ಕೈಗಾರಿಕಾ ಯೋಜನೆಗಳ ಕ್ಷಿಪ್ರ ಅನುಮತಿಗೆ ‘ಉಮಾ’ ಸಾಫ್ಟ್ವೇರ್ ಅಭಿವೃದ್ದಿ; ಹೇಗೆ ಕೆಲಸ ಮಾಡಲಿದೆ ಈ ಆ್ಯಪ್?
ಕೈಗಾರಿಕಾ ಯೋಜನೆಗಳ ಕ್ಷಿಪ್ರ ಅನುಮತಿಗೆ ‘ಉಮಾ’ ಸಾಫ್ಟ್ ವೇರ್ ಅಭಿವೃದ್ದಿಪಡಿಸಲಾಗಿದೆ. ಉಮಾ ಹೇಗೆ ಕೆಲಸ ಮಾಡಲಿದೆ? ಎಷ್ಟು ದಿನಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಅನುಮತಿ ಸಿಗಲಿದೆ? ಇಲ್ಲಿದೆ ವಿವರ (ವರದಿ-ಎಚ್.ಮಾರುತಿ)
ಬೆಂಗಳೂರು: ಏಕಗವಾಕ್ಷಿ ಯೋಜನೆಯಡಿಯಲ್ಲಿ ಹಸಿರು ನಿಶಾನೆ ನೀಡಲಾಗಿರುವ ಕೈಗಾರಿಕಾ ಯೋಜನೆಗಳಿಗೆ ಗರಿಷ್ಠ 100 ದಿನಗಳ ಒಳಗಾಗಿ ಅಗತ್ಯ ಇರುವ ಎಲ್ಲ ಅನುಮೋದನೆಗಳನ್ನು ನೀಡಲು ‘ಉಮಾ’ (ಉದ್ಯೋಗ ಮಿತ್ರ ಅಸಿಸ್ಟೆಂಟ್ - Udyoga Mitra Assistant) ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಮೈಕ್ರೋಸಾಫ್ಟ್ ಅಭಿವೃದ್ದಿಪಡಿಸಿರುವ ಈ ಸಾಫ್ಟ್ ವೇರ್ ಅನ್ನು 2025ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಅನಾವರಣಗೊಳಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ ತಿಳಿಸಿದ್ದಾರೆ.
ಏಕಗವಾಕ್ಷಿ ಸಂಬಂಧ ಮೈಕ್ರೋಸಾಫ್ಟ್ ಸಂಸ್ಥೆಯ ತಂತ್ರಜ್ಞರು ನೀಡಿದ ಪ್ರಾತ್ಯಕ್ಷಿಕೆ ವೀಕ್ಷಿಸಿದ ನಂತರ ಸಚಿವರು ಈ ವಿಷಯ ತಿಳಿಸಿದ್ದಾರೆ. ರಾಜ್ಯದಲ್ಲಿ ಹೂಡಿಕೆ ಹೆಚ್ಚಿಸಿ, ಕೈಗಾರಿಕೆಗಳ ನಿರ್ಮಾಣದ ವೇಗ ಹೆಚ್ಚಿಸಲು ಯೋಜನೆಗಳ ಅನುಷ್ಠಾನದ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಮಿತ್ರ ಅಸಿಸ್ಟೆಂಟ್ ತಂತ್ರಾಂಶ 'ಉಮಾ' ಅಭಿವೃದ್ಧಿಪಡಿಸಲಾಗಿದ್ದು ಏಕಗವಾಕ್ಷಿ ಯೋಜನೆಯಡಿ ಹಸಿರು ನಿಶಾನೆ ಪಡೆದ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
60-70 ದಿನಗಳಲ್ಲಿ ಅನುಮೋದನೆ
ಕೆಲವು ರಾಜ್ಯಗಳಲ್ಲಿ ಕೈಗಾರಿಕೆಗಳಿಗೆ ಬಂಡವಾಳ ಹೂಡಿಕೆ ಮಾಡುವ ಯೋಜನೆಗಳಿಗೆ 60-70 ದಿನಗಳ ಒಳಗಾಗಿ ಅನುಮೋದನೆ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ 300 ದಿನಗಳವರೆಗೆ ಕಾಲಾವಕಾಶ ಬೇಕಾಗುತ್ತಿತ್ತು. ಇದರಿಂದ ಅದೆಷ್ಟೋ ಕೈಗಾರಿಕೆಗಳು ರಾಜ್ಯದ ಕೈತಪ್ಪಿ ಹೋಗುತ್ತಿದ್ದವು. ಈ ನಷ್ಟವನ್ನು ತಪ್ಪಿಸಲು ನಮ್ಮ ರಾಜ್ಯದಲ್ಲೂ ಅನುಮತಿ ನೀಡುವ ಕಾಲಮಿತಿಯನ್ನು 60-70 ದಿನಗಳಿಗೆ ಇಳಿಸುವುದು ಸರ್ಕಾರದ ಉದ್ಧೇಶವಾಗಿದೆ. ಇಂತಹ ಗುರಿಯನ್ನು ಹಾಕಿಕೊಳ್ಳದೆ ಹೋದಲ್ಲಿ ನಮ್ಮ ಹೂಡಿಕೆ ಕಾಪಾಡಿಕೊಳ್ಳುವುದು ಕಷ್ಟಸಾಧ್ಯ ಎಂದರು.
ಸಾಫ್ಟ್ವೇರ್ವೊಂದನ್ನು ರೂಪಿಸಿಕೊಡುವಂತೆ ಮೈಕ್ರೋಸಾಫ್ಟ್ ಕಂಪನಿಗೆ ಜವಬ್ದಾರಿ ವಹಿಸಲಾಗಿತ್ತು. ಅದರಂತೆ ಆ ಕಂಪನಿಯು ತಂತ್ರಾಂಶವನ್ನು ಅಭಿವೃದ್ದಿಪಡಿಸಿದೆ. ಕೈಗಾರಿಕಾ ಯೋಜನೆಗಳಿಗೆ ರಾಜ್ಯದಲ್ಲಿ ಕಾನೂನು, ಅರಣ್ಯ, ಅಗ್ನಿಶಾಮಕ, ಪರಿಸರ ಸೇರಿದಂತೆ 33 ಇಲಾಖೆಗಳ ಅನುಮತಿ ಬೇಕಾಗಿರುತ್ತದೆ. ಜೊತೆಗೆ 147 ಬಗೆಯ ಸೇವೆಗಳಿವೆ. ಅವುಗಳೆಲ್ಲವನ್ನೂ ಒಂದೇ ಕಡೆಗೆ ತರಬೇಕಾಗಿದೆ. ಈ ಹೊಸ ತಂತ್ರಾಂಶ ಈ ಕೆಲಸವನ್ನು ಮಾಡಲಿದೆ. ಅನುಮತಿ ಕೋರಿರುವ ಉದ್ಯಮಿಗಳು ಕುಳಿತಲ್ಲೇ ತಮ್ಮ ಯೋಜನೆ ಯಾವ ಹಂತದಲ್ಲಿದೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಎಲ್ಲ ಭಾಷೆಗಳಲ್ಲೂ ಮಾಹಿತಿ ಲಭ್ಯ
33 ಇಲಾಖೆಗಳ 147 ಸೇವೆಗಳಿಗೆ ಈ ತಂತ್ರಾಂಶದಿಂದ ಅನುಮೋದನೆ ಸಿಗಲಿದ್ದು 300 ದಿನ ತೆಗೆದುಕೊಳ್ಳುತ್ತಿದ್ದ ಅನುಮೋದನೆ ಇನ್ನು ಮುಂದೆ 60-70 ದಿನದಲ್ಲಿ ಲಭ್ಯವಾಗಲಿದೆ. ಈ ತಂತ್ರಾಂಶವನ್ನು ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಹೂಡಿಕೆ ಮತ್ತು ಕೈಗಾರಿಕಾ ನಿರ್ಮಾಣ ಪ್ರಕ್ರಿಯೆಯನ್ನು ಸುಗಮಗೊಳಿಸಿ ಕರ್ನಾಟಕದ ಪ್ರಗತಿಯ ವೇಗ ಹೆಚ್ಚಿಸಲು ನಮ್ಮ ಸರ್ಕಾರವು ಬದ್ಧವಾಗಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಏಕೆ ಹೂಡಿಕೆ ಮಾಡಬೇಕು? ಹೇಗೆ ಮಾಡಬೇಕು? ಎಂಬ ಮಾಹಿತಿ ಎಲ್ಲವೂ ಎಲ್ಲ ಭಾಷೆಗಳಲ್ಲೂ ಸಾಫ್ಟ್ ವೇರ್ನಲ್ಲಿ ಲಭ್ಯವಾಗಲಿದೆ. ಇದಕ್ಕಾಗಿ ಕೃತಕ ಬುದ್ದಿಮತ್ತೆಯ ನೆರವನ್ನು ಪಡೆಯಲಾಗಿದೆ. ಉದ್ಯಮಿಗಳು ತಮಗೆ ಬೇಕಾದ ಧ್ವನಿ ಮಾಧ್ಯಮದಲ್ಲೂ ಮಾಹಿತಿಯನ್ನು ಪಡೆಯಲು ಅವಕಾಶ ಇದೆ. ದೇಶದಲ್ಲೇ ಇಂತಹ ವ್ಯವಸ್ಥೆ ಹೊಂದಿರುವ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆ ನಮ್ಮದು ಎಂದು ಸಚಿವರು ತಿಳಿಸಿದ್ದಾರೆ.