Space Technology: ಇಂದು ರಾತ್ರಿ ಭೂಮಿಯ ಮೇಲೆ ಹಾದು ಹೋಗಲಿದೆ ಐಎಸ್‌ಎಸ್ ಉಪಗ್ರಹ: ಬರೀ 10 ನಿಮಿಷದ ವಿಶೇಷ ವಿದ್ಯಮಾನ ತಪ್ಪದೇ ನೋಡಿ
Space Technology: ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಹಾಗೂ ಬೆಳವಣಿಗೆಗಳ ಕುರಿತು ಕುತೂಹಲವಿದೆಯೇ. ಹಾಗಿದ್ದರೆ ಇಂದು ಭಾನುವಾರ( 2025ರ ಫೆಬ್ರವರಿ 2) ರಾತ್ರಿ 7:26ಕ್ಕೆ ವೀಕ್ಷಿಸಿ. ವಿಶೇಷ ವಿದ್ಯಾಮಾನ ನಿಮಗೆ ತಿಳಿಯಲಿದೆ.

Space Technology: ಭಾನುವಾರ ರಾತ್ರಿ ಆಕಾಶದಲ್ಲಿ ನಿಮಗೆ ವಿಶೇಷವಾದ ವಿದ್ಯಮಾನವೊಂದು ಕಾಣಿಸಲಿದೆ. ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮುಂತಾದ ಏಳು ಮಂದಿ ಗಗನಯಾತ್ರಿಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಎಂದು ಕರೆಯಲಾಗುವ ಐಎಸ್ಎಸ್ ಉಪಗ್ರಹವು( International Space Station) ಭೂಮಿಯ ಮೇಲೆ ಹಾದು ಹೋಗಲಿದೆ. ಆ ದೃಶ್ಯವನ್ನು ನೀವು ಬರಿಗಣ್ಣಿನಿಂದಲೇ ಸುಲಭವಾಗಿ ನೋಡಬಹುದು. ಈ ಉಪಗ್ರಹವು ರಾತ್ರಿ 7:26ಕ್ಕೆ ಉತ್ತರದಲ್ಲಿ ಉದಯಿಸಿ, ಹತ್ತು ನಿಮಿಷದ ನಂತರ ಅಂದರೆ ರಾತ್ರಿ 7:36ಕ್ಕೆ ಪೂರ್ವದಲ್ಲಿ ಅಸ್ತಮಿಸುತ್ತದೆ. ನಿಖರವಾಗಿ 7:31ಕ್ಕೆ ಮಂಗಳ ಗ್ರಹದ ಹತ್ತಿರ ವೇಗವಾಗಿ ದಾಟಿ ಹೋಗುತ್ತದೆ. ಸುಮಾರು ಹತ್ತು ನಿಮಿಷಗಳ ಕಾಲಮಾತ್ರ ಕಾಣುವ ಐಎಸ್‌ಎಸ್ ಉಪಗ್ರಹ ಭೂಮಿಯ ಮೇಲೆ ಚಲಿಸುವುದನ್ನು ಅಪರೂಪದ ಈ ದೃಶ್ಯವನ್ನು ಖಂಡಿತ ಎಲ್ಲರೂ ನೋಡಬಹುದು.
ಈಗಾಗಲೇ ನೀವು, ಸಂಜೆಗತ್ತಲು ಆವರಿಸಿದೊಡನೆ, ಪೂರ್ವದ ಆಕಾಶದಲ್ಲಿ ಮಂಗಳ ಗ್ರಹವನ್ನು ಕಂಡಿರುವಿರಿ. ಆಗಸದತ್ತ ತಲೆಯೆತ್ತಿ ನೋಡಿದರೆ ಕಾಣುವುದೇ ಗುರುಗ್ರಹ; ಅದರ ಕೆಳಗಡೆ, ಅಂದರೆ ಪೂರ್ವದತ್ತ ನೋಡಿದರೆ ಕಾಣುವ ಕೆಂಪು ಗ್ರಹವೇ ಮಂಗಳ. ಈ ಮಂಗಳ ಗ್ರಹದ ಹತ್ತಿರದಲ್ಲಿಯೇ ದಾಟಿ ಹೋಗಲಿದೆ.
ಐಎಸ್‌ಎಸ್‌ಗೆ ಜೋಡಿಸಲಾಗಿರುವ ಸುಮಾರು ತಲಾ 40 ಅಡಿ ಉದ್ದದ ಎರಡು ಸೌರಫಲಕಗಳು ಸೇರಿ 80 ಅಡಿಯಷ್ಟಾಗುವ ಸೌರಫಲಕಗಳ ಪ್ರತಿಫಲಿತದಿಂದಾಗಿ ವೀಕ್ಷಕರು ಸೂಕ್ತ ಸಮಯದಲ್ಲಿ, ಸೂಕ್ತ ಸ್ಥಳದಲ್ಲಿದ್ದರೆ ನಿಲ್ದಾಣವನ್ನು ಭೂಮಿಯಿಂದ ಬರಿಕಣ್ಣಿನಿಂದ ವೀಕ್ಷಿಸಬಹುದಾಗಿದೆ. ಇದೊಂದು ರೈಲ್ವೆ ಕೋಚ್ ರೀತಿಯೇ ಕಾಣುತ್ತದೆ. ಅನೇಕ ಸಂದರ್ಭಗಳಲ್ಲಿ ನಿಲ್ದಾಣವು ಬರಿಗಣ್ಣಿನಿಂದ ನೋಡಬಹುದಾದ ಆಕಾಶದಲ್ಲಿರುವ ವಸ್ತು ಇದಾಗಿದೆ. ಇದನ್ನು ಎರಡರಿಂದ ಐದು ನಿಮಿಷಗಳ ಕಾಲಾವಧಿಯವರೆಗೆ ನೋಡಬಹುದಾಗಿದೆ. ಕೆಲವೊಮ್ಮೆ ಹತ್ತು ನಿಮಿಷಗಳವರೆಗೂ ನೋಡಬಹುದು. ಭಾನುವಾರ ಕೂಡ ಹತ್ತು ನಿಮಿಷದವರೆಗೆ ನಾವು ಇದನ್ನು ಕಾಣಬಹುದು ಎನ್ನುವುದು ಕೊಡಗಿನಲ್ಲಿ ವೈದ್ಯರೂ ಆಗಿರುವ ಬಾಹ್ಯಾಕಾಶ ವಿಷಯಗಳ ಕುತೂಹಲಿ ಡಾ.ಎಸ್.ವಿ. ನರಸಿಂಹನ್ ಅವರು ಹೇಳುತ್ತಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾದ ಸಂಶೋಧನಾ ಸೌಲಭ್ಯವಾಗಿದೆ. ಇದನ್ನು ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ 15 ದೇಶಗಳ ಐದು ವಿವಿಧ ಬಾಹ್ಯಾಕಾಶ ಸಂಸ್ಥೆಗಳು ಒಟ್ಟಿಗೆ ಸೇರಿ ನಿರ್ಮಿಸಿವೆ. 100 ಶತಕೋಟಿ ಡಾಲರ್ ವೆಚ್ಚದ ಐಎಸ್‌ಎಸ್ ಅನ್ನು ಬಿಡಿಬಿಡಿಯಾಗಿ ತಂದು ಬಾಹ್ಯಾಕಾಶದಲ್ಲಿ ಜೋಡಿಸಲಾಗಿದೆ. ಐಎಸ್‌ಎಸ್ 1998ರಿಂದ ಕಾರಾರಯರಂಭ ಮಾಡಿದ್ದು, 2000 ಇಸವಿಯ ನವೆಂಬರ್ 2ರಿಂದ ನಿರಂತರವಾಗಿ ಕಾರ‍್ಯನಿರತವಾಗಿದೆ. ಭಾರತ ಕೂಡ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಯೋಜನೆ ಘೋಷಿಸಿದೆ. ಇಸ್ರೋ ಈ ನಿಟ್ಟಿನಲ್ಲಿ ಕೆಲಸವನ್ನು ಆರಂಭಿಸಿದ್ದು ಮುಂದಿನ ಐದು ವರ್ಷದಲ್ಲಿ ಇದು ಸಿದ್ದವಾಗಬಹುದು.
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಅಮೆರಿಕ ಫುಟ್ಬಾಲ್ ಮೈದಾನಷ್ಟಿದೆ. ಒಮ್ಮೆಲೆ ನೋಡಿದರೆ ನಮ್ಮ ಭಾರತದ ರೈಲ್ವೆ ಕೋಚ್‌ಗಳನ್ನು ಹೋಲಬಹುದು. 391 ಸಾವಿರ ಕೆ.ಜಿ ತೂಕವನ್ನು ಹೊಂದಿರುವ ಐಎಸ್‌ಎಸ್ ಭೂಮಿಯಿಂದ ಸರಾಸರಿ 248 ಮೈಲಿ ಎತ್ತರದಲ್ಲಿದೆ. ಇದು ಭೂಮಿಯನ್ನು ಗಂಟೆಗೆ 28 ಸಾವಿರ ಕಿ.ಮೀಟರ್ ವೇಗದಲ್ಲಿ ಪ್ರತಿ 90 ನಿಮಿಷಕ್ಕೊಮ್ಮೆ ಸುತ್ತುತ್ತದೆ. ಐದು ಮಲಗುವ ಕೊಠಡಿಗಳು, ಎರಡು ಬಾತ್‌ರೂಮ್ , ಜಿಮ್, 360 ಡಿಗ್ರಿಯಲ್ಲಿ ಭೂಮಿಯತ್ತ ಮುಖ ಮಾಡಿರುವ ಕಿಟಕಿಗಳನ್ನು ಹೊಂದಿವೆ. ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣ ವಾಸಯೋಗ್ಯ ಪ್ರದೇಶವನ್ನು ಬೋಯಿಂಗ್ 747 ಜಂಬೊ ಜೆಟ್ ವಿಮಾನಕ್ಕೆ ಹೋಲಿಸಿದ್ದಾರೆ.
ನಾಸಾ, ರಷ್ಯಾದ ರಾಸ್‌ಕಾಸ್ಮೋಸ್ ಸ್ಟೇಟ್ ಕಾರ್ಪೊರೇಷನ್ ಫಾರ್ ಸ್ಪೇಸ್ ಆ್ಯಕ್ಟಿವಿಟಿಸ್ , ಯುರೋಪಿಯನ್ ಸ್ಪೇಸ್ ಏಜೆನ್ಸಿ, ಕೆನಡಿಯನ್ ಬಾಹ್ಯಾಕಾಶ ಸಂಸ್ಥೆ, ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೊರೇಷನ್ ಏಜೆನ್ಸಿ ಐಎಸ್‌ಎಸ್ ನಿರ್ಮಾಣದ ಹಿಂದಿನ ರೂವಾರಿಗಳು. ಖಗೋಳ ಪರಿಸರ, ಭೂ ವೈಜ್ಞಾನಿಕ ಸಂಶೋಧನೆ, ಮಂಗಳ, ಗುರು ಗ್ರಹ ಸೇರಿದಂತೆ ಬಾಹ್ಯಾಕಾಶ ಸಂಶೋಧನೆಯ ಉದ್ದೇಶದಿಂದ ಈ ನಿಲ್ದಾಣವನ್ನು ನಿರ್ಮಿಸಲಾಗಿದ್ದು ನಿರಂತರ ಬಾಹ್ಯಾಕಾಶ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.
