Dharmsthala Laksh Deepotsav 2024: ಉಜಿರೆಯಿಂದ ಧರ್ಮಸ್ಥಳವರೆಗೂ ಓಂ ನಮಃ ಶಿವಾಯ, ಹರ ಹರ ಮಹಾದೇವ ಪಠಣ: ಲಕ್ಷದೀಪೋತ್ಸವಕ್ಕೆ ಭಕ್ತರ ಹೆಜ್ಜೆ
Dharmsthala Laksh Deepotsav 2024: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಡಗರ. ಉಜಿರೆಯಿಂದ ಧರ್ಮಸ್ಥಳದವರೆಗೂ ನಡೆದುಕೊಂಡೇ ಬಂದ ಭಕ್ತರು,ಮಕ್ಕಳ ಖುಷಿ ಹೀಗಿತ್ತು.ವರದಿ: ಹರೀಶಮಾಂಬಾಡಿ, ಮಂಗಳೂರು
ಮಂಗಳೂರು: ಕರ್ನಾಟಕ ಕರಾವಳಿಯ ಪ್ರಸಿದ್ಧ ಯಾತ್ರಾಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂಭ್ರಮ ಕಳೆಗಟ್ಟುತ್ತಿರುವಂತೆಯೇ ಭಕ್ತರ ದಂಡು ಕ್ಷೇತ್ರಕ್ಕೆ ಆಗಮಿಸುತ್ತಿದೆ. ಶನಿವಾರದವೆಗೆ ಹಲವು ಕಾರ್ಯಕ್ರಮಗಳೊಂದಿಗೆ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಧಾರ್ಮಿಕ, ಸಾಂಸ್ಕೃತಿಕ ವೈವಿಧ್ಯ ಇರಲಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಭಕ್ತರ ದಂಡು ಓಂ ನಮಃ ಶಿವಾಯ, ಹರ ಹರ ಮಹಾದೇವ ಎನ್ನುತ್ತಾ ಕಾಲ್ನಡಿಗೆಯಲ್ಲಿ ಸಾಗಿ ಬಂದ ಅಪೂರ್ವ ದೃಶ್ಯ ಕಂಡುಬಂತು. ಹೀಗೆ ಅವರು ನಡಿಗೆಯಲ್ಲಿ ಸತತ 12 ವರ್ಷಗಳಿಂದ ಲಕ್ಷದೀಪೋತ್ಸವ ವೇಳೆ ಆಗಮಿಸುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪ್ರಯುಕ್ತ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಗೆ ಭಕ್ತರು ಸಾಮೂಹಿಕವಾಗಿ ನಡೆಸುತ್ತಿರುವ ಭಕ್ತಿ ಭಜನೆಯ ಪಾದಯಾತ್ರೆ ಇದು.
12ನೇ ವರ್ಷದ ಪಾದಯಾತ್ರೆಗೆ ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಚಾಲನೆ ನೀಡಿದರು. ಸಹಸ್ರಾರು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಪಾದಯಾತ್ರೆಯುದ್ದಕ್ಕೂ ಓಂ ನಮಃ ಶಿವಾಯ ಹರ ಹರ ಮಹಾದೇವ ಭಕ್ತಿ ಘೋಷಣೆ ಹಾಗೂ ಭಜನೆ ನಡೆಯಿತು.
ಉಜಿರೆಯಲ್ಲಿರುವ ಶ್ರೀ ಜನಾರ್ದನ ದೇವರ ದರ್ಶನ ಮಾಡಿ ಪಾದಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನವನ್ನು ಭಕ್ತರು ಪಡೆದರು.
ಭಜನಾ ತಂಡಗಳ ಸಾಥ್
ಹಲವಾರು ಭಜನಾ ತಂಡಗಳ ಸದಸ್ಯರು ಭಜನೆ ಹೇಳುತ್ತಾ ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಸ್ಥಳೀಯರು ನೀರು ಬೆಲ್ಲ, ಪಾನಕ, ಮಜ್ಜಿಗೆ ಇತ್ಯಾದಿ ವ್ಯವಸ್ಥೆ ಮಾಡಿದ್ದರು. ರಸ್ತೆಯ ಒಂದು ಬದಿಯಲ್ಲಿ ಪಾದಯಾತ್ರೆ ಸಾಗಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗದಂತೆ ಸ್ವಯಂಸೇವಕರು ಕ್ರಮ ಕೈಗೊಂಡರು.
ಉಜಿರೆಯಲ್ಲಿ ಫಲಾಹಾರ, ಕುಡಿಯುವ ನೀರಿನ ವ್ಯವಸ್ಥೆ, ಶಾರದಾ ಮಂಟಪ, ಕೃಷ್ಣಾನುಗ್ರಹ ಸಭಾಭವನ ಹಾಗು ರಥಬೀದಿಯಲ್ಲಿ ಪಾದಯತ್ರಿಗಳಿಗೆ ವಿಶ್ರಾಂತಿ ವ್ಯವಸ್ಥೆಯನ್ನು ಪಾದಯಾತ್ರೆ ಸಮಿತಿ ವತಿಯಿಂದ ಮಾಡಲಾಗಿತ್ತು. ಉಜಿರೆ ಸರ್ಕಲ್ ನಲ್ಲಿ ಕುಣಿತ ಭಜನೆ ಹಾಗು ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮ ನಡೆಯಿತು.
ಗಣ್ಯರ ಭಾಗಿ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ,ಎಂ ಎಲ್ ಸಿ ಪ್ರತಾಪ್ ಸಿಂಹ ನಾಯಕ್, ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಮಾಜಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ವಸಂತ ಸಾಲ್ಯಾನ್, ಎಸ್ ಕೆ ಡಿ ಆರ್ ಡಿ ಪಿಯ ನಿವೃತ್ತ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕ ಎಲ್.ಎಚ್.ಮಂಜುನಾಥ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್. ಎಸ್., ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್, ರಾಜೇಶ್ ಪೈ, ಎಸ್ ಡಿ ಎಂ ಕಾಲೇಜಿನ ಪ್ರಿನ್ಸಿಪಾಲ್ ಡಾ.ಬಿ.ಎ. ಕುಮಾರ್ ಹೆಗ್ಡೆ, ಕಲಾ ನಿಕಾಯದ ಡೀನ್ ಡಾ.ಶ್ರೀಧರ್ ಭಟ್, ತಾಲೂಕಿನ ವರ್ತಕರು, ಭಕ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ಹರೀಶಮಾಂಬಾಡಿ, ಮಂಗಳೂರು