Pralhad Joshi: ಕಬಡ್ಡಿ ಕಬಡ್ಡಿ, ಸಂಸದ ಪ್ರಲ್ಹಾದ ಜೋಶಿ ರೈಡ್; ಧಾರವಾಡ ಸಂಸದ ಕ್ರೀಡಾ ಮಹೋತ್ಸವ ಸಂಭ್ರಮದ ವಿಡಿಯೋ ನೋಡಿ
ನವಲಗುಂದದಲ್ಲಿ ಆಯೋಜಿಸಲಾಗಿದ್ದ ಧಾರವಾಡ ಸಂಸದ ಕ್ರೀಡಾ ಮಹೋತ್ಸವದಲ್ಲಿ ಕಬ್ಬಡಿ ಪಂದ್ಯಾವಳಿಯ ಕಣದಲ್ಲಿ ಸಂಸದ ಪ್ರಲ್ಹಾದ ಜೋಶಿ ಅವರು ಕಬಡ್ಡಿ ರೈಡ್‌ಗೆ ಇಳಿದು ಕ್ರೀಡಾಪಟುಗಳ ಉತ್ಸಾಹ ಹೆಚ್ಚಿಸಿದರು. ಗಾಯಕರ ಜತೆಗೂಡಿ ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು... ಹಾಡು ಹೇಳಿ ಪ್ರೇಕ್ಷಕರನ್ನು ರಂಜಿಸಿದರು.
ಧಾರವಾಡ: ನವಲಗುಂದದಲ್ಲಿ ಧಾರವಾಡ ಸಂಸದ ಕ್ರೀಡಾ ಮಹೋತ್ಸವಕ್ಕೆ (Sansad Kreeda Mahotsav) ಚಾಲನೆ ನೀಡಿದ ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ ಜೋಶಿ (Pralhad Joshi) ಹಾಡು ಹಾಡಿ, ಕಬ್ಬಡ್ಡಿ ಆಡಿ ರಂಜಿಸಿದರು.
ಸಂಸದ ಕ್ರೀಡಾ ಮಹೋತ್ಸವದ ವೇದಿಕೆಯಲ್ಲಿ, "ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು... ಮೆಟ್ಟಿದರೇ ಕನ್ನಡ ಮಣ್ಣ ಮೆಟ್ಟಬೇಕು... ಬದುಕಿದು ಜಟಕಾ ಬಂಡಿ..." ಎಂಬ ಹಾಡನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಮ್ಮ ಕಂಠ ಸಿರಿಯಲ್ಲಿ ಹಾಡಿ ಪ್ರೇಕ್ಷಕರ ಮನ ರಂಜಿಸಿದರು!
ಹೌದು, ನವಲಗುಂದದಲ್ಲಿ ಖುದ್ದು ಸಚಿವರೇ ಹೀಗೆ ಕನ್ನಡಭಿಮಾನ ಮೆರೆಯುವ, ಕನ್ನಡಿಗರ ಮೈ ನವಿರೇಳಿಸುವ ಗೀತೆಗೆ ಕಂಠ ನೀಡುತ್ತ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಮುದಗೊಳಿಸಿದರು. ತಾವೂ ಯಾವ ಗಾಯಕರಿಗೇನು ಕಮ್ಮಿ ಎನ್ನುವಂತೆ ಸಚಿವರು ಕನ್ನಡ ಚಿತ್ರ ರಂಗದ ಖ್ಯಾತ ಗಾಯಕ ನವೀನ್ ಸಜ್ಜು ಮತ್ತು ತಂಡದೊಂದಿಗೆ ಸೇರಿ ಸಂಗೀತದ ರಸದೌತಣ ಉಣ ಬಡಿಸಿದರು.
ಇನ್ನು, ಕಬಡ್ಡಿ... ಕಬಡ್ಡಿ ಎನ್ನುತ್ತ ಉಸಿರು ಬಿಗಿ ಹಿಡಿದು ತಂಡದ ಆಟಗಾರರೊಂದಿಗೆ ಸ್ವಲ್ಪ ಹೊತ್ತು ತಾವೂ ಆಡಿ ಕಬಡ್ಡಿ ಪಟುಗಳನ್ನು ಹುರಿದುಂಬಿಸಿದರು.
ಧಾರವಾಡ ಸಂಸದ ಕ್ರೀಡಾ ಮಹೋತ್ಸವದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿದ ಸಚಿವರು, ಕಬಡ್ಡಿಯಂತಹ ದೇಸೀ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಿದೆ. ಈ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕಿದ್ದು, ಅದಕ್ಕಾಗಿ ಧಾರವಾಡ ಸಂಸದ ಕ್ರೀಡಾ ಮಹೋತ್ಸವ ಆಯೋಜಿಸಿದ್ದಾಗಿ ಹೇಳಿದರು.
ಭಾರತದ ದೇಸೀ ಕ್ರೀಡೆ ಕಬಡ್ಡಿಗೆ 4000 ವರ್ಷಗಳ ಇತಿಹಾಸವಿದ್ದು, ಕಬಡ್ಡಿ ಈಗಿನ ಪೀಳಿಗೆಗೆ ಪ್ರಿಯವಾಗಿದೆ. ಹೊನಲು ಬೆಳಕಿನ ಕಬಡ್ಡಿ ಪಂದ್ಯವೆಂದರೆ ಈಗಲೂ ಗ್ರಾಮೀಣ ಭಾರತೀಯರಿಗೆ ಅಚ್ಚುಮೆಚ್ಚು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಮಹೇಶ ತೆಂಗಿನಕಾಯಿ, ಎಮ್.ಆರ್. ಪಾಟೀಲ್, ಬಿಜೆಪಿ ನಾಯಕ ನಾಗರಾಜ ಛಬ್ಬಿ ಹಾಗೂ ಪಕ್ಷದ ಕಾರ್ಯಕರ್ತರು, ಹವ್ಯಾಸಿ ಕಬಡ್ಡಿ ಸಂಘ, ಕಬಡ್ಡಿ ಆಟಗಾರರು, ಕ್ರೀಡಾ ಅಭಿಮಾನಿಗಳು ಉಪಸ್ಥಿತರಿದ್ದರು.
------------------
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in