ಕನ್ನಡ ಸುದ್ದಿ  /  Karnataka  /  Dharwada News Labour Minister Santosh Lad Fire On Former Chief Minister Basavaraja Bommai Karnataka News Rsm

Santosh Lad: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಿರುದ್ಯೋಗ ಬಡತನದ ಬಗ್ಗೆ ಮಾತನಾಡಿದರೆ ಒಳಿತು; ಕಾರ್ಮಿಕ ಸಚಿವ ಸಂತೋಷ ಲಾಡ್

ಮೊನ್ನೆ ತಾನೇ ನಮಗೆ ಅಧಿಕಾರ ಸಿಕ್ಕಿದೆ. ಯಾರು ಏನು ಹೇಳಿದರೂ ಅಂತಹ ವಿಚಾರಗಳ ಬಗ್ಗೆ ನಾನು ಉತ್ತರಿಸಲು ಹೋಗುವುದಿಲ್ಲ. ನಮ್ಮ ಮುಂದೆ ಸಾಕಷ್ಟು ಗುರಿಗಳಿವೆ. ನಮ್ಮ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ನಾವೇ ಏನು ಮಾತು ಕೊಟ್ಟಿದ್ದೇವೆ ಅದನ್ನು ಉಳಿಸಿಕೊಳ್ಳುತ್ತೇವೆ.

ಮರುಘಾ ಮಠಕ್ಕೆ ಭೇಟಿ ನೀಡಿದ ‌ಕಾರ್ಮಿಕ ಸಚಿವ ಸಚಿವ ಸಂತೋಷ್‌ ಲಾಡ್
ಮರುಘಾ ಮಠಕ್ಕೆ ಭೇಟಿ ನೀಡಿದ ‌ಕಾರ್ಮಿಕ ಸಚಿವ ಸಚಿವ ಸಂತೋಷ್‌ ಲಾಡ್

ಧಾರವಾಡ: 'ರಾಜ್ಯದಲ್ಲಿ ಶೀಘ್ರದಲ್ಲೇ ಎಮರ್ಜೆನ್ಸಿ ಉಂಟಾಗುತ್ತದೆ' ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ಆಡಳಿತ ಪಕ್ಷದ ಸಚಿವರು ಖಂಡಿಸಿದ್ದಾರೆ, ಧಾರವಾಡದಲ್ಲಿ ಮಂಗಳವಾರ ಕಾರ್ಮಿಕ ಸಚಿವ ಸಂತೋಷ ಲಾಡ್ ಕೂಡಾ ಎಮೆರ್ಜೆನ್ಸಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ''ಅವರವರ ಅಭಿಪ್ರಾಯ ಹೇಳೋದಕ್ಕೆ ಎಲ್ಲರಿಗೂ ಸ್ವತಂತ್ರವಿದೆ. ಈ ಮೊದಲು ಗ್ಯಾರಂಟಿ ಯೋಜನೆಗಳು ಅನುಷ್ಠಾನ ಮಾಡೋದಿಲ್ಲ ಎಂದು ಹೇಳುತ್ತಿದ್ದರು. ಈಗ ನಾವು ಅನುಷ್ಠಾನ ಮಾಡಲು ಆರಂಭಿಸಿದ ತಕ್ಷಣ ಈಗ ಎಮರ್ಜೆನ್ಸಿ ಅಂತ ಹೇಳುತ್ತಿದ್ದಾರೆ. ಇನ್ನು ಸ್ವಲ್ಪ ದಿನ ಆದ್ರೆ ಮುಂದೆ ಏನು ಹೇಳುತ್ತಾರೋ ನೋಡಬೇಕು. ಎಮರ್ಜೆನ್ಸಿ ಏಕೆ ಬರುತ್ತೆ ಅಂತ ನನಗ ಗೌತ್ತಿಲ್ಲ. ಕಾಂಗ್ರೆಸ್ ನಾಯಕರಿಗೆ ಅಧಿಕಾರದ ಮದವೇರಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಅವರು ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಹೇಳಿದ್ದಾರೆ ಅಂತ ನಾವೂ ಹೇಳುವುದು ಸರಿಯಲ್ಲ. ಮುಂದೆ ಬರುವಂತಹ ದಿನಗಳಲ್ಲಿ ಅವರಿಗೆ ಉತ್ತರ ಸಿಗುತ್ತದೆ. ಅಭಿವೃದ್ಧಿ, ಕಾರ್ಯಕ್ರಮ, ನಿರುದ್ಯೋಗ, ಬಡತನ ಮುಂತಾದ ವಿಷಯಗಳ ಬಗ್ಗೆ ಅವರು ಮಾತನಾಡಿದರೆ ಒಳ್ಳೆಯದು''

''ಮೊನ್ನೆ ತಾನೇ ನಮಗೆ ಅಧಿಕಾರ ಸಿಕ್ಕಿದೆ. ಯಾರು ಏನು ಹೇಳಿದರೂ ಅಂತಹ ವಿಚಾರಗಳ ಬಗ್ಗೆ ನಾನು ಉತ್ತರಿಸಲು ಹೋಗುವುದಿಲ್ಲ. ನಮ್ಮ ಮುಂದೆ ಸಾಕಷ್ಟು ಗುರಿಗಳಿವೆ. ನಮ್ಮ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ನಾವೇ ಏನು ಮಾತು ಕೊಟ್ಟಿದ್ದೇವೆ ಅದನ್ನು ಉಳಿಸಿಕೊಳ್ಳುತ್ತೇವೆ. ಉತ್ತಮ ಆಡಳಿತ ನೀಡುವುದೇ ಕಾಂಗ್ರೆಸ್ ಸರ್ಕಾರದ ಉದ್ದೇಶ'' ಎಂದರು. ಧಾರವಾಡ ಜಿಲ್ಲೆಯಲ್ಲಿ ಅಂದಾಜು 5 ಸಾವಿರ ನಕಲಿ ಕಾರ್ಮಿಕ ಕಾರ್ಡ್ ವಿತರಿಸಲಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ''ಜಾಬ್ ಕಾರ್ಡ್‌ಗಳು ನಕಲಿ ಇವೆ ಎಂಬುದಕ್ಕೆ ಮಾಹಿತಿ ಬೇಕು. ಜಾಬ್ ಕಾರ್ಡ್ ನೀಡುವಲ್ಲಿ ಒಂದು ಮಾನದಂಡಗಳು ಇರುತ್ತವೆ. ಈ ಕುರಿತು ಪರಿಶೀಲಿಸಿ ಜಾಬ್ ಕಾರ್ಡ್ ತಡೆಯಲು ಪ್ರಯತ್ನಿಸುತ್ತೇವೆ. ಇಲಾಖೆಯ ಸಭೆಯಲ್ಲಿ ಈ ಬಗ್ಗೆ ಕೂಲಂಕಶವಾಗಿ ಚರ್ಚಿಸಿ ಕೆಲವು ಮಾನದಂಡಗಳೊಂದಿಗೆ ಜಾಬ್ ಕಾರ್ಡ್ ನೀಡುವ ಹಾಗೂ ಸೌಲಭ್ಯ ವಿತರಿಸುವ ಕಾರ್ಯದಲ್ಲಿ ಕೆಲವೊಂದು ಬದಲಾವಣೆ ತರುತ್ತೇವೆ'' ಎಂದರು.

ಒಡಿಸಾ ರಾಜ್ಯದಲ್ಲಿ ಸಂಭವಿಸಿದ ರೈಲು ದುರಂತದ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಕರ್ನಾಟಕದವರಿಗೆ ಏನೂ ಸಮಸ್ಯೆ ಆಗಿಲ್ಲ. ಹಾನಿಯಾಗಿಲ್ಲ. 150ಕ್ಕೂ ಹೆಚ್ಚು ಜನರು ಸುರಕ್ಷಿತವಾಗಿದ್ದಾರೆ. ಇನ್ನೂ ಕೆಲವು ಮೃತದೇಹಗಳು ಗುರುತು ಸಿಗಲಾರದ ಪರಿಸ್ಥಿಯಲ್ಲಿವೆ. ವಾರಸುದಾರರ ಪತ್ತೆಗೆ ಅಲ್ಲಿನ ಸರ್ಕಾರದವರು ಶ್ರಮಿಸುತ್ತಿದ್ದಾರೆ. ಅಲ್ಲಿನ ರೈಲ್ವೆ ಇಲಾಖೆ ತಾಂತ್ರಿಕ ಸಿಬ್ಬಂದಿ ಮೇಲ್ನೋಟಕ್ಕೆ ಇದು ತಾಂತ್ರಿಕ ಸಮಸ್ಯೆಯಿಂದ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಸಿಬಿಐಗೆ ಏಕೆ ಕೊಟ್ಟಿದ್ದಾರೆ ಎಂಬುದು ನಮಗಂತೂ ಗೊತ್ತಿಲ್ಲ''ಎಂದು ಹೇಳಿದರು.

ಮುರುಘಾ ಮಠಕ್ಕೆ ಭೇಟಿ

ಕಾರ್ಮಿಕ ಸಚಿವರಾಗಿ ಮೊದಲ ಬಾರಿಗೆ ಧಾರವಾಡಕ್ಕೆ ಆಗಮಿಸಿದ ಸಚಿವ ಸಂತೋಷ ಲಾಡ್, ನಗರದ ಮುರುಘಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಡಾ. ಮಲ್ಲಿಕಾರ್ಜುನ ಸ್ವಾಮೀಜಿಗಳು ಸಚಿವ ಸಂತೋಷ ಲಾಡ್ ಅವರಿಗೆ ಸನ್ಮಾನಿಸಿದರು.

ವಿನಯ್‌ ಕುಲಕರ್ಣಿಗೆ ಮನೆಗೆ ಭೇಟಿ

ಶಾಸಕ ವಿನಯ ಕುಲಕರ್ಣಿ ಮನೆಗೆ ಸಚಿವ ಸಂತೋಷ ಲಾಡ್ ಭೇಟಿ ನೀಡಿದರು. ಈ ವೇಳೆ ಶಾಸಕ ವಿನಯ್‌ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಮಕ್ಕಳು ಕುಟುಂಬದವರು ಇದ್ದರು. ಈ ವೇಳೆ ಮಾತನಾಡಿದ ಲಾಡ್, ವಿನಯ್‌ ಕುಲಕರ್ಣಿ ಹಿರಿಯರು. ಅವರಿಗೆ ಸಚಿವ ಸ್ಥಾನ ನೀಡದಿರುವುದು ನಮಗೂ ಬೇಸರವಾಗಿದೆ. ಕೆಲವೊಂದು ನಿರ್ಧಾರಗಳನ್ನು ಹೈಕಮಾಂಡ್‌ ತೀರ್ಮಾನಿಸುತ್ತದೆ ಎಂದು ಪ್ರತಿಕ್ರಿಯಿಸಿದರು.

ವರದಿ: ಪ್ರಹ್ಲಾದಗೌಡ ಬಿ.ಜಿ, ಧಾರವಾಡ

IPL_Entry_Point

ವಿಭಾಗ