Obitury: ನಗು ಮೊಗದ ಕನ್ನಡದ ಮೇಷ್ಟ್ರು, ಜನಪದವಿದ್ವಾಂಸ ದಾವಣಗೆರೆಯ ಪ್ರೊ.ಎಂ.ಜಿ.ಈಶರಪ್ಪ ನೆನಪು ಮಾತ್ರ
ದಾವಣಗೆರೆಯಲ್ಲಿ ನೆಲೆಸಿ ಅಧ್ಯಾಪಕ, ಪ್ರಾಂಶುಪಾಲರಾಗಿ ಕನ್ನಡದ ಮೇಷ್ಟ್ರಾಗಿ ಸಹಸ್ರಾರು ವಿದ್ಯಾರ್ಥಿಗಳಲ್ಲಿ ತಮ್ಮ ವಿನಯವಂತಿಕೆ, ಪಾಠದ ಶೈಲಿಯಿಂದಲೇ ಇಷ್ಟವಾಗುತ್ತಿದ್ದ ಡಾ.ಎಂ.ಜಿ.ಈಶ್ವರಪ್ಪ(MG Eshwarappa) ವಿಧಿವಶರಾಗಿದ್ದಾರೆ.

ದಾವಣಗೆರೆ: ಅವರು ಅಪ್ಪಟ ಕನ್ನಡ ಮನಸಿನ ಮೇಷ್ಟ್ರು. ತರಗತಿಯಲ್ಲಿ ನಿಂತು ಕನ್ನಡ ಪಾಠ ಮಾಡುತ್ತಿದ್ದರೆ ಕೇಳುವುದೇ ಚೆಂದ. ಅದರಲ್ಲೂ ವಿಜ್ಞಾನ ವಿದ್ಯಾರ್ಥಿಗಳಲ್ಲೂ ಕನ್ನಡ ಭಾಷೆ, ಸಾಹಿತ್ಯದ ಪ್ರೀತಿಯನ್ನು ತುಂಬಿ ಅದೆಷ್ಟೋ ಕನ್ನಡದ ಮನಸುಗಳನ್ನು ಬೆಳೆಸಿದ ಪ್ರೀತಿಯ ಗುರುಗಳು ಅವರ ನಗುವೇ ಒಂದು ರೀತಿಯಲ್ಲಿ ಆಯಸ್ಕಾಯದಂತ ನಗುವಿನ ಶಕ್ತಿವುಳ್ಳದ್ದು. ಉಡುಗೆ, ಮಾತು, ವಿನಯವಂತಿಕೆ ಮೂಲಕವೇ ಸಹಸ್ರಾರು ವಿದ್ಯಾರ್ಥಿಗಳ ಮನಸನ್ನು ಗೆದ್ದಿದ್ದ ವಿದ್ವಾಂಸರು. ದಾವಣಗೆರೆಯಲ್ಲೇ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕನ್ನಡ ಅಧ್ಯಾಪಕರಾಗಿ,. ಪ್ರಾಂಶುಪಾಲರಾಗಿ, ಆಡಳಿತಗಾರರಾಗಿ, ಇವೆಲ್ಲದರ ನಡುವೆ ವಿದ್ವಾಂಸ, ಸಾಹಿತಿಯಾಗಿ ತಮ್ಮ ಅನನ್ಯತೆಯನ್ನು ಉಳಿಸಿಕೊಂಡಿದ್ದ ಡಾ.ಎಂ.ಜಿ.ಈಶ್ವರಪ್ಪ ಅವರು ನಿಧನರಾಗಿದ್ದಾರೆ. ನ್ಯುಮೋನಿಯಾದಿಂದ ಅನಾರೋಗ್ಯಪೀಡಿತರಾಗಿದ್ದ ಈಶ್ವರಪ್ಪ ಅವರು ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಶನಿವಾರ ಮಧ್ಯಾಹ್ನ ವಿಧಿವಶರಾದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಶಿಸ್ತಿನ ಗುರುಗಳು
ಈಶ್ವರಪ್ಪ ಅವರು ಶಿಸ್ತು, ಸಂಯಮಕ್ಕೆ ಹೆಸರುವಾಸಿಯಾದವರು. ತರಗತಿಯಲ್ಲಿ ಪಾಠಕ್ಕೆ ನಿಂತರೆ ಅದನ್ನು ಕೇಳುವುದೇ ಚಂದ. ಅದನ್ನು ನೆನಪಿಟ್ಟುಕೊಂಡವರು ಪರೀಕ್ಷೆಯಲ್ಲಿ ಕನ್ನಡ ಪರೀಕ್ಷೆಯನ್ನು ಸರಳವಾಗಿ ಉತ್ತೀರ್ಣರಾಗಿಬಿಡುವಷ್ಟು ಅವರ ಪಾಠದ ಶೈಲಿ ನೆನಪಿನಲ್ಲಿ ಉಳಿಯುವಂತದ್ದು. ಕನ್ನಡ ಸಾಹಿತ್ಯ, ಕಾವ್ಯ, ಕಥೆಗಳ ಜತೆಗೆ ಹಳೆಗನ್ನಡವನ್ನು ವೈಶಿಷ್ಟ್ಯಪೂರ್ಣವಾಗಿ ಹೇಳಿಕೊಡುತ್ತಿದ್ದುದು, ಜನಪದ, ಭಾಷೆಯ ಕುರಿತು ನಿರರ್ಗಳವಾಗಿ ಮಾತನಾಡುತ್ತಿದ್ದ ಶೈಲಿಯೇ ಅವರ ವಿಶೇಷತೆ. ಪ್ರತಿ ವಿದ್ಯಾರ್ಥಿಯ ನೆಚ್ಚಿನ ಗುರುಗಳಾಗಿ ದಾವಣಗೆರೆ ಮಾತ್ರವಲ್ಲದೇ ನಾಡಿನ ನಾನಾ ಭಾಗಗಳಲ್ಲೂ ಶಿಷ್ಯ ವರ್ಗವನ್ನು ಹೊಂದಿದ್ದವರು.
ಮಲೆನಾಡ ಪ್ರತಿಭೆ
ಮಾಳಿಗೆ ಗೌಡರ ಈಶ್ವರಪ್ಪ ಅವರು ಮಲೆನಾಡಿನ ಶಿವಮೊಗ್ಗ ತಾಲ್ಲೂಕು ಹಾಡೋನಹಳ್ಳಿ ಗ್ರಾಮದವರು. 1950ರಲ್ಲಿ ಜನಿಸಿದ ಎಂ. ಜಿ. ಈಶ್ವರಪ್ಪ ಹುಟ್ಟೂರಿನಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದರು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪಡೆದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂಎ, ಪಿಎಚ್‌ಡಿ ಮುಗಿಸಿದ ಅಧ್ಯಾಪನ ವೃತ್ತಿಗೆ ಬಂದವರು. ದಾವಣಗೆರೆಯ ಧರಾಮ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಮೇಷ್ಟ್ರಾಗಿ ಸೇರಿಕೊಂಡವರು. ಆನಂತರ ಎಂ. ಎಸ್. ಬಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಪ್ರಾಂಶುಪಾಲರೂ ಆಗಿದ್ದರು. ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಆತ್ಮೀಯ ಒಡನಾಟವಿತ್ತು. ನಿವೃತ್ತಿ ಬಳಿಕ ಕೆಲ ಕಾಲ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಶೈಕ್ಷಣಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.. 1987ರಿಂದ 90ರವರೆಗೆ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. 2003ರಿಂದ 2006ರವರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಹಾಗೂ 2007ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಮೆಂಬರ್ ಕೂಡ ಆಗಿದ್ದವರು.
ದಾವಣಗೆರೆಯಲ್ಲಿ ಕಾಯಕ
ಧರಾಮ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ದಿನಗಳಲ್ಲಿ ಇವರ ರಸವತ್ತಾದ ಕಥೆಗಾರಿಕೆಗೆ, ಮಾತುಗಾರಿಕೆಗೆ ಮನಸೋತು ತಮಗೆ ತರಗತಿ ಇಲ್ಲದ ವಿದ್ಯಾರ್ಥಿಗಳೂ ಕೂಡಾ ಇವರ ತರಗತಿಯಲ್ಲಿ ಹಾಜರಿರುತ್ತಿದ್ದರು. ಈಶ್ವರಪ್ಪನವರು ತಮ್ಮ ನಿರರ್ಗಳ ಮಾತುಗಾರಿಕೆಗೆ ಹೆಸರಾದವರು. ಗದ್ಯ ಮತ್ತು ಪದ್ಯಗಳ ಬೋಧನೆಯನ್ನು ರಸವತ್ತಾಗಿ ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾರೆ. ದಾವಣಗೆರೆಯ ಸಾಹಿತ್ಯವಲಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವುದನ್ನು ಹಲವರು ಈಗಲೂ ನೆನಪಿಸಿಕೊಳ್ಳುತ್ತಾರೆ.
2011ರಲ್ಲಿ ಶಿವಮೊಗ್ಗ ತಾಲ್ಲೂಕು 3ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗಾದಿ ಈಶ್ವರಪ್ಪ ಅವರಿಗೆ ದೊರೆತಿತ್ತು. 2014ರಲ್ಲಿ ಹರಿಹರದಲ್ಲಿ ನಡೆದಿದ್ದ ದಾವಣಗೆರೆ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಗಿದ್ದರು.ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗು 2020ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.
ದೊಡ್ಡವರ ಒಡನಾಟ
ಸಾಹಿತ್ಯ, ಸಂಘಟನೆ, ರಂಗಭೂಮಿ, ಜಾನಪದ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಾಧ್ಯವಾಗಿದ್ದು ಹೇಗೆ? ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್, ಕರ್ನಾಟಕ ಸಂಘದ ಆವರಣ, ಮೈಸೂರಿನ ಗಂಗೋತ್ರಿ, ದಾವಣಗೆರೆ–ಚಿತ್ರದುರ್ಗದಲ್ಲಿನ ಸಂಶೋಧನಾ ಕ್ಷೇತ್ರಕಾರ್ಯ ಸಾಹಿತ್ಯ, ಸಂಘಟನೆ, ಜಾನಪದ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಭೂಮಿಕೆಯಾದವು. ಪಿ.ಲಂಕೇಶ್, ಬಿ.ವಿ.ಕಾರಂತರ ಜತೆಗಿನ ಒಡನಾಟ ರಂಗಭೂಮಿಯಲ್ಲಿ ಕೆಲಸ ಮಾಡಲು ಪ್ರೇರೇಪಿಸಿತು. ಡಾ.ಜಿ.ಶಂ.ಪರಮಶಿವಯ್ಯ ಅವರಿಂದಾಗಿ ಜಾನಪದ ಕ್ಷೇತ್ರದಲ್ಲಿ ಆಸಕ್ತಿ ಬೆಳೆಯಿತು ಎಂದು ತಮ್ಮ ಭಾಷಣದಲ್ಲಿ ಈಶ್ವರಪ್ಪ ಅವರು ಸಾಹಿತ್ಯದ ಒಡನಾಟದ ಕ್ಷಣಗಳನ್ನು ಹಂಚಿಕೊಂಡಿದ್ದರು.
ಎಂ. ಜಿ. ಈಶ್ವರಪ್ಪ ಅವರು ಇಬ್ಬರು ಮಕ್ಕಳು ಇಂಜಿನಿಯರ್‌ಗಳು. ಪುತ್ರ ಪೃಥುವೈನ್ಯ ಅವರು ಹಿಂದೂಸ್ತಾನಿ ಸಂಗೀತಗಾರ. ಪುತ್ರಿ ಪತ್ರಲೇಖಾ ಹಾಗೂ ಪತ್ನಿ ಬಸಮ್ಮ ಅವರು ಈಶ್ವರಪ್ಪ ಅವರ ಯಶಸ್ಸಿನ ಹಿಂದಿದ್ದ ರೂವಾರಿಗಳು.
ಹೇಗೆ ಮರೆಯಲಿ
ಅವರ ಮುಖ, ವಿನಯತೆ, ವಿಧೇಯತೆ, ವಿದ್ಯಾರ್ಥಿಗಳನ್ನು ಪ್ರೀತಿಸುತ್ತಿದ್ದ ಪರಿ ಮರೆಯಲು ಸಾಧ್ಯವೇ ಆಗೋಲ್ಲ. ಅವರೊಬ್ಬ ಅದ್ಭುತ ಪ್ರೇರಕ ಶಕ್ತಿಯ ಗುರು. ನನ್ನ ಪುಸ್ತಕ ಬಿಡುಗಡೆ ವಿಚಾರವಾಗಿ ಅದೆಷ್ಟು ಸಲಹೆ ನೀಡಿದ್ದರು. ಮಾರ್ಗದರ್ಶಕರೂ ಆಗಿದ್ದರು. ಮೂರು ದಶಕದ ಹಿಂದೆ ಅವರ ಪಾಠ ಕೇಳಿ ಬೆಳೆದವರು ನಾವು. ಆ ವಿಶ್ವಾಸ ತುಂಬಿದ ವ್ಯಕ್ತಿತ್ವ, ನಗುಮುಖವನ್ನು ಮರೆಯಲು ಎಂದೂ ಆಗದು ಎಂದು ಅವರ ಶಿಷ್ಯರಲ್ಲಿ ಒಬ್ಬರಾಗಿರುವ ನಾಡಿನ ಪ್ರಸಿದ್ದ ವಿಜ್ಞಾನ ಲೇಖಕ ಗುರುರಾಜ್ ದಾವಣಗೆರೆ ಕಣ್ಣೀರಾಗುತ್ತಾರೆ.

ವಿಭಾಗ