Coastal Deepavali: ಕರಾವಳಿಯಲ್ಲಿ ತುಳುವರ ದೀಪಾವಳಿ ಪರ್ಬದ ಆಚರಣೆ ಹೇಗೆ? ಕೂ ಬಲಿಯೇಂದ್ರ ಕೂ...!
ವಿಷ್ಣುವು ವಾಮನನಾಗಿ ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ದಿನವಾಗಿರುವುದರಿಂದ, ದೀಪಾವಳಿ ಹಬ್ಬದಂದು ಒಂದು ದಿನ ಆತನಿಗೆ ಭೂಲೋಕಕ್ಕೆ ಆಗಮಿಸಲು ವರವಿರುವುದರಿಂದ ಅಂದು ಬಲಿಯೇಂದ್ರ ಬರುವುದನ್ನು ದೀಪಾವಳಿ ಸಂಭ್ರಮವಾಗಿ ತುಳುವರು ಸ್ವಾಗತಿಸುತ್ತಾರೆ.
ನಾಡಿನೆಲ್ಲೆಡೆ ದೀಪಾವಳಿ ಹಬ್ಬವು ಬೆಳಕಿನ ಹಬ್ಬವಾಗಿ ಆಚರಿಸಲಾಗುತ್ತದೆ. ಎಲ್ಲೆಡೆ "ಬೆಳಕುʼʼ ಪ್ರಮುಖ ಪಾತ್ರವಹಿಸಿದರೂ ದೀಪಾವಳಿಯ ಆಚರಣೆಯಲ್ಲಿ ಭಿನ್ನತೆ, ವಿಶೇಷತೆಗಳು ಇರುತ್ತವೆ. ಕರ್ನಾಟಕದ ನಾನಾ ಕಡೆಗಳಲ್ಲಿ ನಾನಾ ರೀತಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿಯೂ ದೀಪಾವಳಿ ಆಚರಣೆ ಬೇರೆ ರೀತಿ ಇರುತ್ತದೆ. ವಿಶೇಷವಾಗಿ ಭಾರತದಲ್ಲಿ ದೀಪಾವಳಿ ಆಚರಿಸಿದರೆ ತುಳುವರು "ಪರ್ಬʼʼ ಆಚರಿಸುತ್ತಾರೆ. ತುಳುವಿನ ಪರ್ಬಕ್ಕೆ ಕನ್ನಡದಲ್ಲಿ ಹಬ್ಬ ಎಂಬ ಅರ್ಥವಿದೆ.
ಕರಾವಳಿಗರು ಮುಖ್ಯವಾಗಿ ಪ್ರಕೃತಿ ಆರಾಧಕರು. ಇತ್ತೀಚೆಗೆ ಬಿಡುಗಡೆಗೊಂಡ ಕಾಂತಾರ ಸಿನಿಮಾ ನೋಡಿದವರಿಗೆ ತುಳವರು ಪ್ರಕೃತಿ ಜತೆಗೆ ಯಾವ ರೀತಿಯ ಸಂಬಂಧ ಹೊಂದಿದ್ದಾರೆ ಎನ್ನುವುದು ಅರ್ಥವಾಗಿರಬಹುದು. ದೀಪಾವಳಿ ಹಬ್ಬದ ಸಮಯದಲ್ಲಿ ಕೃಷಿಯ ಜತೆಗೆ ಹಬ್ಬವನ್ನು ಆಚರಿಸುವುದು ಸಾಮಾನ್ಯ. ಕಾಡಿನ ನಿರ್ದಿಷ್ಟ ಮರವೊಂದರ (ಹಾಲೆ ಮರದ ) ರೆಂಬೆಯಲ್ಲಿಯೇ ಹಣತೆ ಹಚ್ಚುವ ಪದ್ಧತಿಯೂ ಕರಾವಳಿಯ ವಿವಿಧೆಡೆ ಇದೆ. ವಿಶೇಷವಾಗಿ ಬಲಿಯೇಂದ್ರನನ್ನು "ಕೂʼʼ ಹಾಕಿ ಕರೆಯುವುದು ಇಲ್ಲಿನ ವಿಶೇಷತೆ.
ಭಾರತದಲ್ಲಿ ಧನತ್ರಯೋದಶಿಯ ದಿನದಿಂದ ಐದು ದಿನಗಳ ದೀಪಾವಳಿ ಲೆಕ್ಕ ಹಾಕಲಾಗುತ್ತದೆ. ಆದರೆ, ಕರಾವಳಿಯ ದೀಪಾವಳಿ ಸಾಮಾನ್ಯವಾಗಿ ಮೂರೇ ದಿನ ಆಚರಿಸಲಾಗುತ್ತದೆ. ಉಳಿದ ಎರಡು ದಿನಗಳು ಅಷ್ಟಾಗಿ ವಿಶೇಷವಾಗಿರುವುದಿಲ್ಲ. ಆ ಮೂರು ದಿನದ ಆಚರಣೆ ಸಾಕಷ್ಟು ವಿಶೇಷವಾಗಿರುತ್ತದೆ.
ದೀಪಾವಳಿ ಮೊದಲ ದಿನ- ಜಳಕ ಮಾಡೋಣ ಬನ್ನಿ
ಪ್ರತಿನಿತ್ಯ ಎಲ್ಲರೂ ಸ್ನಾನ ಮಾಡುತ್ತಾರೆ ಎನ್ನುವುದು ನಿಜ. ಆದರೆ, ದೀಪಾವಳಿಯ ಮೊದಲ ದಿನ ಎಣ್ಣೆ ಸ್ನಾನಕ್ಕೆ ಇಲ್ಲಿ ಎಲ್ಲಿಲ್ಲದ ಮಹತ್ವ. ವರ್ಷವಿಡಿ ಕೃಷಿ ಭೂಮಿಯಲ್ಲಿ ದುಡಿದ ದೇಹವನ್ನು ಆರೈಕೆ ಮಾಡುವ ವಿಧಾನವೂ ಇದಾಗಿದೆ.
ನರಕ ಚತುದರ್ಶಿಯಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಬೇಕು. ಮನೆಮಂದಿಯೆಲ್ಲ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ. ಅಂದು ಬೆಳಗ್ಗಿನ ಉಪಹಾರ- ಬಜಿಲ್ (ಅವಲಕ್ಕಿ). ಮೊದಲೆಲ್ಲ ಈ ಸ್ನಾನದ ಸಂಭ್ರಮ ಬೇರೆ ರೀತಿ ಇತ್ತು. ಮನೆಯ ಎಲ್ಲಾ ಗಂಡಸರು ಮೈಗೆ ಎಣ್ಣೆ ಹಚ್ಚಿಕೊಂಡು ಗಂಟೆಗಟ್ಟಲೆ ತಮ್ಮ ಸ್ನಾನದ ಸರದಿಗೆ ಕಾಯಬೇಕಿತ್ತು. ಈಗ ಶಾಸ್ತ್ರಕ್ಕಷ್ಟೇ ಎಣ್ಣೆ ಹೆಚ್ಚುತ್ತಾರೆ. ಎಣ್ಣೆ ಸ್ನಾನ ದೇಹಕ್ಕೆ ಉತ್ತಮವಾಗಿದ್ದು, ತಪ್ಪದೇ ಎಲ್ಲರೂ ಮಾಡಬಹುದು. ಈ ಚಳಿಗಾಲದಲ್ಲಿ ಎಣ್ಣೆ ಸ್ನಾನ ಅತ್ಯಂತ ಅಗತ್ಯವೂ ಹೌದು. ದೀಪಾವಳಿ ದಿನ ಇಂತಹ ಆಚರಣೆ ತಂದ ಪೂರ್ವಿಕರ ಐಡಿಯಾ ಮೆಚ್ಚಲೇಬೇಕು.
ಲಕ್ಷ್ಮೀ ಪೂಜೆ
ಕರಾವಳಿಯಲ್ಲಿ ಎಲ್ಲರಂತೆ ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷ್ಮೀ ಪೂಜೆ ಇದ್ದೇ ಇರುತ್ತದೆ. ಅಮವಾಸ್ಯೆಯ ದಿನದಂದು ಲಕ್ಷ್ಮೀ ಪೂಜೆ ನಡೆಸಲಾಗುತ್ತದೆ. ಕರಾವಳಿಯಲ್ಲಿ ಬ್ರಾಹ್ಮಣರು/ ವೈದಿಕರು ಲಕ್ಷ್ಮೀ ಪೂಜೆ ಮಾಡುತ್ತಾರೆ. ಉಳಿದವರು ಲಕ್ಷ್ಮೀ ದೇವರ ಫೋಟೊಗೆ ಕೈ ಮುಗಿಯುತ್ತಾರೆ. ಈಗ ಬೆಂಗಳೂರಿನಂತಹ ನಗರಗಳಲ್ಲಿ ಲಕ್ಷ್ಮೀ ಪೂಜೆ ಇತ್ಯಾದಿಗಳ ಆಚರಣೆ ತಿಳಿದವರೂ ಊರಲ್ಲಿಯೂ ಲಕ್ಷ್ಮೀ ಪೂಜೆ ಮಾಡುತ್ತಿರಬಹುದು. ಆದರೆ, ಮೊದಲು ಲಕ್ಷ್ಮೀ ಪೂಜೆ ಎಂಬ ಆಚರಣೆ ಇರಲಿಲ್ಲ.
ಮೂರನೇ ದಿನದ ಸಂಭ್ರಮ
ಕರಾವಳಿ ಜನರಿಗೆ ನಿಜವಾದ ದೀಪಾವಳಿಯ ಸಂಭ್ರಮ ದೊರಕುವುದು ಬಲೀಂದ್ರ ಪೂಜೆಯ ದಿನದಂದು. ಅಂದು ಬಲೀಂದ್ರ ಪೂಜೆ ಮತ್ತು ಗೋಪೂಜೆ ಇರುತ್ತದೆ. ಬಲೀಂದ್ರ ಪೂಜೆಗಾಗಿ ಕೃಷಿ ಕುಟುಂಬಗಳು ತುಳಸಿ ಗಿಡದ ಪಕ್ಕ ವಿಶೇಷವಾಗಿ ಎರಡು ಕಂಬಗಳನ್ನು (ಸೊನೆ ಇರುವ ಮರದ) ನೆಟ್ಟು ಅದರ ಮೇಲೆ ಹಣತೆ ಬೆಳಗುತ್ತಾರೆ. ಜತೆಗೆ ಆ ಕಂಬಗಳಿಗೆ ಅಲಂಕಾರ ಮಾಡಿ ಥೇಟ್ ಬಲೀಂದ್ರನಂತೆ ರೂಪ ಕೊಟ್ಟಿರುತ್ತಾರೆ ಬಾಳೆಗಿಡದ ದಂಟಿನಿಂದ, ಹೂವುಗಳಿಂದ ಅಲಂಕರಿಸಿ ಸುಂದರ ರೂಪ ಕೊಟ್ಟಿರುತ್ತಾರೆ.
ಮೂರನೇ ದಿನದಂದು ತಮ್ಮ ಹಟ್ಟಿಯಲ್ಲಿರುವ ದನಗಳಿಗೆ, ಕರುಗಳು, ಎಮ್ಮೆ ಕೋಣಗಳಿಗೆ ಸ್ನಾನ ಮಾಡಿಸಿ ಅವುಗಳ ಕೊರಳಿಗೆ ಹಾರ ಹಾಕಿ, ತಿನ್ನಲು ತಿನಿಸು ನೀಡಿ ಆರತಿ ಬೆಳಗಿ ಪೂಜಿಸುತ್ತಾರೆ. ಗೋಪೂಜೆಯು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ವೈವಿಧ್ಯಮಯವಾಗಿ ಮಾಡುತ್ತಾರೆ.
ಇದೇ ದಿನ ಕೃಷಿ ಕುಟುಂಬ ವಿಶೇಷವಾಗಿ ಬತ್ತದ ಗದ್ದೆ ಇರುವ/ಇದ್ದ ಮನೆಗಳಲ್ಲಿ ನೇಗಿಲು, ನೊಗ, ಪಿಕ್ಕಾಸು, ಕತ್ತಿ, ಪೈರು ಕೊಯ್ಯುವ ಕತ್ತಿ ಇತ್ಯಾದಿಗಳನ್ನು ತೊಳೆದು ಜೋಡಿಸಿ ಪೂಜೆ ಸಲ್ಲಿಸುತ್ತಾರೆ. ಮೂರನೇ ದಿನದಂದು ಬೆಳ್ಳಂಬೆಳ್ಳಗೆ ಮನೆಯ ಮಕ್ಕಳು ಎದ್ದು ಬೇಲಿಯಲ್ಲಿರುವ ಕಾಡು ಹೂವುಗಳನ್ನು ಕೊಯ್ದು ತರುತ್ತಿದ್ದರು. ಆ ಸಂಭ್ರಮ ಈಗ ಮರೆಯಾಗಿದೆ. ಈಗ ಪೇಟೆಯಿಂದ ಹೂಗಳನ್ನು ತರುತ್ತಾರೆ.
ಬಲೀಂದ್ರ ಮರ
ಮೂರನೇ ದಿನದಂದು ಬಲೀಂದ್ರ ಮರಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಾಲೆ ಮರದ ಕಂಬವೊಂದನ್ನು ಮನೆಯ ಮುಂದೆ (ತುಳಸಿಗಿಡದ ಪಕ್ಕ), ಗದ್ದೆಯಲ್ಲಿ, ಹಟ್ಟಿಯ ಪಕ್ಕ ನೆಡುತ್ತಾರೆ. ಅದರ ಮೇಲೆ ಹಣತೆ ಬೆಳಗುತ್ತಾರೆ. ಇದು ಬಲೀಂದ್ರನನ್ನು ಪ್ರತಿನಿಧಿಸುತ್ತದೆ. ಇದೇ ಬಲೀಂದ್ರ ಗಿಡದ ಮುಂದೆ ನಿಂತು "ಕೂ ಬಾ ಬಲೀಂದ್ರʼʼ ಎಂದು ತುಳು ಶೈಲಿಯಲ್ಲಿ ಕರೆಯುತ್ತಾರೆ. ಒಂದು ಮನೆಯಿಂದ ದೂರದ ಇನ್ನೊಂದು ಮನೆಗೆ ಕೇಳಿಸುವಂತೆ ಸಂಭ್ರಮದಿಂದ ಕೂ ಎಂದು ಕರೆಯುವ ಸಂಭ್ರಮವೇ ಬೇರೆ. ಈ ದಿನ ಬಲೀಂದ್ರ ಪೂಜೆಗೆ ಚೆಂಡು ಹೂವು, ಪಾದೆ ಹೂವು, ಹಿಂಗಾರ ಇತ್ಯಾದಿಗಳು ಅಗತ್ಯವಿರುತ್ತದೆ. ಬಲಿಯೇಂದ್ರನನ್ನು ಕೂ ಎಂದು ಕರೆಯುವುದಕ್ಕೆ ಬಲೀಂದ್ರ ಲೆಪ್ಪುನು ಎನ್ನುತ್ತಾರೆ.
ಮೊದಲೆಲ್ಲ ಬಲೀಂದ್ರನನ್ನು ಕರೆಯುವುದಕ್ಕೆ ಪಾಡ್ದನ, ಕತೆ, ಗಾಯನಗಳನ್ನು ತುಳುವರು ಹಾಡುತ್ತಿದ್ದರು. ಇದು ಈಗ ಅಪರೂಪವಾಗಿದೆ. ಈ ರೀತಿ ಕರೆಯುವ ಹಾಡು ಈ ಮುಂದಿನಂತೆ ಇದೆ.
ಕರ್ಗಲ್‌ಲ್ ಕಾಯ್ಪೋನಗ
ಬೊಲ್‌ಕಲ್‌ಲ್ ಪೂ ಪೋನಗ,
ಉಪ್ಪು ಕರ್ಪೂರ ಆನಗ,
ಜಾಲ್ ಪಾದೆ ಆನಗ,
ಉರ್ದು ಮದ್ದೋಲಿ ಆನಗ,
ಗೊಡ್ಡೆರ್ಮೆ ಗೋಣೆ ಆನಗ,
ಎರು ದಡ್ಡೆ ಆನಗ,
ನೆಕ್ಕಿದಡಿಟ್ ಆಟ ಆನಗ,
ತುಂಬೆದಡಿಟ್ ಕೂಟ ಆನಗ,
ದೆಂಬೆಲ್‌ಗ್ ಪಾಂಪು ಪಾಡ್‌ನಗ,
ಅಲೆಟ್ಟ್ ಬೊಲ್ನೆಯಿ ಮುರ್ಕುನಗ,
ದಂಟದಜ್ಜಿ ಮದ್ಮಲಾನಗ,
ಗುರ್ಗುಂಜಿದ ಕಲೆ ಮಾಜಿನಗ ಒರಬತ್ತ್ ಪೋ...
ಬಲಿಯೇಂದ್ರ... ಕೂ... ಕೂ... ಕೂ...
(ಕಗ್ಗಲ್ಲು ಕಾಯಿಕೊಡುವಾಗ, ಬೆಳ್ಗಲ್ಲು ಹೂಬಿಡುವಾಗ... ನಿನ್ನ ಊರು, ನಿನ್ನ ಸೀಮೆ ಆಳಿಕೊಂಡು ಬಾ... ಬಲೀಂದ್ರ)
ವಿಷ್ಣುವು ವಾಮನನಾಗಿ ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ದಿನವಾಗಿರುವುದರಿಂದ, ದೀಪಾವಳಿ ಹಬ್ಬದಂದು ಒಂದು ದಿನ ಆತನಿಗೆ ಭೂಲೋಕಕ್ಕೆ ಆಗಮಿಸಲು ವರವಿರುವುದರಿಂದ ಅಂದು ಬಲಿಯೇಂದ್ರ ಬರುವುದನ್ನು ದೀಪಾವಳಿ ಸಂಭ್ರಮವಾಗಿ ತುಳುವರು ಸ್ವಾಗತಿಸುತ್ತಾರೆ. ಬಲಿ ರಾಜನನ್ನು ಸ್ವಾಗತಿಸುವ ಈ ದಿನ ಪಟಾಕಿ ಸಿಡಿಸುವ ಸಂಭ್ರಮವೂ ಹೆಚ್ಚಿರುತ್ತದೆ. ಎಲ್ಲೇ ಇದ್ದವರು ದೀಪಾವಳಿ ಹಬ್ಬದಂದು ತಮ್ಮ ಊರಿಗೆ ಬರಲು ಹಾತೋರೆಯುತ್ತಾರೆ. ಉದ್ಯೋಗ ಮತ್ತು ಇತರೆ ಕಾರಣದಿಂದ ಊರಿನಿಂದ ದೂರವಿರುವವರು ಪರಸ್ಪರ ಭೇಟಿಯಾಗುವ ಸಂದರ್ಭವೂ ಇದಾಗಿದೆ.
(ಪೂರಕ ಮಾಹಿತಿ: ಸಂಗ್ರಹ, ತುಳುನಾಡಿನ ಅನುಭವ ಮತ್ತು ಇಂಟರ್‌ನೆಟ್).