Cauvery issue: ತಮಿಳುನಾಡಿಗೆ ಹದಿನೈದು ದಿನ ಕಾವೇರಿ ನೀರು ಹರಿಸಿ: ಕರ್ನಾಟಕಕ್ಕೆ ಸುಪ್ರೀಂ ಸೂಚನೆ
Cauvery water dispute ಕಾವೇರಿ ನೀರು ಹಂಚಿಕೆ ಕುರಿತು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ತಮಿಳುನಾಡಿಗೆ ಕರ್ನಾಟಕ ಪ್ರತಿನಿತ್ಯ ಮುಂದಿನ ಹದಿನೈದು ದಿನ ತಲಾ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿತು.
ನವದೆಹಲಿ: ತಮಿಳುನಾಡಿಗೆ ಮುಂದಿನ ಹದಿನೈದು ದಿನ ಕಾವೇರಿ ನೀರು ಹರಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ತೀರ್ಪು ನೀಡಿದೆ. ಇದರಿಂದ ಕಾವೇರಿ ಜಲ ವಿವಾದದ ವಿಚಾರದಲ್ಲಿ ಹೋರಾಟ ನಡೆಸುತ್ತಲೇ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗಿದೆ.
ಈಗಾಗಲೇ ಕಾವೇರಿ ನೀರು ಮೇಲ್ವಿಚಾರಣಾ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್ ಮುಂದಿನ ಹದಿನೈದು ದಿನ ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸಬೇಕ ಎಂದು ಸ್ಪಷ್ಟ ನಿರ್ದೇಶನ ನೀಡಿದೆ.
ಈ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದು. ಯಾವ ತೀರ್ಮಾನ ಕೈಗೊಳ್ಳುತ್ತದೆ ಎನ್ನುವುದನ್ನು ನೋಡಬೇಕಾಗಿದೆ. ಇದರ ನಡುವೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ವಿರೋಧಿಸಿ ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ತಿಂಗಳಿನಿಂದ ನಡೆಯುತ್ತಿದ್ದ ಹೋರಾಟಗಳು ತೀವ್ರಗೊಂಡಿವೆ.
ಈಗಾಗಲೇ ನಾಲ್ಕು ಬಾರಿ ಮುಂದೂಡಿಕೆಯಾಗಿದ್ದ ಕಾವೇರಿ ಕುರಿತಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ಗುರುವಾರ ಕೈಗೆತ್ತಿಕೊಂಡಿತು.
ಈ ವೇಳೆ ತಮಿಳುನಾಡು ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ, ಪ್ರಸ್ತುತ ನೀರಿನ ಸಂಕಷ್ಟ ಇರುವುದು ಗೊತ್ತಿರುವ ವಿಚಾರವೇ. ತಮಿಳುನಾಡಿನಲ್ಲೂ ಸಂಕಷ್ಟದ ವಾತಾವರಣವಿದೆ. ಹೀಗಿದ್ದರೂ ಕರ್ನಾಟಕ ಪ್ರಾಧಿಕಾರದ ಸೂಚನೆಗಳನ್ನು ಪಾಲಿಸುತ್ತಿಲ್ಲ.ನಿಗದಿತ ನೀರು ತಮಿಳುನಾಡಿಗೆ ಬಿಡುಗಡೆಯಾಗುತ್ತಿಲ್ಲ. ನೀರು ಬಿಡುಗಡೆಗೆ ಈಗಾಗಲೇ ನೀಡಿರುವ ಆದೇಶ ಜಾರಿಗೊಳಿಸಬೇಕು ಎಂದು ಹೇಳಿದರು.
ಕರ್ನಾಟಕದ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ಶ್ಯಾಮ್ ದಿವಾಣ್, ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸಮಿತಿ ಹಾಗೂ ಪ್ರಾಧಿಕಾರ ನೀಡಿರುವ ಆದೇಶವನ್ನು ಪಾಲಿಸಿದ್ದೇವೆ. ನೀರು ಕೂಡ ಹರಿಸಲಾಗಿದೆ. ನಮ್ಮಲ್ಲಿಯೇ ಕಷ್ಟದ ಪರಿಸ್ಥಿತಿ ಇದ್ದಾಗ ಆದೇಶ ಪಾಲಿಸಿದರೂ ಮತ್ತೆ ನೀರು ಹರಿಸಬೇಕು ಎನ್ನುವ ಒತ್ತಡ ಹೇರುವುದು ಸೂಕ್ತವಲ್ಲ. ಈ ಕುರಿತು ತಮಿಳುನಾಡಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ವಾದವನ್ನು ಆಲಿಸಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿದ್ದ ಪೀಠ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಈಗಾಗಲೇ ಕಾವೇರಿ ಮೇಲ್ವಿಚಾರಣಾ ಸಮಿತಿ ಹಾಗೂ ಪ್ರಾಧಿಕಾರ ಆದೇಶ ನೀಡಿವೆ. ಈ ಪ್ರಕಾರ ಪ್ರತಿ ದಿನ ಐದು ಸಾವಿರ ಕ್ಯೂಸೆಕ್ ನಂತೆ ಹದಿನೈದು ದಿನ ನೀರು ಹರಿಸಿ ಎಂದು ಆದೇಶಿಸಿ ವಿಚಾರಣೆ ಮುಂದೂಡಿದರು.
ಸುಪ್ರೀಂ ಕೋರ್ಟ್ ವಾಸ್ತವದ ಆಧಾರದಲ್ಲಿ ಆದೇಶ ಮಾಡಬೇಕು : ಬಸವರಾಜ ಬೊಮ್ಮಾಯಿ
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸಂಪೂರ್ಣ ಸಿಡಬ್ಲುಎಂಎ ಆದೇಶವನ್ನೇ ಪರಿಗಣಿಸದೇ, ವಾಸ್ತವದ ಆಧಾರದಲ್ಲಿ ತೀರ್ಪು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತು ಕಾವೇರಿ ವಿಚಾರದಲ್ಲಿ ಸುಪ್ರೀಂ ಕೊರ್ಟ್ ಎರಡು ರಾಜ್ಯಗಳ ವಾದ ಕೇಳಿ ಸಿಡಬ್ಲುಎಂಎ ಆದೇಶ ಎತ್ತಿ ಹಿಡಿದಿದೆ. ಮುಂದಿನ 15 ದಿನ ಸಿಡಬ್ಲುಎಂಎ ಆದೇಶ ಪಾಲನೆ ಮಾಡಬೇಕು ಅಂತ ಹೇಳಿರುವುದು ದುರಾದೃಷ್ಟ. ಮತ್ತೊಮ್ಮೆ ಕರ್ನಾಟಕದ ವಸ್ತು ಸ್ಥಿತಿಯನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಬೇಕಿದೆ. ಸಿಡಬ್ಲುಎಂಎ ಆದೇಶ ಅಂತಿಮವಲ್ಲ. ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ತನಗೆ ಸಂಬಂಧ ಇಲ್ಲ ಎನ್ನುವುದು ಸರಿಯಲ್ಲ. ಕೇವಲ ಕರ್ನಾಟಕದ ಡ್ಯಾಮ್ ಗಳ ನೀರಿನಟ್ಟ ಲೆಕ್ಕ ಹಾಕುವುದಲ್ಲ. ತಮಿಳುನಾಡು ಡ್ಯಾಮ್ ಗಳಲ್ಲಿ ನ ನೀರಿನ ಮಟ್ಟ ಲೆಕ್ಕ ಹಾಕಬೇಕು ಎಂದು ಆಗ್ರಹಿಸಿದರು.
ಸಿಡಬ್ಲುಎಂಎ ಮೊದಲ ಆದೇಶ ಬಂದಾಗಲೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಮೆಲ್ಮನವಿ ಸಲ್ಲಿಸಬೇಕಿತ್ತು. ಸರ್ಕಾರ ಎರಡು ಬಾರಿ ನೀರು ಬಿಟ್ಟು ಈಗ ಸುಪ್ರೀಂ ಕೊರ್ಟ್ ಮುಂದೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ಸಂಪೂರ್ಣ ವಾಗಿ ಸಿಡಬ್ಲುಎಂ ಮೇಲೆ ಅವಲಂಬನೆ ಆಗಿದೆ. ಸಿಡಬ್ಲುಆರ್ಸಿ , ಸಿಡಬ್ಲುಎಂಎ ಎರಡೂ ಧೋರಣೆ ಸರಿಯಿಲ್ಲ. ಸಿಡಬ್ಲುಎಂಎ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ನೋಡಬೇಕು. ಕೇವಲ ಅಂಕಿ ಅಂಶಗಳನ್ನು ಇಟ್ಟುಕೊಂಡು ಆದೇಶ ಮಾಡುತ್ತಿವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೆಳುತ್ತಾರೆ. ತಮಿಳುನಾಡು ಈಗಾಗಲೇ ಅಕ್ರಮವಾಗಿ ನೀರು ಬಳಕೆ ಮಾಡಿಕೊಂಡಿದೆ. ಅದನ್ನು ಸುಪ್ರೀಂಕೋರ್ಟ್ ಗಮನಕ್ಕೆ ತರಬೇಕು. ರಾಜ್ಯ ಸರ್ಕಾರ ಕೇವಲ ನಮ್ಮಲ್ಲಿ ನೀರಿಲ್ಲ ಅಂತ ಹೇಳುವುದಷ್ಟೇ ಅಲ್ಲ. ಬೆಂಗಳೂರು ಒಂದು ಅಂತಾರಾಷ್ಟ್ರೀಯ ನಗರ ಇಲ್ಲಿ ಎಲ್ಲ ಭಾಗದ ಜನರು ಬರುತ್ತಾರೆ. ಬೆಂಗಳೂರಿಗೆ ಕುಡಿಯಲು ಪ್ರತ್ಯೇಕ ವಾಗಿ ನೀರು ಇಟ್ಟಿದ್ದಾರೆ. ಅದನ್ನು ಸುಪ್ರೀಂ ಕೋರ್ಟ್ ಮುಂದೆ ವಾದ ಮಾಡಬೇಕು. ತಮಿಳುನಾಡಿಗೆ ನವೆಂಬರ್ ನಲ್ಲಿ ಮತ್ತೊಂದು ಹಿಂಗಾರು ಮಳೆ ಬರುತ್ತದೆ. ಆದರೆ, ಕರ್ನಾಟಕಕ್ಕೆ ಮುಂಗಾರು ಮುಗಿಯುವ ಹಂತದಲ್ಲಿದೆ. ಇದೆಲ್ಲವನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕು. ಕುಡಿಯುವ ನೀರಿಗಾದರು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಹೋರಾಟ ಮಾಡಬೇಕು. ಇದರಲ್ಲಿ ನಮಗೆ ರಾಜಕಾರಣ ಮಾಡಲು ಇಷ್ಟ ಇಲ್ಲ. ಈಗಾಗಲೇ ರೈತರ ಬೆಳೆ ಒಣಗಿ ಹೋಗುತ್ತಿದೆ. ರಾಜ್ಯ ಸರ್ಕಾರ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರ ಪರಿಣತರ ತಂಡ ಕಳಿಸಲಿ: ಸಚಿವ ಎಂ.ಬಿ ಪಾಟೀಲ ಆಗ್ರಹ
ಕಾವೇರಿ ನೀರಿನ ವಿಚಾರದಲ್ಲಿ ಸಂಕಷ್ಟ ಸ್ಥಿತಿ ಎದುರಾಗಿದ್ದು, ಕೇಂದ್ರ ಸರಕಾರವು ಪರಿಣತರ ತಂಡವನ್ನು ಕಳಿಸಿಕೊಟ್ಟು, ವಾಸ್ತವಾಂಶಗಳ ಪರಿಶೀಲನೆಗೆ ಮುಂದಾಗಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಗುರುವಾರ ಆಗ್ರಹಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಈ ವಿಷಯದಲ್ಲಿ ಈಗ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಪರಿಣತರ ತಂಡ ಖುದ್ದು ಪರಿಶೀಲಿಸಿದ ನಂತರ ತನ್ನ ವರದಿ ನೀಡಿದ ಮೇಲಷ್ಟೆ ಮುಂದಿನ ಹೆಜ್ಜೆ ಏನೆಂದು ಯೋಚಿಸಬಹುದು. ಇಂತಹ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರೆಲ್ಲ ಸೇರಿಕೊಂಡು ರಾಜ್ಯದ ಸ್ಥಿತಿಯನ್ನು ಪ್ರಧಾನಿ ಮೋದಿಯವರಿಗೆ ಮನವರಿಕೆ ಮಾಡಿಕೊಡಬೇಕು” ಎಂದರು.
ಕೇಂದ್ರ ಸಂಪುಟದಲ್ಲಿರುವ ರಾಜ್ಯದ ಪ್ರತಿನಿಧಿಗಳು ಕರ್ನಾಟಕದ ಹಿತ ಕಾಪಾಡಬೇಕು. ಹಿಂದೆ ಅನಂತಕುಮಾರ್ ಪಕ್ಷಾತೀತವಾಗಿ ಕೊಡುತ್ತಿದ್ದ ಸಹಕಾರವನ್ನು ಈಗ ನೆನಪಿಸಿಕೊಳ್ಳಬೇಕು. ಇದರ ಜತೆಯಲ್ಲೇ ಬರಗಾಲದ ವರ್ಷಗಳಲ್ಲಿ ಕಾವೇರಿ ನೀರಿನ ಹಂಚಿಕೆ ಹೇಗಿರಬೇಕು ಎನ್ನುವುದಕ್ಕೆ ಸಂಕಷ್ಟ ಸೂತ್ರವನ್ನು ಕೇಂದ್ರ ಸರಕಾರವು ರೂಪಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಹಿಂದೆ ನಾನು ನೀರಾವರಿ ಸಚಿವನಾಗಿದ್ದಾಗ ಈ ವಿವಾದವು ಸುಪ್ರೀಂ ಕೋರ್ಟ್ ಮುಂದೆ ಬಂದಾಗ ತಮಿಳುನಾಡಿನವರು ಬೆಂಗಳೂರಿಗೆ ನೀರು ಕೊಡಬಾರದು ಎಂದು ತಕರಾರು ತೆಗೆದರು. ಆದರೆ ರಾಜ್ಯದ ವಕೀಲರ ತಂಡ ಸಮರ್ಥವಾಗಿ ಕೆಲಸ ಮಾಡಿ, ನಮ್ಮ ವಾದಕ್ಕೆ ಬೆಲೆ ಸಿಕ್ಕುವಂತೆ ನೋಡಿಕೊಂಡಿತು. ಇದರಿಂದ ಮೇಕೆದಾಟು ಅಣೆಕಟ್ಟು ವಿಚಾರಕ್ಕೂ ಬೆಲೆ ಬಂತು. ಆದರೆ ಇದರಿಂದ ತಮಗೂ ಲಾಭವಿದೆ ಎನ್ನುವುದನ್ನು ತಮಿಳುನಾಡು ಅರ್ಥ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಇದರಲ್ಲೂ ಕೇಂದ್ರ ಸರಕಾರವು ಮಧ್ಯೆ ಪ್ರವೇಶಿಸಬೇಕು ಎಂದು ಅವರು ನುಡಿದರು.
ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯ ಸರಕಾರವು ಉದಾಸೀನ ತೋರಿಸುತ್ತಿಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ. ನಮ್ಮ ವಕೀಲರ ತಂಡ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಹೆಜ್ಜೆಗಳನ್ನು ಇಡುತ್ತಿದೆ ಎಂದು ಪಾಟೀಲ ಪ್ರಶ್ನೆಯೊಂದಕ್ಕೆ ಉತ್ತರಿಸಿದರು
ಇದನ್ನೂ ಓದಿರಿ