ಧಾರವಾಡಕ್ಕೂ ಪ್ರತ್ಯೇಕ ನಗರಪಾಲಿಕೆ, ಮೈಸೂರಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ: ಸಚಿವ ಸಂಪುಟ ತೀರ್ಮಾನಗಳೇನು
ಇನ್ನು ಮುಂದೆ ಹುಬ್ಬಳ್ಳಿ ಹಾಗೂ ಧಾರವಾಡ ಮಹಾನಗರ ಪಾಲಿಕೆ ಎನ್ನುವ ಹಾಗಿಲ್ಲ. ಹುಬ್ಬಳ್ಳಿ ಹಾಗೂ ಧಾರವಾಡ ಪ್ರತ್ಯೇಕ ಆಗಲಿದೆ. ಕರ್ನಾಟಕ ಸಚಿವ ಸಂಪುಟ ಇದಕ್ಕೆ ಅನುಮೋದನೆ ನೀಡಿದೆ.
ಬೆಂಗಳೂರು: ಹುಬ್ಬಳ್ಳಿ ಹಾಗೂ ಧಾರವಾಡ ನಗರಗಳೊಂದಿಗೆ ಸೇರಿದ್ದ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರೂಪಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಇದರಿಂದ ಅವಳಿ ನಗರಗಳು ಪ್ರತ್ಯೇಕ ನಗರಪಾಲಿಕೆಯಾಗುವ ಹಿರಿಮೆ ಹೊಂದಿದಂತಾಗಲಿದೆ. ಇತ್ತೀಚಿಗೆ ಹುಬ್ಬಳ್ಳಿ ಹಾಗೂ ಧಾರವಾಡದ ಪ್ರತ್ಯೇಕ ನಗರಪಾಲಿಕೆ ಆಗಬೇಕು. ಒಂದೇ ಇರುವುದರಿಂದ ಎರಡೂ ನಗರಗಳಿಗೆ ನ್ಯಾಯ ಒದಗಿಸಲು ಆಗುತ್ತಿಲ್ಲ ಎನ್ನುವ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಿದ್ದರು. ಇದಕ್ಕೆ ಕರ್ನಾಟಕ ಸರ್ಕಾರವೂ ಅಸ್ತು ಎಂದಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ. ಇದಲ್ಲದೇ ಸಿಎಂ ಸಿದ್ದರಾಮಯ್ಯ ಅವರ ತವರು ನಗರವಾದ ಮೈಸೂರಿನಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಿಸುವುದಕ್ಕೂ ಅನುಮತಿ ಕೊಡಲಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ. ಕರ್ನಾಟಕ ಸಾಂಸ್ಕೃತಿ ಕೇಂದ್ರವಾಗಿದೆ. ಮೂರು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳ ಊರು ಧಾರವಾಡ. ವಿದ್ಯಾಕಾಶಿ ಎಂದು ಪ್ರಖ್ಯಾತಿ ಗಳಿಸಿದೆ. ಅಲ್ಲದೇ ಅಭಿವೃದ್ದಿ ದೃಷ್ಟಿಯಿಂದಲೂ ಪ್ರತ್ಯೇಕ ಪಾಲಿಕೆ ಬೇಡಿಕೆ ಇತ್ತು. ಅದು ಈಗ ಜಾರಿಯಾಗಿದೆ.
ಸಾರಿಗೆ ನಿಗಮದಿಂದ ಮೈಸೂರಿನ ಬನ್ನಿ ಮಂಟಪದಲ್ಲಿ ಆಧುನಿಕ ಬಸ್ ನಿಲ್ದಾಣವನ್ನು 120 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಮಂಜೂರಾತಿ ಮಾಡಲಾಗಿದೆ. ಈಗಾಗಲೇ ಮೈಸೂರಿನಲ್ಲಿ ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಿವೆ. ಮೂರನೇ ಬಸ್ ನಿಲ್ದಾಣ ಮೈಸೂರಿನಲ್ಲಿ ಬರಲಿದೆ. ಇದರಿಂದ ಒತ್ತಡವೂ ತಗ್ಗಲಿದೆ.
ಇತರೆ ತೀರ್ಮಾನಗಳು
- ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನವನ್ನು ವಿನಿಯೋಗಿಸಲು ಆಡಳಿತಾತ್ಮಕ ಅನುಮೋದನೆ. ಸಾಮರ್ಥ್ಯ ಹಾಗೂ ವಿಶ್ವಾಸಾರ್ಹತೆಯ ಹಿನ್ನೆಲೆಯಲ್ಲಿ ಸಾಲವನ್ನು ಪಡೆಯಲಾಗಿದೆ ಎಂಬುದು ಸಚಿವ ಹೆಚ್.ಕೆ.ಪಾಟೀಲ್ ಸ್ಪಷ್ಟನೆ.
- ಭಾರತ ಸರ್ಕಾರದ ಆರ್ಥಿಕ ಸಚಿವಾಲಯವು ವಿಶೇಷ ಬಂಡವಾಳ ನೆರವಿನ ಯೋಜನೆಯ ಭಾಗ 7 (ಎ) ಅಡಿ ಕರ್ನಾಟಕದ ರಾಜ್ಯಕ್ಕೆ ಬಂಡವಾಳ ವೆಚ್ಚಕ್ಕಾಗಿ ದೀರ್ಘಾವಧಿ ಸಾಲದ ರೂಪದಲ್ಲಿ ನೀಡಿರುವ 137.85 ಕೋಟಿಗಳ ಅನುದಾನವನ್ನು ವಿನಿಯೋಗಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
- ಜನಕಲ್ಯಾಣದ ಜೊತೆಗೆ ಅಭಿವೃದ್ದಿ ಗಮನದಲ್ಲಿದೆ ಹಾಗೂ ಹೊರೆಯನ್ನು ಸರಿದೂಗಿಸುವ ವ್ಯವಹಾರಿಕತೆಯ ಹಿನ್ನೆಲೆಯಲ್ಲಿ ಅನುಮೋದನೆ ನೀಡಲಾಗಿದೆ.
- ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆಯವರು ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಸಮಾಪನಗೊಳಿಸುವ ಬಗ್ಗೆ ರಾಜ್ಯ ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿದೆ.
- ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯವರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 2022-23 23ನೇ ಸಾಲಿನ ಎಸ್ ಸಿ ಪಿ, ಟಿ ಎಸ್ ಪಿ ಯೋಜನೆಗಳ ಇದ್ದಂತಹ 56ಕೋಟಿ 92ಲಕ್ಷ ರೂಪಾಯಿಗಳ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ವಸತಿ ಶಾಲೆಗಳ ಹಾಗೂ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಬೆಡ್ ಶೀಟ್ ಸೊಳ್ಳೆ ಪರದೆಗಳು ಟ್ರ್ಯಾಕ್ ಸೂಟ್ ಮತ್ತು ನೈಟ್ ಡ್ರೆಸ್ ಗಳ ಸಾಮಗ್ರಿಗಳನ್ನು ಪೂರೈಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಆಯವ್ಯಯದಲ್ಲಿ ಘೋಷಣೆಯಾಗಿರುವಂತೆ ಬಾಡಿಗೆ ಮತ್ತು ಶಿಥಿಲಾವಸ್ಥೆಯಲ್ಲಿ ಇರುವಂತಹ ಕಟ್ಟಡಗಳ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವಂತಹ 200 ಪಶು ವೈದ್ಯ ಸಂಸ್ಥೆಗಳಿಗೆ ಒಂದು ನೂರು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನೂತನ ಕಟ್ಟಡಗಳನ್ನು ನಬಾರ್ಡ್ ಸಹಾಯ ಅನುದಾನದೊಂದಿಗೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಕಾನೂನು ಮಾಪನ ಶಾಸನ ಇಲಾಖೆ 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಲ್ಲಿ ರಾಜ್ಯದ ರೈತರಿಂದ ಭತ್ತ ಮತ್ತು ಬಿಳಿ ಜೋಳ ಖರೀದಿಸಲು ಅವಶ್ಯವಿರುವಂತಹ 580 ಗ್ರಾಂ ತೂಕದ 15 ಲಕ್ಷ ಸೆಣಬಿನ ಗೋಣಿ ಚೀಲಗಳನ್ನು 10 ಕೋಟಿ 88ಲಕ್ಷ ಗಳ ಅಂದಾಜು ವೆಚ್ಚದಲ್ಲಿ ಆವರ್ತಕನಿಧಿ ಅಡಿಯಲ್ಲಿ ರಾಗಿಯನ್ನು ಖರೀದಿಸಲು ಅವಶ್ಯವಿರುವಂತಹ 775 ಗ್ರಾಂ ತೂಕದ 74.82 ಲಕ್ಷ ಸೆಣಬಿನ ಗೋಣಿ ಚೀಲಗಳನ್ನು ಜೆಮ್ ಪೋರ್ಟಲ್ ಮೂಲಕ ಖರೀದಿಸಲು ಅನುಮೋದನೆ.
ಬಂದರು ನಿರ್ಮಾಣಕ್ಕೆ ಅನುಮೋದನೆ
ಕೇಂದ್ರ ಪುರಸ್ಕೃತ ಯೋಜನೆಯಡಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿನ ಮೀನುಗಾರಿಕೆ ಬಂದರು ನಿರ್ಮಾಣ ಕಾಮಗಾರಿಯ 209.13 ಕೋಟಿ ರೂ.ಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.ಕೇಂದ್ರ ಪುರಸ್ಕೃತ ಯೋಜನೆಯಡಿ ಹಾಲಿ ಇರುವ ಮೀನುಗಾರಿಕೆ ಬಂದರುಗಳ ಆಧುನೀಕರಣ ಹಾಗೂಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ನಿರ್ವಹಣಾ ಹೂಳೆತ್ತುವಿಕೆ ಯ ಕಾಮಗಾರಿಗಳ 84.57 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕೆಐಡಿಬಿ ಸಾಲದ ಮಿತಿ 5000 ಕೋಟಿ ರೂ. ಹೆಚ್ಚಳ
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಮಿತಿ ಪ್ರಸ್ತುತ ರೂ. 500 ಕೋಟಿ ಗಳಿದ್ದು, ಅದನ್ನು ರೂ. 5000 ಕೋಟಿಗಳಿಗೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.
ಚಿಂತಾಮಣಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಮಗಾರಿ
ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ವಡಗನಹಳ್ಳಿ ಗ್ರಾಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜಿನ ಕಟ್ಟಡ ಕಾಮಗಾರಿಗಳನ್ನು 149.75 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಹರಿಹರ ವಿದ್ಯಾರ್ಥಿ ನಿಲಯಕ್ಕೆ ರಿಯಾಯಿತಿ ದರದಲ್ಲಿ ನಿವೇಶನ
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಯಕ ವಿದ್ಯಾರ್ಥಿ ನಿಲಯ, ದಾವಣಗೆರೆ ಇವರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ 523.99 ಚ.ಮೀ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶವನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಲಾಗಿದೆ.