ಧಾರವಾಡ: ಇನ್‌ಸ್ಟಾಗ್ರಾಮ್ ಕುರುಡು ಪ್ರೀತಿಗೆ ಗೃಹಿಣಿ ಬಲಿ ಪ್ರಕರಣ; ಆರೋಪಿ ಪ್ರಿಯಕರನ ಬಂಧನ
ಇನ್‌ಸ್ಟಾಗ್ರಾಮ್‌ನಲ್ಲಿ ಆರಂಭವಾದ ಪ್ರೀತಿ, ಯುವತಿಯ ಸಾವಿನಲ್ಲಿ ಅಂತ್ಯವಾದ ಘಟನೆ ಧಾರವಾಡದಲ್ಲಿ ನಡೆದಿದೆ. ಇದೀಗ ಪ್ರಕರಣದ ಆರೋಪಿಯನ್ನು ಧಾರವಾಡ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಧಾರವಾಡ: ಸಾಮಾಜಿಕ ಮಾಧ್ಯಮದಲ್ಲಿ ಆದ ಪರಿಚಯ ಪ್ರೀತಿಗೆ ತಿರುಗಿಮದುವೆಯಾದ ಉದಾಹರಣೆಗಳು ಹಲವು. ಇದೇ ವೇಳೆ ಅದೇ ಸೋಷಿಯಲ್ ಮೀಡಿಯಾದಲ್ಲಿ ಆದ ಪರಿಚಯದಿಂದ ಪ್ರಾಣ ಕಳೆದುಕೊಂಡವರೂ ಇದ್ದಾರೆ. ಧಾರವಾಡದಲ್ಲಿ ಇಂತಹದೇ ಘಟನೆಯೊಂದು ನಡೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಆದ ಕುರುಡು ಪ್ರೀತಿಗೆ ಮರುಳಾಗಿ ಗಂಡನನ್ನೇ ಬಿಟ್ಟು ಬಂದಿದ್ದ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ನಡೆದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಠಾಣೆ ಪೊಲೀಸರು ಆಕೆಯ ಇನ್‌ಸ್ಟಾಗ್ರಾಮ್ ಪ್ರಿಯಕರನನ್ನು ಇಂದು (ಜನವರಿ 28) ಬಂಧಿಸಿದ್ದಾರೆ.
ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಯುವಕ ವಿಜಯ್ ನಾಯ್ಕರ್ ಎಂಬಾತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ರಾಮದುರ್ಗದ ಶ್ವೇತಾ ಗುಡದಾಪುರ ಎಂಬಾಕೆಯನ್ನು ಪ್ರೀತಿಸಿದ್ದ. ಅದಕ್ಕೂ ಮೊದಲೇ ಮದುವೆ ಕೂಡ ಆಗಿದ್ದ ಶ್ವೇತಾ, ವಿಜಯ್ ಬೀಸಿದ್ದ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. ಆ ನಂತರ ಗಂಡನಿಗೂ ಗೊತ್ತಾಗದಂತೆ ಆತನ ಬೆನ್ನು ಹತ್ತಿ ಬಂದ ಶ್ವೇತಾ, ಧಾರವಾಡದ ಶ್ರೀನಗರ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಿದ್ದಳು.
ವಿಜಯ್ ಶ್ವೇತಾಳನ್ನು ಬಾಡಿಗೆ ಮನೆಯಲ್ಲಿಟ್ಟುಕೊಂಡು ನೋಡಿಕೊಳ್ಳುತ್ತಿದ್ದ. ಇಬ್ಬರೂ ಮದುವೆ ಕೂಡ ಆಗಬೇಕು ಎಂದುಕೊಂಡಿದ್ದರು. ಆದರೆ ವಿಜಯ್ ಶ್ವೇತಾಳನ್ನು ಮದುವೆಯಾಗದೆ ತನ್ನ ಸಂಪರ್ಕದಲ್ಲಿಯೇ ಇಟ್ಟುಕೊಂಡಿದ್ದ. ಶ್ವೇತಾಳನ್ನು ಕರೆದುಕೊಂಡು ಹೋಗಲು ಆಕೆಯ ಪತಿ ಹಾಗೂ ಪಾಲಕರು ಬಂದಿದ್ದರೂ ಅವರಿಗೆ ವಿಜಯ್ ಬೆದರಿಕೆ ಹಾಕಿ ಕಳುಹಿಸಿದ್ದನಂತೆ. ಅದಾದ ಬಳಿಕ ವಿಜಯ್ ಹಾಗೂ ಶ್ವೇತಾಳ ಮಧ್ಯೆ ಅದೇನೋ ಕಲಹ ಉಂಟಾಗಿತ್ತು ಎನ್ನಲಾಗಿದೆ. ಆದರೆ, ಶ್ವೇತಾ ಮಾತ್ರ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ತನ್ನ ಕೈಯಲ್ಲಿ ಬರೆದುಕೊಂಡು ನೇಣಿಗೆ ಶರಣಾಗಿದ್ದಳು.
ಮನೆಯವರ ದೂರು; ಆರೋಪಿ ಬಂಧನ
ಈ ಸಾವಿಗೆ ವಿಜಯ್ ಕಾರಣ ಎಂದು ಶ್ವೇತಾ ಮನೆಯವರು ದೂರು ದಾಖಲಿಸಿದ್ದರು. ಈ ಆರೋಪದ ಮೇಲೆ ಸದ್ಯ ಪೊಲೀಸರು ವಿಜಯ್‌ನನ್ನು ಬಂಧಿಸಿದ್ದಾರೆ.
ಶ್ವೇತಾಗೆ ಅದಾಗಲೇ ಮದುವೆಯಾಗಿದ್ದರೂ, ಕುರುಡು ಪ್ರೀತಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ ಎಂಬುದು ಮನೆಯವರ ಅಳಲು. ಯುವಕನ ಮಾತು ಕೇಳಿ ಮೊದಲ ಪತಿಗೆ ವಿಚ್ಛೇದನ ನೋಟಿಸ್ ಕೂಡ ಕಳುಹಿಸಿದ್ದಳು. ಇಷ್ಟೆಲ್ಲಾ ಬೆಳವಣಿಗೆ ನಂತರ ಕೊನೆಗೆ ತಾನೇ ಇಹಲೋಕ ತ್ಯಜಿಸಿದ್ದಾಳೆ. ಸದ್ಯ ಆರೋಪಿ ವಿಜಯನನ್ನು ಬಂಧಿಸಿರುವ ಪೊಲೀಸರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
