ಹುಬ್ಬಳ್ಳಿ ಧಾರವಾಡ ವಿಭಜನೆ ಅಧಿಕೃತ; ಧಾರವಾಡ ಮಹಾನಗರ ಪಾಲಿಕೆ ರಚನೆಗಾಗಿ ಅಧಿಸೂಚನೆ ಪ್ರಕಟಿಸಿದ ಕರ್ನಾಟಕ ಸರ್ಕಾರ
ಕನ್ನಡ ಸುದ್ದಿ  /  ಕರ್ನಾಟಕ  /  ಹುಬ್ಬಳ್ಳಿ ಧಾರವಾಡ ವಿಭಜನೆ ಅಧಿಕೃತ; ಧಾರವಾಡ ಮಹಾನಗರ ಪಾಲಿಕೆ ರಚನೆಗಾಗಿ ಅಧಿಸೂಚನೆ ಪ್ರಕಟಿಸಿದ ಕರ್ನಾಟಕ ಸರ್ಕಾರ

ಹುಬ್ಬಳ್ಳಿ ಧಾರವಾಡ ವಿಭಜನೆ ಅಧಿಕೃತ; ಧಾರವಾಡ ಮಹಾನಗರ ಪಾಲಿಕೆ ರಚನೆಗಾಗಿ ಅಧಿಸೂಚನೆ ಪ್ರಕಟಿಸಿದ ಕರ್ನಾಟಕ ಸರ್ಕಾರ

Dharwad Municipal Corporation: ಹುಬ್ಬಳ್ಳಿ ಧಾರವಾಡ ವಿಭಜನೆ ಅಧಿಕೃತವಾಗಿದ್ದು, ಹೊಸದಾಗಿ ಧಾರವಾಡ ಮಹಾನಗರ ಪಾಲಿಕೆ ರಚನೆಯಾಗಲಿದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಮಂಗಳವಾರ (ಜನವರಿ 21) ಪ್ರಕಟಿಸಿದೆ. ಕರ್ನಾಟಕ ರಾಜ್ಯ ಪತ್ರದಲ್ಲಿ ಈ ಅಧಿಸೂಚನೆ ಪ್ರಕಟವಾಗಿದ್ದು, ಲಿಖಿತ ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಧಾರವಾಡ ಮಹಾನಗರ ಪಾಲಿಕೆ ರಚನೆಗಾಗಿ ಕರ್ನಾಟಕ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.
ಧಾರವಾಡ ಮಹಾನಗರ ಪಾಲಿಕೆ ರಚನೆಗಾಗಿ ಕರ್ನಾಟಕ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. (HDMC)

Dharwad Municipal Corporation: ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳ ಆಡಳಿತ ಇನ್ನು ಪ್ರತ್ಯೇಕ. ಹುಬ್ಬಳ್ಳಿ ಧಾರವಾಡ ವಿಭಜನೆ ಅಧಿಕೃತವಾಗಿದ್ದು, ಹೊಸದಾಗಿ ಧಾರವಾಡ ಮಹಾನಗರ ಪಾಲಿಕೆ ರಚನೆಯಾಗಲಿದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಮಂಗಳವಾರ (ಜನವರಿ 21) ಪ್ರಕಟಿಸಿದೆ. ಕರ್ನಾಟಕ ರಾಜ್ಯ ಪತ್ರದಲ್ಲಿ ಈ ಅಧಿಸೂಚನೆ ಪ್ರಕಟವಾಗಿದ್ದು, ಲಿಖಿತ ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಸಲ್ಲಿಸುವಂತೆ ಕರ್ನಾಟಕ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಆಕ್ಷೇಪಣೆ ಸಲ್ಲಿಕೆಗೆ 30 ದಿನಗಳ ಕಾಲಾವಕಾಶ ನೀಡಿದೆ.

ಧಾರವಾಡ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆಅಧಿಸೂಚನೆ ಪ್ರಕಟ

ಹೊಸದಾಗಿ ಧಾರವಾಡ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಅಧಿಸೂಚನೆ ಪ್ರಕಟವಾಗಿದೆ. ಇದಕ್ಕೆ ಆಕ್ಷೇಪಣೆ ಅಥವಾ ಸಲಹೆಗೆ 30 ದಿನಗಳ ಕಾಲಾವಕಾಶವನ್ನು ಸರ್ಕಾರ ನೀಡಿದೆ. ಹುಬ್ಬಳ್ಳಿ ಧಾರವಾಡ ಅವಳಿನಗರದ ಜನಸಂಖ್ಯೆ, ಜನಸಾಂದ್ರತೆ, ತೆರಿಗೆ, ತೆರಿಗೆಯೇತರ ಸಂಪನ್ಮೂಲ, ವಾರ್ಷಿಕ ತಲಾ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಶೇಕಡಾವಾರು ಉದ್ಯೋಗ ಪ್ರಮಾಣವನ್ನು ಪರಿಗಣಿಸಿ ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕಗೊಳಿಸಿ ಈ ಅಧಿಸೂಚನೆಯನ್ನು ಸರ್ಕಾರ ಪ್ರಕಟಿಸಿದೆ. ಇದರಂತೆ, ಹುಬ್ಬಳ್ಳಿ- ಧಾರವಡ ಮಹಾನಗರ ಪಾಲಿಕೆ ಇನ್ನು ಹುಬ್ಬಳ್ಳಿ ಮಹಾ ನಗರ ಪಾಲಿಕೆಯಾಗಿ ಮುಂದುವರಿಯಲಿದೆ.

ಕರ್ನಾಟಕ ರಾಜ್ಯ ಪತ್ರದಲ್ಲಿ ಧಾರವಾಡ ಮಹಾನಗರ ಪಾಲಿಕೆ ರಚನೆ ಸಂಬಂಧ ಅಧಿಸೂಚನೆ ಮಂಗಳವಾರ (ಜನವರಿ 21) ಪ್ರಕಟವಾಗಿದ್ದು, 30 ದಿನಗಳ ತನಕ ಲಿಖಿತ ಆಕ್ಷೇಪಣೆ, ಸಲಹೆ ಸೂಚನೆ ಸಲ್ಲಿಸುವುದಕ್ಕೆ ಸಾರ್ವಜನಿಕರಿಗೆ ಸಮಯಾವಕಾಶವನ್ನು ಸರ್ಕಾರ ನೀಡಿದೆ.

ಆಕ್ಷೇಪಣೆ ಸಲ್ಲಿಸುವವರು ಪೌರಾಡಳಿತ ನಿರ್ದೇಶನಾಲಯ 9ನೇ ಮಹಡಿ, ವಿ.ವಿ. ಗೋಪುರ ಬೆಂಗಳೂರು ಇವರಿಗೆ ಸಲ್ಲಿಸಬೇಕು. ಅವಧಿ ಮುಗಿದ ನಂತರ ಪರಿಶೀಲನೆಗೆ ತೆಗೆದು ಕೊಳ್ಳಲಾಗುವುದಿಲ್ಲ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ ರಾಜ್ಯ ಪತ್ರದಲ್ಲಿ ತಿಳಿಸಿದ್ದಾರೆ.

ಧಾರವಾಡ ಮಹಾನಗರ ಪಾಲಿಕೆ ಮತ್ತು ಹುಬ್ಬಳ್ಳಿ ಮಹಾನಗರ ಪಾಲಿಕೆ ವ್ಯಾಪ್ತಿ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಬಳಿಕ ರಚನೆಯಾಗುವ ಧಾರವಾಡ ಮಹಾನಗರ ಪಾಲಿಕೆಯು 120.94 ಚದರ ಕಿಮೀ ಪ್ರದೇಶ ಹೊಂದಿರಲಿದೆ. ಹುಬ್ಬಳ್ಳಿ ಮಹಾನಗರ ಪಾಲಿಕೆ 127.05 ಚದರ ಕಿಮೀ ಒಟ್ಟು ಪ್ರದೇಶವನ್ನು ಹೊಂದಿರಲಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 82 ವಾರ್ಡ್‌ಗಳಿದ್ದವು. ವಿಭಜನೆ ಬಳಿಕ ಧಾರವಾಡ ಮಹಾನಗರ ಪಾಲಿಕೆಗೆ 1ರಿಂದ 26 ಹಾಗೂ ಹುಬ್ಬಳ್ಳಿ ಮಹಾನಗರ ಪಾಲಿಕೆಯು 27ರಿಂದ 82ರ ವರೆಗೆ ಅಂದರೆ 56 ವಾರ್ಡ್‌ಗಳು ಇರಲಿವೆ. ಆದಾಗ್ಯೂ, ಹುಬ್ಬಳ್ಳಿ ಹಾಗೂ ಧಾರವಾಡ ಸುತ್ತಲಿನ ಗ್ರಾಮೀಣ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೊಳಪಡಿಸುವ ಬಗ್ಗೆ ಅಧಿಸೂಚನೆಯಲ್ಲಿ ಯಾವುದೇ ಉಲ್ಲೇಖವಿಲ್ಲ.

ಧಾರವಾಡ ಮಹಾನಗರ ಪಾಲಿಕೆ ಅಧಿಸೂಚನೆ ಪ್ರಕಟ; ಯಾರು ಏನು ಹೇಳಿದ್ರು

ಕರ್ನಾಟಕ ಸರ್ಕಾರವು ಧಾರವಾಡ ಮಹಾನಗರ ಪ್ರತ್ಯೇಕ ಪಾಲಿಕೆ ರಚನೆಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಿದೆ. ಈ ಕುರಿತು ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶವಿದೆ. ಆಕ್ಷೇಪಣೆ ವಿಚಾರಣೆ ನಂತರ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗುತ್ತದೆ. ಬಳಿಕ ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಧಾರವಾಡ ಮಹಾನಗರ ಪಾಲಿಕೆ ಅಧಿಕೃತವಾಗಿ ಅಸ್ತಿತ್ವಕ್ಕೆ ಬರುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾಗಿ ಸಂಯುಕ್ತ ಕರ್ನಾಟಕ ವರದಿ ಮಾಡಿದೆ.

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು. ಈಗ ನಮ್ಮ ಮನವಿಗೆ ಸ್ಪಂದಿಸಿ ಇಂದು ಗೆಜೆಟ್ ಕೂಡ ಹೊರಡಿಸಿದ್ದಾರೆ. ಇದಕ್ಕೆ ಅವರಿಗೆ ಧಾರವಾಡ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಮುಂಬರುವ ಬಜೆಟ್‌ನಲ್ಲಿ ಅನುದಾನ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದ್ದಾಗಿ ವರದಿ ವಿವರಿಸಿದೆ.

Whats_app_banner