹಿಡಿಯಲಾಗಿದೆ. ಕೂಲಂಕುಷವಾಗಿ ತನಿಖೆ ನಡೆಸಲು ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಯಾವುದೇ ರೀತಿಯ ಕಾನೂನು ಬಾಹಿರ ಘಟನೆ ನಡೆದ ಕೂಡಲೇ ಕ್ರಮ ತೆಗೆದುಕೊಳ್ಳಲಾಗಿದೆ. ಸಾವಿರಾರು ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ ಪಡಿಸಲಾಗಿದೆ. ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣದ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುದು ಸತ್ಯಕ್ಕೆ ದೂರವಾದುದು ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)