ಜಾತಿ ಗಣತಿ ವರದಿ ಕುರಿತು ಚರ್ಚೆ: ಹುತ್ತಕ್ಕೆ ಕೈ ಹಾಕಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ? ಮತ್ತೆ ವೀರಶೈವ ಒಕ್ಕಲಿಗರ ಹೋರಾಟ ಖಚಿತ?
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಕುರಿತು ಚರ್ಚೆ ನಡೆಯಲಿದೆ. ಹುತ್ತಕ್ಕೆ ಕೈ ಹಾಕಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ? ಮತ್ತೆ ವೀರಶೈವ ಒಕ್ಕಲಿಗರ ಹೋರಾಟ ಖಚಿತವೇ? ಇಲ್ಲಿದೆ ವಿವರ. (ವರದಿ-ಎಚ್.ಮಾರುತಿ)

ಬೆಂಗಳೂರು: ಮುಡಾ ಹಗರಣದ ನಡುವೆಯೇ ಜಾತಿ ಗಣತಿ ವರದಿಯನ್ನು ಕುರಿತು ಚರ್ಚಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ. ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ವರದಿಯು ಜನಸಾಮಾನ್ಯರ ನಡುವೆ ಜಾತಿ ವರದಿ ಎಂದೇ ಕರೆಯಲ್ಪಡುತ್ತಿದ್ದು, ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಜಾತಿ ಗಣತಿ ವರದಿಯನ್ನು ಜಾರಿಗೊಳಿಸಬೇಕೆಂದು ವೀರಶೈವ ಮತ್ತು ಒಕ್ಕಲಿಗರನ್ನು ಹೊರತುಪಡಿಸಿ ಉಳಿದೆಲ್ಲಾ ಜಾತಿಗಳು ಆಗ್ರಹಿಸುತ್ತಲೇ ಬಂದಿವೆ. ಸರ್ಕಾರವೂ ಇಂದು ನಾಳೆ ಎಂದು ಸಬೂಬು ಹೇಳುತ್ತಲೇ ಬರುತ್ತಿದೆ. ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಭೆಯೊಂದರಲ್ಲಿ ಮುಖ್ಯಮಂತ್ರಿಗಳು ಜಾತಿ ಗಣತಿ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಮತ್ತೆ ಜಾತಿ ಗಣತಿ ಜಾರಿ ಕುರಿತು ಭರವಸೆ ನೀಡಿರುವ ಅವರು ಯಾವುದೇ ಕಾಲಮಿತಿ ಹಾಕಿಕೊಂಡಿಲ್ಲ ಎಂದು ಹೇಳಿರುವುದು ಪ್ರಶ್ನಾರ್ಹವಾಗಿದೆ. 3 ದಿನಗಳ ಹಿಂದೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿಎಸ್ ದ್ವಾರಕಾನಾಥ್, ರವಿವರ್ಮ ಕುಮಾರ್, ಎಚ್ ಕಾಂತರಾಜ್ ಮತ್ತು ಜಯಪ್ರಕಾಶ್ ಹೆಗಡೆ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಜಾತಿ ಗಣತಿ ಜಾರಿಗೊಳಿಸುವಂತೆ ಆಗ್ರಹಪಡಿಸಿದ್ದರು. ಇತರೆ ಹಿಂದುಳಿದ ವರ್ಗಗಳ ಮುಖಂಡರು, ಶಾಸಕರು ನಿರಂತರವಾಗಿ ಆಗ್ರಹಪಡಿಸುತಲೇ ಬಂದಿದಾರೆ. ಕಳೆದ ಗುರುವಾರ ಹಿಂದುಳಿದ ವರ್ಗಗಳ ಸಚಿವರು, ಶಾಸಕರು ಸಭೆ ಸೇರಿ ಈ ವರದಿ ಜಾರಿಗೊಳಿಸುವ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲು ಸಭೆ ನಡೆಸಿದ್ದರು.
ಆಯೋಗವು ಈ ವರ್ಷದ ಫೆಬ್ರುವರಿಯಲ್ಲಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ವರದಿ ನೆನೆಗುದಿಗೆ ಬಿದ್ದಿತ್ತು. ಈ ವರದಿ ಕುರಿತು ಹೇಳಿಕೆ ನೀಡಿದರೆ ಚುನಾವಣೆಯಲ್ಲಿ ಹಿನ್ನೆಲೆ ಅನುಭವಿಸಬೇಕಾದೀತು ಎಂಬ ಆತಂಕವೂ ಸರ್ಕಾರಕ್ಕಿತ್ತು. ಈ ವರದಿಯ ಸೋರಿಕೆಯ ಅಂಶಗಳ ಪ್ರಕಾರ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಜನಸಂಖ್ಯೆ ಕಡಿಮೆಯಾಗಲಿದ್ದು, ಅಹಿಂದ ವರ್ಗಗಳ ಜನಸಂಖ್ಯೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಪ್ರಬಲ ಸಮುದಾಯಗಳ ಮುಖಂಡರು, ಮಠಾಧೀಶರು, ಶಾಸಕರು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿಯೂ ಜಾರಿ ಮಾಡದಂತೆ ಪ್ರತಿಭಟನೆ ನಡೆಸಲಾಗಿತ್ತು. ಇದೀಗ ಸರ್ಕಾರ ವರದಿಯನ್ನು ಕುರಿತು ಚರ್ಚೆ ನಡೆಸಲು ಮುಂದಾಗಿದೆ. 2014-17ರ ಅವಧಿಯಲ್ಲಿ ರಾಜ್ಯ ಸರ್ಕಾರ ಈ ಸಮೀಕ್ಷೆಯನ್ನು ನಡೆಸಿತ್ತು. ಆಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿದ್ದರು ಎನ್ನುವುದು ಗಮನಾರ್ಹ.
ಲಿಂಗಾಯತ, ಒಕ್ಕಲಿಗರ ಆರೋಪ ಏನು?
ತಮ್ಮ ಜನಸಂಖ್ಯೆಯನ್ನು ಕಡಿಮೆಗೊಳಿಸಲಾಗಿದೆ ಎನ್ನುವುದು ಲಿಂಗಾಯತ ಮತ್ತು ಒಕ್ಕಲಿಗರ ಆರೋಪವಾಗಿದೆ. 1.15 ಕೋಟಿಯಷ್ಟಿರುವ ವೀರಶೈವ ಲಿಂಗಾಯತರ ಜನಸಂಖ್ಯೆಯನ್ನು 73 ಲಕ್ಷಕ್ಕೆ ಮತ್ತು 90 ಲಕ್ಷದಷ್ಟಿದ್ದ ಒಕ್ಕಲಿಗರನ್ನು 70 ಲಕ್ಷಕ್ಕೆ ಇಳಿಸಲಾಗಿದೆ ಎಂಬ ಆರೋಪವಿದೆ. ಜಾತಿ ಗಣತಿಯ ವರದಿಯ ಪ್ರಕಾರ ಪರಿಶಿಷ್ಟ ಜಾತಿಯ ಜನಸಂಖ್ಯೆ 1.08 ಕೋಟಿ, ಪರಿಶಿಷ್ಟ ಪಂಗಡ (42 ಲಕ್ಷ); ಮುಸಲ್ಮಾನ(75 ಲಕ್ಷ); ಕುರುಬ (45 ಲಕ್ಷ); ಮರಾಠಾ (16 ಲಕ್ಷ); ಈಡಿಗ (14 ಲಕ್ಷ); ಬ್ರಾಹ್ಮಣ (15 ಲಕ್ಷ); ಕ್ರೈಸ್ತ (12 ಲಕ್ಷ); ವಿಶ್ವಕರ್ಮ (15 ಲಕ್ಷ); ಬೆಸ್ತ (14.5 ಲಕ್ಷ); ಯಾದವ (10.5ಲಕ್ಷ) ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಈ ವರದಿ ಜಾರಿಯಾದರೆ ವೀರಶೈವರು 4ನೇ ಸ್ಥಾನಕ್ಕೆ ಮತ್ತು ಒಕ್ಕಲಿಗರು 5ನೇ ಸ್ಥಾನಕ್ಕೆ ಕುಸಿಯುವ ಅಪಾಯವಿದೆ. ಎಂಬ ಆತಂಕವಿದೆ. ಭವಿಷ್ಯದಲ್ಲಿ ಲೋಕಸಭೆ, ವಿಧಾನಸಭೆ, ಮತ್ತು ಪಂಚಾಯಿತಿ ಚುನಾವಣೆಗಳಲ್ಲಿ, ಸದಸ್ಯ ಸ್ಥಾನಗಳ ಸಂಖ್ಯೆ ಕಡಿಮೆಯಾಗಲಿದೆ ಎಂಬ ಭಯವೂ ಇಲ್ಲದಿಲ್ಲ. ಈ ಕ್ಷಣದವರೆಗೂ ರಾಜ್ಯದ ಜನಸಂಖ್ಯೆಯಲ್ಲಿ ವೀರಶೈವರು ಮೊದಲ ಮತ್ತು ಒಕ್ಕಲಿಗರು ಎರಡನೇ ಸ್ಥಾನದಲ್ಲಿದಾರೆ ಎಂಬ ನಂಬಿಕೆ ಇದೆ. ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಈ ಎರಡೂ ಸಮುದಾಯಗಳು ಪ್ರಬಲ ಹಿಡಿತ ಹೊಂದಿವೆ. ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೇನುಗೂಡಿಗೆ ಕೈ ಹಾಕಿದ್ದಾರೆ. ವರದಿಯನ್ನು ಜಾರಿ ಮಾಡಿದರೆ ಪ್ರಬಲ ಸಮುದಾಯಗಳ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಈ ಹಿಂದೆ ವೀರೇಂದ್ರ ಪಾಟೀಲರನ್ನು ಸಿಎಂ ಹುದ್ದೆಯಿಂದ ಅಮಾನವೀಯವಾಗಿ ಕೆಳಗಿಳಿಸಿದ್ದಕ್ಕೆ ಇಂದಿಗೂ ಕಾಂಗ್ರೆಸ್ ವೀರಶೈವ ಸಮುದಾಯದ ಕೋಪದಿಂದ ಹೊರ ಬಂದಿಲ್ಲ.
ವರದಿಯನ್ನು ಜಾರಿಗೊಳಿಸದಿದ್ದರೆ ಅಹಿಂದ ವರ್ಗಗಳ ಆಕ್ರೋಶ ಹೆಚ್ಚಾಗುತ್ತದೆ. ತಮ್ಮ ಪರಮೋಚ್ಚ ನಾಯಕ ಎಂದು ಈ ವರ್ಗಗಳು ಸಿದ್ಧರಾಮಯ್ಯ ಅವರನ್ನು ಒಪ್ಪಿಕೊಂಡಿವೆ. ವರದಿ ಜಾರಿಯಾಗದಿದ್ದರೆ ಅವರ ನಾಯಕತ್ವ ಹುಸಿ ಎಂದು ಬಿಂಬಿತವಾಗುತ್ತದೆ. ಇಲ್ಲಿ ಸಿದ್ದರಾಮಯ್ಯ ಅವರಿಗಿಂತ ಪಕ್ಷವೇ ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ. ಮುಡಾ, ಜಾತಿ ಗಣತಿ ವರದಿ, ಒಳ ಮೀಸಲಾತಿ ಜಾರಿ ಸಿದ್ಧರಾಮಯ್ಯ ಅವರಿಗೆ ಅಗ್ನಿ ಪರೀಕ್ಷೆಯನ್ನೊಡ್ಡಿವೆ. ಮತ್ತೊಂದು ಕಡೆ ತಮ್ಮದೇ ಪಕ್ಷದೊಳಗೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಎಲ್ಲವನ್ನೂ ಹೇಗೆ ನಿಭಾಯಿಸಲಿದ್ದಾರೆ ಎನ್ನುವುದು ಕುತೂಹಲಕಾರಿಯಾಗಿದೆ.
