ಕನ್ನಡ ಸುದ್ದಿ  /  Karnataka  /  Delhi News Karnataka Led By Cm Siddaramaiah Met Union Minister Gajendra Singh Shekhawat In Cauvery News In Kannada Kub

Cauvery issue: ಕೊನೆಗೂ ಕೇಂದ್ರ ಸಚಿವ ಗಜೇಂದ್ರಸಿಂಗ್‌ ಭೇಟಿಯಾದ ಕರ್ನಾಟಕ ಸಿಎಂ ನೇತೃತ್ವದ ತಂಡ

Karnataka Team in Delhi ಕರ್ನಾಟಕ ಸಿಎಂ ಸಿದ್ದರಾಮಯ್ಯ(CM Siddaramaiah) ಡಿಸಿಎಂ ಡಿಕೆ ಶಿವಕುಮಾರ್‌( DK Shivakumar) ನೇತೃತ್ವದ ತಂಡ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರನ್ನು ಭೇಟಿ ಮಾಡಿ ಕಾವೇರಿ ಜಲವಿವಾದದ ಕುರಿತು ಚರ್ಚಿಸಿತು.

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ನೇತೃತ್ವದ ತಂಡ ಭೇಟಿ ಮಾಡಿ ಕಾವೇರಿ ನದಿ ನೀರು ಹಂಚಿಕೆ ವಿಚಾರ ಚರ್ಚಿಸಿತು.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ನೇತೃತ್ವದ ತಂಡ ಭೇಟಿ ಮಾಡಿ ಕಾವೇರಿ ನದಿ ನೀರು ಹಂಚಿಕೆ ವಿಚಾರ ಚರ್ಚಿಸಿತು.

ದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ತಿಳಿಸಿ ಸಂಕಷ್ಟ ಸೂತ್ರ ಪರಿಹಾರ ರೂಪಿಸುವಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರನ್ನು ಕರ್ನಾಟಕದ ಸಿಎಂ ಸಿದ್ದರಾಮಯ್ಯ ನೇತೃತ್ವದ ತಂಡ ಕೊನೆಗೂ ಮನವಿ ಸಲ್ಲಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಇನ್ನೂ ಸಮಯ ನಿಗದಿಯಾಗಿಲ್ಲ.

ಟ್ರೆಂಡಿಂಗ್​ ಸುದ್ದಿ

ಎರಡು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಸಚಿವ ಸಂಪುಟ ಹಲವು ಸದಸ್ಯರು ಗಜೇಂದ್ರ ಸಿಂಗ್‌ ಶೆಖಾವತ್‌ ಭೇಟಿಗೆ ಪ್ರಯತ್ನಿಸುತ್ತಿದ್ದರು. ಆದರೆ ಅವರ ಸಮಯ ಸಿಕ್ಕಿರಲಿಲ್ಲ. ಬುಧವಾರ ಮಧ್ಯಾಹ್ನ ಅಥವಾ ಸಂಜೆಯೇ ಭೇಟಿ ಮಾಡುವ ಸೂಚನೆ ಇತ್ತಾದರೂ ಆಗಿರಲಿಲ್ಲ. ಸಂಸತ್‌ ಅಧಿವೇಶನ ನಡೆಯುತ್ತಿರುವ ಕಾರಣದಿಂದ ಇದು ವಿಳಂಬವಾಗಿತ್ತು. ಇದರಿಂದ ದೆಹಲಿಯಲ್ಲೇ ಉಳಿದ ಸಿದ್ದರಾಮಯ್ಯ ಮತ್ತಿತರರು ಗುರುವಾರ ಬೆಳಿಗ್ಗೆ ಶೆಖಾವತ್‌ ಅವರನ್ನು ಭೇಟಿಯಾದರು.

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ರಾಜ್ಯ ಪ್ರತಿನಿಧಿಸುವ ಕೇಂದ್ರದ ಸಚಿವರು ಹಾಗೂ ಸಂಸದರೊಂದಿಗೆ ಭೇಟಿ ಮಾಡಿ ಚರ್ಚಿಸಿದರು.

ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ರಾಜ್ಯದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಕೃಷಿ ಸಚಿವ ಚಲುವರಾಯಸ್ವಾಮಿ, ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಪ್ರಕಾಶ್ ಹುಕ್ಕೇರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಮ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಹೇಳಿಕೆ

ಕೇಂದ್ರ ಸಚಿವರ ಭೇಟಿ ಬಳಿಕ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮತ್ತು ಜಲ ಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾವೇರಿ ನೀರು ಹಂಚಿಕೆ ಸಂಬಂಧ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ ಜತೆ ಸಭೆ ನಡೆಸಿದ್ದೇವೆ. ಸದ್ಯಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಸಿಎಂ ಹೇಳಿದರು.

ನಮ್ಮ ಸಂಕಷ್ಟದ ಪರಿಸ್ಥಿತಿಯನ್ನು ಕೇಂದ್ರ ಸಚಿವರಿಗೆ ಸಮರ್ಥವಾಗಿ ತಿಳಿಸಿದ್ದೇವೆ. ಅವರ ಸ್ಪಂದನೆ ಸಕಾರಾತ್ಮಕವಾಗಿತ್ತು. ನಾವು ಪ್ರಧಾನಿ ಅವರ ಸಮಯವನ್ನೂ ಕೇಳಿದ್ದೇವೆ. ಸಮಯ ಸಿಕ್ಕರೆ ಭೇಟಿ ಆಗುತ್ತೇವೆ. ನಾಲ್ಕೂ ರಾಜ್ಯದವರನ್ನು ಕರೆಸಿ ಮಾತನಾಡಲು ಮಧ್ಯ ಪ್ರವೇಶಿಸಿ ಎಂದು ಪ್ರಧಾನಿಗೆ ಮನವಿ ಮಾಡುತ್ತೇವೆ ಎಂದರು.

ನಮಗೆ ಬೆಳೆ ರಕ್ಷಣೆ, ಕುಡಿಯುವ ನೀರು ಮತ್ತು ಕೈಗಾರಿಕೆಗಳಿಗೆ 106 ಟಿಎಂಸಿ ನೀರು ಅಗತ್ಯವಿದೆ . ಆದರೆ ನಮ್ಮ ನಾಲ್ಕೂ ಜಲಾಶಯಗಳಿಂದ ಕೇವಲ 51 ಟಿಎಂಸಿ ನೀರು ಇದೆ ಎನ್ನುವುದನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಸಿದ್ದೇವೆ. 123 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಬಿದ್ದು ಜಲಾಶಯಗಳ ಒಳ ಹರಿವು ಇಲ್ಲವಾಗಿದೆ ಎಂದು ಸಚಿವರ ಗಮನ ಸೆಳೆದಿದ್ದೇವೆ ಎಂದರು.

ನಮ್ಮ ರೈತರು ಮತ್ತು ನಾನಾ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಬಿಡುವುದಕ್ಕೆ ನಮ್ಮ ಬಳಿ ನೀರೇ ಇಲ್ಲ ಎಂದೂ ಹೇಳಿದ್ದೇವೆ. ನಾಲ್ಕೂ ಜಲಾಶಯಗಳ ಒಳ ಹರಿವು 11 ರಿಂದ 8 ಕ್ಯೂಸೆಕ್ಸ್ ಗೆ ಇಳಿದಿದೆ ಎಂದು ವಿವರಿಸಿದರು.

ಬುಧವಾರ ಆಗದ ಭೇಟಿ

ಬುಧವಾರವೇ ದೆಹಲಿಯಲ್ಲಿ ಕಾವೇರಿ ನೀರು ಹಂಚಿಕೆ ಸಂಬಂಧ ನಡೆದಿದ್ದ ಸಭೆಯ ನಂತರ ಮಾತನಾಡಿದ್ದ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರನ್ನು ಕರ್ನಾಟಕದ ತಂಡ ಭೇಟಿ ಮಾಡಲಿದೆ ಎಂದು ಹೇಳಿದ್ದರು.

ಈ ವೇಳೆ ಕೇಂದ್ರ ಸರ್ಕಾರ ಸಂಕಷ್ಟ ಸೂತ್ರವನ್ನು ರೂಪಿಸಬೇಕು. ಆಗ ಅನಗತ್ಯವಾಗಿ ಅನ್ಯಾಯವಾಗುವುದು ತಪ್ಪಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಚಿವರ ಭರವಸೆ

ಕರ್ನಾಟಕದ ಅಹವಾಲನ್ನು ಆಲಿಸಿದ ಗಜೇಂದ್ರ ಸಿಂಗ್‌ ಶೆಖಾವತ್‌ ಇದು ನ್ಯಾಯಾಲಯದಲ್ಲಿರುವುದರಿಂದ ನಮ್ಮ ಪಾತ್ರ ಏನೂ ಇರುವುದಿಲ್ಲ. ಆದರೂ ವಸ್ತುಸ್ಥಿತಿ ಪರಾಮರ್ಶಿಸಲು ತಂಡವನ್ನು ಕಳುಹಿಸಲಾಗುವುದು. ಆ ತಂಡದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

ಮನವರಿಕೆ

ಇದೇ ವಿಚಾರವಾಗಿ ಬುಧವಾರ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ( CWMA) ಆದೇಶಕ್ಕೆ ನಾವು ಸುಪ್ರೀಂಕೋರ್ಟ್ ಮುಂದೆ ತಡೆಯಾಜ್ಞೆಗೆ ಮನವಿ ಮಾಡುತ್ತೇವೆ. ಸಂಕಷ್ಟ ಸೂತ್ರ ಇಲ್ಲದಿರುವುದು ಸಮಸ್ಯೆ, ಸಂಕಷ್ಟ ಹೆಚ್ಚಲು ಕಾರಣವಾಗಿದೆ. ಕೇಂದ್ರ ಜಲ ಸಂಪನ್ಮೂಲ ಸಚಿವರ ಜತೆ ಸಭೆ ನಡೆಸುತ್ತಿದ್ದೇವೆ. ಎರಡೂ ರಾಜ್ಯದವರನ್ನು ಕರೆದು ಅಹವಾಲು ಕೇಳುವ ಅಧಿಕಾರ ವ್ಯಾಪ್ತಿ ಪ್ತಧಾನಿಯವರಿಗೆ ಇದೆ. ಹೀಗಾಗಿ ನಾವು ಪ್ರಧಾನಿ ಅವರ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದರು.

ಈಗಾಗಲೇ ಕರ್ನಾಟಕ ರಾಜ್ಯದಲ್ಲಿ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಗುರುತಿಸಿದ್ದೇವೆ .123 ವರ್ಷಗಳಲ್ಲೇ ಆಗಸ್ಟ್ ತಿಂಗಳಿನಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದೆ .ವಾಡಿಕೆಗಿಂತ ಅತಿ ಕಡಿಮೆ ಮಳೆ ಸಂಕಷ್ಟ ಹೆಚ್ಚಲು ಕಾರಣ . 177.2 ಟಿಎಂಸಿ ನೀರು ಸಾಮಾನ್ಯ ವರ್ಷದಲ್ಲಿ, ಮಳೆ ಚೆನ್ನಾಗಿದ್ದಾಗ ತಮಿಳುನಾಡಿಗೆ ನೀರು ಬಿಡಬೇಕು ಎಂದು ಹೇಳಿದೆ. ಆದರೆ ಇಂಥಾ ಸಂಕಷ್ಟದ ಸಂದರ್ಭದಲ್ಲಿ ಎಷ್ಡು ನೀರು ಬಿಡಬೇಕು ಎನ್ನುವ ಸೂತ್ರ ಇಲ್ಲದಿರುವುದು ಸಮಸ್ಯೆಯಾಗಿದೆ . ನಮಗೆ ಕುಡಿಯುವ ನೀರು, ಬೆಳೆ ರಕ್ಷಣೆ, ಕೈಗಾರಿಕೆಗೂ ನೀರಿಲ್ಲ. ಹೀಗಾಗಿ ನಾವು ಬಹಳ ಕಷ್ಟದಲ್ಲಿದ್ದೇವೆ

ಕಾವೇರಿಗೆ ಸಂಬಂಧಿಸಿದ ಪ್ರಾಧಿಕಾರ, ಸಮಿತಿಗಳ ಎದುರು ಸಮರ್ಥವಾಗಿ ನಮ್ಮ ವಾಸ್ತವ ಪರಿಸ್ಥಿತಿಯನ್ನು ಮಂಡಿಸಿದ್ದೇವೆ .ತಮಿಳುನಾಡು ವಾದ ವಿರೋಧಿಸಿ ಸುಪ್ರೀಂಕೋರ್ಟ್ ನಲ್ಲಿ ನಮ್ಮ ತಕರಾರು ಮಂಡಿಸಿದ್ದೇವೆ .ಒಟ್ಟು ಮೂರು ಬಾರಿ ಸರ್ವ ಪಕ್ಷ ಸಭೆ ನಡೆಸಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು.