ಕನ್ನಡ ಸುದ್ದಿ / ಕರ್ನಾಟಕ /
ಆಸೆಯೇ ದುಃಖಕ್ಕೆ ಕಾರಣ, ದುರಾಸೆಯೇ ಮೋಸಕ್ಕೆ ಕಾರಣ; ಸೈಬರ್ ಅಪರಾಧಗಳ ಕುರಿತು ಎಚ್ಚರಿಸಿದ ವಿಜಯಪುರ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬಿ ನಿಂಬರಗಿ
Digital Crime Awareness: ಸೈಬರ್ ಅಪರಾಧ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಜನರಲ್ಲಿ ಆನ್‌ಲೈನ್ ವಂಚನೆ ಕುರಿತು ಜಾಗೃತಿ ಮೂಡಿಸಲು ವಿಜಯಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ಬಿ ನಿಂಬರಗಿ ಕೆಲವೊಂದು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಈ ಸಲಹೆಗಳನ್ನು ಎಚ್ಚರಿಕೆಯಿಂದ ಓದಿ.

ಸೈಬರ್ ಅಪರಾಧದ ಕುರಿತು ಎಚ್ಚರಿಸಿದ ವಿಜಯಪುರ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬಿ ನಿಂಬರಗಿ
ಆನ್‌ಲೈನ್ ವಂಚನೆ, ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ವಾಟ್ಸಪ್‌ನಲ್ಲಿ ಬಂದ ಯಾವುದೋ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಸಾವಿರಾರು, ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವಂತಹ ಘಟನೆಗಳು ನಡೆಯುತ್ತವೆ. ಇನ್ನು ಕೆಲವೊಮ್ಮೆ ಯಾವುದೂ ಲಾಟರಿ, ಲಕ್ಕಿಡ್ರಾ ಆಸೆಗೆ ಇಂತಹ ಲಿಂಕ್‌ಗಳು, ಫೈಲ್‌ಗಳು, ಎಪಿಕೆ ಫೈಲ್‌ಗಳನ್ನು ಕ್ಲಿಕ್ ಮಾಡಿ ಸಾಕಷ್ಟು ಜನರು ಆನ್‌ಲೈನ್ ವಂಚಕರು ತೋಡಿರುವ ಹಳ್ಳಕ್ಕೆ ಬೀಳುತ್ತಾರೆ. ಈಗ ಡಿಜಿಟಲ್ ಅರೆಸ್ಟ್‌ನಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ಬಿ ನಿಂಬರಗಿ ಹಂಚಿಕೊಂಡಿರುವ ಕೆಲವು ಸಲಹೆಗಳನ್ನು ಗಮನಿಸಿ.
- ವಾಟ್ಸಪ್ ಮೂಲಕ ಪಿ.ಎಂ. ಕಿಸಾನ್, ಬ್ಯಾಂಕ್ ಕೆವೈಸಿ ಅಪ್‌ಡೆಟ್ & ವೆಡ್ಡಿಂಗ್ ಕಾರ್ಡ್ ಹೆಸರಲ್ಲಿ ಬರುವ ಎ.ಪಿ.ಕೆ ಫೈಲ್‌ಗಳನ್ನು ಡೌನಲೋಡ್ ಮಾಡಬೇಡಿ. ಮಾಡಿದಲ್ಲಿ ಮೊಬೈಲ್ ಹ್ಯಾಕ್ ಆಗಿ ನಿಮ್ಮ ಎಲ್ಲ ಮಾಹಿತಿ ಸೈಬರ್ ವಂಚಕರ ಪಾಲಾಗುತ್ತದೆ.
- ಪೊಲೀಸ್ ಅಧಿಕಾರಿ, ಟೆಲಿಪೋನ್ ಅಧಿಕಾರಿ ಮತ್ತು ಕೋರಿಯರ್ ಹೆಸರಿನಲ್ಲಿ ಕರೆ ಮಾಡಿ ಕಾನೂನು ಬಾಹಿರ ವಸ್ತುಗಳನ್ನು ವಿದೇಶಕ್ಕೆ ರವಾನೆ ಮಾಡಿದ್ದೀರಿ, ಅದಕ್ಕಾಗಿ ವಿಡಿಯೋ ಕಾಲ್ ಮಾಡಿ ವಿಚಾರಣೆ ಮಾಡುವ ನೆಪದಲ್ಲಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೆದರಿಸಿ ಹಣ ಪಡೆದುಕೊಂಡು ವಂಚನೆ ಮಾಡುವವರ ಬಗ್ಗೆ ಜಾಗೃತರಾಗಿರಿ.
- ಅಪರಿಚಿತರೊಂದಿಗೆ ನಿಮ್ಮ ಬ್ಯಾಂಕಿಂಗ್ ಮಾಹಿತಿಗಳಾದ ಡೆಬಿಟ್/ಕ್ರೇಡಿಟ್ ಕಾರ್ಡ್ ನಂಬರ್, ಮುಕ್ತಾಯದ ಅವಧಿ, ಸಿ.ವಿ.ವಿ, ಓ.ಟಿ.ಪಿ, ಯು.ಪಿ.ಐ ಪಿನ್ ಮತ್ತು ಎಂ.ಪಿನ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.
- ಅಪರಿಚಿತ ಮೂಲದ ಎಸ್.ಎಂ.ಎಸ್, ವ್ಯಾಟ್ಸಪ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ವೀಕರಿಸುವ ಸಂದೇಶ, ಇ-ಮೇಲ್‌ಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
- ಗೂಗಲ್‌ನಲ್ಲಿ ಕಂಡುಬರುವ ಕಸ್ಟಮರ್ ಕೇರ್ ನಂಬರ್, ಇ-ಮೇಲ್ ವಿಳಾಸ ಇತ್ಯಾದಿಗಳನ್ನು ಬಳಸುವ ಮೊದಲು ಅವುಗಳ ನೈಜತೆ ಬಗ್ಗೆ ತಿಳಿಯಿರಿ.
- ಆನ್‌ಲೈನ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಆನಧೀಕೃತ ಆ್ಯಪ್‌ಗಳನ್ನು ಬಳಸಬೇಡಿ.
- ಹೆಚ್ಚಿನ ಲಾಭ ನೀಡುವುದಾಗಿ ಆಮಿಷ ಒಡ್ಡುವ ಆನ್‌ಲೈನ್ ಮೂಲದ ವೆಬ್‌ಸೈಟ್/ಆ್ಯಪ್‌ಗಳ ಮೂಲಕ ಹಣ ಹೂಡಿಕೆ ಮಾಡಬೇಡಿ.
- ಆನ್‌ಲೈನ್ ಮೂಲಕ ಉದ್ಯೋಗ ಕೊಡಿಸುವುದಾಗಿ ಹಣದ ಬೇಡಿಕೆ ಇಟ್ಟಲ್ಲಿ, ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಬೇಡಿ.
- ನಿಮಗೆ ಲಾಟರಿ, ಉಡುಗೊರೆ ಇತ್ಯಾದಿ ಬಂದಿದೆ ಎಂದು ಪ್ರಚೋದಿಸಿ. ಅವುಗಳನ್ನು ಪಡೆಯಲು ವಿವಿಧ ಶುಲ್ಕ ಪಾವತಿಸಬೇಕೆಂದು ಹಣದ ಬೇಡಿಕೆ ಇಟ್ಟಲ್ಲಿ ಹಣವನ್ನು ಪಾವತಿಸಬೇಡಿ.
- ಸಾಮಾಜಿಕ ಜಾಲತಾಣಗಳ ಮುಖಾಂತರ ಅಪರಿಚಿತರಿಂದ ಬರುವ ವಿಡಿಯೋ ಕರೆಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬೇಡಿ.
- ನಿಮ್ಮ ಬ್ಯಾಂಕ್ ಖಾತೆಗೆ, ಸಾಮಾಜಿಕ ಜಾಲತಾಣದ ಖಾತೆಗಳಿಗೆ ಕಠಿಣ ಪಾಸ್‌ವರ್ಡ್‌ಗಳನ್ನು ಬಳಸಿ, ಅಲ್ಲದೇ Two Factor Authentication ಕೂಡಾ ಅಳವಡಿಸಿಕೊಳ್ಳಿ.
- ಮಕ್ಕಳಿಗೆ ಸಂಬಂಧಪಟ್ಟ ಲೈಂಗಿಕ/ಅಶ್ಲೀಲ ಚಿತ್ರ, ದೃಶ್ಯಾವಳಿಗಳನ್ನು ಆನ್‌ಲೈನ್ ಮೂಲಕ ಹುಡುಕುವುದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಶಿಕ್ಷಾರ್ಹ ಅಪರಾಧವಾಗಿದೆ.
- ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಓ.ಎಲ್.ಎಕ್ಸ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಿಂದ ಕಡಿಮೆ ದರದಲ್ಲಿ ವಸ್ತಗಳನ್ನು ಮಾರಾಟ ಮಾಡುವುದಾಗಿ ಜಾಹಿರಾತು ನೀಡಿ, ಆರ್ಮಿ ಮತ್ತು ಇತರೆ ಅಧಿಕಾರಿಗಳ ಹೆಸರುಗಳನ್ನು ಹೇಳಿ ವಸ್ತುಗಳನ್ನು ನಿಮ್ಮ ವಿಳಾಸಕ್ಕೆ ಕಳುಹಿಸುವುದಾಗಿ ನಂಬಿಸಿ ಹಣ ಹಾಕಿಸಿಕೊಂಡು ವಂಚಿಸುತ್ತಾರೆ.
- ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ದೂರು ನೀಡಲು ಉಚಿತ ಸಹಾಯವಾಣಿ ಸಂಖ್ಯೆ: 1930 ಕರೆ ಮಾಡಿ ದೂರನ್ನು ನೊಂದಾಯಿಸಿ.
ಆಸೆಯೇ ದುಃಖಕ್ಕೆ ಕಾರಣ, ದುರಾಸೆಯೇ ಮೋಸಕ್ಕೆ ಕಾರಣ ಎಂದು ವಿಜಯಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ಬಿ ನಿಂಬರಗಿ ಎಚ್ಚರಿಸಿದ್ದಾರೆ.
