ಅಕ್ಟೋಬರ್‌ 26ರಂದು ವರಕವಿ ದ ರಾ ಬೇಂದ್ರೆ ಪುಣ್ಯಸ್ಮರಣೆ; ಮುಗದದಲ್ಲಿ ಭೃಂಗದ ಬೆನ್ನೇರಿ ಕಾರ್ಯಕ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  ಅಕ್ಟೋಬರ್‌ 26ರಂದು ವರಕವಿ ದ ರಾ ಬೇಂದ್ರೆ ಪುಣ್ಯಸ್ಮರಣೆ; ಮುಗದದಲ್ಲಿ ಭೃಂಗದ ಬೆನ್ನೇರಿ ಕಾರ್ಯಕ್ರಮ

ಅಕ್ಟೋಬರ್‌ 26ರಂದು ವರಕವಿ ದ ರಾ ಬೇಂದ್ರೆ ಪುಣ್ಯಸ್ಮರಣೆ; ಮುಗದದಲ್ಲಿ ಭೃಂಗದ ಬೆನ್ನೇರಿ ಕಾರ್ಯಕ್ರಮ

Da Ra Bendre: ಅಕ್ಟೋಬರ್‌ 26ರಂದು ಸಂಜೆ 5 ಗಂಟೆಗೆ ಮುಗದದ ಕೆರೆ ಮತ್ತು ದುರ್ಗಾದೇವಿ ದೇವಸ್ಥಾನದ ಬಯಲಿನಲ್ಲಿ ‘ಭೃಂಗದ ಬೆನ್ನೇರಿ’ ಎಂಬ ಹೆಸರಿನಲ್ಲಿ ವರಕವಿ ದ ರಾ ಬೇಂದ್ರೆ ಸಂಸ್ಮರಣೆ ಕಾರ್ಯಕ್ರಮ ನಡೆಸಲಾಗುತ್ತಿದೆ.

ವರಕವಿ ದ ರಾ ಬೇಂದ್ರೆ ಪುಣ್ಯಸ್ಮರಣೆ; ಮುಗದದಲ್ಲಿ ಭೃಂಗದ ಬೆನ್ನೇರಿ ಕಾರ್ಯಕ್ರಮ
ವರಕವಿ ದ ರಾ ಬೇಂದ್ರೆ ಪುಣ್ಯಸ್ಮರಣೆ; ಮುಗದದಲ್ಲಿ ಭೃಂಗದ ಬೆನ್ನೇರಿ ಕಾರ್ಯಕ್ರಮ

ಧಾರವಾಡ: ವರಕವಿ, ಸಹಸ್ರಮಾನದ ಕವಿ ಡಾ. ದ.ರಾ ಬೇಂದ್ರೆಯವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಈ ಬಾರಿ ಬೇಂದ್ರೆಯವರ ನೆಚ್ಚಿನ ತಾಣ ಮುಗದದಲ್ಲಿ ಅಕ್ಟೋಬರ್‌ 26ರಂದು ಆಚರಿಸಲಾಗುತ್ತಿದೆ. ಈ ಕುರಿತು ಕೃಷ್ಣ ಕಟ್ಟಿ ಮಾಹಿತಿ ನೀಡಿದ್ದಾರೆ. ಧಾರವಾಡ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಂದ್ರೆಯವರಿಗೆ ದುರ್ಗಾದೇವಿ ಕನಸಿನಲ್ಲಿ 'ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ' ಎಂಬ ಸಾಲು ನೀಡಿದಳು. ಕಾವ್ಯದೇವತೆಯಿಂದ ಅದನ್ನು ಸ್ವೀಕಾರ ಮಾಡಿದ ಕವಿ, ಹತ್ತು ನುಡಿಯ 'ಭಾವಗೀತ' ಎಂಬ ನಾಲ್ವತ್ತು ಸಾಲಿನ ಪದ್ಯ ಬರೆದರು. ಐತಿಹಾಸಿಕವಾಗಿ ಈ ಪದ್ಯ ಬಹಳ ಮಹತ್ವವಾದದ್ದು. ನವೋದಯ ಕಾಲಘಟ್ಟದಲ್ಲಿ ಮೂಡಿಬಂದ ಈ ಕವಿತೆ 'ಭಾವಗೀತ' ಎಂಬ ಕಾವ್ಯ ಪ್ರಕಾರದ ಸ್ವರೂಪ, ಸಿದ್ಧಾಂತ ಮತ್ತು ದರ್ಶನವನ್ನು ತಿಳಿಸುತ್ತದೆ ಎಂದರು.

ಈ ಹಿನ್ನೆಲೆಯಲ್ಲಿ ಮುಗದದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ದರಾ ಬೇಂದ್ರೆಯವರ ಸ್ಮರಣೆಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಅಕ್ಟೋಬರ್‌ 26ರಂದು ಸಂಜೆ 5 ಗಂಟೆಗೆ ಮುಗದದ ಕೆರೆ ಮತ್ತು ದುರ್ಗಾದೇವಿ ದೇವಸ್ಥಾನದ ಬಯಲಿನಲ್ಲಿ ಧಾರವಾಡದ ಜಿಬಿ ಜೋಶಿ ಮೆಮೋರಿಯಲ್ ಟ್ರಸ್ಟ್, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಸಕ್ರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್, ಮುಗುದ ಗ್ರಾಪಂ ಹಾಗೂ ಗ್ರಾಮದ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ "ಭೃಂಗದ ಬೆನ್ನೇರಿ" ಎಂಬ ಹೆಸರಿನಲ್ಲಿ ವರಕವಿ ದ ರಾ ಬೇಂದ್ರೆ ಸಂಸ್ಮರಣ ಕಾರ್ಯಕ್ರಮ ನಡೆಸಲಾಗುತ್ತಿದೆ.

ಅತಿಥಿಗಳು ಯಾರ್ಯಾರು?

ಹಿರಿಯ ಸಾಹಿತಿ ಡಾ.ಶ್ಯಾಮಸುಂದರ ಬಿದರಕುಂದಿ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಮುಖ್ಯ ಅತಿಥಿಗಳಾಗಿ ಡಾ.ರಮಾಕಾಂತ ಜೋಶಿ ಉಪಸ್ಥಿತರಿರುತ್ತಾರೆ. ಅತಿಥಿಗಳಾಗಿ ಕಲ್ಲಪ್ಪ ಹಟ್ಟಿಯವರ, ಗಿರಿಜಾ ಮುನವಳ್ಳಿ, ಎಸ್. ಎಸ್. ಪೀರಜಾದೆ ಉಪಸ್ಥಿತರಿರುತ್ತಾರೆ. ಗ್ರಾಮ ಪಂಚಾಯತಿ ಅಧ್ಯಕ್ಷ ರವಿ ಕಸಮಳಗಿ ಅಧ್ಯಕ್ಷತೆ ವಹಿಸುತ್ತಾರೆ.

ಕಾರ್ಯಕ್ರಮದಲ್ಲಿ ಇಪ್ಪತ್ತು ಜನ ಗಣ್ಯರು ಬೇಂದ್ರೆಯವರ ಕವಿತೆಗಳನ್ನು ವಾಚಿಸುತ್ತಾರೆ ಮತ್ತು ಹಾಡುತ್ತಾರೆ. ಮುಗದದ ನವಭಾರತ ಕಾನ್ವೆಂಟ್ ಸ್ಕೂಲಿನ ಮಕ್ಕಳು ಬೇಂದ್ರೆಯವರ ಹಾಡಿನೊಂದಿಗೆ ನೃತ್ಯ ರೂಪಕವನ್ನು ಪ್ರಸ್ತುತಪಡಿಸಲಿದ್ದಾರೆ. ಕವಿ ದ ರಾ ಬೇಂದ್ರೆಯವರ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುತ್ತದೆ.

ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು 1896ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ಕಾವ್ಯನಾಮ ಅಂಬಿಕಾತನಯದತ್ತ. ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂಎ ಪದವಿ ಪಡೆದ ಬೇಂದ್ರೆಯವರು, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸದರು. ಬೇಂದ್ರೆ ಅವರಿಗೆ ಕರ್ನಾಟಕ ವಿಶ್ವವಿದ್ಯಾನಿಲಯಚವು 1968ರಲ್ಲಿ ಡಾಕ್ಟರೇಟ್ ಪದವಿ ನೀಡಿತು. ಕಾಶಿಯ ವಿದ್ಯಾಪೀಠವೂ ಗೌರವ ಡಾಕ್ಟರೇಟ್ ನೀಡಿತು. ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಗೌರವ ಬೇಂದ್ರೆಯವರಿಗೆ ಸಂದಿದೆ. ಬೇಂದ್ರೆಯವರ ನಾಕುತಂತಿ ಕವನಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಅರಳು ಮರಳು ಕವನಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಗೌರವ ದೊರಕಿದೆ.

Whats_app_banner