ಉಡುಪಿ ವೈದ್ಯನ ವರ್ಚುವಲ್ ಅರೆಸ್ಟ್ ಮಾಡಿ ಕೋಟ್ಯಂತರ ರೂ ವಂಚಿಸಿದ ಸೈಬರ್ ಖದೀಮರು; 11 ದಿನ ಗೃಹಬಂಧನ!
ಆನ್‌ಲೈನ್ ವಂಚಕರು ದಿನಕ್ಕೊಂದು ರೀತಿಯಲ್ಲಿ ವಂಚನೆಯ ಹಾದಿ ಹಿಡಿಯುತ್ತಾರೆ. ತಂತ್ರಜ್ಞಾನ ಬೆಳೆದಂತೆ ಅದು ಮಾರಕವೂ ಆಗುತ್ತಿದೆ. ಶಿಕ್ಷಿತರೇ ವಂಚನೆಗೆ ಒಳಗಾಗುತ್ತಿರುವುದು ಅಚ್ಚರಿಯ ಬೆಳವಣಿಗೆ. ಉಡುಪಿಯ ವೈದ್ಯರೊಬ್ಬರು ಡಿಜಿಟಲ್ ಅರೆಸ್ಟ್ ಆಗಿ ಕೋಟಿ ಕೋಟಿ ಕಳೆದುಕೊಂಡಿರುವ ಘಟನೆ ನಡೆದಿದೆ.
ಉಡುಪಿ: ಕೆಲ ತಿಂಗಳ ಹಿಂದೆ ಪುತ್ತೂರಿನ ವೈದ್ಯರೊಬ್ಬರನ್ನು ಕಾಲ್ ಮೂಲಕ ಬೆದರಿಸಿ, ಲಕ್ಷಾಂತರ ರೂ ಹಣ ಪೀಕಿಸಿದ ಸೈಬರ್ ವಂಚಕರ ಘಟನೆ ಇನ್ನೂ ಮಾಸಿಲ್ಲ. ಅಷ್ಟರಲ್ಲೇ ಉಡುಪಿ ಜಿಲ್ಲೆ ಮೂಲದ, ಪ್ರಸ್ತುತ ನೇಪಾಳದಲ್ಲಿ ವಾಸವಿರುವ ವೈದ್ಯರೊಬ್ಬರನ್ನು ಊರಿಗೆ ಬಂದಿದ್ದ ವೇಳೆ ಹೆದರಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರೂ ಆಗಿರುವ ಉಡುಪಿ ಮೂಲದ ಡಾ.ಅರುಣ್ ಕುಮಾರ್ ಅವರಿಗೆ ಆನ್‌ಲೈನ್ ವಂಚಕರು ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ.
ಪ್ರಸ್ತುತ ನೇಪಾಳದ ಕಠ್ಮಂಡುವಿನಲ್ಲಿ ವಾಸವಿರುವ ವೈದ್ಯರು, ಹಿಂದೆ ಮಣಿಪಾಲದಲ್ಲಿ ಕರ್ತವ್ಯದಲ್ಲಿದ್ದರು. ಅವರು ಜುಲೈ 29ಕ್ಕೆ ಉಡುಪಿಯ ಮನೆಗೆ ಬಂದಿದ್ದರು. ಈ ವೇಳೆ ವಂಚಕರು ಕರೆ ಮಾಡಿ, ಡಿಜಿಟಲ್ ಗೃಹಬಂಧನ ವಿಧಿಸಿ ಹಣ ಗುಳುಂ ಮಾಡಿದ್ದಾರೆ.
ಸೈಬರ್ ಫ್ರಾಡ್ ಹೀಗೆ ನಡೆಯುತ್ತದೆ?
ಜುಲೈ 29ರಂದು ಊರಿಗೆ ಬಂದಿದ್ದ ವೈದ್ಯರಿಗೆ +919232037584 ಸಂಖ್ಯೆಯಿಂದ ಅಪರಿಚಿತರು ಕರೆ ಮಾಡುತ್ತಾರೆ. ತಾವು ಕಸ್ಟಮ್ಸ್‌ನಿಂದ ಕರೆ ಮಾಡುವುದಾಗಿ ತಿಳಿಸಿ, ಆಧಾರ್ ಸಂಖ್ಯೆ ಬಳಸಿಕೊಂಡು, ಬುಕ್ ಆಗಿರುವ ಫೆಡ್ ಎಕ್ಸ್ ಕೊರಿಯರ್‌ನಲ್ಲಿ 5 ಪಾಸ್‌ಪೋರ್ಟ್, 5 ಎಟಿಎಂ ಕಾರ್ಡ್, 200 ಗ್ರಾಂ ಎಂಡಿಎಂಎ, ಹಾಗೂ 5000 ಯುಎಸ್ ಡಾಲರ್ ಇದ್ದು, ಈ ಕೊರಿಯರ್ ಮುಂಬಯಿ ಕಸ್ಟಮ್ಸ್ ವಶದಲ್ಲಿ ಇದೆ ಎಂದು ಕರೆ ಮಾಡಿದವರು ತಿಳಿಸಿದ್ದಾರೆ. ಅರುಣ್ ಉತ್ತರಿಸಿ, ನಾನು ಯಾವುದೇ ಕೊರಿಯರ್ ಬುಕ್ ಮಾಡಿಲ್ಲ ಎಂದು ತಿಳಿಸಿದ್ದಾರೆ. ಅಪರಿಚಿತ ತನ್ನ ಮೇಲಧಿಕಾರಿಗೆ ಹಾಟ್ ಲೈನ್ ಮೂಲಕ ಸಂಪರ್ಕ ಸಾಧಿಸಿಕೊಡುತ್ತಾನೆ. ಆಗ, ತಾನು ಪೊಲೀಸ್ ಅಧಿಕಾರಿ ಎಂದು ನಂಬಿಸಿದ ಆತ ನಿಮ್ಮ ಆಧಾರ್ ದುರ್ಬಳಕೆ ಕುರಿತು ದೂರು ಸ್ವೀಕರಿಸಲಾಗಿದೆ. ನಮ್ಮ ಕೇಂದ್ರ ಕಚೇರಿಗೆ ಕರೆ ಫಾರ್ವಾರ್ಡ್ ಮಾಡ್ತೀವಿ ಎಂದಿದ್ದಾನೆ. ಬಳಿಕ ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದಾರೆ. ಹೀಗಾಗಿ ನಿಮ್ಮನ್ನು ವರ್ಚುವಲ್ ಅರೆಸ್ಟ್ ಮಾಡ್ತಿದ್ದೀವಿ. ಸ್ಕೈಪ್ ವೇ ಆಪ್ ಮೂಲಕ ವಿಡಿಯೋ ಮಾನಿಟರಿಂಗ್ ಮಾಡ್ತೇವೆ ಎಂದಿದ್ದಾನೆ.
ವರ್ಚುವಲ್ ಅರೆಸ್ಟ್ ಆದ ವೈದ್ಯರು
ಆರೋಪಿಗಳು ಬರೋಬ್ಬರಿ 11 ದಿನ ವೈದ್ಯರನ್ನು ವರ್ಚುವಲ್ ಅರೆಸ್ಟ್ ಮಾಡಿದ್ದಾರೆ. ಅಂದರೆ, ಅವರದ್ದೇ ಮನೆಯ ಕೊಠಡಿಯಲ್ಲಿ ಗೃಹಬಂಧನಕ್ಕೆ ಒಳಪಡಿಸಿದ್ದಾರೆ. ಮನೆಯ ರೂಮ್ ಒಂದರಲ್ಲಿ ಇರುವಂತೆ ಹಾಗೂ ಬೇರೆಯವರೊಂದಿಗೆ ಸಂಪರ್ಕಿಸದಂತೆ ಆರೋಪಿಗಳು ಹೇಳಿದ್ದಾರೆ. ವಾಶ್ ರೂಮ್ ಗೆ ಹೋಗುವಾಗಲೂ ಮೊಬೈಲ್ ಆನ್ ಇಟ್ಟು ಕ್ಷಣಾರ್ಧದಲ್ಲಿ ಬರಬೇಕು ಎಂದು ಹೇಳಿದ್ದಾರೆ. ಮೊಬೈಲ್ ಯಾವುದೇ ಕಾರಣಕ್ಕೂ ಆಫ್ ಮಾಡಬಾರದು ಎಂದು ವೈದ್ಯರಿಗೆ ತಾಕೀತು ಮಾಡಿದ್ದಾರೆ. ಮನೆ ಮಂದಿಯೂ ವೈದ್ಯ ಯಾವುದೋ ಆನ್‌ಲೈನ್ ಕೆಲಸದಲ್ಲಿ ಇದ್ದಿರಬಹುದು ಎಂದು ಭಾವಿಸಿ, ಕೊಠಡಿಗೆ ಅನ್ನ ಆಹಾರ ನೀಡಿದ್ದಾರೆ.
ಅಪರಿಚಿತರು ಸೂಚಿಸಿದ ಬ್ಯಾಂಕ್ ಅಕೌಂಟ್‌ಗಳಿಗೆ ಹಣ ಪಾವತಿಸುವಂತೆ ಆರೋಪಿಗಳು ಸೂಚಿಸಿದ್ದು, ವೈದ್ಯರು ತನ್ನ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ ಆಗಸ್ಟ್ 6ರಿಂದ 9ರವರೆಗೆ ಹಂತಹಂತವಾಗಿ 1.31 ಕೋಟಿ ರೂಪಾಯಿ ವರ್ಗಾಯಿಸಿದ್ದಾರೆ. ಆಗಸ್ಟ್ 12ಕ್ಕೆ ನಿಮ್ಮ ಅಕೌಂಟ್‌ಗೆ ನಾವು ಹಣ ಮರಳಿಸುತ್ತೇವೆ ಎಂದು ಆರೋಪಿಗಳು ವೈದ್ಯರಿಗೆ ಹೇಳಿದ್ದು, ಹಣ ಬಾರದ ಕಾರಣ ವೈದ್ಯರು ಉಡುಪಿಯ ಠಾಣೆಗೆ ದೂರು ನೀಡಿದ್ದಾರೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು
ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ