ಮಾ 16ಕ್ಕೆ ದೊಡ್ಡಬಳ್ಳಾಪುರದಲ್ಲಿ ನಾಕುತಂತಿ ಷಷ್ಟಿಪೂರ್ತಿ ಕಾರ್ಯಕ್ರಮ: ಬೇಂದ್ರೆ ಕಾವ್ಯ ಜಗತ್ತಿಗೆ ಇಲ್ಲಿದೆ ಅದ್ಭುತ ಬೆಳಕಿಂಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಾ 16ಕ್ಕೆ ದೊಡ್ಡಬಳ್ಳಾಪುರದಲ್ಲಿ ನಾಕುತಂತಿ ಷಷ್ಟಿಪೂರ್ತಿ ಕಾರ್ಯಕ್ರಮ: ಬೇಂದ್ರೆ ಕಾವ್ಯ ಜಗತ್ತಿಗೆ ಇಲ್ಲಿದೆ ಅದ್ಭುತ ಬೆಳಕಿಂಡಿ

ಮಾ 16ಕ್ಕೆ ದೊಡ್ಡಬಳ್ಳಾಪುರದಲ್ಲಿ ನಾಕುತಂತಿ ಷಷ್ಟಿಪೂರ್ತಿ ಕಾರ್ಯಕ್ರಮ: ಬೇಂದ್ರೆ ಕಾವ್ಯ ಜಗತ್ತಿಗೆ ಇಲ್ಲಿದೆ ಅದ್ಭುತ ಬೆಳಕಿಂಡಿ

ವರಕವಿ ಬೇಂದ್ರೆ ಅವರಿಗೆ ಜ್ಞಾನಪೀಠ ಪುರಸ್ಕಾರ ದೊರೆತು 50 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದೊಡ್ಡಬಳ್ಳಾಪುರದ ಮಂಗಳ ಶಾಲೆಯಲ್ಲಿ ನಾಕುತಂತಿ ಷಷ್ಟಿಪೂರ್ತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ದೊಡ್ಡಬಳ್ಳಾಪುರದಲ್ಲಿ ನಾಕುತಂತಿ ಷಷ್ಟಿಪೂರ್ತಿ ಕಾರ್ಯಕ್ರಮ
ದೊಡ್ಡಬಳ್ಳಾಪುರದಲ್ಲಿ ನಾಕುತಂತಿ ಷಷ್ಟಿಪೂರ್ತಿ ಕಾರ್ಯಕ್ರಮ

ದೊಡ್ಡಬಳ್ಳಾಪುರ: ಜ್ಞಾನಪೀಠ ಪುರಸ್ಕೃತ ಡಾ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದರಾ ಬೇಂದ್ರೆ) ಅವರ ನಾಕುತಂತಿ ಕವನ ಸಂಕಲನ ಪ್ರಕಟವಾಗಿ 60 ವರ್ಷಗಳಾಗಿವೆ. 'ವರಕವಿ'ಗೆ ಜ್ಞಾನಪೀಠ ಪುರಸ್ಕಾರ ದೊರೆತು 50 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ 'ನಾಕುತಂತಿ ಷಷ್ಟಿಪೂರ್ತಿ' ಕಾರ್ಯಕ್ರಮವನ್ನು 'ಅಖಿಲ ಭಾರತೀಯ ಸಾಹಿತ್ಯ ಪರಿಷದ್' ನಗರದ ಮಂಗಳ ಶಾಲೆಯಲ್ಲಿ ಭಾನುವಾರ (ಮಾರ್ಚ್ 16) ಬೆಳಿಗ್ಗೆ 9:30 ಕ್ಕೆ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಖ್ಯಾತ ಸಂಸ್ಕೃತಿ ಚಿಂತಕ, ಕವಿ, ಕಾದಂಬರಿಕಾರ ಡಾ ಜಿ.ಬಿ.ಹರೀಶ ಅವರು ಮುಖ್ಯ ಉಪನ್ಯಾಸ ನೀಡಲಿದ್ದಾರೆ. ಸಂಗೀತ ಕಲಾವಿದೆ ರಮ್ಯಾ ವಸಿಷ್ಠ ಅವರು ಬೇಂದ್ರೆ ಅವರ ಹಲವು ಅಪರೂಪದ ಕವನಗಳನ್ನು ಹಾಡಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಂದ್ರ ಕಲ್ಚರಲ್ ಫೌಂಡೇಶನ್ ಈ ಕಾರ್ಯಕ್ರಮಕ್ಕೆ ಸಹಕರಿಸುತ್ತಿವೆ. ದೊಡ್ಡಬಳ್ಳಾಪುರದ ಲೇಖಕಿ ಪ್ರಭಾ, ಶಿಕ್ಷಕಿ ಯಶೋದಾ ಅವರು ಬೇಂದ್ರೆ ಕವನಗಳನ್ನು ವಾಚಿಸಲಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಬೆಂಗಳೂರು ಮಹಾನಗರ ಸಮಿತಿಯ ಅಧ್ಯಕ್ಷರೂ ಆಗಿರುವ ಖ್ಯಾತ ಹಾಸ್ಯ ಬರಹಗಾರ ಎಂ.ಎಸ್.ನರಸಿಂಹಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮಕ್ಕೆ ಎಲ್ಲ ಸಾಹಿತ್ಯಾಸಕ್ತರಿಗೂ ಮುಕ್ತ ಪ್ರವೇಶ ಇರುತ್ತದೆ.

ಮರಳಿ ಅರಳಿದ ನಾಕುತಂತಿ ಕವನ ಸಂಕಲನ

ನಾಕುತಂತಿ ಕವನ ಸಂಕಲನದ ಮುಖಪುಟ ವಿನ್ಯಾಸದ ಮೇಲೆ 'ಅರಳು ಮರಳು' ಅನಂತರ ಮರಳಿ ಅರಳಿದ ಕವನ ಸಂಕಲನ ಎನ್ನುವ ಸಾಲು ಇದೆ. ವಯಸ್ಸಾದವರನ್ನು 'ಅರಳು ಮರಳು' ಎಂದು ಹೀಗಳೆಯುವುದನ್ನೇ ತಿರುಗುಮುರುಗಾಗಿಸಿ ಕಾವ್ಯಾಗಿಸಿದವರು ಬೇಂದ್ರೆ. 'ನಾಕುತಂತಿ' ಕವನ ಸಂಕಲನ ಹೊರಬಂದಾಗ (1964) ಬೇಂದ್ರೆಯವರ ವಯಸ್ಸು 68. 'ನಾಕುತಂತಿ' ಸಂಕಲನದಲ್ಲಿ ಒಟ್ಟು 44 ಕವನಗಳಿವೆ. ಈ ಕವನಗಳನ್ನು ಆಸ್ವಾದಿಸುವಾಗ, ಇವೆಲ್ಲವೂ ಕವಿಯ ಬದುಕಿನ ಉತ್ತರಾರ್ಧದಲ್ಲಿ ರೂಪುಗೊಂಡವು ಎನ್ನುವುದನ್ನೂ ಗಮನಿಸಬೇಕಾಗುತ್ತದೆ.

'ಮಿಡಿಯುವ ವೀಣೆಗೆ ನಾನು, ನೀನು, ಆನು, ತಾನು ಎನ್ನುವ ನಾಕೇ ನಾಕು ತಂತಿ' ಎಂದು ಬೇಂದ್ರೆ ಹೇಳಿದ್ದಾರೆ. ಅವರ ಮಾತನ್ನು ತುಸುವೇ ವಿಸ್ತರಿಸಿದರೆ ನಾನು-ತಂದೆ, ನೀನು-ತಾಯಿ, ಆನು-ಇವರಿಬ್ಬರ ಆಧಾರವಾಗಿ ಬರುವ ಮಗು. ಈ ಕುಟುಂಬ ಸಂಸ್ಥೆಗೆ ಪರಮಾತ್ಮಶಕ್ತಿಯಿದೆ ಎನ್ನುವುದು ಕವಿಯ ಭಾವನೆ ನಮಗೆ ದಾಟುತ್ತದೆ. 'ನಾಕುತಂತಿ' ಸಂಕಲನದ ಅನೇಕ ಕವನಗಳು ಈ ಹಿನ್ನೆಲೆಯಲ್ಲಿಯೇ ರೂಪುಗೊಂಡಿವೆ.

ಪದಗಳೊಡನೆ ಸೊಗಸಾಗಿ ಆಡುವ, ಪದಗಳನ್ನು ಆಡಿಸಿ-ಕುಣಿಸುವ ಶಕ್ತಿಯಿಂದಲೇ 'ವರಕವಿ' ಎನಿಸಿಕೊಂಡವರು ಬೇಂದ್ರೆ. ಅವರ ಮನಸ್ಸಿನಲ್ಲಿ ಹೆಪ್ಪುಗಟ್ಟಿದ್ದ ಅಧ್ಯಾತ್ಮದ ಆಳ, ಜಗತ್ತಿನೆಡೆಗಿನ ಪ್ರೀತಿ, ದೇವರೆಡೆಗಿನ ಭಕ್ತಿ ಹೀಗೆ ಓದಿಯಷ್ಟೇ ಆಸ್ವಾದಿಸಬಹುದಾದ, ಅರಿತವರು ಅರ್ಥ ವಿವರಿಸಿದಾಗ ತಲೆದೂಗಿಸುವ ಎಷ್ಟೋ ಸ್ವಾರಸ್ಯಗಳನ್ನು ಕನ್ನಡಿಗರು ಕಳೆದ 60 ವರ್ಷಗಳಿಂದಲೂ ಈ ಸಂಕಲನದಲ್ಲಿ ಕಂಡುಕೊಂಡಿದ್ದಾರೆ. ಅಂಥ ಮತ್ತಷ್ಟು ಅರ್ಥಗಳನ್ನು ಶೋಧಿಸುವ ಪ್ರಯತ್ನ ದೊಡ್ಡಬಳ್ಳಾಪುರದಲ್ಲಿ ಈ ಬಾರಿ ನಡೆಯಲಿದೆ. ಈ ಅಪರೂಪದ ಅವಕಾಶವನ್ನು ಸಾಹಿತ್ಯಾಸಕ್ತರು ಸಾರ್ಥಕ ಪಡಿಸಿಕೊಳ್ಳಬೇಕು.

ಕಾರ್ಯಕ್ರಮ ವಿವರ

ನಾಕುತಂತಿ ಷಷ್ಟಿಪೂರ್ತಿ, ಮುಖ್ಯ ಸಂಪನ್ಮೂಲ ವ್ಯಕ್ತಿ- ಸಂಸ್ಕೃತಿ ಚಿಂತಕ ಡಾ ಜಿ.ಬಿ.ಹರೀಶ, ಉಪಸ್ಥಿತಿ- ಖ್ಯಾಸ ಹಾಸ್ಯ ಬರಹಗಾರ ಎಂ.ಎಸ್.ನರಸಿಂಹಮೂರ್ತಿ, ಕವನ ವಾಚನ- ಶಿಕ್ಷಕಿ ಯಶೋದಾ, ಲೇಖಕಿ ಪ್ರಭಾ, ಬೇಂದ್ರೆ ಕವಿತೆಗಳ ಗಾಯನ- ರಮ್ಯಾ ವಸಿಸ್ಠ, ಸಹಯೋಗ- ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಂದ್ರ ಕಲ್ಪರಲ್ ಫೌಂಡೇಶನ್, ಆಯೋಜಕರು- ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಸ್ಥಳ- ಮಂಗಳ ವಿದ್ಯಾಮಂದಿರ, ನಂಜುಂಡೇಶ್ವರ ಕಲ್ಯಾಣ ಮಂಟಪ ಹಿಂಭಾಗ, ಕೊಂಗಾಡಿಯಪ್ಪ ಕಾಲೇಜು ರಸ್ತೆ, ದೊಡ್ಡಬಳ್ಳಾಪುರ. ಸಮಯ- ಭಾನುವಾರ (ಮಾರ್ಚ್ 16) ಬೆಳಿಗ್ಗೆ 9:30. ಎಲ್ಲ ಸಾಹಿತ್ಯಾಸಕ್ತರಿಗೂ ಪ್ರವೇಶ ಉಚಿತ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner