ಹೃದಯ ಗೆದ್ದ ಮಾರ್ಷಲ್: ಸುದ್ದಿಗೋಷ್ಠಿಯಲ್ಲಿ ರಾಮಚರಿತಮಾನಸದ ಪ್ರಸಂಗ ಉದಾಹರಿಸಿದ ಏರ್ ಮಾರ್ಷಲ್ ಎ.ಕೆ.ಭಾರ್ತಿ -ರಮೇಶ ದೊಡ್ಡಪುರ ಬರಹ
ಸೋಮವಾರ ಮಧ್ಯಾಹ್ನ ಭಾರತೀಯ ಸೇನೆಯ ಮೂರೂ ದಳಗಳ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರ ಸುದ್ದಿಗೋಷ್ಠಿಯಲ್ಲಿ ಏರ್ ಮಾರ್ಷಲ್ ಎ.ಕೆ. ಭಾರ್ತಿಯವರು ಆಡಿದ ಮಾತುಗಳ ಅರ್ಥ ಏನು ಎನ್ನುವುದನ್ನು ಹೃದಯಕ್ಕೆ ನಾಟುವಂತೆ ವಿವರಿಸಿದ್ದಾರೆ ರಮೇಶ ದೊಡ್ಡಪುರ

ಬೆಂಗಳೂರು: ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಮೂಲಕ ಹಿಂದೆಂದೂ ನಡೆಯದ ರೀತಿಯ ಅತ್ಯಂತ ವ್ಯವಸ್ಥಿತ ಕಾರ್ಯಾಚರಣೆ ನಡೆಸಿ ಜಗತ್ತಿನ ಗಮನ ಸೆಳೆದಿದೆ. ಸೇನೆಯ ಕಾರ್ಯತಂತ್ರ ಏನು ಮತ್ತು ಉಗ್ರರ ದಮನಕ್ಕೆ ಯಾವ ಕ್ರಮ ಕೈಗೊಳ್ಳಲಾಯಿತು ಎಂಬ ಬಗ್ಗೆ ಸೋಮವಾರ ಮಧ್ಯಾಹ್ನ ಭಾರತೀಯ ಸೇನೆಯ ಮೂರೂ ದಳಗಳ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಏರ್ ಮಾರ್ಷಲ್ ಎ.ಕೆ. ಭಾರ್ತಿಯವರು ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರು ಕರ್ಣನ ಕುರಿತು ರಚಿಸಿರುವ ʼರಶ್ಮಿರಥಿʼ ಖಂಡಕಾವ್ಯದ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಅದರ ಬಗ್ಗೆ ರಮೇಶ ದೊಡ್ಡಪುರ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಬರಹದ ಯಥಾವತ್ ಸಾಲುಗಳು ಇಲ್ಲಿವೆ..
ಹೃದಯ ಗೆದ್ದ ಮಾರ್ಷಲ್
ಇವತ್ತು ಮದ್ಯಾಹ್ನ ಭಾರತೀಯ ಸೇನೆಯ ಮೂರೂ ದಳಗಳ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರ (DGMO) ಸುದ್ದಿಗೋಷ್ಠಿ ಇತ್ತು. ಮೊದಲ ಸುತ್ತಿನಲ್ಲಿ ಮೂವರೂ ತಂತಮ್ಮ ದಳಗಳ ವಿವರ ನೀಡಿ ಮೊದಲ ಪ್ರಶ್ನೆ ತೆಗೆದುಕೊಂಡರು. ನ್ಯೂಸ್ ನೇಷನ್‌ನ ಮಧುರೇಂದ್ರ ಎಂಬ ಪತ್ರಕರ್ತ ಕೇಳಿದರು, ನೀವು ಪತ್ರಿಕಾಗೋಷ್ಠಿ ಆರಂಭಿಸುವ ಮೊದಲು ಸೇನೆ ಒಂದು ವಿಡಿಯೋ ಪ್ಲೇ ಮಾಡಿತು. ಅದರಲ್ಲಿ ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಸಾಲುಗಳನ್ನು ಹಿನ್ನೆಲೆಯಾಗಿ ಬಳಸಿಕೊಂಡಿದ್ದಿರಿ. ನಿನ್ನೆ ವಿಡಿಯೋದಲ್ಲಿ ಶಿವ ತಾಂಡವ ಸ್ತೋತ್ರವನ್ನು ಬಳಸಿದ್ದಿರಿ. ಈ ಮೂಲಕ ಶತ್ರುಗಳಿಗೆ ನೀವು ಏನು ಹೇಳಲು ಬಯಸುತ್ತಿದ್ದೀರಿ? ಎಂದರು.
ಇದರಿಂದ ಏರ್ ಮಾರ್ಷಲ್ ಎ.ಕೆ. ಭಾರ್ತಿ ಬಹಳ ಖುಷಿಯಾದರು. ಆ ಪತ್ರಕರ್ತನ ಹೆಸರು, ಏಜೆನ್ಸಿಯನ್ನು ಮತ್ತೆ ಕೇಳಿ ತಿಳಿದುಕೊಂಡರು.
ಆ ಪತ್ರಕರ್ತ ಹೇಳಿದ ಸಾಲುಗಳು ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರು ಕರ್ಣನ ಕುರಿತು ರಚಿಸಿರುವ ʼರಶ್ಮಿರಥಿʼ ಖಂಡಕಾವ್ಯದಲ್ಲಿ ʼकृष्ण की चेतावनीʼ (ಕೃಷ್ಣನ ಎಚ್ಚರಿಕೆ) ಎಂಬ ಭಾಗದಿಂದ ಆಯ್ದುಕೊಂಡಿದ್ದಾಗಿತ್ತು.
ಅದರ ಸಾಲುಗಳು ಹೀಗಿವೆ...
दुर्योधन वह भी दे ना सका,
आशीष समाज की ले न सका,
उलटे, हरि को बाँधने चला,
जो था असाध्य, साधने चला।
(ದುರ್ಯೋಧನ ಅದನ್ನೂ (ಪಾಂಡವರಿಗೆ ಐದು ಗ್ರಾಮಗಳನ್ನೂ) ನೀಡಲಿಲ್ಲ. ಸಮಾಜದ ಆಶೀರ್ವಾದವನ್ನು ಪಡೆಯಲಾಗಲಿಲ್ಲ. ಹರಿಯನ್ನೇ ಕಟ್ಟಿಹಾಕಲು ಮುಂದಾದ, ಅಸಾಧ್ಯವಾದದ್ದನ್ನು ಮಾಡಲು ಹೊರಟ)
जब नाश मनुज पर छाता है, पहले विवेक मर जाता है।
हरि ने भीषण हुँकार किया, अपना स्वरूप विस्तार किया।
डगमग-डगमग दिग्गज डोले, भगवान कुपित हो कर बोले।
जंजीर बढ़ा अब साध मुझे, हाँ-हाँ दुर्योधन! बाँध मुझे।
(ಮನುಷ್ಯನ ಮೇಲೆ ನಾಶ ಆವರಿಸಿಕೊಂಡಾಗ ವಿವೇಕ ಸತ್ತುಹೋಗುತ್ತದೆ. ಹರಿಯು ಭೀಷಣವಾಗಿ ಗರ್ಜಿಸಿದ, ತನ್ನ ಸ್ವರೂಪವನ್ನು ವಿಸ್ತರಿಸಿದ. ದಿಗ್ಗಜರೆಲ್ಲರೂ ಪತರುಗುಟ್ಟಿಹೋದರು, ಸರಪಳಿಯನ್ನು ಇನ್ನೂ ಉದ್ದ ಮಾಡು, ನನ್ನ ಕಟ್ಟಿನೋಡು ಧುರ್ಯೋಧನ ಎಂದು ಭಗವಂತ ಕೋಪದಿಂದ ಹೇಳಿದ)
ಈ ಸಾಲುಗಳನ್ನು ಹಿನ್ನೆಲೆಯಾಗಿಸಿಕೊಂಡ ಎ.ಕೆ. ಭಾರ್ತಿ ಅವರು ರಾಮಚರಿತ ಮಾನಸದ ಮೂಲಕ ಉತ್ತರ ನೀಡಿದರು. ಒಂದು ಕ್ಷಣವೂ ಆಚೀಚೆ ನೋಡದೆ ನಿರರ್ಗಳವಾಗಿ ಹೇಳಿ, ಇದೇ ನಾವು ನೀಡುತ್ತಿರುವ ಸಂದೇಶ ಎಂದರು. ಆ ಸಾಲುಗಳು ಹೀಗಿವೆ:
बिनय न मानत जलधि जड़
गए तीनि दिन बीति।
बोले राम सकोप तब
भय बिनु होइ न प्रीति
ಲಂಕೆಗೆ ತೆರಳಲು ಸಮುದ್ರರಾಜ ಜಾಗ ಬಿಡುತ್ತಾನೆ ಎಂದು ಕಾದು ಕಾದು ರಾಮನಿಗೆ ಕೋಪ ಬಂದಿತು. ಮೂರು ದಿನ ಆದರೂ ಈ ಜಲ ಮಾತು ಕೇಳುತ್ತಿಲ್ಲ ಎಂದು ಕೋಪಗೊಂಡು, ಹೇಳಿದ ಭಯವಿಲ್ಲದೆ ಸ್ನೇಹವೂ ಇಲ್ಲ ಎನ್ನುತ್ತ ಬಿಲ್ಲನ್ನು ಏರಿಸುತ್ತಾನೆ. ಆಗ ಸಮುದ್ರರಾಜ ಪ್ರತ್ಯಕ್ಷವಾಗಿ ಸಹಾಯಹಸ್ತ ಚಾಚುತ್ತಾನೆ....
ಸಾಮಾನ್ಯವಾಗಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಜೈಕಾರ ಹಾಕುವುದು, ಚಪ್ಪಾಳೆ ತಟ್ಟುವುದಿರಲಿ, ರಾಷ್ಟ್ರಗೀತೆ-ನಾಡಗೀತೆ ಸಮಯ ಬಿಟ್ಟರೆ ಅತಿಥಿಗಳು ಬಂದಾಗ ಎದ್ದುನಿಲ್ಲುವುದೂ ಇಲ್ಲ. ಅದರಲ್ಲೂ ಸೇನೆಯಂತಹ ವಿಚಾರದ ಪತ್ರಿಕಾಗೋಷ್ಠಿಯಲ್ಲಿ ಅದನ್ನು ನೋಡಲು ಸಾಗುವುದಿಲ್ಲ. ಆದರೆ ಎ.ಕೆ.. ಭಾರ್ತಿ ಅವರ ಸ್ಪಾಂಟೇನಿಯಸ್ ಮಾತು ಕೇಳಿ ಪತ್ರಕರ್ತರಿಗೂ ತಡೆಯಲಾಗದೆ ಚಪ್ಪಾಳೆ ತಟ್ಟಿದರು. ಏರ್ ಮಾರ್ಶಲ್ ಎ.ಕೆ. ಭಾರ್ತಿ ಅವರ ಪಕ್ಕ ಕುಳಿತಿದ್ದ ಸಮುದ್ರರಾಜ (ನೌಕಾದಳದ ವೈಸ್ ಅಡ್ಮಿರಲ್) ಎ.ಎನ್. ಪ್ರಮೋದ್ ಅವರ ಮುಖದಲ್ಲಿ ಸಹ ಮಂದಹಾಸ ಮೂಡಿತು. ಅಂದಹಾಗೆ ಪ್ರಮೋದ್ ಅವರು ಸುದ್ದಿಗೋಷ್ಠಿ ಮುಗಿಸುವ ಮುನ್ನ ಹೇಳಿದ ಮಾತು, ʼಶಂ ನೋ ವರುಣಃʼ.