Dharwad Holi 2025: ಧಾರವಾಡದ ಎಸ್‌ಬಿಐ ವೃತ್ತದಲ್ಲಿ ಮಾರ್ಚ್‌ 15ರಂದು ಬಣ್ಣದ ಉತ್ಸವ , ರೈನ್‌ ಡ್ಯಾನ್ಸ್‌ ಸ್ಥಳ ಬದಲಾವಣೆ
ಕನ್ನಡ ಸುದ್ದಿ  /  ಕರ್ನಾಟಕ  /  Dharwad Holi 2025: ಧಾರವಾಡದ ಎಸ್‌ಬಿಐ ವೃತ್ತದಲ್ಲಿ ಮಾರ್ಚ್‌ 15ರಂದು ಬಣ್ಣದ ಉತ್ಸವ , ರೈನ್‌ ಡ್ಯಾನ್ಸ್‌ ಸ್ಥಳ ಬದಲಾವಣೆ

Dharwad Holi 2025: ಧಾರವಾಡದ ಎಸ್‌ಬಿಐ ವೃತ್ತದಲ್ಲಿ ಮಾರ್ಚ್‌ 15ರಂದು ಬಣ್ಣದ ಉತ್ಸವ , ರೈನ್‌ ಡ್ಯಾನ್ಸ್‌ ಸ್ಥಳ ಬದಲಾವಣೆ

Dharwad Holi 2025: ಧಾರವಾಡ ನಗರದಲ್ಲಿ ಹೋಳಿ ಹಬ್ಬಕ್ಕಾಗಿ ಸಿದ್ದತೆಗಳು ಭರ್ಜರಿಯಾಗಿಯೇ ನಡೆದಿವೆ. ಮಾರ್ಚ್‌15ರಂದು ನಡೆಯುವ ಕಾಮಣ್ಣನ ಹಬ್ಬದ ಮುಖ್ಯ ಸ್ಥಳವನ್ನು ಕೆಸಿಡಿ ವೃತ್ತದಿಂದ ಎಸ್‌ಬಿಐ ವೃತ್ತಕ್ಕೆ ಸ್ಥಳಾಂತರಿಸಲಾಗಿದೆ.

ಹುಬ್ಬಳ್ಳಿ ಹಾಗೂ ಧಾರವಾಡದಲ್ಲೂ ಈ ವರ್ಷದ ಹೋಳಿ ಹಬ್ಬಕ್ಕೆ ಸಿದ್ದತೆ ಜೋರಾಗಿದೆ.
ಹುಬ್ಬಳ್ಳಿ ಹಾಗೂ ಧಾರವಾಡದಲ್ಲೂ ಈ ವರ್ಷದ ಹೋಳಿ ಹಬ್ಬಕ್ಕೆ ಸಿದ್ದತೆ ಜೋರಾಗಿದೆ. (The hindu)

ಧಾರವಾಡ: ಧಾರವಾಡ ನಗರದಲ್ಲಿ ಹೋಳಿ ಹಬ್ಬದ ಆಚರಣೆಗೆ ಭರ್ಜರಿ ತಯಾರಿಯೇ ನಡೆದಿದೆ. ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ನಗರಿಯಾಗಿರುವ ಧಾರವಾಡದಲ್ಲಿ ಪ್ರತಿ ವರ್ಷದ ಬಣ್ಣದ ಹಬ್ಬವನ್ನು ಸಡಗರ, ಸಂಭ್ರಮದಿಂದಲೇ ಆಚರಿಸಿಕೊಂಡು ಬರಲಾಗುತ್ತಿದೆ. ಧಾರವಾಡ ನಗರದಲ್ಲಿ 2025ರ ಮಾರ್ಚ್‌ 15 ರಂದು ಆಯೋಜಿಸಲಾಗಿದೆ. ಧಾರವಾಡ ಬಣ್ಣದ ಉತ್ಸವವನ್ನು ಕೆ.ಸಿ.ಡಿ ವೃತ್ತದ ಬದಲು ಕಾಲೇಜು ರಸ್ತೆಯಲ್ಲಿನ ಎಲ್.ಐ.ಸಿ ಬಳಿ ಇರುವ ಎಸ್.ಬಿ.ಐ ವೃತ್ತದಲ್ಲಿ ಆಚರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ನಗರದಲ್ಲಿ ಶಾಸಕ ಅರವಿಂದ ಬೆಲ್ಲದ ಅಭಿಮಾನಿ ಬಳಗ ಧಾರವಾಡ ಬಣ್ಣದ ಉತ್ಸವ ಸಮಿತಿ ವತಿಯಿಂದ ಕಳೆದ ಎರಡು ವರ್ಷಗಳಿಂದ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತ ಬಂದಿದೆ. ಸತತ ಮೂರನೇ ಬಾರಿಗೆ ಮತ್ತೊಂದು ಅದ್ಭುತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಬ್ಬದ ಸಂಭ್ರಮವನ್ನು ಇನ್ನಷ್ಟು ವಿಶೇಷಗೊಳಿಸಲು ಗಡಿಗೆ ಒಡೆಯುವ ಸ್ಪರ್ಧೆ ಹಾಗೂ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ರೇನ್ ಡ್ಯಾನ್ಸ್‌ನ್ನು ನಗರದ ಕೆ.ಸಿ.ಡಿ ವೃತ್ತದಲ್ಲಿ ಮಾರ್ಚ್‌ 15 ರಂದು ರಂದು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಪದವಿ ಪೂರ್ವ ತರಗತಿಯ ಪರೀಕ್ಷೆಗಳು ನಡೆಯುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಆಗದಿರಲಿ ಎಂಬ ಉದ್ದೇಶದಿಂದ ಹೋಳಿ ಬಣ್ಣದ ಉತ್ಸವವನ್ನು ಧಾರವಾಡದ ಎಲ್.ಐ.ಸಿ ಬಳಿ ಇರುವ ಎಸ್.ಬಿ.ಐ ವೃತ್ತದಲ್ಲಿ ಆಚರಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಅವಳಿ ನಗರದ ಜನಪ್ರತಿನಿಧಿಗಳು ಮತ್ತು ನಾಗರಿಕರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಸ್ಥಳ ಬದಲಾವಣೆಗೆ ಸ್ವಾಗತ

ಧಾರವಾಡ ಹೋಳಿ ಹಬ್ಬದ ನಿಮಿತ್ತ ಮಾರ್ಚ್‌ 15 ರಂದು ನಗರದ ಕೆಸಿಡಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ರೈನ್ ಡ್ಯಾನ್ಸ್ ಕಾರ್ಯಕ್ರಮದ ಸ್ಥಳ ಬದಲಾವಣೆಗೆ ಮುಂದಾಗಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌರಿ ಸ್ವಾಗತಿಸಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ಥಳ ಬದಲಾಯಿಸುವ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ ಎಂದರು.

ಪೊಲೀಸ್‌ ಆಯುಕ್ತರು ಹೇಳೋದೇನು

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹುಬ್ಬಳ್ಳಿಯಲ್ಲಿ ಕಾಮದೇವರನ್ನು ಪ್ರತಿಸ್ಥಾಪನೆ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಶಾಂತಿಯುತ ಹಬ್ಬ ಆಚರಣೆ ಮಾಡುವಂತೆ ಸೂಚನೆಗಳನ್ನು ನೀಡಿದರು. ವಿವಿಧ ಸಮುದಾಯದ ಪ್ರಮುಖರೊಂದಿಗೆ ಅವರು ಹೋಳಿ ಹಬ್ಬದ ಸಿದ್ದತೆ ಹಾಗು ಭದ್ರತೆ ಕುರಿತಾಗಿ ಚರ್ಚೆ ನಡೆಸಿದರು

ರಂಗಪಂಚಮಿ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಬಾರಿ ಹೋಳಿ ಹಬ್ಬವನ್ನು ಧಾರವಾಡದಲ್ಲಿ ಮಾರ್ಚ್ 15, ಹುಬ್ಬಳ್ಳಿಯಲ್ಲಿ 18 ರಂದು ಆಚರಣೆ ಮಾಡಲಾಗುತ್ತಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಹೋಳಿ ಸಡಗರದಲ್ಲಿ ಭಾಗಿಯಾಗುವ ಅಂದಾಜಿದೆ. ಯುವಕರು, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮಕ್ಕಳು. ಹಿರಿಯರು, ನಾನಾ ಸಂಘಟನೆಗಳ ಪದಾಧಿಕಾರಿಗಳು ಹೋಳಿ ಸಡಗರದಲ್ಲಿ ಭಾಗಿಯಾಗುವರು. ಈ ಕಾರಣದಿಂದ ಹುಬ್ಬಳ್ಳಿ ಧಾರವಾಡವಲ್ಲದೇ ಹೊರ ಜಿಲ್ಲೆಗಳಿಂದ 2500 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಭದ್ರತೆಗಾಗಿ ಕರೆಸಲಾಗುತ್ತಿದೆ. ಎರಡೂ ದಿನವೂ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ಬಿಗಿ ಭದ್ರತೆ ಇರಲಿದೆ ಎಂದು ವಿವರಿಸಿದರು.

ಹೋಳಿ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಶಾಂತಿ ಸಭೆಗಳನ್ನು ನಡೆಸಿ ಸಮುದಾಯದ ಪ್ರಮುಖರಿಗೆ ಸೂಚನೆಗಳನ್ನೂ ನೀಡುತ್ತಿದ್ದಾರೆ. ಈಗಾಗಲೇ ಬಹುತೇಕ ಎಲ್ಲಾ ಠಾಣೆಗಳಲ್ಲಿ ಸಭೆಗಳಾಗಿದ್ದು. ಹಬ್ಬದ ಆಚರಣೆ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವ ಮನವಿಯನ್ನೂ ಮಾಡಲಾಗಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner