ಧರ್ಮಸ್ಥಳ ಲಕ್ಷ ದೀಪೋತ್ಸವ: ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಜನಸಾಗರ; ಕಳೆಗಟ್ಟಿದ ಸರ್ವಧರ್ಮ, ಸಾಹಿತ್ಯ ಸಮ್ಮೇಳನ
Dharmasthala Laksha Deepotsava 2024: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವದ ಅಂಗವಾಗಿ ಶುಕ್ರವಾರ, ಶನಿವಾರ 92ನೇ ಸರ್ವಧರ್ಮ, ಸಾಹಿತ್ಯ ಸಮ್ಮೇಳನ ನಡೆಯಿತು. ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು.
ಮಂಗಳೂರು: ಧರ್ಮಸ್ಥಳದಲ್ಲಿ ಹೂವು, ವಿದ್ಯುತ್ ದೀಪಾಲಂಕಾರಗಳಿಂದ ಹಾಗೂ ತಳಿರು ತೋರಣಗಳಿಂದ ಅಲಂಕೃತವಾದ ಕಟ್ಟಡಗಳು, ಅಪಾರ ಜನಸಾಗರದ ಸಮ್ಮುಖದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನ ಕಳೆಗಟ್ಟಿತು.
ಶತಾವಧಾನಿ ಆರ್. ಗಣೇಶ್ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನವನ್ನು ಉದ್ಘಾಟಿಸಿದರು. ಭಾರತ ಜನನನಿಯ ತನುಜಾತೆಯಾದ ಕರ್ನಾಟಕದಲ್ಲಿ ಶ್ರಮಸಂಸ್ಕೃತಿಯ ಲೋಪದಿಂದಾಗಿ ಕನ್ನಡ ಸೊರಗುತ್ತಿದೆ. ಯಾವುದೇ ಭಾಷೆಗೆ ವಿಚಾರಗಳನ್ನು ಭಾವನೆಗಳನ್ನು ಮತ್ತು ವ್ಯವಹಾರವನ್ನು ಸ್ಪಷ್ಟವಾಗಿ ಅಭಿವ್ಯಕ್ತಿಗೊಳಿಸುವ ಶಕ್ತಿ, ಸಾಮರ್ಥ್ಯ ಮತ್ತು ಪ್ರಭುತ್ವ ಇರಬೇಕು. ಈ ದಿಸೆಯಲ್ಲಿ ಪ್ರಾದೇಶಿಕ ವೈವಿಧ್ಯತೆಯ ಸೊಗಡು ಇದ್ದರೂ ಕನ್ನಡ ಸಮೃದ್ಧ ಭಾಷೆಯಾಗಿದೆ. ಪದಸಂಪತ್ತಿಗೆ ಕೊರತೆ ಇಲ್ಲ. ಯಾವುದೇ ಏರಿಳಿತ, ಅಡೆ-ತಡೆ ಎದುರಿಸುವ ಸಾಮರ್ಥ್ಯ ಕನ್ನಡಕ್ಕಿದೆ ಎಂದು ಶತಾವಧಾನಿ ಆರ್. ಗಣೇಶ ಈ ಸಂದರ್ಭದಲ್ಲಿ ಕನ್ನಡದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ
ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯ ಕನ್ನಡಿಗರ ಶ್ರೀಮಂತ ಸಂಸ್ಕೃತಿಯ ಸಂಕೇತವಾಗಿದೆ. ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಧರ್ಮದ ನಡುವೆ ಅವಿನಾಭಾವ ಸಂಬಂಧ ಇದ್ದು, ಸಾಹಿತ್ಯ ಸಮಾಜದ ಪ್ರತಿಬಿಂಬವಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಇತಿಹಾಸ ಕಾದಂಬರಿಗಳ ಬಗ್ಗೆಯೂ ಪ್ರಾಮಾಣಿಕ ಮೌಲ್ಯಮಾಪನ ಮತ್ತು ವಿಮರ್ಶೆ ಮಾಡಬೇಕು ಎಂದು ಎಂದು ಅಧ್ಯಕ್ಷತೆ ವಹಿಸಿದ ನಿವೃತ್ತ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣುಭಟ್ ಹೇಳಿದರು. ಇಂದು ಸಾಹಿತ್ಯದ ವ್ಯಾಪ್ತಿ ತುಂಬಾ ಬೆಳೆಯುತ್ತಿದೆ. ಸಾಹಿತ್ಯದ ಎಲ್ಲಾ ಪ್ರಕಾರಗಳ ವಿಮರ್ಶೆ ಮತ್ತು ಮೌಲ್ಯಮಾಪನ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಧರ್ಮಸ್ಥಳದಲ್ಲಿ ಬೆಳಕಿನ ಸೊಬಗು: ಮಂಗಳವಾರ ಲಕ್ಷದೀಪೋತ್ಸವ ಸಿದ್ದತೆ ಹೀಗಿತ್ತು
ಡಾ. ಪ್ರಮೀಳಾ ಮಾಧವ್, ಡಾ. ಬಿ.ವಿ. ವಸಂತ ಕುಮಾರ್ ಪ್ರೊ. ಮೊರಬದ ಮಲ್ಲಿಕಾರ್ಜುನ ಉಪನ್ಯಾಸ ನೀಡಿದರು. ಅಶೋಕ್‌ಕುಮಾರ್ ಧನ್ಯವಾದ ಅರ್ಪಿಸಿದರು. ದಿವಾ ಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು. ಬೆಂಗಳೂರಿನ 22 ಮಂದಿ ದಾನಿಗಳು ಸೇರಿ 27 ಕೌಂಟರ್‌ಗಳಲ್ಲಿ ಶನಿವಾರ ರಾತ್ರಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಬ್ಯಾಂಡ್, ವಾಲಗ, ಡೊಳ್ಳು, ಕೋಲಾಟ, ಶಂಖ, ಕೊಂಬು, ಕಹಳೆ, ಜಾಗಟೆ ಮೊದಲಾದ 4330 ಜಾನಪದ ಕಲಾವಿದರು 1002 ತಂಡಗಳಲ್ಲಿ ಆಹೋರಾತ್ರಿ ಕಲಾ ಸೇವೆ ಮಾಡಿದರು. ಡಿ. ವೀರೇಂದ್ರ ಹೆಗ್ಗಡೆಯವರ ಬಗ್ಗೆ ಉಜಿರೆಯ ಸೋನಿಯಾವರ್ಮ ರಚಿಸಿದ ಗುಣಗಣಿ-ಗುಣರತ್ನಗಳ ಧಣಿ ಕೃತಿ ಮತ್ತು ಮಂಜೂಷಾ ವಸ್ತು ಸಂಗ್ರಹಾಲಯದ ಕ್ಯುರೇಟರ್ ಪುಷ್ಪದಂತ ರಚಿಸಿದ ಉಪರತ್ನಗಳು ಮತ್ತು ನವರತ್ನಗಳು ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ವರದಿ: ಹರೀಶ್ ಮಾಂಬಾಡಿ, ಮಂಗಳೂರು