ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ, ಉಪ್ಪಿನಂಗಡಿಯಲ್ಲಿ ಸಂಗಮ; ನಾಳೆ ಶಾಲಾ-ಕಾಲೇಜುಗಳಿಗೆ ರಜೆ
ಕನ್ನಡ ಸುದ್ದಿ  /  ಕರ್ನಾಟಕ  /  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ, ಉಪ್ಪಿನಂಗಡಿಯಲ್ಲಿ ಸಂಗಮ; ನಾಳೆ ಶಾಲಾ-ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ, ಉಪ್ಪಿನಂಗಡಿಯಲ್ಲಿ ಸಂಗಮ; ನಾಳೆ ಶಾಲಾ-ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ತುಂಬಿ ಹರಿಯುತ್ತಿದ್ದು, ದಕ್ಷಿಣ ಕಾಶಿ ಎನಿಸಿಕೊಂಡಿರುವ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಸಂಗಮಗೊಂಡಿವೆ. ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜುಲೈ 31ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ, ಉಪ್ಪಿನಂಗಡಿಯಲ್ಲಿ ಸಂಗಮ; ನಾಳೆ ಶಾಲಾ-ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ, ಉಪ್ಪಿನಂಗಡಿಯಲ್ಲಿ ಸಂಗಮ; ನಾಳೆ ಶಾಲಾ-ಕಾಲೇಜುಗಳಿಗೆ ರಜೆ (Rollmark Studio, Puttur)

ಮಂಗಳೂರು: ಭಾರಿ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜುಲೈ 31ರ ಬುಧವಾರ ಶಾಲೆ, ಹೈಸ್ಕೂಲ್ ಮಾತ್ರವಲ್ಲದೆ ಪಿಯುಸಿವರೆಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರಜೆ ಘೋಷಿಸಿದ್ದಾರೆ. ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಕರಾವಳಿ ಜಿಲ್ಲೆಯಲ್ಲಿ ತೀವ್ರ ಮಳೆಯಾಗುತ್ತಿರುವುದರಿಂದ ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿರಲು ಅವರು ಸೂಚಿಸಿದ್ದಾರೆ.

ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆಗೆ ತುರ್ತು ಸ್ಪಂದನಾ ಪಡೆ ಸದಾ ಸನ್ನದ್ಧವಾಗಿರಬೇಕು. ಮುಳುಗಡೆ ಪ್ರದೇಶದ ನಿವಾಸಿಗಳನ್ನು ಆದ್ಯತೆಯಲ್ಲಿ ಸ್ಥಳಾಂತರಿಸಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು. ನದಿ ಪಾತ್ರ ಹಾಗೂ ಕಡಲ ಕೊರೆತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಗೆ ಸುಸಜ್ಜಿತ ತಂಡ ಇಡಬೇಕು. ಭೂಕುಸಿತದಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾದರೆ, ಶೀಘ್ರವಾಗಿ ತೆರವುಗೊಳಿಸಬೇಕು. ವಿದ್ಯುತ್ ಕಂಬಗಳು ಬಿದ್ದ ಪ್ರಕರಣಗಳಲ್ಲಿ ಕೂಡಲೇ ಕ್ರಮ ಕೈಗೊಂಡು ವಿದ್ಯುತ್ ಪುನರ್ ಸ್ಥಾಪಿಸಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಸಾರ್ವಜನಿಕ, ಜನ ಜಾನುವಾರು ಜೀವ ರಕ್ಷಣೆಗೆ ಆದ್ಯತೆ ನೀಡಬೇಕು. ಎಲ್ಲ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದುಕೊಂಡು ಮಳೆ ಪರಿಸ್ಥಿತಿ ಮೇಲೆ ನಿಗಾ ಇಡಬೇಕು ಎಂದು ಉಸ್ತುವಾರಿ ಸಚಿವರು ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಪರಿಸ್ಥಿತಿ ಬಗ್ಗೆ ನೆರೆಯ ಜಿಲ್ಲೆಗಳೊಂದಿಗೆ ಸಂಪರ್ಕದಲ್ಲಿದ್ದು, ಸಮನ್ವಯತೆಯಿಂದ ಕಾರ್ಯಾಚರಿಸುವಂತೆ ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಜಿಲ್ಲೆಯಲ್ಲಿ ಮಳೆ ಪರಿಸ್ಥಿತಿ ಬಗ್ಗೆ ಸಚಿವರಿಗೆ ವಿವರ ನೀಡಿದರು.

ಎನ್‌ಡಿಆರ್‌ಎಫ್ ನಿಯೋಜನೆ

ಪುತ್ತೂರಿನಲ್ಲಿ ಒಂದು ಎನ್‌ಡಿಆರ್‌ಎಫ್ ತಂಡ ಹಾಗೂ ಸುಬ್ರಮಣ್ಯ ಮತ್ತು ಮಂಗಳೂರಿನಲ್ಲಿ ತಲಾ ಒಂದು ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಿಸುತ್ತಿದೆ. ನೆರೆ ಸಂಭಾವ್ಯ ಗ್ರಾಮ ಪಂಚಾಯತ್‌ಗಳಿಗೆ ತಲಾ 25 ಸಾವಿರ ರೂಪಾಯಿ ಹಾಗೂ ಇತರೆ ಗ್ರಾಮ ಪಂಚಾಯತ್‌ಗಳಿಗೆ 15 ಸಾವಿರ ರೂಪಾಯಿ ಅನುದಾನವನ್ನು ತುರ್ತು ಕಾರ್ಯಾಚರಣೆಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ತೈಲ, ಅನಿಲ ಸಾಗಾಟ ಟ್ಯಾಂಕರ್‌ಗಳ ಸಂಚಾರ ಹೆಚ್ಚಿರುವ ಶಿರಾಡಿ ಘಾಟಿಯ ಎರಡೂ ಕಡೆಗಳಾದ ಗುಂಡ್ಯ ಹಾಗೂ ಘಾಟಿಯ ಹಾಸನ ವ್ಯಾಪ್ತಿಯಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ತಂಡವನ್ನು ಇಡಲು ತೈಲ ಕಂಪೆನಿಗಳಿಗೆ ಸೂಚಿಸಲಾಗುವುದು ಎಂದು ಅವರು ತಿಳಿಸಿದರು.‌

ಉಪ್ಪಿನಂಗಡಿಯಲ್ಲಿ ಸಂಗಮ

ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಸಂಗಮಗೊಂಡಿವೆ. ದಕ್ಷಿಣ ಗಯಾಪದ ಕ್ಷೇತ್ರವಾದ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನಕ್ಕೆ ಈ ಎರಡು ನದಿಗಳ ನೀರು ಪ್ರವೇಶಿಸದೆ. ಈ ವೇಳೆ ಪುತ್ತೂರು ಶಾಸಕ ಅಶೋಕ್‌ ರೈ ನೇತೃತ್ವದಲ್ಲಿ ನದಿಗೆ ವಿಶೇಷ ಪೂಜೆ ನೆರವೇರಿಸಲಾಯ್ತು.