ಕನ್ನಡ ಸುದ್ದಿ  /  Karnataka  /  Discount On Traffic Fine Issue Extend Time Limit To 3 Months Jagdish V Sadam Letter To Cm Bommai

Discount on Traffic Fine: ಟ್ರಾಫಿಕ್ ದಂಡದಲ್ಲಿ ರಿಯಾಯಿತಿಗೆ ಉತ್ತಮ ಸ್ಪಂದನೆ; ಕಾಲಮಿತಿ 3 ತಿಂಗಳಿಗೆ ವಿಸ್ತರಿಸುವಂತೆ ಸಿಎಂಗೆ ಎಎಪಿ ಮನವಿ

ಸಂಚಾರ ನಿಮಯ ಉಲ್ಲಂಘಿಸಿರುವ ಪ್ರಕರಣಗಳಲ್ಲಿ ದಂಡ ಬಾಕಿ ಮೊತ್ತಕ್ಕೆ ರಿಯಾಯಿತಿ ನೀಡಿರುವ ಅವಧಿಯನ್ನು 3 ತಿಂಗಳ ವರೆಗೆ ವಿಸ್ತರಿಸಬೇಕೆಂದು ಎಎಪಿ ನಾಯಕರು ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ಆಮ್ ಆದ್ಮಿ ಪಾರ್ಟಿ
ಆಮ್ ಆದ್ಮಿ ಪಾರ್ಟಿ

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆಯ ದಂಡದ ಬಾಕಿ ಮೊತ್ತ ಪಾವತಿಗೆ ಶೇ.50 ರಷ್ಟು ರಿಯಾಯಿತಿ ನೀಡಿರುವುದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಜನರು ತಮ್ಮ ವಾಹನಗಳ ಮೇಲಿನ ದಂಡದ ಬಾಕಿ ಮೊತ್ತವನ್ನು ಪಾವತಿಸುತ್ತಿದ್ದಾರೆ.

ಶುಕ್ರವಾರ ಮತ್ತು ಶನಿವಾರ ಈ ಎರಡು ದಿನಗಳಲ್ಲಿ ರಾಜ್ಯದಾದ್ಯಂತ ಒಟ್ಟು 14.6 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದ್ದರೆ, ಬೆಂಗಳೂರಿನಲ್ಲಿ 6.8 ಕೋಟಿ ರೂಪಾಯಿಗಳ ದಂಡ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. ಸಂಚಾರಿ ನಿಮಯ ಉಲ್ಲಂಘನೆಯ ದಂಡ ಪಾವತಿ ಅವಧಿಯನ್ನು ವಿಸ್ತರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಎಎಪಿ ನಾಯಕರಿಂದ ಸಿಎಂ ಬೊಮ್ಮಾಯಿಗೆ ಮನವಿ

ಶೇ.50 ರಷ್ಟು ವಿನಾಯಿತಿಯ ಕಾಲಮಿತಿಯನ್ನು ಮೂರು ತಿಂಗಳಿಗೆ ವಿಸ್ತರಿಸಬೇಕೆಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದ ಜಗದೀಶ್‌ ವಿ ಸದಂ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸಿನಂತೆ, ವಾಹನ ಸವಾರರು ಬಾಕಿ ಉಳಿಸಿಕೊಂಡಿರುವ ದಂಡವನ್ನು ಫೆಬ್ರವರಿ 11ರೊಳಗೆ ಪಾವತಿಸಿದಲ್ಲಿ ಶೇ. 50 ರಷ್ಟು ವಿನಾಯಿತಿ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗೆ ವಿನಾಯಿತಿ ನೀಡುವ ಮೂಲಕ ವಾಹನಸವಾರರಿಗೆ ನೆರವಾಗುವುದು ಸ್ವಾಗತಾರ್ಹ. ಆದರೆ ಅತ್ಯಲ್ಪ ಅವಧಿಯ ಕಾಲಮಿತಿ ನಿಗದಿಪಡಿಸುವ ಮೂಲ ಕೇವಲ ಶ್ರೀಮಂತ ವಾಹನ ಸವಾರರಿಗೆ ಮಾತ್ರ ನೆರವಾಗಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಕೇವಲ ಒಂದು ವಾರಗಳ ಸಮಯಾವಕಾಶ ನೀಡುವುದರಿಂದ ಬಡ ಮತ್ತು ಮಧ್ಯಮ ವರ್ಗದ ವಾಹನ ಸವಾರರಿಗೆ ಹಣ ಹೊಂದಿಸಲು ಕಷ್ಟವಾಗುತ್ತದೆ. ಅಲ್ಲದೇ, ಅನೇಕ ವಾಹನ ಸವಾರರು ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಸುವುದು ಸೇರಿದಂತೆ ನಾನಾ ರೀತಿಯ ಅಗತ್ಯ ಖರ್ಚುಗಳು ಈ ಸಮಯದಲ್ಲಿರುತ್ತದೆ. ವಿನಾಯಿತಿಯನ್ನು ಯೋಜನೆಯನ್ನು ದಿಢೀರ್‌ ಘೋಷಿಸಿರುವುದರಿಂದ ಮೊದಲೇ ಹಣವನ್ನು ಕೂಡಿಟ್ಟುಕೊಳ್ಳಲೂ ವಾಹನ ಸವಾರರಿಗೆ ಅವಕಾಶ ಸಿಕ್ಕಿರುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಯವರು ಈ ವಿನಾಯಿತಿ ಯೋಜನೆಯ ಕಾಲಮಿತಿಯನ್ನು ಮೂರು ತಿಂಗಳ ತನಕ ವಿಸ್ತರಿಸಬೇಕು. ಈ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಾಹನ ಸವಾರರಿಗೂ ವಿನಾಯಿತಿಯ ಫಲಾನುಭವ ಸಿಗುವಂತೆ ಮಾಡಬೇಕು ಎಂದು ಜಗದೀಶ್‌ ವಿ ಸದಂ ಕೋರಿದ್ದಾರೆ.

ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ಬಾಕಿ ದಂಡ ಪಾವತಿಗೆ ರಾಜ್ಯ ಸರಕಾರವು ಶೇಕಡ 50ರಷ್ಟು ವಿನಾಯಿತಿ ಪ್ರಕಟಿಸಿದ್ದರಿಂದ ಕಳೆದ ಎರಡು ದಿನಗಳಲ್ಲಿ ಭರ್ಜರಿ ದಂಡ ಸಂಗ್ರಹವಾಗಿದೆ. ನಿನ್ನೆ ಒಂದೇ ದಿನ 2.52 ಲಕ್ಷ ವಾಹನಗಳಿಂದ 6.80 ಕೋಟಿ ರೂ. ದಂಡ ಸಂಗ್ರಹವಾಗಿದೆ. ಎರಡು ದಿನಗಳಲ್ಲಿ ಒಟ್ಟು 14.6 ಕೋಟಿ ರೂ. ದಂಡ ಸಂಗ್ರಹವಾಗಿದೆ.

44 ಬಗೆಯ ಎಲ್ಲಾ ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ವಿನಾಯಿತಿ ನೀಡಲಾಗಿತ್ತು. ಹೀಗಾಗಿ, ರಾಜ್ಯದಾದ್ಯಂತ ವಾಹನ ಸವಾರರು ತಮ್ಮ ವಾಹನಗಳ ಮೇಲೆ ವಿಧಿಸಲಾಗಿರುವ ದಂಡ ಪಾವತಿಗೆ ಮುಗಿ ಬಿದ್ದಿದ್ದಾರೆ. ಡಿಜಿಟಲ್‌ ಪಾವತಿ ಅನುಭವ ಇರುವವರು ಪೇಟಿಎಂ ಇತ್ಯಾದಿಗಳಲ್ಲಿ ಹಣ ಪಾವತಿಸಿದರೆ ಉಳಿದವರು ಸಂಚಾರ ಪೊಲೀಸರ ಮೂಲಕ, ಟ್ರಾಫಿಕ್‌ ಪೊಲೀಸ್‌ ಕಚೇರಿಗಳ ಮೂಲಕ ಸರತಿಯಲ್ಲಿ ನಿಂತು ದಂಡ ಪಾವತಿಸಿದ್ದಾರೆ.

ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸಿನ ಮೇರೆಗೆ ದಂಡದ ಮೊತ್ತದಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಫೆಬ್ರವರಿ 11ರವರೆಗೆ ಮಾತ್ರ ಈ "ಆಫರ್‌" ಇರಲಿದೆ. ರಿಯಾಯಿತಿ ಆರಂಭಗೊಂಡ ‌ಮೊದಲ ದಿನದಂದು 5.6 ಕೋಟಿ ಸಂಗ್ರಹವಾಗಿತ್ತು. ಎರಡನೇ ದಿನ ಬೆಂಗಳೂರಿನಲ್ಲಿ 6,80,72,500 ರೂಪಾಯಿ ದಂಡ ಸಂಗ್ರಹವಾಗಿದೆ.

IPL_Entry_Point