ಕನ್ನಡ ಸುದ್ದಿ  /  Karnataka  /  Dharwad News Inauguration Of Bridge Built Near The Railway Level Crossing Cancelled As Odisha Train Accident Mgb

Dharwad News: ಒಡಿಶಾ ರೈಲು ದುರಂತ; ಧಾರವಾಡದ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ನಿರ್ಮಿಸಿದ್ದ ಸೇತುವೆ ಉದ್ಘಾಟನೆ ರದ್ದು

Dharwad bridge inauguration cancelled: ಧಾರವಾಡದ ಗಣೇಶನಗರ ಮತ್ತು ಶ್ರೀನಗರ ಕೆಯುಡಿ ಸರ್ಕಲ್ ಹತ್ತಿರದ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ. 300 ಹಾಗೂ 299 ಗಳ ಕೆಳ ಸೇತುವೆ ಶಂಕುಸ್ಥಾಪನೆ ಹಾಗೂ ಕಲ್ಯಾಣನಗರದ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ. 297ಕ್ಕೆ ನಿರ್ಮಿಸಲಾದ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮಗಳನ್ನು ಇಂದು ಸಂಜೆ ಹಮ್ಮಿಕೊಳ್ಳಲಾಗಿತ್ತು.

ಕಲ್ಯಾಣ ನಗರದಲ್ಲಿ ಸಿದ್ಧಗೊಂಡಿರುವ ಮೇಲ್ಸೇತುವೆ (ಎಡಚಿತ್ರ)- ಒಡಿಶಾ ರೈಲು ಅಪಘಾತ (ಬಲಚಿತ್ರ)
ಕಲ್ಯಾಣ ನಗರದಲ್ಲಿ ಸಿದ್ಧಗೊಂಡಿರುವ ಮೇಲ್ಸೇತುವೆ (ಎಡಚಿತ್ರ)- ಒಡಿಶಾ ರೈಲು ಅಪಘಾತ (ಬಲಚಿತ್ರ)

ಧಾರವಾಡ: ಒಡಿಶಾದ ಬಾಲಸೋರ್​​​ನಲ್ಲಿ ಸಂಭವಿಸಿದ ರೈಲು ದುರಂತದ (Odisha Train Accident) ಹಿನ್ನೆಲೆಯಲ್ಲಿ ಧಾರವಾಡ ನಗರದಲ್ಲಿ ಇಂದು (ಜೂನ್​ 3 ಶನಿವಾರ) ಸಂಜೆ ಆಯೋಜಿಸಲಾಗಿದ್ದ ಮೇಲ್ಸೇತುವೆ ಉದ್ಘಾಟನಾ ಹಾಗೂ ಕೆಳ ಸೇತುವೆಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.

ಧಾರವಾಡದ ಗಣೇಶನಗರ ಮತ್ತು ಶ್ರೀನಗರ ಕೆಯುಡಿ ಸರ್ಕಲ್ ಹತ್ತಿರದ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ. 300 ಹಾಗೂ 299 ಗಳ ಕೆಳ ಸೇತುವೆ ಶಂಕುಸ್ಥಾಪನೆ ಹಾಗೂ ಕಲ್ಯಾಣನಗರದ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ. 297ಕ್ಕೆ ನಿರ್ಮಿಸಲಾದ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮಗಳನ್ನು ಇಂದು ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು. ಆದರೆ ಒಡಿಶಾ ರೈಲು ಅಪಘಾತದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಪಡಿಸಲಾಗಿದೆ. ಕಾರ್ಯಕ್ರಮದ ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಧಾರವಾಡ ನಗರದಲ್ಲಿ ವಿವಿಧೆಡೆ ಹಾದುಹೋಗಿರುವ ರೈಲು ಮಾರ್ಗದಿಂದ ಸುಗಮ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗಿತ್ತು. ಈ ಬಗ್ಗೆ ಜನರು ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಜನರಿಗಾಗುತ್ತಿರುವ ಸಮಸ್ಯೆ ಅರಿತು ರೈಲು ಮಾರ್ಗದ ವಿವಿಧೆಡೆ ಕೆಳ ಹಾಗೂ ಮೇಲ್ಸೇತುವೆ ರಸ್ತೆಗಳನ್ನು ನಿರ್ಮಿಸಿ ಉದ್ಘಾಟಿಸಲು ಅಣಿ ಮಾಡಿಕೊಳ್ಳಲಾಗಿತ್ತು.

ಕಾರ್ಯಕ್ರಮ ರದ್ದು

ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಅಧಿಕಾರಿಗಳು ಸಕಲ ಸಿದ್ಧತೆಗಳನ್ನೂ ಪೂರ್ಣಗೊಳಿಸಿದ್ದರು. ಆದರೆ ಶುಕ್ರವಾರ ರಾತ್ರಿ ಸಂಭವಿಸಿದ ರೈಲ್ವೆ ಅಪಘಾತದ ಸುದ್ದಿ ತಿಳಿದು ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹುಬ್ಬಳ್ಳಿ ಕಚೇರಿಯಲ್ಲಿ ಶನಿವಾರ ಮಧ್ಯಾಹ್ನ 12ಕ್ಕೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನೂ ರದ್ದುಗೊಳಿಸಲಾಯಿತು.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವವರಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ಮಹಾನಗರ ಪಾಲಿಕೆ ಮೇಯರ್, ರೈಲ್ವೆ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಬೇಕಿತ್ತು.

ತುರ್ತು ನೆರವಿಗೆ ಸಿದ್ಧ:

ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿರುವ ರೈಲು ಅಪಘಾತದಲ್ಲಿ ಜಿಲ್ಲೆಯ ಪ್ರಯಾಣಿಕರು ಇರುವ ಬಗ್ಗೆ ಈವರೆಗೂ ಮಾಹಿತಿ ಬಂದಿಲ್ಲ. ಈ ಕುರಿತು ಮಾಹಿತಿ ಬಂದರೆ ಅಗತ್ಯ ಕ್ರಮಕೈಗೊಳ್ಳಲು ಮತ್ತು ಅವರ ತುರ್ತು ನೆರವಿಗೆ ಜಿಲ್ಲಾಡಳಿತ ಸಿದ್ದವಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಸಂತೋಷ್ ಲಾಡ್ ಟ್ವೀಟ್:

"ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಸುಮಾರು ನೂರಾರು ಜನರು ಅಸುನೀಗಿ, 350ಕ್ಕಿಂತ ಹೆಚ್ಚಿನ ಜನರು ತೀವ್ರವಾಗಿ ಗಾಯಗೊಂಡ ಘಟನೆ ತೀವ್ರ ಘಾಸಿಯುಂಟು ಮಾಡಿದೆ. ಭಗವಂತ ಅಪಘಾತದಲ್ಲಿ ಅಸುನೀಗಿದವರಿಗೆ ಸದ್ಗತಿ ನೀಡಲಿ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ" ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಟ್ವೀಟ್ ಮಾಡಿದ್ದಾರೆ.

ಜೋಶಿ ಟ್ವೀಟ್​:

"ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತ ನಿಜಕ್ಕೂ ಮನಸ್ಸಿಗೆ ಆಘಾತ ಉಂಟುಮಾಡಿದೆ. ಅಪಘಾತದಲ್ಲಿ ಮೃತರಾದವರಿಗೆ ಕೇಂದ್ರ ಸರಕಾರ 10 ಲಕ್ಷ ಪರಿಹಾರ ಘೋಷಿಸಿದೆ ಮತ್ತು ಗಾಯಾಳುಗಳಿಗೆ 2 ಲಕ್ಷ ಘೋಷಣೆ ಮಾಡಿದೆ. ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ ಮತ್ತು ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್ ಮಾಡಿದ್ದಾರೆ.

ಸಚಿವ ಸಂತೋಷ್ ಲಾಡ್ ನಿಯೋಜನೆ:

ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಸಚಿವ ಸಂತೋಷ್ ಲಾಡ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿಸಿದ್ದಾರೆ. ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅಗತ್ಯ ನೆರವನ್ನು ಒದಗಿಸಲು ಸೂಚನೆ ನೀಡಿದ್ದಾರೆ. ಸಂತೋಷ್ ಲಾಡ್ ಅವರ ಜತೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಸೇರಿ ಇತರೆ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ತೆರಳಿದೆ.

ವರದಿ: ಪ್ರಹ್ಲಾದಗೌಡ ಬಿ. ಜಿ