Karnataka Drought: ಬರಪೀಡಿತ ಕರ್ನಾಟಕದ ನೆರವಿಗೆ ಕೂಡಲೇ ಬನ್ನಿ: ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದ ಸಚಿವದ್ವಯರು
Ministers Meet Nirmala Seetharaman ಕರ್ನಾಟಕಕ್ಕೆ(Karnataka) ಕೂಡಲೇ ಬರ ಪರಿಹಾರ ಮೊತ್ತವನ್ನು( Drought Relief) ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್( Nirmala Seetharaman) ಅವರನ್ನು ಕರ್ನಾಟಕದ ಸಚಿವರ ನಿಯೋಗ ಭೇಟಿ ಮಾಡಿತು.
ದೆಹಲಿ: ಕರ್ನಾಟಕದಲ್ಲಿ ಬರ ಘೋಷಣೆಯಾಗಿ ತಿಂಗಳೇ ಕಳೆದಿದೆ. ಕೂಡಲೇ ಕೇಂದ್ರ ಸರ್ಕಾರ ಬರ ಪರಿಹಾರವನ್ನು ವಿಳಂಬ ಮಾಡದೇ ಬೇಗನೇ ಬಿಡುಗಡೆಗೊಳಿಸಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವಂತೆ ಕರ್ನಾಟಕ ಸರ್ಕಾರ ಒತ್ತಾಯಿಸಿದೆ.
ಕರ್ನಾಟಕದ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗವು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಕರ್ನಾಟಕ ಬರ ಸ್ಥಿತಿಗತಿ ಕುರಿತು ವಿಸ್ತೃತವಾಗಿ ಚರ್ಚಿಸಿತು.
ರಾಜ್ಯದ 223 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ಎಂದು ಘೋಷಿಸಲಾಗಿದೆ. ಅಂದರೆ ಇಡೀ ರಾಜ್ಯ ಬರಪೀಡಿತ ಪರಿಸ್ಥಿತಿ ಎದುರಿಸುತ್ತಿದೆ. ಪರಿಣಾಮ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಮನವಿ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಿ, ಬರ ಪರಿಹಾರವನ್ನು ಆದಷ್ಟು ಶೀಘ್ರದಲ್ಲಿ ಬಿಡುಗಡೆಗೊಳಿಸಿ ಎಂದು ಸಚಿವ ಕೃಷ್ಣಬೈರೇಗೌಡ ಮನವಿ ಮಾಡಿದರು.
ರೈತರ ಖಾತೆಗೆ ಜಮಾ
ಸಭೆ ಮುಗಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಹಾರದ ಹಣವನ್ನು ವಿಳಂಭವಿಲ್ಲದೆ ಪಾರದರ್ಶಕವಾಗಿ ಮತ್ತು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ತಲುಪಿಸುವ ಸಂಬಂಧ ಅಗತ್ಯ ಎಲ್ಲಾ ಕ್ರಮಗಳನ್ನೂ ರಾಜ್ಯ ಸರ್ಕಾರ ಈಗಾಗಲೇ ಕೈಗೊಂಡಿದೆ. ಹೀಗಾಗಿ ಕೇಂದ್ರ ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡುತ್ತಿದ್ದಂತೆ ಆ ಹಣವನ್ನು ವಿಳಂಬವಿಲ್ಲದೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಎಂಬುದನ್ನೂ ನಿರ್ಮಲಾ ಸೀತಾರಾಮನ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ವಿವರಿಸಿದರು.
ಡೇಟಾಬೇಸ್ ಲಭ್ಯ
ಪಿಎಂ ಕಿಸಾನ್ ಮತ್ತು ಆಧಾರ್ ಲಿಂಕ್ “ಫ್ರೂಟ್ಸ್” ಡೇಟಾಬೇಸ್ ಪ್ರಕಾರ ರಾಜ್ಯದಲ್ಲಿ ಕನಿಷ್ಟ ಶೇ.70ಕ್ಕೂ ಅಧಿಕ ಸಂಖ್ಯೆಯಲ್ಲಿ ಸಣ್ಣ- ಅತಿಸಣ್ಣ ರೈತರಿದ್ದಾರೆ. ಆದರೆ, ಕೇಂದ್ರ ಸರ್ಕಾರದ 2015ರ ಕೃಷಿ ಗಣತಿಯ ಪ್ರಕಾರ ರಾಜ್ಯದಲ್ಲಿ ಸಣ್ಣ-ಅತಿಸಣ್ಣ ರೈತರ ಸಂಖ್ಯೆ ಶೇ.44 ಎನ್ನುತ್ತಿವೆ. ಇದರಿಂದಾಗಿ ರಾಜ್ಯದ ರೈತರಿಗೆ ಪರಿಹಾರದಲ್ಲೂ ಅನ್ಯಾಯವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯದ ನವೀಕೃತ ಡೇಟಾಬೇಸ್ ಮಾಹಿತಿಯನ್ನು ಆಧರಿಸಿ ಪರಿಹಾರ ಬಿಡುಗಡೆಗೊಳಿಸಬೇಕು. ಅಲ್ಲದೆ, ಪರಿಹಾರ ಹಣ ಬಿಡುಗಡೆ ಮಾಡುವ ಸಂದರ್ಭದಲ್ಲಿ ಕೇಂದ್ರದ ಮಾನದಂಡದಂತೆ ಸಾಧಾರಣ ಬರ ಎಂದು ಘೋಷಿಸಿರುವ ತಾಲೂಕುಗಳನ್ನೂ ಸಹ ಪರಿಹಾರಕ್ಕೆ ಪರಿಗಣಿಸಿ ಎಂದು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಬಳಿ ಮನವಿ ಸಲ್ಲಿಸಿರುವುದಾಗಿಯೂ ಅವರು ತಿಳಿಸಿದರು.
ಬೆಳೆ ವಿಮೆ ಸರಿಪಡಿಸಿ
ರಾಜ್ಯದಲ್ಲಿ ವಿಮಾ ಕಂಪೆನಿಗಳು ಸಮಯಕ್ಕೆ ಸರಿಯಾಗಿ ರೈತರಿಗೆ ಬೆಳೆ ವಿಮೆ ಹಣ ಪಾವತಿಸದೆ ವಿಳಂಬ ಧೋರಣೆ ಅನುಸರಿಸುತ್ತಿವೆ. ಇದರಿಂದಲೂ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ನಿರ್ಮಾಲ ಸೀತಾರಾಮನ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ವಿಮಾ ಕಂಪೆನಿಗಳಿಗೆ ಶೀಘ್ರವೇ ಬೆಳೆ ವಿಮೆ ಹಣ ಬಿಡುಗಡೆ ಮಾಡುವಂತೆ ಸೂಚಿಸುವುದಾಗಿ ತಿಳಿಸಿದ್ದಾರೆ ಎಂದುತಿಳಿಸಿದರು.
ಸಿರಿಧಾನ್ಯಕ್ಕೆ ಒಲವು
ರಾಗಿ ಸಜ್ಜೆ ಜೋಳ ಸೇರಿದಂತೆ ರೈತರು ಬೆಳೆಯುವ ಎಲ್ಲಾ ಸಿರಿಧಾನ್ಯಗಳನ್ನೂ ಯಾವುದೇ ನಿಬಂಧನೆ ಇಲ್ಲದೆ ಕನಿಷ್ಠ ಬೆಂಬಲ ಬೆಲೆ ನೀಡಿ ಸರ್ಕಾರವೇ ಖರೀದಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಬಳಿ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.
ಸಭೆಯಲ್ಲಿ ರಾಜ್ಯದ ಸಿರಿಧಾನ್ಯದ ಇತಿಹಾಸವನ್ನು ನಿರ್ಮಲಾ ಸೀತಾರಾಮನ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಸರ್ಕಾರವೇ ಎಲ್ಲಾ ಸಿರಿಧಾನ್ಯಗಳನ್ನೂ ಖರೀದಿಸಿದರೆ ಸಿರಿಧಾನ್ಯಗಳನ್ನು ಬೆಳೆಯುವ ವ್ಯಾಪ್ತಿಯೂ ಹೆಚ್ಚಲಿದೆ ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದು ಅವರಿಗೆ ತಿಳಿಸಿಕೊಡಲಾಗಿದೆ. ಈ ಬೇಡಿಕೆಗೂ ನಿರ್ಮಲಾ ಸೀತಾರಾಮನ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ವಿಭಾಗ