ಕನ್ನಡ ಸುದ್ದಿ  /  Karnataka  /  Departmental Probe Against Karnataka Officers Rohini Sindhuri And D Roopa Over Public Spat

IAS vs IPS: ಸಾರ್ವಜನಿಕವಾಗಿ ಐಎಎಸ್-ಐಪಿಎಸ್ ಮಹಿಳಾ ಅಧಿಕಾರಿಗಳ ಜಗಳ; ಇಲಾಖೆ ಮಟ್ಟದ ತನಿಖೆಗೆ ಸರ್ಕಾರ ಆದೇಶ

ಸಿಎಂ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ರೋಹಿಣಿ ಸಿಂಧೂರಿ ಮತ್ತು ಡಿ ರೂಪಾ ಅವರ ವಿರುದ್ಧ ಇಲಾಖೆ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ
ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರು ಮಾಡಿರುವ ಭ್ರಷ್ಟಾಚಾರದ ಆರೋಪಗಳ ಸಂಬಂಧ ರಾಜ್ಯ ಸರ್ಕಾರ ಇಲಾಖೆ ಮಟ್ಟದ ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ರೋಹಿಣಿ ಸಿಂಧೂರಿ ಮತ್ತು ಡಿ ರೂಪಾ ಅವರ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಸಾರ್ವಜನಿಕವಾಗಿ ಈ ಇಬ್ಬರೂ ಅಧಿಕಾರಿಗಳು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದರು. ಹೀಗಾಗಿ ಇಬ್ಬರನ್ನು ಸ್ಥಳ ಸೂಚಿಸದೆ ಎತ್ತಂಗಡಿ ಮಾಡಲಾಗಿತ್ತು. ಇದಾಗ ಎರಡ್ಮೂರು ದಿನಗಳ ಬಳಿಕ ಇಲಾಖೆ ಮಟ್ಟದಲ್ಲಿ ತನಿಖೆಗೆ ಆದೇಶಿಸಲಾಗಿದೆ.

ಅಧಿಕಾರಿಗಳು ಅನುಸರಿಸಬೇಕಾದ ನೀತಿ ಸಂಹಿತೆ ಉಲ್ಲಂಘಿಸಿದ ಇಬ್ಬರೂ ಅಧಿಕಾರಿಗಳ ಮೇಲೆ ತನಿಖೆ ನಡೆಯಲಿದೆ. ಇಬ್ಬರು ಅಧಿಕಾರಿಗಳ ನಡುವಿನ ಸಾರ್ವಜನಿಕ ಜಗಳ ವೈಯಕ್ತಿಕ ಸಮಸ್ಯೆಯಾಗಿದ್ದು, ರೂಪಾ ಅವರ ಪತಿ ಮುನೀಶ್ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಲು ಇದು ಒಂದು ಕಾರಣ ಎನ್ನಲಾಗಿದೆ.

ಸಿಂಧೂರಿ ಅವರ ವಿರುದ್ಧ ಡಿ ರೂಪಾ ಅವರು ಭ್ರಷ್ಟಾಚಾರ ಆರೋಪ ಮಾಡಿದ್ದರು. ಜೊತೆಗೆ ಅವರ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಇದು ಭಾರಿ ಸುದ್ದಿಯಾಗಿತ್ತು. ಈ ಬೆಳವಣಿಗೆಗಳ ನಂತರ ಕಳೆದ ಮಂಗಳವಾರ ಇಬ್ಬರೂ ಅಧಿಕಾರಿಗಳನ್ನು ತಮ್ಮ ಹುದ್ದೆಗಳಿಂದ ತೆಗೆದುಹಾಕಲಾಗಿತ್ತು.

ಕಳೆದ ಸೋಮವಾರ ( ಫೆ. 20) ರೋಹಿಣಿ ಸಿಂಧೂರಿ ಮತ್ತು ಡಿ ರೂಪಾ ಅವರು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ. ದೂರು ನೀಡಿದ್ದರು. ಆ ಬಳಿಕ ಅವರನ್ನು ಕರೆಸಿ ವಿವರಣೆಯನ್ನು ಕೇಳಿದ್ದರು.

ಇದೇ ವಿಚಾರ ಸಂಬಂಧ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಇಬ್ಬರು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಸರ್ಕಾರವು ಈ ಬೆಳವಣಿಗೆಗಳತ್ತ ಗಮನಹರಿಸಿದೆ. ಸಾರ್ವಜನಿಕ ಜೀವನದಲ್ಲಿ ಇಂತಹ ನಡವಳಿಕೆ ಅಪರಾಧವಾಗಿದೆ. ಖಾಸಗಿ ವಿಷಯಗಳನ್ನು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಇದು ಸರಿಯಲ್ಲ ಎಂದಿದ್ದರು.

ಇಬ್ಬರೂ ಅಧಿಕಾರಿಗಳ ವರ್ತನೆ ನೋಡಿದರೆ ಬೆಚ್ಚಿ ಬೀಳುತ್ತದೆ. ಅವರ ವರ್ತನೆಯಿಂದ ಒಳ್ಳೆಯ ಅಧಿಕಾರಿಗಳಿಗೆ ಅವಮಾನವಾಗುತ್ತಿದೆ. ಮಾನವೀಯ ಭಾವನೆ ಇಲ್ಲದವರೂ ಇಂತಹ ಕೃತ್ಯಗಳಲ್ಲಿ ತೊಡಗಬಹುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಡಿಜಿ ಅವರೊಂದಿಗೆ ಮಾತನಾಡಿದ್ದು, ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ ಕೆಲ ದಿನಗಳ ಬಳಿಕ ಇಬ್ಬರಿಗೂ ಸ್ಥಳ ನಿಯೋಜನೆ ಮಾಡದೆ ಎತ್ತಂಗಡಿ ಮಾಡಲಾಗಿತ್ತು. ಇದೀಗ ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಇಲಾಖೆ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಪಟ್ಟಿ ಪೋಸ್ಟ್ ಮಾಡಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಮತ್ತೊಂದು ಪೋಸ್ಟ್ ನಲ್ಲಿ ರೋಹಿಣಿ ಸಿಂಧೂರಿ ಅವರದ್ದು ಎನ್ನಲಾದ ಕೆಲವು ಖಾಸಗಿ ಫೋಟೋಗಳನ್ನು ಹಂಚಿಕೊಂಡು ಹಲವು ಪ್ರಶ್ನೆಗಳನ್ನು ಕೇಳಿದ್ದರು.

ರೋಹಿಣಿ ಸಿಂಧೂರಿ ಅವರು ಶಾಸಕ ಸಾ ರಾ ಮಹೇಶ್ ಅವರ ಬಳಿ ಸಂಧಾನಕ್ಕೆ ಹೋಗಿದ್ದರು ಅಂತ ಎಲ್ಲಾ ಕಡೆ ಸುದ್ದಿಯಾಗಿದೆ. ಸಂಧಾನಕ್ಕೆ ಹೋಗುವುದು ಅಂದರೆ ಅರ್ಥ ಏನು? ಯಾವ ಐಎಎಸ್ ಅಧಿಕಾರಿ ಕೂಡ ಎಂಎಲ್ಎ ಅಥವಾ ರಾಜಕೀಯ ವ್ಯಕ್ತಿಗಳ ಜೊತೆ, ತಾವು ನಿರ್ವಹಿಸಿದ ಕರ್ತವ್ಯ ನಿಮಿತ್ಯ ಸಂಧಾನಕ್ಕೆ ಹೋಗಿದ್ದು ನಾನು ಇದೇ ಮೊದಲು ಕೇಳಿದ್ದು. ಹಾಗಾದರೆ, ರೋಹಿಣಿ ಸಿಂಧೂರಿ ಐಎಎಸ್ ಸಂಧಾನಕ್ಕೆ ಹೋಗಿದ್ದು ಯಾಕೆ? ಆಕೆ ಏನನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ? ತಮ್ಮ ಕರ್ತವ್ಯ ಲೋಪದ ಬಗ್ಗೆಯೋ, ತಮ್ಮ ಭ್ರಷ್ಟಾಚಾರ ಬಗ್ಗೆಯೋ ಏನು? ಎಂದು ಡಿ ರೂಪಾ ಅವರು ಪ್ರಶ್ನಿಸಿದ್ದರು.

IPL_Entry_Point

ವಿಭಾಗ