ಸ್ಮಾರ್ಟ್ ಮೀಟರ್ ಅಳವಡಿಕೆ ಅವಧಿ ವಿಸ್ತರಣೆಗೆ ಚರ್ಚೆ, ಜೂನ್ ಅಂತ್ಯದೊಳಗೆ ಲೈನ್‌ಮನ್ ನೇಮಕ ಎಂದ ಇಂಧನ ಸಚಿವ ಕೆಜೆ ಜಾರ್ಜ್
ಕೇಂದ್ರ ಸರ್ಕಾರವು ಸ್ಮಾರ್ಟ್ ಮೀಟರ್ ಅಳವಡಿಸುವುದಕ್ಕೆ ಆಗಸ್ಟ್ ತಿಂಗಳ ಗಡುವು ನೀಡಿದ್ದು, ಅವಧಿ ವಿಸ್ತರಣೆಗೆ ಚರ್ಚೆ ನಡೆಸಲಾಗುವುದು. ಅದೇ ರೀತಿ ಜೂನ್ ಅಂತ್ಯದೊಳಗೆ 3000 ಲೈನ್‌ಮನ್‌ಗಳ ನೇಮಕ ಮಾಡಲಾಗುತ್ತದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ರಾಮನಗರದಲ್ಲಿ ತಿಳಿಸಿದರು.

ರಾಮನಗರ: ಕೇಂದ್ರ ಸರ್ಕಾರವು ಆಗಸ್ಟ್ ತಿಂಗಳೊಳಗೆ ಎಲ್ಲಾ ಕಡೆ ಸ್ಮಾರ್ಟ್ ಮೀಟರ್ ಅಳವಡಿಸುವಂತೆ ಸೂಚಿಸಿರುವುದರಿಂದ ರಾಜ್ಯಕ್ಕೆ ಪರಿಷ್ಕೃತ ವಿತರಣಾ ವಲಯ ಯೋಜನೆ (ಆರ್ ಡಿಎಸ್ಎಸ್) ವಿಸ್ತರಿಸುವ ಕುರಿತು ಕೇಂದ್ರ ಸಚಿವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಆಗಸ್ಟ್ ತಿಂಗಳೊಳಗೆ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಕಟ್ಟರ್ ಅವರು ಸೂಚಿಸಿದ್ದಾರೆ. ಈ ಹಿಂದೆ ಆರ್ ಡಿಎಸ್ ಯೋಜನೆಯಡಿ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರತಿ ಮೀಟರ್ ಗೆ 900 ರೂ. ಸಬ್ಸಿಡಿ ನೀಡುತ್ತಿತ್ತು. ಆದರೆ, ಈಗ ಆ ಯೋಜನೆ ಇಲ್ಲ. ಹೀಗಾಗಿ ಆರ್‌ಡಿಎಸ್ ಯೋಜನೆ ವಿಸ್ತರಿಸುವಂತೆ ಕೇಂದ್ರ ಸಚಿವರನ್ನು ಮನವಿ ಮಾಡಿದ್ದೆ. ದೆಹಲಿಗೆ ಬಂದರೆ ಈ ಕುರಿತು ಚರ್ಚಿಸೋಣ ಎಂದಿದ್ದರು. ಅದರಂತೆ ಶೀಘ್ರವೇ ದೆಹಲಿಗೆ ತೆರಳಿ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ", ಎಂದು ತಿಳಿಸಿದರು.
"ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ 2021-22ನೇ ಸಾಲಿನಲ್ಲಿ ಸೂಚಿಸಿತ್ತು. ಅದಕ್ಕೆ ಪೂರಕವಾಗಿ ಆರ್ ಡಿಎಸ್ ಯೋಜನೆ ಜಾರಿಗೊಳಿಸಿತ್ತು. ಆದರೆ, ರಾಜ್ಯ ಸರ್ಕಾರಗಳು ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಾಕಿ ಇರುವ ಸಬ್ಸಿಡಿ, ಇತರೆ ಬಾಕಿಗಳನ್ನು ಪಾವತಿಸಿದರೆ ಮಾತ್ರ ಯೋಜನೆಯ ಅನುಕೂಲ ಪಡೆದುಕೊಳ್ಳಬಹುದು ಎಂದು ಹೇಳಿತ್ತು.ಹೀಗಾಗಿ ರಾಜ್ಯ ಸರ್ಕಾರ ಈ ಯೋಜನೆ ಒಪ್ಪಿಕೊಂಡಿರಲಿಲ್ಲ. ಇದೀಗ ಷರತ್ತುಗಳಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು", ಎಂದರು.
"ಪ್ರಸ್ತುತ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆದೇಶದಂತೆ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಹಾಲಿ ಸಂಪರ್ಕಗಳಿಗೆ ಐಚ್ಛಿಕಗೊಳಿಸಲಾಗಿದೆ. ಬೇಕಿದ್ದವರು ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬಹುದು," ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೂನ್ ಅಂತ್ಯದೊಳಗೆ ಲೈನ್ ಮೆನ್ ನೇಮಕ
"ರಾಜ್ಯದಲ್ಲಿ 3000 ಲೈನ್ ಮೆನ್ ಗಳ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ದೈಹಿಕ ತರಬೇತಿ ನಡೆಯುತ್ತಿದೆ. ಜೂನ್ ಅಂತ್ಯದೊಳಗೆ ಎಲ್ಲರಿಗೂ ಸ್ಥಳ ನಿಯುಕ್ತಿ ಮಾಡಿ ನೇಮಕಾತಿ ಆದೇಶ ಹೊರಡಿಸಲಾಗುವುದು", ಎಂದು ಹೇಳಿದರು.
"ಮಳೆಗಾಲ ಈಗಾಗಲೇ ಆರಂಭವಾಗಿರುವುದರಿಂದ ಯಾವುದೇ ಸಮಸ್ಯೆ ಎದುರಾದರೂ ತಕ್ಷಣ ಬಗೆಹರಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವುದರ ಜತೆಗೆ ಹೆಚ್ಚುವರಿ ಸಲಕರಣೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಈಗಾಗಲೇ ಸೂಚಿಸಲಾಗಿದೆ. ಜೂನ್ ಅಂತ್ಯದ ವೇಳೆ ಲೈನ್ ಮೆನ್ ಗಳ ನೇಮಕವೂ ಆಗುವುದರಿಂದ ಮಳೆ- ಗಾಳಿಯಿಂದ ಹೆಚ್ಚು ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಹಾಯವಾಗಲಿದೆ", ಎಂದರು.
ಕುಸುಮ್-ಸಿ ಅಡಿ 117 ಮೆ.ವ್ಯಾ. ವಿದ್ಯುತ್
"ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಲ್ಲಿ ಕುಸುಮ್-ಸಿ ಯೋಜನೆಯಡಿ ಕೃಷಿ ಫೀಡರ್ ಗಳ ಸೋಲರೈಸೇಷನ್ ಮೂಲಕ 117 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 21 ಸ್ಥಳಗಳನ್ನು ಗುರುತಿಸಲಾಗಿದ್ದು, 156 ಕಡೆ ಈಗಾಗಲೇ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಸೂಕ್ತ ಭೂಮಿ ಸಿಗದಿದ್ದಲ್ಲಿ ಕೆರೆ ಅಂಗಳದಲ್ಲೂ ಕುಸುಮ್-ಸಿ ಯೋಜನೆಯಡಿ ಸೋಲಾರ್ ಫಲಕಗಳನ್ನು ಅಳವಡಿಸಲಾಗುವುದು", ಎಂದು ತಿಳಿಸಿದರು.
“ಜಿಲ್ಲೆಯ ಅರಣ್ಯ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ರಾತ್ರಿ ವೇಳೆ ವನ್ಯ ಜೀವಿಗಳ ಹಾವಳಿ ಎದುರಾಗುತ್ತದೆ. ಹೀಗಾಗಿ ರೈತರ ಪಂಪ್ ಸೆಟ್ ಗಳಿಗೆ ಹಗಲು ವೇಳೆ 7 ಗಂಟೆ ವಿದ್ಯುತ್ ಒದಗಿಸುವಂತೆ ಸ್ಥಳಿಯ ಶಾಸಕರು ಮನವಿ ಮಾಡಿಕೊಂಡಾಗ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಹಗಲು ವೇಳೆ 7 ಗಂಟೆ ವಿದ್ಯುತ್ ಒದಗಿಸಲು ಆದೇಶ ಹೊರಡಿಸಿದ್ದು, ಅದರಂತೆ ಕಾರ್ಯ ನಿರ್ವಹಣೆ ನಡೆಯುತ್ತಿದೆ. ತಾಂತ್ರಿಕ ಸಮಸ್ಯೆ ಇದ್ದರೆ ಮಾತ್ರ ಅಂತಹ ಪ್ರದೇಶಗಳಲ್ಲಿ ರಾತ್ರಿ ವೇಳೆ ವಿದ್ಯುತ್ ಒದಗಿಸಲಾಗುವುದು” ಎಂದು ಹೇಳಿದರು.