ಕನ್ನಡ ಸುದ್ದಿ  /  Karnataka  /  Dharwad News Consumer Commission Slaps Company For Giving Old Phone Instead Of New Phone Mnk

Dharwad News: ಹೊಸ ಫೋನ್‌ ಬುಕ್‌ ಮಾಡಿದ್ರೆ, ಮನೆಗೆ ಬಂತು ಹಳೇ ಮೊಬೈಲ್!; 7 ತಿಂಗಳ ಬಳಿಕ ಧಾರವಾಡ ಗ್ರಾಹಕನ ಹೋರಾಟಕ್ಕೆ ಜಯ

ಹೊಸ ಫೋನ್‌ ನೀಡುವ ಬದಲು ಹಳೇ ಫೋನ್‌ ನೀಡಿದ ಮೊಬೈಲ್ ಕಂಪನಿಗೆ ಗ್ರಾಹಕ ಆಯೋಗ ಬಿಸಿ ಮುಟ್ಟಿಸಿದೆ. ನಿಗದಿತ ಸಮಯದಲ್ಲಿ ಗ್ರಾಹಕನಿಗೆ ಬುಕ್‌ ಮಾಡಿದ ಫೋನ್‌ ನೀಡಬೇಕೆಂದು ಆದೇಶಿಸಿದೆ.

ಹೊಸ ಪೋನ್‌ ಬುಕ್‌ ಮಾಡಿದ್ರೆ, ಮನೆಗೆ ಬಂತು ಹಳೇ ಫೋನ್‌!; 7 ತಿಂಗಳ ಬಳಿಕ ಧಾರವಾಡ ಗ್ರಾಹಕನ ಹೋರಾಟಕ್ಕೆ ಜಯ
ಹೊಸ ಪೋನ್‌ ಬುಕ್‌ ಮಾಡಿದ್ರೆ, ಮನೆಗೆ ಬಂತು ಹಳೇ ಫೋನ್‌!; 7 ತಿಂಗಳ ಬಳಿಕ ಧಾರವಾಡ ಗ್ರಾಹಕನ ಹೋರಾಟಕ್ಕೆ ಜಯ

Dharwad News: ಬುಕ್ ಮಾಡಿದ ಹೊಸ ಫೋನ್ ಬದಲು ಹಳೆ ಫೋನ್ ನೀಡಿ ವಂಚಿಸಿದ್ದಕ್ಕೆ ಕಳೆದ ಏಳು ತಿಂಗಳುಗಳಿಂದ ಹೋರಾಟ ನಡೆಸಿದ್ದ ಧಾರವಾಡ ವ್ಯಕ್ತಿಗೆ ಗ್ರಾಹಕರ ಆಯೋಗದಿಂದ ನ್ಯಾಯ ದೊರಕಿದೆ.

ಧಾರವಾಡ ಬಸವನಗರದ ನಿವಾಸಿ ರಾಷ್ಟ್ರೀಕೃತ ಬ್ಯಾಂಕಿನ ಉದ್ಯೋಗಿ ಕಿರಣಕುಮಾರ ಕಳೆದ ಅಕ್ಟೋಬರ್ 20ರಂದು ಡಾರ್ಕನೋವಾ, 128 ಜಿಬಿ ಮೊಬೈಲ್ ಅನ್ನು ಫ್ಲಿಪ್ಕಾರ್ಟ್ ಮೂಲಕ 26,990 ರೂ.ಗೆ ಆನ್ಲೈನ್ನಲ್ಲಿ ಖರೀದಿಸಿದ್ದರು. ಅಕ್ಟೋಬರ್ 24ರಂದು ಆ ಮೊಬೈಲ್ ಕಿರಣಕುಮಾರ ತಲುಪಿತ್ತು. ಬಾಕ್ಸ್ ತೆರೆದು ನೋಡಿದಾಗ ಸರಿಯಾಗಿ ಅದನ್ನು ಪ್ಯಾಕಿಂಗ್ ಮಾಡಿರಲಿಲ್ಲ. ಮೊಬೈಲ್ ಮೇಲಿನ ಸ್ಕ್ರೀನ್ ಧೂಳಿನಿಂದ ಆವರಿಸಿದ್ದು, ಅದು ಹಳೆಯ ಮೊಬೈಲ್ ಹ್ಯಾಂಡ್ ಸೆಟ್ ಆಗಿತ್ತು.

ಇದನ್ನೂ ಓದಿ: ಒಡಿಶಾ ರೈಲು ದುರಂತ; ಧಾರವಾಡದ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ನಿರ್ಮಿಸಿದ್ದ ಸೇತುವೆ ಉದ್ಘಾಟನೆ ರದ್ದು

ತಮಗೆ ಹೊಸ ಫೋನ್ ಬದಲಾಗಿ ಹಳೆ ಫೋನ್ ನೀಡಲಾಗಿದೆ. ತಮಗೆ ಹೊಸ ಬ್ರಾಂಡ್ ಹ್ಯಾಂಡ್ ಸೆಟ್ ಕೊಡುವಂತೆ ವಿನಂತಿಸಿದ್ದರು. ಆದರೆ ಅವರ ವಿನಂತಿಯನ್ನು ಕಂಪನಿಯವರು ತಿರಸ್ಕರಿಸಿದ್ದರು. ಟೆಕ್ನಿಷಿಯನ್ ಸಹ ‘ಇದು ಹಳೆಯ ಮೊಬೈಲ್ ಹ್ಯಾಂಡ್ ಸೆಟ್’ ಅಂತ ಖಚಿತಪಡಿಸಿದ್ದರು. ಈ ವಿಷಯವನ್ನು ಕಂಪನಿಯವರಿಗೆ ತಿಳಿಸಿದರೂ ಸಮಸ್ಯೆ ಬಗೆಹರಿಸಿರಲಿಲ್ಲ. ‘ಹೊಸ ಮೊಬೈಲ್ ಹ್ಯಾಂಡ್ ಸೆಟ್ ಬದಲಿಗೆ ಹಳೆಯ ಮೊಬೈಲ್ ಕೊಟ್ಟು ನನಗೆ ಫ್ಲಿಪ್ಕಾರ್ಟ್ ಮತ್ತು ಅದನ್ನು ಸರಬರಾಜು ಮಾಡಿದ ಕಂಪನಿಯವರಿಂದ ಮೋಸವಾಗಿದೆ’. ಕಂಪನಿಯವರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿ ಅನ್ಯಾಯ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಹಕ ಕಿರಣಕುಮಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಒಡಿಶಾ ರೈಲು ದುರಂತ; ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಕರ್ನಾಟಕಕ್ಕೆ ಬಂದಿಳಿದ ಕನ್ನಡಿಗರ ಮೊದಲ ತಂಡ

ಈ ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ. ಹಿರೇಮಠ, ಗ್ರಾಹಕನಿಗೆ ಮೋಸವೇಸಗಿರುವುದು ಮೇಲ್ನೊಟಕ್ಕೆ ಕಂಡು ಬರುತ್ತದೆ. ಮೊಬೈಲ್ ಸರಬರಾಜು ಮಾಡಿದ ಬೆಂಗಳೂರಿನ ಲಾಸ್ಟೋರ್ ಕಂಪನಿಯವರು ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಅದೇ ಮಾದರಿಯ ಹೊಸ ಮೊಬೈಲನ್ನು ಗ್ರಾಹಕನಿಗೆ ನೀಡಬೇಕು. ಒಂದು ತಿಂಗಳೊಳಗಾಗಿ ಮೊಬೈಲ್ ಹ್ಯಾಂಡ್ ಸೆಟ್ ಕೊಡಲು ಅವರು ವಿಫಲರಾದಲ್ಲಿ ನಂತರ ಮೊಬೈಲಿನ ಕಿಮ್ಮತ್ತು ರೂ. 26,990 ಗಳನ್ನು ಶೇ.8 ಬಡ್ಡಿ ಸಮೇತ ಲೆಕ್ಕಹಾಕಿ ಮರಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಇಂತಹ ಅನುಚಿತ ವ್ಯಾಪಾರದಿಂದ ಗ್ರಾಹಕನಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗೆ 15,000 ರೂ. ಪರಿಹಾರ ಮತ್ತು ಪ್ರಕರಣದ ಖರ್ಚು ಅಂತ 5,000 ರೂ. ನೀಡುವಂತೆ ಮೊಬೈಲ್ ಸರಬರಾಜು ಮಾಡಿದ ಬೆಂಗಳೂರಿನ ಲಾಸ್ಟೋರ್ ಕಂಪನಿಯವರಿಗೆ ಆಯೋಗ ತಿಳಿಸಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾರ್ ಮತ್ತು ಸಹಾಯಕ ಅಡಳಿತಾಧಿಕಾರಿಗಳು ತಿಳಿಸಿದ್ದಾರೆ.

ವರದಿ - ಪ್ರಹ್ಲಾದಗೌಡ ಬಿ.ಜಿ

IPL_Entry_Point