Vande Bharat Express: ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ; ಟಿಕೆಟ್ ದರ, ವೇಳಾಪಟ್ಟಿಯ ಮಾಹಿತಿ ಇಲ್ಲಿದೆ
ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವರ್ಚುವಲ್ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ರೈಲು ಸಂಚಾರದ ಮಾರ್ಗ, ಸಮಯ ಹಾಗೂ ಟಿಕೆಟ್ ದರದ ಮಾಹಿತಿ ಇಲ್ಲಿದೆ.
ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಜನರ ಬಹು ದಿನಗಳ ಬೇಡಿಕೆಯೊಂದು ಈಡೇರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜೂನ್ 27, ಮಂಗಳವಾರ) ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವಿಡಿಯೊ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.
ಕರ್ನಾಟಕದ ಧಾರವಾಡ-ಬೆಂಗಳೂರು ಜೊತೆಗೆ ಮಧ್ಯಪ್ರೇದಶದ ಭೋಪಾಲ್-ಜಬಲ್ಪುರ್, ಭೋಪಾಲ್-ಇಂದೋರ್, ಬಿಹಾರದ ಪಾಟ್ನಾ-ರಾಂಚಿ ಹಾಗೂ ಮುಂಬೈ-ಗೋವಾ ಸೇರಿ ಒಟ್ಟು ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗಳಿಗೆ ಪ್ರಧಾನಿ ಮೋದಿ ಇವತ್ತು ಹಸಿರು ನಿಶಾನೆ ತೋರಬೇಕಿತ್ತು. ಆದರೆ ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ದುರಂತದಿಂದಾಗಿ ಮುಂಬೈ-ಗೋವಾ ವಂದೇ ಭಾರತ್ ರೈಲು ಸೇವೆ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ.
ಹುಬ್ಬಳ್ಳಿ,ಧಾರವಾಡ-ಬೆಂಗಳೂರು ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ಹಸಿರು ನಿಶಾನೆ ತೋರಲಿದ್ದಾರೆ. ಸೆಮಿ ಹೈ ಸ್ಪೀಡ್ ರೈಲು ಸೇವೆಯ ಪ್ರಾಯೋಗಿಕ ಪರೀಕ್ಷೆ ಜೂನ್ 19 ರಂದು ಪೂರ್ಣಗೊಂಡಿತ್ತು. ಹೀಗಾಗಿ ಪ್ರಧಾನಿ ಮೋದಿ ಹೊಸ ರೈಲು ಸೇವೆಗೆ ಇವತ್ತು ಚಾಲನೆ ನೀಡಲಿದ್ದಾರೆ.
ದಕ್ಷಿಣ ಭಾರತದ ಮೊದಲ ಮೈಸೂರು-ಚೆನ್ನೈ ನಡುವಿನ ರೈಲು ಸೇವೆ ಬಳಿಕ ರಾಜ್ಯದಲ್ಲಿ ಇದು ಎರಡನೇ ವಂದ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯಾಗಿದೆ. ಬೆಂಗಳೂರು-ಧಾರವಾಡ ಮಾರ್ಗದ ವಂದ್ ಭಾರತ್ ರೈಲು 8 ಕೋಚ್‌ಗಳನ್ನು ಹೊಂದಿದ್ದು, ಮಂಗಳವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ನಾಳೆಯಿಂದ (ಜೂನ್ 28, ಬುಧವಾರ) ಕಾರ್ಯನಿರ್ವಹಿಸಲಿದೆ.
ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಮಯ: ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 490 ಕಿಲೋ ಮೀಟರ್‌ಗಳ ಹುಬ್ಬಳ್ಳಿ-ಧಾರವಾಡಕ್ಕೆ 6 ಗಂಟೆ 13 ನಿಮಿಷಕ್ಕೆ ತಲುಪಲಿದೆ. ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟು 11.58ಕ್ಕೆ ಧಾರವಾಡ ರೈಲು ನಿಲ್ದಾಣ ತಲುಪುತ್ತೆ. ಇದು ಗಂಟೆಗೆ ಸರಾಸರಿ 78.82 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡುತ್ತೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸುವ ಮಾರ್ಗ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ರೈಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್‌ನಲ್ಲಿ ನಿಲ್ಲುತ್ತದೆ. ಇದನ್ನು ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್ ಅಂತಲೂ ಕರೆಯಲಾಗುತ್ತದೆ. ಒಟ್ಟಾರೆಯಾಗಿ ಶವಂತಪುರ, ದಾವಣಗೆರೆ ಹಾಗೂ ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತೆ.
ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಟಿಕೆಟ್ ದರ ಎಲ್ಲಿಗೆ ಎಷ್ಟು?: ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಟಿಕೆಟ್ ಎಸಿ ಚೇರ್‌ಕಾರ್ ಕ್ಲಾಸ್‌ನಲ್ಲಿ ಒಂದೇ ಪ್ರಯಾಣಕ್ಕೆ ಸುಮಾರು 1,205 ರೂಪಾಯಿ ಇದೆ. ಎಕ್ಸಿಕ್ಯೂಟಿವ್ ಚೇರ್‌ಕಾರ್‌ಗೆ ಅಡುಗೆ ಶುಲ್ಕ ಸೇರಿ 2,395 ರೂಪಾಯಿ ಇದೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ (ಮೆಜೆಸ್ಟಿಕ್ ರೈಲ್ವೆ ನಿಲ್ದಾಣ) ನಿಂದ ಯಶವಂತಪುರಕ್ಕೆ ಎಸಿಚೇರ್‌ಕಾರ್ 410 ರೂಪಾಯಿ, ಎಕ್ಸಿಕ್ಯೂಟಿವ್ ಚೇರ್‌ಕಾರ್‌ಗೆ 545 ರೂಪಾಯಿ ಇದೆ.
ಎಲ್ಲಿಂದ | ಎಲ್ಲಿಗೆ | ಎಸಿ ಚೇರ್‌ಕಾರ್ (ರೂಪಾಯಿ) | ಎಕ್ಸಿಕ್ಯುಟಿವ್ ಕ್ಲಾಸ್ (ರೂಪಾಯಿ) |
ಕೆಎಸ್ಆರ್ ಬೆಂಗಳೂರು | ಯಶವಂತಪುರ | 410 | 545 |
ಕೆಎಸ್ಆರ್ ಬೆಂಗಳೂರು | ದಾವಣಗೆರೆ | 915 | 1,740 |
ಕೆಎಸ್ಆರ್ ಬೆಂಗಳೂರು | ಹುಬ್ಬಳ್ಳಿ ಜಂಕ್ಷನ್ | 1,135 | 2,180 |
ಕೆಎಸ್ಆರ್ ಬೆಂಗಳೂರು | ಧಾರವಾಡ | 1,165 | 2,010 |
ಧಾರವಾಡ | ಕೆಎಸ್ಆರ್ ಬೆಂಗಳೂರು | 1,330 | 2,440 |
ಧಾರವಾಡ | ಯಶವಂತಪುರ | 1,340 | 2,440 |
ಧಾರವಾಡ | ದಾವಣಗೆರೆ | 745 | 1,282 |
ಧಾರವಾಡ | ಹುಬ್ಬಳ್ಳಿ ಜಂಕ್ಷನ್ | 410 | 545 |