Mule Accounts: ಸೈಬರ್‌ ಅಪರಾಧಿಗಳಿಗೆ ಹೇಸರಗತ್ತೆ ಖಾತೆ ತೆರೆಯಲು ನೆರವಾಗುತ್ತಿದ್ದ ಬ್ಯಾಂಕ್‌ ಅಧಿಕಾರಿಗಳ ಬಂಧನ, ಏನಿದು ಮ್ಯೂಲ್‌ ಖಾತೆ?
ಕನ್ನಡ ಸುದ್ದಿ  /  ಕರ್ನಾಟಕ  /  Mule Accounts: ಸೈಬರ್‌ ಅಪರಾಧಿಗಳಿಗೆ ಹೇಸರಗತ್ತೆ ಖಾತೆ ತೆರೆಯಲು ನೆರವಾಗುತ್ತಿದ್ದ ಬ್ಯಾಂಕ್‌ ಅಧಿಕಾರಿಗಳ ಬಂಧನ, ಏನಿದು ಮ್ಯೂಲ್‌ ಖಾತೆ?

Mule Accounts: ಸೈಬರ್‌ ಅಪರಾಧಿಗಳಿಗೆ ಹೇಸರಗತ್ತೆ ಖಾತೆ ತೆರೆಯಲು ನೆರವಾಗುತ್ತಿದ್ದ ಬ್ಯಾಂಕ್‌ ಅಧಿಕಾರಿಗಳ ಬಂಧನ, ಏನಿದು ಮ್ಯೂಲ್‌ ಖಾತೆ?

ಸೈಬರ್‌ ವಂಚಕರಿಗೆ ನಕಲಿ ಬ್ಯಾಂಕ್‌ ಖಾತೆ (ಹೇಸರಗತ್ತೆ ಖಾತೆ ಅಥವಾ ಮ್ಯೂಲ್‌ ಅಕೌಂಟ್ಸ್‌) ತೆರೆಯಲು ನೆರವಾಗುತ್ತಿದ್ದ ಮೂವರು ಹಿರಿಯ ಬ್ಯಾಂಕ್‌ ಉದ್ಯೋಗಿಗಳನ್ನು ಬೆಂಗಳೂರು, ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 52 ಜನರನ್ನು ಬಂಧಿಸಲಾಗಿದೆ. ಮ್ಯೂಲ್‌ ಖಾತೆ ಎಂದರೆ ಏನು ಎಂಬ ಮಾಹಿತಿಯೂ ಇಲ್ಲಿದೆ.

ಸೈಬರ್‌ ಅಪರಾಧಿಗಳಿಗೆ ಹೇಸರಗತ್ತೆ ಖಾತೆ ತೆರೆಯಲು ನೆರವಾಗುತ್ತಿದ್ದವರ ಬಂಧನ
ಸೈಬರ್‌ ಅಪರಾಧಿಗಳಿಗೆ ಹೇಸರಗತ್ತೆ ಖಾತೆ ತೆರೆಯಲು ನೆರವಾಗುತ್ತಿದ್ದವರ ಬಂಧನ

ಆನ್‌ಲೈನ್‌ ವಂಚಕರಿಗೆ ಹಣಕಾಸು ವಂಚನೆ ಮಾಡಲು ನಕಲಿ ಬ್ಯಾಂಕ್‌ ಖಾತೆಗಳ ಬೇಕಿರುತ್ತವೆ. ಅಮಾಯಕರು, ಅನಕ್ಷರಸ್ಥರ ಹೆಸರಿನಲ್ಲಿ ನಕಲಿ ಬ್ಯಾಂಕ್‌ ಖಾತೆಗಳನ್ನು ರಚಿಸಿ, ಆ ಬ್ಯಾಂಕ್‌ ಖಾತೆಗಳನ್ನು ವಂಚಕರಿಗೆ ನೀಡುವ ಜಾಲ ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲಿ ಸಕ್ರೀಯವಾಗಿವೆ. ಆನ್‌ಲೈನ್‌ ವಂಚಕರಿಂದ ನೀವು ಹಣ ಕಳೆದುಕೊಂಡರೂ ಪೊಲೀಸರಿಗೆ ನಿಮ್ಮ ಹಣವನ್ನು ವಾಪಸ್‌ ಪಡೆಯಲು ಸಾಧ್ಯವಾಗದೆ ಇರಲು ಇಂತಹ ನಕಲಿ ಖಾತೆಗಳು ಕಾರಣವಾಗಿವೆ. ಇದೇ ರೀತಿ ಕೋಟ್ಯಾಂತರ ರೂಪಾಯಿ ಮನಿ ಲ್ಯಾಂಡರಿಂಗ್‌ಗೂ ಇಂತಹ ನಕಲಿ ಖಾತೆಗಳನ್ನು ಬಳಸಿಕೊಳ್ಳಲಾಗುತ್ತದೆ. ಇದೀಗ ಹೈದರಾಬಾದ್‌ ಪೊಲೀಸರು ಇಂತಹ ನಕಲಿ ಖಾತೆ ಜಾಲವೊಂದನ್ನು ಬೇಧಿಸಿದ್ದಾರೆ. ಬೆಂಗಳೂರಿನ ಇಬ್ಬರು ಹಿರಿಯ ಬ್ಯಾಂಕ್‌ ಅಧಿಕಾರಿಗಳೂ ಈ ಜಾಲದಲ್ಲಿ ಸಿಕ್ಕ ಬಿದ್ದಿದ್ದಾರೆ. ಸೈಬರ್ ವಂಚಕರು ಮ್ಯೂಲ್ ಖಾತೆಗಳನ್ನು ತೆರೆಯಲು ಸಹಾಯ ಮಾಡಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.

ಈ ರೀತಿ ವಂಚಕರಿಗೆ ನಕಲಿ, ಮ್ಯೂಲ್‌, ಹೇಸರಗತ್ತೆ ಖಾತೆಗಳನ್ನು ತೆರೆಯಲು ಭಾರಿ ಕಮಿಷನ್‌ ಪಡೆಯುತ್ತಿದ್ದರು. ಒಂದು ಉಳಿತಾಯ ಖಾತೆಗೆ 50 ಸಾವಿರ ರೂಪಾಯಿ, ಒಂದು ಚಾಲ್ತಿ ಖಾತೆ ತೆರೆಯಲು 80 ಸಾವಿರ ರೂಪಾಯಿ ಪಡೆಯುತ್ತಿದ್ದರು. ಕಳೆದ ಏಳು ದಿನಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಹಿರಿಯ ಬ್ಯಾಂಕ್‌ ಅಧಿಕಾರಿಗಳು ಸೇರಿದಂತೆ 52 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್‌ ಪೊಲೀಸರು ಒಟ್ಟು ಒಂಬತ್ತು ರಾಜ್ಯಗಳಲ್ಲಿ ರೈಡ್‌ ಮಾಡಿದ್ದರು. ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್‌, ಕರ್ನಾಟಕ, ದೆಹಲಿ, ಉತ್ತರ ಪ್ರದೇಶಗಳಲ್ಲಿ ರೈಡ್‌ ಮಾಡಿ ಒಟ್ಟು 52 ಜನರನ್ನು ಬಂಧಿಸಿದ್ದಾರೆ.

ಈ ಕುರಿತು ಇತ್ತೀಚೆಗೆ ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ. ಆನಂದ್ ಮಾಹಿತಿ ನೀಡಿದ್ದಾರೆ. "ಆರ್‌ಬಿಎಲ್ ಬ್ಯಾಂಕಿನ ಉಪ ವ್ಯವಸ್ಥಾಪಕ ಶುಭಂ ಕುಮಾರ್ ಝಾ; ಬೆಂಗಳೂರಿನ ಆಕ್ಸಿಸ್ ಬ್ಯಾಂಕಿನ ಸಹಾಯಕ ಉಪಾಧ್ಯಕ್ಷ ಹರೂನ್ ರಶೀದ್ ಇಮಾಮುದ್ದೀನ್ ಧಾರಾವದ್ ಮತ್ತು ಹೈದರಾಬಾದ್‌ನ ಕೋಟಕ್ ಮಹೀಂದ್ರಾ ಬ್ಯಾಂಕಿನ ಮಾರಾಟ ವ್ಯವಸ್ಥಾಪಕ ಕಟಾ ಶ್ರೀನಿವಾಸ ರಾವ್ ಅವರನ್ನು ಬಂಧಿಸಲಾಗಿದೆ. ಇವರು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ದುರುಪಯೋಗಪಡಿಸಿಕೊಂಡು ಸೈಬರ್ ವಂಚಕರೊಂದಿಗೆ ಶಾಮೀಲಾಗಿ ನೂರಾರು ಮ್ಯೂಲ್ ಖಾತೆಗಳನ್ನು ಅಕ್ರಮವಾಗಿ ತೆರೆದಿದ್ದಾರೆ" ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ. 52 ಆರೋಪಿಗಳ ಬಂಧನದಿಂದ 8.8 ಕೋಟಿ ರೂ. ವಂಚನೆಯ 33 ಸೈಬರ್ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಡಿಜಿಟಲ್ ಬಂಧನ, ಹೂಡಿಕೆ ವಂಚನೆ, ಡೇಟಾ ಕಳ್ಳತನ, ಅರೆಕಾಲಿಕ ಉದ್ಯೋಗ ವಂಚನೆ ಇತ್ಯಾದಿ ಹಲವು ಬಗೆಯ ಸೈಬರ್‌ ಅಪರಾಧಗಳು ಇದರಲ್ಲಿ ಒಳಗೊಂಡಿವೆ.

ಏನಿದು ಮ್ಯೂಲ್‌ ಖಾತೆ?

ಹೇಸರಗತ್ತೆ ಅಥವಾ ಮ್ಯೂಲ್‌ ಖಾತೆ ಎಂದರೆ ಇತರರ ಹೆಸರಿನಲ್ಲಿ ತೆರೆಯುವ, ಸೈಬರ್‌ ವಂಚಕರಿಂದ ನಿಯಂತ್ರಿಸಲ್ಪಡುವ ಬ್ಯಾಂಕ್‌ ಖಾತೆ. ವಂಚಕರು ಈ ಬ್ಯಾಂಕ್‌ ಖಾತೆಗಳನ್ನು ಅಕ್ರಮ ಬ್ಯಾಂಕಿಂಗ್‌ ವಹಿವಾಟುಗಳಿಗ ಬಳಸಿಕೊಳ್ಳುತ್ತಾರೆ. ಭಾರತದಾದ್ಯಂತ ಕನಿಷ್ಠ ಐದು ಲಕ್ಷ ಮ್ಯೂಲ್ ಖಾತೆಗಳನ್ನು ವಂಚಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತೆಲಂಗಾಣ ಸೈಬರ್‌ ಸೆಕ್ಯುರಿಟಿ ಬ್ಯೂರೋ ಅಂದಾಜಿಸಿದೆ. ಶುಭಮ್, ರಶೀದ್, ರಾವ್ ಮತ್ತು ಅವರ ಸಹಚರರು ನಕಲಿ ಜಿಮೇಲ್ ಐಡಿಗಳನ್ನು ಬಳಸಿಕೊಂಡು ಈ ಮ್ಯೂಲ್ ಖಾತೆಗಳನ್ನು ತೆರೆದಿದ್ದಾರೆ.

ಮ್ಯೂಲ್‌ ಖಾತೆಗೆ ಸಹಕರಿಸಬೇಡಿ

ಒಂದು ನಕಲಿ ಬ್ಯಾಂಕ್‌ ಖಾತೆ ಮಾಡಿಕೊಟ್ಟರೆ ಇಂತಿಷ್ಟು ಹಣ ನೀಡುವೆ ಎಂದು ಯಾರಾದರೂ ನಿಮ್ಮನ್ನು ಪುಸಲಾಯಿಸಬಹುದು. ಯಾರಾದರೂ ಅನಕ್ಷರಸ್ಥರು, ಅಮಾಯಕರ ದಾಖಲೆ ತೆಗೆದುಕೊಂಡು ಅವರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ಮಾಡಿಕೊಟ್ಟರೆ ಕೈತುಂಬಾ ಹಣ ಪಡೆಯಬಹುದು ಎಂಬ ಆಮಿಷ ಯಾರಾದರೂ ಒಡ್ಡಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಏಕೆಂದರೆ, ಇದರ ಹಿಂದೆ ದೊಡ್ಡ ವಂಚಕರ ಜಾಲವೇ ಇರುತ್ತದೆ.

ಈಗಿನ ಆನ್‌ಲೈನ್‌ ವಂಚನೆ, ಆನ್‌ಲೈನ್‌ ಅರೆಸ್ಟ್‌, ಲಿಂಕ್‌ ಕಳುಹಿಸುವ ಹಣ ಲಪಾಟಾಯಿಸುವಂತಹ ಆನ್‌ಲೈನ್‌ ಅಪರಾಧಗಳು ಇಂತಹ ನಕಲಿ ಬ್ಯಾಂಕ್‌ ಖಾತೆಗಳನ್ನು ಬಳಸಿಕೊಳ್ಳುತ್ತವೆ. ಹೀಗಾಗಿ, ಇಂತಹ ಹೇಸರಗತ್ತೆ ಖಾತೆಗಳನ್ನು ತೆರೆಯುವವರ ಕುರಿತು ಪೊಲೀಸರಿಗೆ ಮಾಹಿತಿ ನೀಡಿ.

Whats_app_banner