ಧಾರವಾಡದಲ್ಲಿ ಮುತ್ತೂಟ್ ಫೈನಾನ್ಸ್‌ಗೆ ವಂಚನೆ ಪ್ರಕರಣದಲ್ಲಿ ಶಾಖಾ ಮ್ಯಾನೇಜರ್ ಸೇರಿ 4 ಆರೋಪಿಗಳ ಬಂಧನ
Dharwad Crime: ಧಾರವಾಡ ನಗರದ ಮುತ್ತೂಟ್ ಫೈನಾನ್ಸ್‌ಗೆ ಅದರ ಶಾಖಾ ಮ್ಯಾನೇಜರ್ ಸೇರಿ ನಾಲ್ವರು ವಂಚನೆ ಎಸಗಿದ್ದು, ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ. ಈ ದೂರು ಆಧರಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತ್ಯೇಕ ಮೂರು ಪ್ರಕರಣಗಳ ಸುದ್ದಿಯೂ ಇದರಲ್ಲಿದೆ.
Dharwad Crime: ಧಾರವಾಡ ನಗರದ ಮುತ್ತೂಟ್ ಫೈನಾನ್ಸ್‌ನಲ್ಲಿ ಮಹಾಮೋಸ ಬಯಲಾಗಿದ್ದು, ಲಕ್ಷಾಂತರ ರೂಪಾಯಿ ಅವ್ಯವಹಾರ ಬೆಳಕಿಗೆ ಬಂದಿದೆ. ಈ ಕುರಿತು ಕಂಪನಿಯ ವಲಯ ಮುಖ್ಯಸ್ಥ ಪ್ರಸನ್ನ ಕುಮಾರ್ ದೂರು ಸಲ್ಲಿಸಿದ್ದು, ಅದರಂತೆ ಶಾಖೆಯ ಮ್ಯಾನೇಜರ್ ಸೇರಿ ನಾಲ್ವರನ್ನು ಧಾರವಾಡ ಶಹರ ಪೊಲೀಸ್ ಠಾಣೆಯ ಇನ್‌ಸ್ಟೆಕ್ಟರ್ ನಾಗೇಶ ಕಾಡದೇವರಮಠ ಮತ್ತು ತಂಡ ಬಂಧಿಸಿದೆ. ಮುತ್ತೂಟ್ ಫಿನ್‌ಕಾರ್ಪ್‌ನ ಸ್ಥಳೀಯ ಶಾಖೆಯ ಮ್ಯಾನೇಜರ್ ಮಹ್ಮದ್ ಯಾಸೀನ ಚಾಂದಖಾನ, ಗ್ರಾಹಕರಾದ ಮನ್ಸೂರ ಟೀನವಾಲೆ, ನೇಹಾ ನಬ್ಬುವಾಲೆ ಹಾಗೂ ಶಾಹೀನ ಗಾನಗಾಪುರ ಎಂಬುವವರನ್ನ ಬಂಧಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮುತ್ತೂಟ್ ಫೈನಾನ್ಸ್‌ಗೆ ವಂಚಿಸಿದ್ದು ಹೇಗೆ
ಮ್ಯಾನೇಜರ್ ಮಹ್ಮದಯಾಸೀನ ಚಾಂದಖಾನ್, ಒಂದು ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದರೆ ಶೇ 20 ಹಣವನ್ನು ಕಮೀಷನ್ ಆಗಿ ನೀಡುವ ಆಮಿಷವೊಡ್ಡಿ 65 ಲಕ್ಷ ರೂಪಾಯಿ ಗ್ರಾಹಕರಿಂದ ಪಡೆದು, ಬ್ಯಾಂಕ್ ಕಚೇರಿಯ ನಕಲಿ ಡೆಪಾಸಿಟ್ ಪತ್ರಗಳನ್ನು ನೀಡಿದ್ದಾನೆ. ಇದೇ ಮ್ಯಾನೇಜರ್ ಆರೋಪಿತ ಮೂವರು ಗ್ರಾಹಕರ ಜೊತೆಗೂಡಿ ನಕಲಿ ಚಿನ್ನವನ್ನು ಪಡೆದು 82 ಲಕ್ಷ ರೂಪಾಯಿ ಹಣವನ್ನು ಗ್ರಾಹಕರ ಖಾತೆಗೆ ಹಾಕಿದ್ದಾನೆ. ಈ ಬಗ್ಗೆ ದೂರು ದಾಖಲಾದ ತಕ್ಷಣವೇ ಕಾರ್ಯಪ್ರವೃತ್ತರಾದ ಶಹರ ಠಾಣೆಯ ಇನ್ಸ್‌ಪೆಕ್ಟರ್ ನಾಗೇಶ ಕಾಡದೇವರಮಠ ತಂಡ ನಾಲ್ವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ರೈಲ್ವೆಗೆ ಸಿಲುಕಿ 13 ಬಸವಿ ದನಗಳ ಸಾವು
ಅಣ್ಣಿಗೇರಿ ಪಟ್ಟಣದಲ್ಲಿನ ಬಳ್ಳಾರಿ-ಹುಬ್ಬಳ್ಳಿ ಡಬಲ್ ರೈಲ್ವೆ ಹಳಿ ಮೇಲೆ ಪಟ್ಟಣದ 13 ಬಸವಿ ದನಗಳು (ದೇವರ ಹೆಸರಿನಲ್ಲಿ ಬಿಟ್ಟ ದನಗಳನ್ನು ಬಸವಿ ದನಗಳು ಎನ್ನುತ್ತಾರೆ) ರೈಲ್ವೆಗೆ ಸಿಲುಕಿ ಸಾವನಪ್ಪಿದ ಮನಕಲಕುವ ಘಟನೆ ಸೋಮವಾರ ರಾತ್ರಿ ಜರುಗಿದೆ. ಸುಮಾರು 30 ಬಸವಿ ದನಗಳಲ್ಲಿ 13 ಬಸವಿ ದನಗಳು ರೈಲಿನಡಿಗೆ ಸಿಲುಕಿ ಸಾವನ್ನಪ್ಪಿವೆ. ಸುದ್ದಿ ತಿಳಿಯುತ್ತಿದ್ದಂತೆ ಪುರಸಭೆ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರವರು ತಕ್ಷಣವೇ ಪುರಸಭೆ ಸಿಬ್ಬಂದಿ, ಪೌರಕಾರ್ಮಿಕರು ಇವುಗಳ ಅಂತ್ಯಕ್ರಿಯೆ ನೆರವೇರಿಸಿದರು.
ರಸ್ತೆ ಅಪಘಾತ; ಬೈಕ್ ಡಿಕ್ಕಿಯಾಗಿ ಪಾದಚಾರಿ ಸಾವು
ಅಣ್ಣಿಗೇರಿಯ ದೇಶಪಾಂಡೆ ಪ್ಲಾಟ್ ಹತ್ತಿರ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಬೈಕ್ ಸವಾರನೊಬ್ಬ ರಸ್ತೆ ದಾಟುತ್ತಿದ್ದ ಪಾದಚಾರಿ ವೃದ್ಧನಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ವೃದ್ಧ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ ಘಟನೆ ಜರುಗಿದೆ. ಮೃತರನ್ನು ಪಟ್ಟಣದ ದೇಶಪಾಂಡೆ ಫ್ಲ್ಯಾಟ್‌ನ ದೇವೇಂದ್ರಪ್ಪ ಈರಪ್ಪ ಬಳೂಡಿ (71) ಎಂದು ಗುರುತಿಸಲಾಗಿದೆ. ಪೊಲೀಸ್ ಅಧಿಕಾರಿ ರವಿಕುಮಾರ್ ಕಪ್ಪತನವರ್ ಹಾಗೂ ಸಿದ್ಧಾರೂಢ ಆಲದಕಟ್ಟಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ರಸ್ತೆ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಂಡನಿಂದ ಹೆಂಡತಿಯ ಕೊಲೆ
ಅಣ್ಣಿಗೇರಿಯಲ್ಲಿ ಗಂಡನೇ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಕಾಲವಾಡ ಗ್ರಾಮದಲ್ಲಿ ನಡೆದಿದ್ದು, ಸವಿತಾ ಮಲ್ಲಿಕಾರ್ಜುನಯ್ಯ ಬಾಳಿಕಾಯಿ (28) ಎಂಬಾಕೆಯೇ ಹತ್ಯೆಯಾದ ಮಹಿಳೆ. ಮಲ್ಲಿಕಾರ್ಜುನಯ್ಯ ರಾಚಯ್ಯ ಬಾಳಿಕಾಯಿ ಈತನು ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಗೊತ್ತಿದ್ದ ಹೆಂಡತಿ ಸವಿತಾ, ಹಲವು ಬಾರಿ ಆ ಹೆಂಗಸಿನ ಸಹವಾಸ ಮಾಡಬೇಡ ಎಂದು ಪತಿಯನ್ನು ಎಚ್ಚರಿಸಿದ್ದಳು. ಎರಡು ತಿಂಗಳ ಹಿಂದೆ ಆರೋಪಿಗೆ ಅಪಘಾತವಾಗಿ ಕಾಲಿಗೆ ಪೆಟ್ಟಾಗಿತ್ತು. ಹೀಗಾಗಿ, ಕಾಲಿಗೆ ರಾಡ್ ಹಾಕಿದ ಕಾರಣ ಮನೆಯೊಳಗೆ ವಾಕರ್ ಹಿಡಿದೇ ನಡೆದಾಡುತ್ತಿದ್ದ. ಇತ್ತೀಚೆಗೆ ಅದೇ ವಾಕರ್ ಹಿಡಿದು ಹೊರಗೆಲ್ಲ ಅಡ್ಡಾಡುತ್ತಿದ್ದ. ಆ ರೀತಿ ಅಡ್ಡಾಡಬೇಡ ಎಂದು ಆಕೆ ಎಚ್ಚರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಮಲ್ಲಿಕಾರ್ಜುನಯ್ಯ, ಡಿಸೆಂಬರ್ 23 ರಂದು ಮಧ್ಯಾಹ್ನ 12.15ಕ್ಕೆ ಕಾಲವಾಡ ಗ್ರಾಮದ ತಮ್ಮ ಮನೆಯಲ್ಲಿ ಇಬ್ಬರೇ ಇದ್ದಾಗ ಮತ್ತೆ ಜಗಳ ನಡೆದು ಪತ್ನಿ ಧರಿಸಿದ್ದ ನೈಟಿಯ ಮೇಲೆ ಕೊರಳಲ್ಲಿ ಹಾಕಿಕೊಂಡಿದ್ದ ಚೂಡಿದಾರದ ವೇಲನ್ನು ಅವಳ ಹಿಂಬದಿಯಿಂದ ಅವಳ ಕುತ್ತಿಗೆಗೆ ಬಿಗಿಯಾಗಿ ಜಗ್ಗಿ ಹಿಡಿದು ಅವಳಿಗೆ ಉಸಿರುಗಟ್ಟುವಂತೆ ಮಾಡಿ ಕೊಲೆ ಮಾಡಿದ್ದ ಎಂದು ದೂರು ದಾಖಲಾಗಿದೆ. ಪೊಲೀಸ್ ಠಾಣಾಧಿಕಾರಿ ಸಿದ್ಧಾರೂಢ ಆಲದಕಟ್ಟಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.