ನಿಮ್ಮ ಕಾರು, ಬೈಕ್‌ಗೆ ಫ್ಯಾನ್ಸಿ ನಂಬರ್‌ ಬೇಕೆ; ಬೆಂಗಳೂರಿನ ಜಯನಗರದಲ್ಲಿ ಆರ್‌ಟಿಒ ಕಚೇರಿಯಲ್ಲಿ ನಾಳೆ ಹರಾಜು
ಕನ್ನಡ ಸುದ್ದಿ  /  ಕರ್ನಾಟಕ  /  ನಿಮ್ಮ ಕಾರು, ಬೈಕ್‌ಗೆ ಫ್ಯಾನ್ಸಿ ನಂಬರ್‌ ಬೇಕೆ; ಬೆಂಗಳೂರಿನ ಜಯನಗರದಲ್ಲಿ ಆರ್‌ಟಿಒ ಕಚೇರಿಯಲ್ಲಿ ನಾಳೆ ಹರಾಜು

ನಿಮ್ಮ ಕಾರು, ಬೈಕ್‌ಗೆ ಫ್ಯಾನ್ಸಿ ನಂಬರ್‌ ಬೇಕೆ; ಬೆಂಗಳೂರಿನ ಜಯನಗರದಲ್ಲಿ ಆರ್‌ಟಿಒ ಕಚೇರಿಯಲ್ಲಿ ನಾಳೆ ಹರಾಜು

ಬೆಂಗಳೂರಿನ ಜಯನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಫ್ಯಾನ್ಸಿ ನಂಬರ್‌ಗಳ ನೋಂದಣಿಗೆ ಪೂರಕವಾಗಿ ಹರಾಜು ಪ್ರಕ್ರಿಯೆ ಮೇ 15 ರ ಗುರುವಾರ ನಡೆಯಲಿದೆ.

ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಫ್ಯಾನ್ಸಿ ನಂಬರ್‌ ಪಡೆಯೋದು ಹೇಗೆ( ಪ್ರಾತಿನಿಧಿಕ ಚಿತ್ರ)
ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಫ್ಯಾನ್ಸಿ ನಂಬರ್‌ ಪಡೆಯೋದು ಹೇಗೆ( ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ನಿಮ್ಮ ವಾಹನಗಳಿಗೆ ನಿಗದಿತ ಫ್ಯಾನ್ಸಿ ನಂಬರ್‌ ಬೇಕು ಎಂದುಕೊಂಡರೆ ಅದಕ್ಕಾಗಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಬೇಡಿಕೆ ಹೆಚ್ಚಿದರೆ ಹರಾಜಿನಲ್ಲೂ ಭಾಗವಹಿಸಬೇಕಾಗುತ್ತದೆ.ಕರ್ನಾಟಕದಲ್ಲಿರುವ ಸುಮಾರು 70 ಕಚೇರಿಗಳಲ್ಲಿ ಹರಾಜು ಪ್ರಕ್ರಿಯೆ ಕಾಲಕಾಲಕ್ಕೆ ನಡೆಯುತ್ತಲೇ ಇರುತ್ತದೆ.ಈ ಬಾರಿ ವಾಹನಗಳ ನೋಂದಣಿ ಸಂಖ್ಯೆಯ ಹರಾಜು ಪ್ರಕ್ರಿಯೆಯು ಬೆಂಗಳೂರಿನ ಜಯನಗರದಲ್ಲಿ ನಡೆಯಲಿದೆ. ಜಯನಗರ ಆರ್‌ಟಿಒದಲ್ಲಿ ಮೇ 15 ರಂದು ಮಧ್ಯಾಹ್ನ ನಡೆಯಲಿರುವ ಹರಾಜಿನಲ್ಲಿ, ಕೆಎ 05/ಎನ್‌ಪಿ ಸರಣಿಯ ಈ ಕೆಳಗಿನ ಫ್ಯಾನ್ಸಿ ಸಂಖ್ಯೆಗಳು ಖರೀದಿಗೆ ಲಭ್ಯವಿರಲಿವೆ ಎಂದು ಸಾರಿಗೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರಿನ ಜಯನಗರದಲ್ಲಿ ಫ್ಯಾನ್ಸಿ ವಾಹನ ನೋಂದಣಿ ಸಂಖ್ಯೆಗಳ ಹರಾಜನ್ನು ನಡೆಸಲಾಗುತ್ತಿದ್ದು. 1, 123, 1234, 10, 11, 111, 1111, 100, 1000, 1001, 22, 27, 222, 234, 2222, 2727, 33, 36, 63, 333, 3333, 3636, 45, 444, 4444, 4455, 4545, 5, 55, 555, 5454, 5555, 6, 63, 666,6666, 6055, 6363, 7, 72,77, 777, 786,7272, 7777, 8, 88, 888, 8055, 8118, 8181, 8181, 8888, 9, 90, 99, 900, 909, 999, 9999, 9000, 9009, ಮತ್ತು 9090 ಸಂಖ್ಯೆಗಳನ್ನು ತಮ್ಮ ವಾಹನಗಳಿಗೆ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಹರಾಜಿನಲ್ಲಿ ಭಾಗವಹಿಸುವವರು ಭದ್ರತಾ ಠೇವಣಿಯಾಗಿ ರೂ. 75,000 ಪಾವತಿಸಬೇಕು. ಹರಾಜಿನ 90 ದಿನಗಳಲ್ಲಿ ಬಿಡ್ ಮೊತ್ತವನ್ನು ಪೂರ್ಣವಾಗಿ ಪಾವತಿಸುವ ಮೂಲಕ ವಾಹನವನ್ನು ನೋಂದಾಯಿಸಬೇಕು ಎಂದು ಸಾರಿಗೆ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಕಾರು ಅಥವಾ ಬೈಕ್ ನೋಂದಣಿ ಸಂಖ್ಯೆಯು ನಿಮ್ಮ ಪ್ರದೇಶ ಇಲ್ಲವೇ ನೀವು ನೋಂದಣಿ ಮಾಡಲು ಬಯಸುವ ಪ್ರಾದೇಶಿಕ ಸಾರಿಗೆ ಕಚೇರಿ (RTO) ನಿಗದಿಪಡಿಸಿದ ವಿಶಿಷ್ಟ ಸಂಖ್ಯೆಯಾಗಿದೆ. ನೋಂದಣಿ ಸಂಖ್ಯೆ ವಿಶಿಷ್ಟವಾಗಿದ್ದರೂ, ಕೆಲವು ಕಾರು ಮತ್ತು ಬೈಕ್ ಉತ್ಸಾಹಿಗಳು ವಿಶೇಷ ಸಂಖ್ಯೆಗಳನ್ನು ಆಯ್ಕೆ ಮಾಡುವ ಮೂಲಕ ಅದನ್ನು ಇನ್ನಷ್ಟು ವಿಭಿನ್ನವಾಗಿಸಲು ಬಯಸುತ್ತಾರೆ. ಈ ವಿಶೇಷ ಅಥವಾ ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯುವುದರ ಹಿಂದಿನ ಉದ್ದೇಶವೆಂದರೆ ಅದು ರಸ್ತೆಯಲ್ಲಿರುವ ಗಮನವನ್ನು ಸೆಳೆಯುತ್ತದೆ. ನೀವು ಕರ್ನಾಟಕದಲ್ಲಿದ್ದರೂ ಅಥವಾ ದೇಶದ ಯಾವುದೇ ಭಾಗದಲ್ಲಿದ್ದರೂ, ನಿಮ್ಮ ಅಮೂಲ್ಯ ಕಾರು ಮತ್ತು ಬೈಕ್‌ಗೆ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಪಡೆದುಕೊಳ್ಳಬಹುದು. ಮೊದಲು ಫ್ಯಾನ್ಸಿ ನಂಬರ್‌ ಅವರನ್ನು ಸಾರಿಗೆ ಅಧಿಕಾರಿಗಳ ಪರಿಚಯದ ಮೇಲೆ ಪಡೆಯುತ್ತಿದ್ದರು. ಅದಕ್ಕೂ ಒತ್ತಡ, ಬೇಡಿಕೆ ಹೆಚ್ಚು ಬರತೊಡಗಿದ ಮೇಲೆ ಇಂತಿಷ್ಟು ದರ ನಿಗದಿ ಮಾಡಿ ಅದಕ್ಕೂ ಸ್ಪರ್ಧೆ ಏರ್ಪಟ್ಟರೆ ಹರಾಜು ಪ್ರಕ್ರಿಯೆ ಆರಂಭಿಸಲಾಯಿತು. ಇದರಿಂದ ಕೋಟಿಗಟ್ಟಲೇ ಆದಾಯ ಸರ್ಕಾರಕ್ಕೆ ಬರುತ್ತಿದೆ.

ಕಾರುಗಳು ಮತ್ತು ಬೈಕ್‌ಗಳಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ಅಥವಾ ವಿಐಪಿ ನಂಬರ್ ಪ್ಲೇಟ್ ನೀಡಲಾಗುತ್ತದೆ. ಜನರು ತಮ್ಮ ಅಮೂಲ್ಯ ವಾಹನಗಳಿಗೆ ವಿಶಿಷ್ಟ ಗುರುತನ್ನು ನೀಡಲು ಈ ನಂಬರ್ ಪ್ಲೇಟ್‌ಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಫ್ಯಾನ್ಸಿ ನಂಬರ್ ಪ್ಲೇಟ್ 9999, 0001, 4444, 1111, ಮತ್ತು ಅಂತಹುದೇ ಸಂಖ್ಯೆಗಳಾಗಿರಬಹುದು. ನಿಮ್ಮ ಕಾರು ಅಥವಾ ಬೈಕ್‌ಗೆ ಈ ವಿಶೇಷ ಸಂಖ್ಯೆಗಳನ್ನು ಪಡೆಯಲು, ನೀವು ಕರ್ನಾಟಕದ ಆರ್‌ಟಿಒದಲ್ಲಿ ಹೆಚ್ಚುವರಿ ಪಾವತಿಯನ್ನು ಮಾಡಬೇಕಾಗುತ್ತದೆ ಮತ್ತು ನಿಮ್ಮ ವಾಹನಕ್ಕೆ ಫ್ಯಾನ್ಸಿ/ವಿಐಪಿ ನಂಬರ್ ಪ್ಲೇಟ್ ಪಡೆಯಬಹುದು. ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಮೂಲತಃ ಇ-ಹರಾಜಿನ ಆಧಾರದ ಮೇಲೆ ನೀಡಲಾಗುತ್ತದೆ. ಆದ್ದರಿಂದ, ಈ ನಂಬರ್ ಪ್ಲೇಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಪಡೆಯಲು ಸಾಧ್ಯವಿದೆ ಎನ್ನುವುದು ಹಿರಿಯ ಅಧಿಕಾರಿಯೊಬ್ಬರು ನೀಡುವ ವಿವರಣೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.