ದೆಹಲಿ ಚುನಾವಣೆ ಫಲಿತಾಂಶ; ಮೈಸೂರಿನಲ್ಲಿ ಪೋಸ್ಟ್‌ ಹಾಕಿದವನ ಬಂಧನಕ್ಕೆ ಪೊಲೀಸ್‌ ಠಾಣೆ ಮೇಲೆ ಕಲ್ಲುತೂರಾಟ, ಹಲವರಿಗೆ ಗಾಯ
ಕನ್ನಡ ಸುದ್ದಿ  /  ಕರ್ನಾಟಕ  /  ದೆಹಲಿ ಚುನಾವಣೆ ಫಲಿತಾಂಶ; ಮೈಸೂರಿನಲ್ಲಿ ಪೋಸ್ಟ್‌ ಹಾಕಿದವನ ಬಂಧನಕ್ಕೆ ಪೊಲೀಸ್‌ ಠಾಣೆ ಮೇಲೆ ಕಲ್ಲುತೂರಾಟ, ಹಲವರಿಗೆ ಗಾಯ

ದೆಹಲಿ ಚುನಾವಣೆ ಫಲಿತಾಂಶ; ಮೈಸೂರಿನಲ್ಲಿ ಪೋಸ್ಟ್‌ ಹಾಕಿದವನ ಬಂಧನಕ್ಕೆ ಪೊಲೀಸ್‌ ಠಾಣೆ ಮೇಲೆ ಕಲ್ಲುತೂರಾಟ, ಹಲವರಿಗೆ ಗಾಯ

ಮೈಸೂರು ನಗರದ ಉದಯಗಿರಿ ಠಾಣೆ ಮೇಲೆ ಯುವಕರ ಗುಂಪು ಕಲ್ಲು ತೂರಿದ್ದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಪೋಸ್ಟ್‌ ಒಂದರ ಸಂಬಂಧ ಗಲಾಟೆ ನಡೆದಿದೆ. ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ನಡೆದಿದ್ದು. ಭಾರೀ ಭದ್ರತೆ ಹಾಕಲಾಗಿದೆ.
ಮೈಸೂರಿನ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ನಡೆದಿದ್ದು. ಭಾರೀ ಭದ್ರತೆ ಹಾಕಲಾಗಿದೆ. (ಪ್ರಜಾವಾಣಿ)

ಮೈಸೂರು: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಅವಹೇಳನಕಾರಿ ಪೋಸ್ಟ್‌ ಹಾಕಿದ ವ್ಯಕ್ತಿ ಬಂಧನಕ್ಕೆ ಒತ್ತಾಯಿಸಿ ಮೈಸೂರಿನ ಉದಯಗಿರಿ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಗುಂಪು ಠಾಣೆಗೆ ಮೇಲೆ ಕಲ್ಲು ತೂರಿದೆ. ಈ ವೇಳೆ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕಲ್ಲುಗಳನ್ನು ಎಸೆಯಲಾಗಿದ್ದು ಕೆಲವರಿಗೆ ಗಾಯಗಳಾಗಿವೆ. ಸೋಮವಾರ ಸಂಜೆಯಿಂದಲೇ ಪ್ರತಿಭಟನೆ ನಡೆದಿದ್ದು ರಾತ್ರಿ ವೇಳೆ ಕಲ್ಲು ತೂರಾಟದ ಹಂತಕ್ಕೂ ಹೋಗಿದೆ. ವಿಷಯ ತಿಳಿದು ಪೊಲೀಸರು ಉದಯಗಿರಿ ಭಾಗದಲ್ಲಿ ಭಾರೀ ಪೊಲೀಸ್‌ ಬಂದೋಬಸ್ತ್‌ ಮಾಡಿದ್ದಾರೆ. ಮಂಗಳವಾರವೂ ಉದ್ವಿಗ್ನ ವಾತಾವರಣ ಕಂಡು ಬಂದಿದೆ. ಘಟನೆ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ಉದಯಗಿರಿ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.

ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಧರ್ಮ ಗುರುಗಳ ಬಗ್ಗೆ ಅವಹೇಳಕಾರಿಯಾಗಿ ಹಾಕಿದ್ದ ಪೋಸ್ಟ್ ಒಂದನ್ನು ಸುರೇಶ್‌ ಎಂಬಾತ ಹಂಚಿಕೊಂಡಿದ್ದ ಮೈಸೂರಿನ ಕಲ್ಯಾಣಗಿರಿನಗರದ ನಿವಾಸಿಯಾದ ಸುರೇಶ್‌ ಪೋಸ್ಟ್ ಹಂಚಿಕೆ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಆತನ ಬಂಧನಕ್ಕೆ ಆಗ್ರಹಿಸಿ ಉದಯಗಿರಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದ ಮುಸ್ಲಿಂ ಸಮುದಾಯದ ಯುವಕರ ತಂಡ ಪ್ರತಿಭಟನೆ ನಡೆಸಿತ್ತು.

ಈ ವೇಳೆ ಪೊಲೀಸರು ಹಾಗೂ ಸಮುದಾಯದ ಯುವಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಕ್ಕೆ ಆಗಮಿಸಿದ ಹೆಚ್ಚಿನ ಪೊಲೀಸರು ಯುವಕರನ್ನು ಚದುರಿಸಿದ್ದರು. ಕೆಟ್ಟದಾಗಿ ಪೋಸ್ಟ್ ಹಾಕಿದ ಯುವಕನನ್ನು ಬಂಧಿಸಿ ಸುಮೊಟೋ ಪ್ರಕರಣ ದಾಖಲಿಸಿಕೊಂಡಿರುವುದಾಗಿಯೂ ಪೊಲೀಸರು ಹೇಳಿದ್ದರು. ಆದರೂ ಯುವಕರ ಗುಂಪು ಇದಕ್ಕೆ ಒಪ್ಪಿರಲಿಲ್ಲ. ಅಲ್ಲಿಂದ ತೆರಳುವಂತೆ ಯುವಕರಿಗೆ ತಾಕೀತು ಮಾಡಿದಾಗ ಕೆಲವರು ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಆಗ ಉದಯಗಿರಿ ಬಡಾವಣೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದುಗಲಾಟೆಯಲ್ಲಿ ಇನ್ಸ್‌ಪೆಕ್ಟರ್ ಸೇರಿದಂತೆ 14ಕ್ಕೂ ಹೆಚ್ಚು ಪೊಲೀಸರಿಗೆ ಗಾಯವಾಗಿದೆ.

ದೇವರಾಜ ಎಸಿಪಿ ಶಾಂತಮಲ್ಲಪ್ಪ, ನಜರಬಾದ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಹದೇವಸ್ವಾಮಿ ಸೇರಿದಂತೆ 14 ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ಕಲ್ಲೇಟು ಬಿದ್ದಿದ್ದು,ಕಲ್ಲೇಟಿನಿಂದ ಗಾಯಗೊಂಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದಲ್ಲದೇ 10ಕ್ಕೂ ಪೊಲೀಸ್ ವಾಹನಗಳ ಮೇಲೆ ಕಲ್ಲೂ ತೂರಾಟ‌‌ ಕೂಡ ಮಾಡಲಾಗಿದೆ.

ಈ ವೇಳೆ ಲಾಠಿ ಜಾರ್ಜ್‌ ಮಾಡಿ ಪೊಲೀಸರು ಅಲ್ಲಿದ್ದವರನ್ನು ಚದುರಿಸಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಗಾಳಿಯಲ್ಲಿ ಅಶ್ರವಾಯುವನ್ನು ಪೊಲೀಸರು ಸಿಡಿಸಿದ್ದಾರೆ.. ಕಲ್ಲು ತೂರಿದವರ ವಿರುದ್ದ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದಾರೆ.

ಮೈಸೂರಿನ ಉದಯಗಿರಿ ಬಡಾವಣೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಪೊಲೀಸ್‌ ಪಡೆ ಹಾಕಲಾಗಿದೆ. ಘಟನಾ ಸ್ಥಳದಲ್ಲಿ ವಿಜಯನಗರ ಎಸಿಪಿ ಗಜೇಂದ್ರ ಪ್ರಸಾದ್ ಮೊಕ್ಕಾಂ ಹೂಡಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ ಬಿದ್ದಿದ್ದ ಕಲ್ಲುಗಳನ್ನು ಪೌರಕಾರ್ಮಿಕರ ಮೂಲಕ ಸಂಗ್ರಹಿಸುತ್ತಿರುವ ಪೊಲೀಸರು ಮಾಹಿತಿ ಕಲೆ ಹಾಕುವುದರಲ್ಲಿ ನಿರತರಾಗಿದ್ದಾರೆ.

ಉದಯಗಿರಿ ಪೊಲೀಸ್ ಠಾಣೆ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು ಪೊಲೀಸ್ ಠಾಣೆಗೇ ಭಾರೀ ಬಿಗಿ ಭದ್ರತೆ ಕೊಡಲಾಗಿದೆ. ಆರಕ್ಕೂ ಹೆಚ್ಚು ಕೆಎಸ್ಆರ್ಪಿ ತುಕಡಿಗಳು ನಿಯೋಜನೆ ಮಾಡಲಾಗಿದ್ದು. ಎಂಟಕ್ಕು ಹೆಚ್ಚು ಪೊಲೀಸ್ ಇನ್ಸ್‌ಪೆಕ್ಟರ್ ರಿಂದ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ಪೋಸ್ಟ್‌ ಒಂದರ ವಿಚಾರವಾಗಿ ಘರ್ಷಣೆ ನಡೆದಿದೆ. ಈಗಾಗಲೇ ಘಟನೆಯಲ್ಲಿ ಸುರೇಶ್‌ ಎಂಬಾತನನ್ನು ಬಂಧಿಸಲಾಗಿದೆ. ಕೆಲವರು ಠಾಣೆ ಮೇಲೆ ಕಲ್ಲು ತೂರಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಕಲ್ಲು ತೂರಿದವರ ವಿರುದ್ದ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎನ್ನುವುದು ಮೈಸೂರು ನಗರ ಪೊಲೀಸರ ವಿವರಣೆ.

Whats_app_banner