BJP Ticket: ಬಿಜೆಪಿಯಲ್ಲಿ ಟಿಕೆಟ್ ವಂಚಿತರ ಬಿರುಗಾಳಿ; ಈ ನಾಯಕರಿಂದ ಕೇಸರಿ ಪಕ್ಷಕ್ಕೆ ಬೀಳುತ್ತಾ ಹೊಡೆತ?
ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ವಂಚಿತರ ಭಿನ್ನಾಭಿಪ್ರಾಯದ ಬಿರುಗಾಳಿ ಎದ್ದಿದ್ದು, ಕೆಲವರು ರಾಜಕೀಯ ನಿವೃತ್ತಿ ಘೋಷಿಸಿದರೆ, ಮತ್ತೆ ಕೆಲವರು ಪಕ್ಷದ ವಿರುದ್ಧವೇ ರೆಬಲ್ ಆಗ್ತಿದ್ದಾರೆ.
ಬೆಂಗಳೂರು: ಭಾರತೀಯ ಜನತಾ ಪಕ್ಷವು (Bharatiya Janata Party) ರಾಜ್ಯ ವಿಧಾನಸಭೆ ಚುನಾವಣೆಗೆ (Assembly election) ಕಳೆದ ಮಂಗಳವಾರ ಮತ್ತು ಬುಧವಾರ ಕ್ರಮವಾಗಿ 189 ಮತ್ತು 23 ಅಭ್ಯರ್ಥಿಗಳನ್ನು ಒಳಗೊಂಡಿರುವ ತನ್ನ ಮೊದಲ ಮತ್ತು ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನ ಘೋಷಿಸಿದೆ. ಆದರೆ ಕೆಲವು ಹಾಲಿ, ಮಾಜಿ ಶಾಸಕರುಗಳಿಗೆ ನಿರೀಕ್ಷೆಯಿಂತೆ ಈ ಬಾರಿ ಟಿಕೆಟ್ ನೀಡಿಲ್ಲ.
ಹೈಕಮಾಂಡ್ ನಿರ್ಧಾರಕ್ಕೆ ಬೆಳಗಾವಿ ಸೇರಿದಂತೆ ಕೆಲವೆಡೆ ಕೇಸರಿ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿದ್ದು, ರಾಜ್ಯ ನಾಯಕರ ವಿರುದ್ಧವಂತು ಕೊತ ಕೊತ ಅಂತ ಕುದಿಯುತ್ತಿದ್ದಾರೆ.
ಏಪ್ರಿಲ್ 11 ರಂದು ರಾತ್ರಿ ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ ಹಾಲಿ ಸಚಿವ ಎಸ್ ಅಂಗಾರ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಉಡುಪಿ ಶಾಸಕ ರಘುಪತಿ ಭಟ್, ಹಾವೇರಿ ಶಾಸಕ ನೆಹರೂ ಓಲೇಕಾರ, ಗೂಳಿಹಟ್ಟಿ ಶೇಖರ್, ಬಿಜೆಪಿ ಎಂಎಲ್ಸಿ ಆರ್ ಶಂಕರ್ ಸೇರಿದಂತೆ ಹಲವರು ಟಿಕೆಟ್ ನೀಡಿಲ್ಲ.
ಬಿಎಸ್ ಯಡಿಯೂರಪ್ಪ ಆಪ್ತ ಹಾಗೂ ಅರಸೀಕೆರೆ ಟಿಕೆಟ್ ಆಕಾಂಕ್ಷಿ ಎನ್ ಆರ್ ಸಂತೋಷ್, ಫಲಾನುಭವಿಗಳ ಪ್ರಕೋಷ್ಟದ ಸದಸ್ಯ, ಮಾಲೂರಿನ ಟಿಕೆಟ್ ಆಕಾಂಕ್ಷಿಯಾಗಿದ್ದ ಹೂಡಿ ವಿಜಯ್ ಕುಮಾರ್ ಗೂ ಟಿಕೆಟ್ ಸಿಕ್ಕಿಲ್ಲ. ಈ ಎಲ್ಲಾ ನಾಯಕರು ಆಕ್ರೋಶಗೊಂಡಿದ್ದಾರೆ. ಇನ್ನ ಟಿಕೆಟ್ ವಂಚಿತರು ಯಾವೆಲ್ಲಾ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಅಂತ ನೋಡೊದಾದ್ರೆ ಉಡುಪಿ ಶಾಸಕ ರಘುಪತಿ ಭಟ್ ಅವರನ್ನು ಸಮಾಧಾನ ಪಡಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅಥಣಿ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಲಕ್ಷ್ಮಣ್ ಸವದಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷ ತೊರೆದಿದ್ದಾರೆ. ಲಕ್ಷ್ಮಣ್ ಸವದಿ ಅವರು ಇಂದು ತಮ್ಮ ನಿರ್ಧಾರವನ್ನ ತಿಳಿಸೋದಾಗಿ ಹೇಳಿದ್ದಾರೆ. ಹಾವೇರಿ ಶಾಸಕ ನೆರಹೂ ಓಲೇಕಾರ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಜೆಡಿಎಸ್ ನಿಂದ ಸ್ಪರ್ಧಿಸುವ ಸಾಧ್ಯತೆ ಇದೆ.
ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಕೂಡ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಇವರು ಕೂಡ ಜೆಡಿಎಸ್ ನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಯಡಿಯೂರಪ್ಪ ಅವರ ಆಪ್ತ ಎನ್ ಆರ್ ಸಂತೋಷ್ ಪಕ್ಷೇತರ ಅಭ್ಯರ್ಥಿಯಾಗಿ ಅರಸೀಕೆರೆಯಿಂದ ಸ್ಪರ್ಧಿಸೋದಾಗಿ ಘೋಷಣೆ ಮಾಡಿದ್ದಾರೆ.
ಆರು ಬಾರಿ ಶಾಸಕರಾಗಿದ್ದ ಹಾಲಿ ಸಚಿವ ಎಸ್ ಅಂಗಾರ ಅವರಿಗೆ ಟಿಕೆಟ್ ಸಿಕ್ಕಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದಲ್ಲಿ ಇವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಕಳೆದ ಬುಧವಾರ ಇವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಬಿಜೆಪಿ ಎಂಎಲ್ಸಿ ಆರ್ ಶಂಕರ್ ಅವರು ವಿಧಾನ ಪರಿಷತ್‌ಗೆ ರಾಜೀನಾಮೆ ನೀಡಿದರು. 2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನ ಪತನಗೊಳಿಸಿ ಬಿಜೆಪಿ ಸರ್ಕಾರ ಬರಲು ಸಹಾಯ ಮಾಡಿದ 17 ಶಾಸಕರಲ್ಲಿ ಆರ್ ಶಂಕರ್ ಕೂಡ ಒಬ್ಬರು. ಶಂಕರ್ ರಾಣೆಬೆನ್ನೂರಿನಿಂದ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದರು. ಆದರೆ ಅರುಣ್ ಕುಮಾರ್ ಪೂಜಾರ್ ಅವರಿಗೆ ಬಿಜೆಪಿ ಇಲ್ಲಿ ಮಣೆಹಾಕಿದೆ.
ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಬುಧವಾರ ಘೋಷಿಸಿದ್ದು, ತಮಗೆ ಟಿಕೆಟ್ ಸಿಗದಿರುವುದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರೇ ನೇರಕಾರಣ ಅಂತ ಆರೋಪಿಸಿದ್ದಾರೆ.
ಇತ್ತ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ಹೂಡಿ ವಿಜಯ ಕುಮಾರ್ ಅವರಿಗೆ ಟಿಕೆಟ್ ಕೈತಪ್ಪಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ವಲಸೆ ಬಂದಿದ್ದ ಮಂಜುನಾಥ ಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
224 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಎರಡು ಹಂತಗಳಲ್ಲಿ 212 ಅಭ್ಯರ್ಥಿಗಳನ್ನು ಘೋಷಿಸಿದ್ದು, ತನ್ನ ಮೊದಲ ಪಟ್ಟಿಯಲ್ಲಿ 52 ಮಂದಿ ಹೊಸಬರಿಗೆ ಟಿಕೆಟ್ ನೀಡಿದೆ.