Dharmsthala Lakshdeepotsav2024: ಲಕ್ಷಾಂತರ ಮನೆ, ಮನಗಳನ್ನು ಬೆಳಗುವ ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ, ಸಾಹಿತ್ಯ ಸಮ್ಮೇಳನದ ಸೊಬಗು
Dharmsthala Lakshdeepotsav2024: ದಕ್ಷಿಣ ಕನ್ನಡದ ಧರ್ಮಸ್ಥಳ ಪ್ರಮುಖ ಧಾರ್ಮಿಕ ತಾಣ. ಮಂಜುನಾಥನ ಸನ್ನಿಧಿಗೆ ಬರುವ ಭಕ್ತರು ವಿಭಿನ್ನ. ಇಲ್ಲಿನ ಲಕ್ಷದೀಪೋತ್ಸವವೂ ಧಾರ್ಮಿಕತೆ ಜತೆಗೆ ವಿಚಾರ ಮಂಥನಕ್ಕೂ ಮುಖ್ಯ ವೇದಿಕೆ. ಲಕ್ಷದೀಪೋತ್ಸವ ಚಟುವಟಿಕೆ, ಅದರ ಹಿನ್ನೆಲೆಯ ಮಾಹಿತಿ ಇಲ್ಲಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು
Dharmsthala Lakshdeepotsav2024: ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸ ಅಂದರೆ ಉತ್ಸವಗಳ ಪರ್ವಕಾಲ. ಲಕ್ಷದೀಪೋತ್ಸವವು ಭಕ್ತಿ ಭಾವೈಕ್ಯದ ಮಿಲನ. ನಾಡಿನೆಲ್ಲೆಡೆಯಿಂದ ಬರುವ ಭಕ್ತಾದಿಗಳಿಗೆ ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿ, ಮನೋರಂಜನೆಯ ಸೊಗಡನ್ನು ಆಸ್ವಾದಿಸಿ, ಆನಂದಿಸುವ ಸಂತಸದ ಸಮಯ. ಸರ್ವಧರ್ಮ ಸಮನ್ವಯ ಕೇಂದ್ರ ಧರ್ಮಸ್ಥಳದ ಮುಖ್ಯ ಆರಾಧ್ಯ ದೇವರು ಶ್ರೀ ಮಂಜುನಾಥ ಸ್ವಾಮಿ. ಅರ್ಚಕರು ವೈಷ್ಣವ ಸಂಪ್ರದಾಯದವರು. ದೇವಸ್ಥಾನದ ಆಡಳಿತ ನಡೆಸುವ ಧರ್ಮಾಧಿಕಾರಿಗಳು ಜೈನ ಧರ್ಮದವರು. ಹಿಂದೂಗಳು, ಜೈನರು, ಕ್ರೈಸ್ತರು, ಮುಸ್ಲಿಮರು ಸೇರಿದಂತೆ ಸರ್ವಧರ್ಮೀಯರೂ ಶ್ರದ್ಧಾ-ಭಕ್ತಿಯಿಂದ ಧರ್ಮಸ್ಥಳಕ್ಕೆ ಬರುತ್ತಾರೆ. ಎಲ್ಲರಿಗೂ ತಿಳಿದಿರುವಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಬಹಳ ಮಹತ್ವಪೂರ್ಣವಾಗಿದೆ. ಆದುದರಿಂದಲೇ ವಾಕ್‌ದೋಷ ಪರಿಹಾರ, ಆಣೆಮಾತು ತೀರ್ಮಾನ, ನ್ಯಾಯದಾನ ಮೊದಲಾದ ವಿಶಿಷ್ಠ ಸಂಪ್ರದಾಯಗಳು ಇಲ್ಲಿವೆ.
ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ
ಜಾತ್ರೆ, ಉತ್ಸವಗಳು ಕೇವಲ ಜನ ಮರುಳೋ, ಜಾತ್ರೆ ಮರುಳೋ ಎಂಬಂತಾಗಬಾರದು. ಜನರ ಜೀವನಶೈಲಿ ಮೇಲೆ ಗಾಢ ಪರಿಣಾಮ ಬೀರಬೇಕು. ವರ್ತನೆಯಲ್ಲಿ ಪರಿವರ್ತನೆಯಾಗಬೇಕು. ಉತ್ತಮ ಧಾರ್ಮಿಕ ಹಾಗೂ ಸಂಸ್ಕಾರ ಮೂಡಿ ಬರಬೇಕು ಎಂಬ ಉದ್ದೇಶದಿಂದ 1933 ರಲ್ಲಿ ಅಂದಿನ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ “ಮಾತನಾಡುವ ಮಂಜುನಾಥ” ಎಂದೇ ಚಿರಪರಿಚಿತರಾಗಿದ್ದ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವ ಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನವನ್ನು ಪ್ರಾರಂಭಿಸಿದರು.
ವಿವಿಧ ಧರ್ಮಗಳ ವಿದ್ವಾಂಸರನ್ನು, ನೇತಾರರನ್ನು ಆಹ್ವಾನಿಸಿ ಧರ್ಮಗಳ ತತ್ವ, ಸಿದ್ದಾಂತಗಳ ಬಗ್ಯೆ ಪರಸ್ಪರ ಅನುಭವ, ಅಭಿಪ್ರಾಯ ಹಂಚಿಕೊಂಡು ಚಿಂತನ-ಮಂಥನ ನಡೆಸುವುದು, ಸರ್ವಧರ್ಮಗಳ ಬಗ್ಯೆಯೂ ಗೌರವ, ಅಭಿಮಾನ ಹೊಂದಿರುವುದು ಹಾಗೂ ಸಹಬಾಳ್ವೆಯ ತತ್ವಬೋಧನೆ ಸರ್ವಧರ್ಮ ಸಮ್ಮೇಳನದ ಉದ್ದೇಶವಾಗಿದೆ.
ಕನ್ನಡ ನಾಡು, ನುಡಿ ಸಂಸ್ಕೃತಿಯ ಅರಿವು
ಜನರಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಬಗ್ಯೆ ಅರಿವು, ಜಾಗೃತಿ ಮೂಡಿಸುವುದೇ ಸಾಹಿತ್ಯ ಸಮ್ಮೇಳನದ ಗುರಿಯಾಗಿದೆ. ನಾಡಿನ ಖ್ಯಾತ ಸಾಹಿತಿಗಳು, ಕಲಾವಿದರು ಹಾಗೂ ವಿದ್ವಾಂಸರನ್ನು ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಲಾಗುತ್ತದೆ.
1957ರಲ್ಲಿ ಉಭಯ ಸಮ್ಮೇಳನಗಳ ರಜತಮಹೋತ್ಸವವನ್ನು ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರ ನೇತೃತ್ವದಲ್ಲಿ ಆಚರಿಸಲಾಯಿತು.
ಪ್ರಸ್ತುತ ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 1982 ರಲ್ಲಿ ಸುವರ್ಣಮಹೋತ್ಸವ ಹಾಗೂ 2007ರಲ್ಲಿ ಉಭಯ ಸಮ್ಮೇಳನಗಳ ಅಮೃತಮಹೋತ್ಸವ ಆಚರಿಸಲಾಯಿತು.
ಸಾಹಿತ್ಯ ಸಮ್ಮೇಳನ ನಾಳೆ
ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನವನ್ನು ನಾಳೆ ಶನಿವಾರ ಸಂಜೆ 5 ಗಂಟೆಗೆ ಖ್ಯಾತ ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಉದ್ಘಾಟಿಸುವರು. ಖ್ಯಾತ ಲೇಖಕ ಉಡುಪಿಯ ಪಾದೆಕಲ್ಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸುವರು.ಬೆಂಗಳೂರಿನ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ಪ್ರಮೀಳಾಮಾಧವ, ಮೈಸೂರಿನ ಡಾ. ಬಿ. ವಿ. ವಸಂತಕುಮಾರ್ ಮತ್ತು ಪ್ರೊ. ಮೊರಬದ ಮಲ್ಲಿಕಾರ್ಜುನ ಉಪನ್ಯಾಸ ನೀಡುವರು.
ರಾತ್ರಿ 12 ಗಂಟೆ ಬಳಿಕ ಲಕ್ಷದೀಪೋತ್ಸವ (ಗೌರಿಮಾರುಕಟ್ಟೆ ಉತ್ಸವ) ನಡೆಯಲಿದ್ದು, ನಾಡಿನೆಲ್ಲೆಡೆಯಿಂದ ಬರುವ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಭವ್ಯಉತ್ಸವ ಕಣ್ತುಂಬಿಕೊಂಡು ಧನ್ಯತೆಯನ್ನು ಹೊಂದುವರು.
ಜಾನಪದ ಕಲಾವಿದರ ಕಲಾಸೇವೆ: ಕೊಂಬು, ಕಹಳೆ, ಜಾಗಟೆ, ಶಂಖ, ಸಣ್ಣಾಟ ಮೊದಲಾದ ಜಾನಪದ ಕಲಾವಿದರು ಇಡೀ ರಾತ್ರಿ ಕಲಾಸೇವೆ ಅರ್ಪಿಸುವರು.\
(ವರದಿ: ಹರೀಶ ಮಾಂಬಾಡಿ. ಮಂಗಳೂರು)