DK Shivakumar: ಮರಗಳಿಗೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ: ಡಿಕೆ ಶಿವಕುಮಾರ್
ಚಿಕ್ಕನಾಯಕನಹಳ್ಳಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಇಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಭಾವಿಸಿರುವವರಿಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಉತ್ತರ ದೊರೆಯಲಿದೆ ಎಂದು ಗುಡುಗಿದರು.
ಚಿಕ್ಕನಾಯಕನಹಳ್ಳಿ: ನನ್ನ ಮಿತ್ರ ಕಿರಣಕುಮಾರ್ ಅವರಿಗೆ ನಾಲ್ಕು ವರ್ಷಗಳಿಂದ ಗಾಳ ಹಾಕುತ್ತಿದ್ದೆ. ಅವರು ಬಿದ್ದಿರಲಿಲ್ಲ. ಕೊನೆಯದಾಗಿ ನಾನು ಹೊಸ ಗಾಳ ತರಿಸಿ ಹಾಕಿದಾಗ ತಕ್ಷಣವೇ ಕಚ್ಚಿಕೊಂಡರು. ಈಗ ಅವರನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಕಿರಣ್ ಕುಮಾರ್ ಅವರು ಇಂದು ನನಗೆ ವಿಧಾನಸೌಧದ ಪ್ರತಿಮೆಯನ್ನು ಸ್ಮರಣಿಕೆಯಾಗಿ ನೀಡಿದ್ದಾರೆ. ಕೇಸರಿ ಮೈಸೂರು ಪೇಟ ಹಾಕಿದ್ದಾರೆ. ಕಿರಣ ಎಂದರೆ ಸೂರ್ಯನ ಬೆಳಕು. ಅವರ ಮೂಲಕ ನಿಮ್ಮ ಮನೆ ಬಾಗಿಲಿಗೆ ಬದಲಾವಣೆಯ ಬೆಳಕು ಬರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಸ್ಯಭರಿತವಾಗಿ ಹೇಳಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಇಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಭಾವಿಸಿರುವವರಿಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಉತ್ತರ ದೊರೆಯಲಿದೆ ಎಂದು ಗುಡುಗಿದರು. ನನ್ನ ಚುನಾವಣಾ ಪ್ರಚಾರದ ಮೊದಲ ಸಭೆಗೆ, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಹಾಜನತೆ ಯಶಸ್ಸು ನೀಡುತ್ತಾರೆ ಎಂಬ ನಂಬಿಕೆಯೊಂದಿಗೆ ನಾನು ಇಲ್ಲಿಗೆ ಬಂದು ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ ಎಂದು ಡಿಕೆಶಿ ನುಡಿದರು.
ನಾನು ಕೆಲ ದಿನಗಳ ಹಿಂದೆ ಇಲ್ಲಿನ ಮಠಕ್ಕೆ ಬಂದಾಗ ಅಂದು ಸಾವಿರಾರು ಮಂದಿ ನನ್ನ ಸ್ವಾಗತ ಮಾಡಿದ್ದೀರಿ. ನಾನು ಸಮೀಕ್ಷೆ ಮಾಡಿಸಿದಾಗ, ಅವರು ಈ ಜಿಲ್ಲೆಯಲ್ಲಿ 8 ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳುತ್ತಿದ್ದರು. ಆಗ ನಾನು ಚಿಕ್ಕನಾಯಕನಹಳ್ಳಿ ಸೇರಿ ಒಂಬತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದ್ದೆ. ಅದನ್ನು ಕ್ಷೇತ್ರದ ಜನತೆ ನಿಜ ಮಾಡಿ ತೋರಿಸಲಿದ್ದಾರೆ ಎಂಬ ಭರವಸೆ ನನಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ನಾಲ್ಕೂವರೆ ವರ್ಷಗಳಿಂದ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಬಿಜೆಪಿ ಸರ್ಕಾರದಿಂದ ಸಾಧ್ಯವಾಗಿಲ್ಲ. ಈಗ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಈ ಚುನಾವಣೆಯಲ್ಲಿ ಒಂದು ಅವಕಾಶ ಸಿಗುತ್ತಿದೆ. ಮೇ 10ರಂದು ಚುನಾವಣೆ ನಡೆಯುತ್ತಿದ್ದು, ಆ ದಿನ ಕೇವಲ ಮತದಾನ ಮಾಡುವ ದಿನ ಮಾತ್ರವಲ್ಲ. ಕರ್ನಾಟಕದಲ್ಲಿ ಬದಲಾವಣೆ ತರುವ ದಿನ. ಭ್ರಷ್ಟ ಬಿಜೆಪಿಯನ್ನು ಬಡಿದೋಡಿಸುವ ದಿನ, ನಿಮ್ಮ ಭವಿಷ್ಯವನ್ನು ನೀವೇ ನಿರ್ಧಾರ ಮಾಡಿಕೊಳ್ಳುವ ದಿನ ಎಂದು ಡಿಕೆಶಿ ಹೇಳಿದರು.
ಕೊಬ್ಬರಿ ಬೆಲೆ ಕುಸಿತದಿಂದ ನಿಮಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ದಿನಗಳು ಬರಲಿವೆ. ಕಾಂಗ್ರೆಸ್ ನಿಮ್ಮ ಸಂಕಟಗಳಿಗೆ ಮುಕ್ತಿ ನೀಡಲಿದ್ದು, ಕನ್ನಡದ ಸ್ವಾಭಿಮಾನ ಉಳಿಸಿಕೊಳ್ಳುವ ನಮ್ಮ ಬದ್ಧತೆಗೆ ನೀವು ಜೊತೆಯಾಗಿ ಎಂದು ಕೆಪಿಸಿಸಿ ಅಧ್ಯಕ್ಷರು ಇದೇ ವೇಳೆ ಮತದಾರರಿಗೆ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಮೋದಿ ಅವರು ಕಳೆದ ಚುನಾವಣೆ ಸಮಯದಲ್ಲಿ ಅಡುಗೆ ಅನಿಲ 50 ರೂ. ಹೆಚ್ಚಾದಾಗ ನೀವು ಮತ ಹಾಕಲು ಹೋಗುವ ಮುನ್ನ ನಿಮ್ಮ ಮನೆಯ ಅಡುಗೆ ಸಿಲಿಂಡರ್ ನೋಡಿಕೊಂಡು ನಮಸ್ಕಾರ ಹಾಕಿಕೊಂಡು ಹೋಗಿ ಮತ ಹಾಕಿ ಎಂದು ಹೇಳಿದ್ದರು. ನೀವುಗಳು ಕೂಡ ಇನ್ನು ಮುಂದೆ ಪ್ರಚಾರ ಮಾಡುವಾಗ ಪ್ರತಿ ಬೂತ್ ಮುಂದೆ ಒಂದು ಸಿಲಿಂಡರ್ ಇಟ್ಟುಕೊಂಡು ಪ್ರಚಾರ ಮಾಡಿ ಎಂದು ಡಿಕೆ ಶಿವಕುಮಾರ್ ಕರೆ ನೀಡಿದರು.
ಈ ಸರ್ಕಾರ ಸರ್ಕಾರಿ ಹುದ್ದೆ ನೇಮಕಾತಿಗಳಲ್ಲಿ ಅಕ್ರಮ ಎಸಗುವ ಮೂಲಕ ಲಕ್ಷಾಂತರ ಯುವಕರ ಭವಿಷ್ಯವನ್ನು ನಾಶ ಮಾಡಿದೆ. ಇಂತಹ ಸರ್ಕಾರದ ಪರಿಣಾಮವಾಗಿ ಪೊಲೀಸ್ ಅಧಿಕಾರಿಗಳಿಂದ ಅಭ್ಯರ್ಥಿಗಳವರೆಗೂ 100ಕ್ಕೂ ಹೆಚ್ಚುಮಂದಿ ಜೈಲು ಪಾಲಾಗಿದ್ದಾರೆ. ನಾನು ಇಂಧನ ಸಚಿವನಾಗಿದ್ದಾಗ 25 ಸಾವಿರ ನೇಮಕಾತಿ ಮಾಡಿದ್ದೆ. ಯಾರಾದರೂ ಒಬ್ಬರು ನನಗೆ ಲಂಚಕೊಟ್ಟು ಕೆಲಸಕ್ಕೆ ಸೇರಿದ್ದಾರಾ? ಪಾವಗಡದಲ್ಲಿ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಮಾಡಿದ್ದೇವೆ. 13 ಸಾವಿರ ಎಕರೆಯನ್ನು ಖರೀದಿ ಮಾಡದೇ ಅವರಿಂದ ಲೀಸ್ ಮೂಲಕ ಜಮೀನು ಪಡೆದಿದ್ದೇವೆ. ಯಾರಿಂದಾದರೂ ಒಂದು ರೂಪಾಯಿ ಲಂಚ ಪಡೆದಿದ್ದೇನಾ? ಈ ರೈತರ ಖಾತೆಗೆ ಪ್ರತಿ ವರ್ಷ 25 ಸಾವಿರ ಹಣ ಸೇರುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಆಡಳಿತದ ವೈಖರಿ ಎಂದು ಡಿಕೆಶಿ ನುಡಿದರು.
ಈ ನಾಡು ಕಲ್ಪತರನಾಡು. 20 ಸಾವಿರ ಇದ್ದ ಕೊಬ್ಬರಿ ಬೆಲೆ ಈಗ 8,800 ರೂ.ಗೆ ಕುಸಿದಿದೆ. ಈ ಸರ್ಕಾರ ಏನು ಮಾಡುತ್ತಿದೆ. ಈ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಜನರ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಾಗಲಿಲ್ಲ. ಈಗ ಚುನಾವಣೆ ಸಮಯದಲ್ಲಿ ಮುಂದೆ ಸರ್ಕಾರ ಬಂದ ಮೇಲೆ ಮಾಡುತ್ತೇವೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಅಲ್ಲಮಪ್ರಭುಗಳು ಹೇಳಿರುವಂತೆ ಕೊಟ್ಟ ಕುದುರೆಯನ್ನು ಏರಲಾಗದೇ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅದೇ ರೀತಿ ಅದಿಕಾರ ಇದ್ದಾಗ ಬಿಜೆಪಿ ನಾಯಕರು ರೈತನಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ, ಯುವಕರಿಗೆ ಏನನ್ನೂ ಮಾಡಲಿಲ್ಲ. ಇನ್ನು ಮುಂದೆ ಅಧಿಕಾರಕ್ಕೆ ಬಂದ ನಂತರ ಮಾಡುವರೇ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.