Dharwad News: ಮಕ್ಕಳ ಕಲಿಕಾ ವಿಚಾರದಲ್ಲಿ ಮಾತಿಗಿಂತ ಕೃತಿ ಮೇಲು- ಆದರ್ಶ ಪಾಲಕರಾಗಿ; ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಿವಿಮಾತು
Dharwad News: ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಸಂಸ್ಥೆಯು ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಸರಕಾರಿ ಶಾಲಾ ಮಕ್ಕಳ ಪಾಲಕರಿಗೆ ಆಯೋಜಿಸಿದ್ದ ಪಾಲಕರ ಸಮಾವೇಶವನ್ನು ಇಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ ಉದ್ಘಾಟಿಸಿದರು.
“ಮಾತಿಗಿಂತ ಕೃತಿ ಮೇಲು” ಮಕ್ಕಳಿಗೆ ಏನನ್ನಾದರೂ ಹೇಳುವ ಬದಲು ಮೊದಲು ನಾವೇ ಪಾಲಿಸುವುದನ್ನು ರೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪಾಲಕರು ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕು ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ ಪಾಲಕರಿಗೆ ಕಿವಿಮಾತು ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಸಂಸ್ಥೆಯು ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಸರಕಾರಿ ಶಾಲಾ ಮಕ್ಕಳ ಪಾಲಕರಿಗೆ ಆಯೋಜಿಸಿದ್ದ ಪಾಲಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು 8 ಗಂಟೆ ಶಾಲಾ ವಾತಾವರಣದಲ್ಲಿ ಇದ್ದರೆ, 16 ಗಂಟೆ ಮನೆ ಮತ್ತು ಸುತ್ತಮುತ್ತಲಿನ ವಾತಾವರಣದಲ್ಲಿ ಇರುತ್ತಾರೆ. ಹೀಗಾಗಿ, ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು. ಮಕ್ಕಳು ಹಿರಿಯರನ್ನೇ ಅನುಕರಿಸುತ್ತಾರೆ. ಆದ್ದರಿಂದ ನಮ್ಮದೇ ಮಕ್ಕಳ ಭವಿಷ್ಯದ ಹಿತ ದೃಷ್ಠಿಯಿಂದ ನಮ್ಮನ್ನು ನಾವು ಬದಲಿಸುಕೊಳ್ಳುವ ಕಡೆಗೆ ಹೆಜ್ಜೆ ಇರಿಸುವುದು ಇಂದಿನ ಅನಿವಾರ್ಯತೆ. ಪಾಲಕರು ಮಕ್ಕಳ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಮಕ್ಕಳೊಂದಿಗೆ ವ್ಯವಹರಿಸಬೇಕು. ಒಳ್ಳೆಯ ಕಾರ್ಯಗಳಿಗೆ ಮಕ್ಕಳನ್ನು ಶ್ಲಾಘಿಸುವುದು ಒಂದು ಕಡೆಯಾದರೆ, ಒಂದು ವೇಳೆ ತಪ್ಪುಗಳಾದಲ್ಲಿ ಮಕ್ಕಳನ್ನು ಗುಂಪುಗಳಲ್ಲಿ ಹಳಿಯುವುದರ ಬದಲು ಏಕಾಂತದಲ್ಲಿ ತಿದ್ದುವ ಕಾರ್ಯವಾಗಬೇಕು ಎಂದು ಕಿವಿಮಾತನ್ನು ಪಾಲಕರಿಗೆ ಹೇಳಿದರು.
ಮಕ್ಕಳ ಭವಿಷ್ಯದ ಹಿತ ದೃಷ್ಠಿಯಿಂದ ಪಾಲಕರು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಇವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ರೀತಿಯ ಮಕ್ಕಳ ಕಲಿಕಾ ಪೂರಕ ವಾತಾವರಣ ಸೃಷ್ಠಿಸುವಂತಹ ಹಲವಾರು ಕಾರ್ಯಕ್ರಮಗಳು ಸಂಸ್ಥೆಯಿಂದ ಜರುಗುತ್ತಿದ್ದು, ಭವಿಷ್ಯದಲ್ಲಿ ಇನ್ನಷ್ಟು ಇಂತಹ ಕಾರ್ಯಕ್ರಮಗಳು ಅಪೇಕ್ಷಣಿಯ ಎಂದು ಅವರು ತಿಳಿಸಿದರು.
ಪಾಲಕ ಪ್ರತಿನಿಧಿ ರಾಮಚಂದ್ರ ಬಾಗೇವಾಡಿ ಮಾತನಾಡಿ, ಮಕ್ಕಳು ರಹಸ್ಯ ಕ್ಯಾಮರಾಗಳಿದ್ದ ಹಾಗೆ. ಆದ್ದರಿಂದ, ಪಾಲಕರು ಮಕ್ಕಳಿಗೆ ಮಾದರಿಯಾಗಿರಬೇಕು ನಮ್ಮ ನಡವಳಿಕೆ ಮಕ್ಕಳ ಅಭಿರುಚಿ ಮತ್ತು ಆಸಕ್ತಿಯನ್ನು ಕೆರಳಿಸುವಂತೆಯೂ, ಮಗುವಿನ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವೂ ಆಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಎಸ್‌ವಿವೈಎಂ ವಿವೇಕ ಸ್ಕಾಲರ್ ಕಾರ್ಯಕ್ರಮದ ಫಲಾನುಭವಿ ಎಸ್‌ಡಿಎಂ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕುಮಾರಿ ಪಲ್ಲವಿ ಕುರುವಿನಕೊಪ್ಪ ಮಾತನಾಡಿ, ಹೆಣ್ಣು ಮಕ್ಕಳು ಎಂದು ತಾತ್ಸಾರವನ್ನು ಮಾಡದೆ ಅವರ ಕಲಿಕೆಗೂ ಅವಕಾಶವನ್ನು ಮಾಡಿಕೊಡಬೇಕು ಅಲ್ಲದೇ, ಅವರನ್ನೂ ಸಮ ಮನಸ್ಸಿನಿಂದ ಕಾಣುವುದರ ಜತೆಗೆ ಮದುವೆಯು ಜೀವನದ ಒಂದು ಭಾಗವಾಗಿದ್ದು, ಅದುವೇ ಜೀವನ ಅಲ್ಲ ಎಂಬುದನ್ನು ಪಾಲಕರು ಅರಿತು ಹೆಣ್ಣು ಮಕ್ಕಳ ಕಲಿಕೆಗೂ ಪ್ರಾಧಾನ್ಯತೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ವಿಶೇಷ ಉಪನ್ಯಾಸಕ ಮಾನಸ ಟ್ರೇನಿಂಗ್ ಅಕಾಡೆಮಿ ನಿರ್ದೇಶಕ ಪ್ರೊ. ರಘೋತ್ತಮ್ ರಾವ್ ಕೆ. ಮಾತನಾಡುತ್ತ, "ಪಾಲಕರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು ಇವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು. ಪಾಲಕರು ಅಕ್ಷರಸ್ಥರೋ, ಅನಕ್ಷರಸ್ಥರೋ ಮಕ್ಕಳು ಓದುವಾಗ ಅವರ ಪಕ್ಕದಲ್ಲಿಯೇ ಕುಳಿತು ವಿದ್ಯಾಭ್ಯಾಸ ಮಾಡಿಸಬೇಕು.
ಯಾವುದೇ ಶಿಕ್ಷಕರ ಬಗ್ಗೆ ಮಕ್ಕಳ ಮುಂದೆ ಅಗೌರವಯುತವಾಗಿ ಮಾತನಾಡಬಾರದು. ಎಲ್ಲ ಮಕ್ಕಳಲ್ಲಿಯೂ ಒಂದಲ್ಲ ಒಂದು ರೀತಿಯ ಸಾಮರ್ಥ್ಯವಿದೆ ಆ ಸಾಮರ್ಥ್ಯಕ್ಕೆ ಸಾಣೆ ಹಿಡಿಯುವ ಮತ್ತು ಉತ್ತೇಜನ ನೀಡುವ ಕಾರ್ಯವಾಗಬೇಕು ಮಕ್ಕಳನ್ನು ಯಾವುದೇ ಕಾರಣದಿಂದ ಹೋಲಿಕೆಯನ್ನು ಮಾಡದೇ ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸುವು ಕಾರ್ಯವಾಗಬೇಕು. ಮಕ್ಕಳು ಹೇಳುವ ಒಳ್ಳೆಯ ವಿಚಾರಗಳನ್ನು ಆಲಿಸುವ ಮನಸ್ಥಿತಿಯು ನಮ್ಮದಾಗಿರಬೇಕು. ಮಕ್ಕಳ ಭಾವನೆಗಳನ್ನು ಅರ್ಥೈಸಿಕೊಂಡು ಅವರಿಗೆ ಸ್ಪಂದಿಸುವುದು ಹಾಗೂ ಮಕ್ಕಳಿಂದ ನಾವು ನಿರೀಕ್ಷಿಸುವುದನ್ನು, ಮೊದಲು ನಾವು ಕೂಡ ಅನುಷ್ಠಾನಕ್ಕೆ ತರಬೇಕು ಎಂದವರು ಪಾಲಕರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರವೀಣಕುಮಾರ ಎಸ್., “ಸರಕಾರಿ ಶಾಲೆಗಳ ಬಗ್ಗೆ ಇರುವ ನಮ್ಮ ಮನೋಭಾವವನ್ನು ಮೊದಲು ಬದಲಾಯಿಸಿಕೊಳ್ಳಬೇಕು. ಪಾಲಕರ ನಡುವಳಿಕೆಯಿಂದ ಮಕ್ಕಳು ಪ್ರೇರಿತರಾಗುತ್ತಾರೆ ಹಾಗಾಗಿ ನಮ್ಮನ್ನು ನಾವು ಸ್ವಾವಲೋಕನ ಮಾಡಿಕೊಳ್ಳಬೇಕು. ನಮ್ಮ ಮಕ್ಕಳ ಸಲುವಾಗಿ, ಅವರ ಮುಂದಿನ ಭವಿಷ್ಯಕ್ಕಾಗಿ ಹಾಗೂ ಭಾವಿ ನಾಗರಿಕರಿಗಾಗಿ ಪಾಲಕರು ಶಾಲೆಯತ್ತ ಮುಖಮಾಡಬೇಕು” ಎಂದು ತಿಳಿಸಿದರು.
ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಜಯಂತ್ ಕೆ. ಎಸ್., “ಶೈಕ್ಷಣಿಕ ವಾತಾವರಣವನ್ನು ಉನ್ನತಿಕರಿಸುವ ಉದ್ದೇಶದಿಂದ ಹಾಗೂ ಸಮುದಾಯದ ಪಾಲುದಾರಿಕೆಯನ್ನು ಹೆಚ್ಚಿಸುವ ಸಲುವಾಗಿ, ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಇನ್ನಿತರ ಚಟುವಟಿಕೆಗಳನ್ನು ಕಾಲಕಾಲಕ್ಕೆ ಆಯೋಜಿಸುತ್ತಿದೆ. ಇಂತಹ ಚಟುವಟಿಕೆಗಳ ಸದುಪಯೋಗವನ್ನು ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚು ಮಕ್ಕಳು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿ ಎಂಬುದು ನಮ್ಮ ಆಶಯ” ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿಭಾಗ