ಉಪಲೋಕಾಯುಕ್ತರ ಸೂಚನೆ, ಧಾರವಾಡದಲ್ಲಿ ಪ್ರಮುಖ ಕೆರೆ ಅಡ್ಡಾದಿಡ್ಡಿ ಅಭಿವೃದ್ದಿ; ಹೇಗಿದೆ ನೋಡಿ ಜೆಸಿಬಿ ಅಬ್ಬರ
ಕನ್ನಡ ಸುದ್ದಿ  /  ಕರ್ನಾಟಕ  /  ಉಪಲೋಕಾಯುಕ್ತರ ಸೂಚನೆ, ಧಾರವಾಡದಲ್ಲಿ ಪ್ರಮುಖ ಕೆರೆ ಅಡ್ಡಾದಿಡ್ಡಿ ಅಭಿವೃದ್ದಿ; ಹೇಗಿದೆ ನೋಡಿ ಜೆಸಿಬಿ ಅಬ್ಬರ

ಉಪಲೋಕಾಯುಕ್ತರ ಸೂಚನೆ, ಧಾರವಾಡದಲ್ಲಿ ಪ್ರಮುಖ ಕೆರೆ ಅಡ್ಡಾದಿಡ್ಡಿ ಅಭಿವೃದ್ದಿ; ಹೇಗಿದೆ ನೋಡಿ ಜೆಸಿಬಿ ಅಬ್ಬರ

ಧಾರವಾಡದ ಕೆಲಗೇರಿ ಕೆರೆಯನ್ನು ಅಭಿವೃದ್ದಿ ಮಾಡುವ ನೆಪದಲ್ಲಿ ಮಾಡುತ್ತಿರುವ ಅವ್ಯವಸ್ಥೆ ಕುರಿತು ಪರಿಸರವಾದಿ ಹರ್ಷವರ್ಧನ್‌ ಶೀಲವಂತ್‌ ಅವರು ಹಾಕಿರುವ ಪೋಸ್ಟ್‌ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಧಾರವಾಡದಲ್ಲಿ ಕೆರೆ ಅಭಿವೃದ್ದಿ ಅಡ್ಡಾದಿಡ್ಡಿ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಧಾರವಾಡದಲ್ಲಿ ಕೆರೆ ಅಭಿವೃದ್ದಿ ಅಡ್ಡಾದಿಡ್ಡಿ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಕರ್ನಾಟಕದ ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರು ಜಿಲ್ಲಾ ಪ್ರವಾಸ ಕೈಗೊಂಡು ಕೆರೆಗಳ ಅಭಿವೃದ್ದಿ, ಸ್ವಚ್ಛತೆ, ಪರಿಸರ ನಿರ್ವಹಣೆ ಸಹಿತ ಹಲವು ವಿಷಯಗಳಲ್ಲಿ ಅವ್ಯವಸ್ಥೆ ಕಂಡು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಚಾಟಿ ಬೀಸುತ್ತಿದ್ದಾರೆ. ಇದರಿಂದ ಹಲವು ಭಾಗಗಳಲ್ಲಿ ಕೆಲಸಗಳಿಗೆ ಚುರುಕುತನ ಬಂದಿದೆ. ಕೆರೆ ವಾತಾವರಣವನ್ನು ಸ್ವಚ್ಛವಾಗಿಡುವ, ಕಸವನ್ನು ಸರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಕೆಲಸಗಳೇನು ಆಗುತ್ತಿವೆ. ಕೆಲವೊಂದು ಕಡೆಗಳಲ್ಲಿ ಉಪಲೋಕಾಯುಕ್ತರ ಭಯದಿಂದ ಸ್ವಚ್ಛ ಮಾಡುವ ಭರದಲ್ಲಿ ಅವ್ಯವಸ್ಥೆ ಮಾಡುವ ಪ್ರಯತ್ನಗಳೂ ನಡೆದಿವೆ. ಕರ್ನಾಟಕದ ಸಾಂಸ್ಕೃತಿಕ ನಗರಿ, ವಿದ್ಯಾಕಾಶಿ ಧಾರವಾಡದಲ್ಲೂ ಹಾಗೆಯೇ ಆಗಿದೆ. ಕೆರೆ ಸ್ವಚ್ಛತೆ ನೆಪದಲ್ಲಿ ಜೆಸಿಬಿ ನುಗ್ಗಿಸಿ ಟೊಂಗೆ ಸವರುವ ಮೂಲಕ ಪರಿಸರವನ್ನೇ ಹಾಳುವ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

ಈ ಕುರಿತು ಧಾರವಾಡದ ಸಾಮಾಜಿಕ ಹೋರಾಟಗಾರರು, ಪರಿಸರವಾದಿಗಳೂ ಆಗಿರುವ ಹರ್ಷವರ್ಧನ್‌ ಶೀಲವಂತ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿದ್ದಾರೆ. ಇದರ ವಿವರ ಇಲ್ಲಿದೆ.

ಧಾರವಾಡದ ಕೆಲಗೇರಿ ಕೆರೆ ಆವಾರವನ್ನು ಸ್ವಚ್ಛ ಗೊಳಿಸುತ್ತಿರುವ ಪರಿ ನೋಡಿ. ವಿಹ್ವಲಗೊಂಡು ತಣ್ಣಗಾಗುವ ಸರದಿ ನಮ್ಮದು. ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಂಡ, ವಾಕರ್ಸ್ ಮತ್ತು ಜಾಗರ್ಸ್ ಪುಟ್ ಪಾತ್ ಮೇಲೆ ಜೆಸಿಬಿ ಓಡಿಸಿ, ಅದರ ಬಕೆಟ್ ಬಳಸಿ, ಹೋ ಒತ್ತಿ, ಮರದ ಟೊಂಗೆ ಸವರಲಾಗುತ್ತಿದೆ!

ನುರಿತ ಗಾರ್ಡನರ್/ ಜನ ಇಲ್ಲ ಬಹುಶಃ ಗೆಲ್ಲು ಮಾತ್ರ ಕತ್ತರಿಸಿ, ಅಕ್ಕಪಕ್ಕದ ಮರ ಒಪ್ಪೋರಣ‌ ಮಾಡಲು!

ಮರಮಿತ್ರ ಅಸ್ಲಾಂ ಜಹಾನ್‌ ಅಬ್ಬಿಹಾಳ್‌, ಹಸಿರು ಮಾನವ ಪಂಡಿತ ಮುಂಜಿ, ನೇಚರ್ ರಿಸರ್ಚ್ ಸೆಂಟರ್ ಧಾರವಾಡ ಸ್ವಯಂಸೇವಕರು ಹಾಗೂ ನೇಚರ್‌ ಫಸ್ಟ್‌ ಧಾರವಾಡದ ಪಂಚಯ್ಯ ವಿರೂಪಾಕ್ಷ ಹಿರೇಮಠ ಅವರು, ಶ್ರಮದಾನ ಮಾಡಿ, ಸಾವಿರಾರು ರೂಪಾಯಿ ಖರ್ಚಿಸಿ, ಸಿಂಗಾಪುರ ಚೆರ್ರಿ, ಹಣ್ಣಿನ ಗಿಡ ಮತ್ತು ಹೂವಿನ ಗಿಡ, ಕವಳಿ ಕಂಟಿ, ಬೋರೆ ಹಣ್ಣಿನ ಕಂಟಿ ತಂದು, ನಡೆದಾಡುವ ಜನರಿಗೆ ತೊಂದರೆ ಆಗದಂತೆ, ಅಕ್ಕಪಕ್ಕ ನೆಟ್ಟು, ಸ್ಥಳೀಯ ಪಕ್ಷಿಗಳಿಗಾಗಿ, ಆಹಾರ, ವಿಹಾರ ಮತ್ತು ಗೂಡು ಕಟ್ಟಿ ಪ್ರಜನನಕ್ಕೆ ಅನುವಾಗುವಂತೆ ಯೋಜಿಸಿ, ಯೋಚಿಸಿ, ಕೆಲಸ ಮಾಡಿದ್ದೆವು.

ಎಚ್‌ಡಿಎಂಸಿ ಕಂಟ್ರೋಲ್‌ ರೂಂ ಹಾಗೂ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಮಹನೀಯರು ಬಂದು ನೋಡಿಯೂ ಇದ್ದರು! ಡಿಸಿಎಫ್‌ ಧಾರವಾಡ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಗಮನಕ್ಕೂ ಈ ವಿಷಯ ತಂದಿದ್ದೆವು.

ನೆರಳು ನೀಡಬಲ್ಲ ನೇರಳೆ, ಹುಣಿಸೆ ಮರ ಅವರ ನರ್ಸರಿ ಇಂದಲೂ ಕಡಿಮೆ ಬೆಲೆಗೆ ಪಡೆದು ನೆಟ್ಟಿದ್ದೆವು.

ಈಗ, ಮಾನ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ, ನೈರ್ಮಲ್ಯ ಕಾಪಾಡುವಂತೆ ಚಮಕಾಯಿಸಿದ್ದೆ ತಡ.. ಜೆಸಿಬಿ ಬಳಸಿ, ಮರ, ಮುಳ್ಳು ಕಂಟಿ ಹೀಗೆ ಕಿತ್ತೆಸೆದು, ಸ್ವಚ್ಛ ಗೊಳಿಸುತ್ತಿದ್ದಾರೆ. ಇದ್ಯಾವ ಪರಿ? ಅವರೇ ಹೇಳಬೇಕು.

ಕಳೆದ ಒಂದು ವಾರದಿಂದ, ಕೆರೆ ಆವಾರದಲ್ಲಿ ನೂರಾರು ಮೀನು ಮೂರನೇ ಬಾರಿ ಸತ್ತು, ತೇಲುತ್ತಿವೆ. ರೂಹಿ ಮತ್ತು ಕಾಟ್ಲಾ ಪ್ರಜಾತಿಯ ಒಳನಾಡು ಮೀನುಗಾರಿಕೆ ಮೀನು, ಈಗ ಜೀವಂತ ಶವವಾಗಿವೆ.

ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಧಾರಣಾ ಶಕ್ತಿ ಹೆಚ್ಚಿಸಲಿಲ್ಲ! ಸರಿಯಾಗಿ ಗಟಾರು, ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡಲಿಲ್ಲ! ಒಳ ಹರಿವು, ಹೊರ ಹರಿವಿನ ತೂಬು ಅಗಲಿಸಿ, ಪಾತಳಿ ಹಿಗ್ಗಿಸಿ, ನೀರು ಇಂಗಿ ಒಸರುವಂತೆ ಮಾಡಲಿಲ್ಲ! ನೇರ ಕೆರೆ ಸೇರುವ, ರಾಧಾಕೃಷ್ಣ ನಗರ, ಶ್ರೀನಗರ, ಭಾವಿಕಟ್ಟಿ ಪ್ಲಾಟ್, ಜಲದರ್ಷಿನಿಪುರದ ಗಟಾರು ನೀರು ಕೆರೆ ಸೇರದಂತೆ, ಪ್ರತ್ಯೇಕಿಸಿ ಹರಿಸುವ ವ್ಯವಸ್ಥೆ ಗಮನಿಸಲಿಲ್ಲ!

ನೆರಳು, ಹಣ್ಣು ಹೊದ್ದು, ಗೆಲ್ಲು ಚಾಚಿ ನಿಂತ ಮರಗಳಿಗೆ ಜೆಸಿಬಿ ಬಳಸಿ, ಹಗಲು ಹೊತ್ತಿನಲ್ಲಿ ಕೊಂದರು. ಈ ಕಾಮಗಾರಿ ಮೇಲುಸ್ತುವಾರಿ ಯಾರದ್ದು? ಯೋಜನೆ ಯಾರದ್ದು! ಹೀಗೆ ಅಡ್ಡಕಸುಬಿ ಕಾಮಗಾರಿಗೆ ಇಳಿದವರ ಮೇಲೆ ಏನು ಕ್ರಮ? ಕೂಡಲೇ ಇದನ್ನು ನಿಲ್ಲಿಸಿ, ಆದ್ಯತೆ ಮೇಲೆ ಕೈಗೆತ್ತಿ ಕೊಳ್ಳಬೇಕಾದ ಕೆಲಸ ಪಟ್ಟಿ ಮಾಡುವವರು ಯಾರು?! ದಯವಿಟ್ಟು ಗಮನಿಸಿ. ಇದು ರೀತಿಯೇ? ನೀತಿಯೇ? ಕೆಲಸ ಮಾಡುವ ವಿಧಾನವೇ!?

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner