ವಿವಾಹಿತ ಹಿಂದೂ ಮಹಿಳೆಯ ಅಪಹರಣ ಕೇಸ್, ಆರೋಪಿ ಬಂಧನಕ್ಕೆ ಆಗ್ರಹಿಸಿ ಧಾರವಾಡ ಪೊಲೀಸ್ ಠಾಣೆ ಎದುರು ಶ್ರೀರಾಮ ಸೇನೆ ಪ್ರತಿಭಟನೆ
Dharwad News; ವಿವಾಹಿತ ಹಿಂದೂ ಮಹಿಳೆಯ ಅಪಹರಣ ಕೇಸ್‌ನ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಇಂದು (ಆಗಸ್ಟ್ 30) ಧಾರವಾಡ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಏನಿದು ಪ್ರಕರಣ -ಇಲ್ಲಿದೆ ವಿವರ. (ವರದಿ- ಪ್ರಸನ್ನ ಕುಮಾರ್ ಹಿರೇಮಠ, ಹುಬ್ಬಳ್ಳಿ)
ಧಾರವಾಡ: ಹಿಂದೂ ಹೆಣ್ಣುಮಗಳ ಅಪಹರಣದ ಕುರಿತು ಕೇಸ್ ದಾಖಲು ಮಾಡದೇ, ಮಿಸ್ಸಿಂಗ್ ಕೇಸ್ ಹಾಕಿ, ಒಂದು ತಿಂಗಳಿಂದ ಕಾಲ ಹರಣ ಮಾಡುತ್ತ ಪೊಲೀಸರು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಇಲ್ಲಿನ ಉಪನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಧಾರವಾಡ ಕೆಲಗೇರಿ ಬಡಾವಣೆಯ ಮದುವೆಯಾದ ಹೆಣ್ಣು ಮಗಳನ್ನು ಮುನ್ನಾ ಎಂಬ ಮುಸ್ಲಿಂ ಯುವಕ ಅಪಹರಿಸಿರುವ ಕುರಿತು ಕಂಪ್ಲೇಟ್ ನೀಡಿದರೂ ಪೊಲೀಸರು ಪ್ರಕರಣವನ್ನು ಕಡೆಗಣಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಪುಂಡ ಪೋಕರಿಗಳ ರಕ್ಷಣೆಗೆ ಪೊಲೀಸರು ನಿಂತಿದ್ದಾರೆ ಎಂದು ಶ್ರೀ ರಾಮ ಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಲವ್ ಜಿಹಾದ್ ಬಲೆಯಲ್ಲಿ ಯುವತಿಯನ್ನು ಕೆಡವಲು ಮುನ್ನಾ ಎಂಬಾತ ಹಣದ ಆಮಿಷ ತೋರಿಸಿ, ಪರಿಚಯ ಮಾಡಿಕೊಂಡು ಮದುವೆಯಾದ ಹೆಣ್ಣು ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾನೆ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪೊಲೀಸರು ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು. ಅಪಹರಣವಾಗಿರುವ ಹೆಣ್ಣು ಮಗಳನ್ನು ಕುಟುಂಬದ ಜೊತೆಗೆ ಮತ್ತೆ ಸೇರಿಸಬೇಕು. ಈ ಕೃತ್ಯಕ್ಕೆ ಕಾರಣವಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟವನ್ನು ಶ್ರೀ ರಾಮ ಸೇನೆ ನೇತೃತ್ವದಲ್ಲಿ ಕೈಗೊಳ್ಳಬೇಕಾಗುತ್ತದೆ. ಹಿಂದೂ ಯುವತಿಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಅಪಹರಣ ಪ್ರಕರಣ ತಡೆಯಲು ಪೊಲೀಸ್ ಇಲಾಖೆ ವಿಫಲವಾಗಿದೆ. ಕರ್ನಾಟಕ ಸರ್ಕಾರ ಮುಸ್ಲಿಂ ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಶ್ರೀ ರಾಮ ಸೇನೆ ಕಾರ್ಯಕರ್ತರು ಕಿಡಿಕಾರಿದರು.
ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಮುಂಜುನಾಥ ಕಾಟಕರ್, ಹನುಮಂತ ಸೇರಿದಂತೆ ಹಲವರಿದ್ದರು.
(ವರದಿ- ಪ್ರಸನ್ನ ಕುಮಾರ್ ಹಿರೇಮಠ, ಹುಬ್ಬಳ್ಳಿ)