ಬೆಂಗಳೂರಿನ ಕನಕಪುರ ರಸ್ತೆಯಿಂದ ನೈಸ್ ರಸ್ತೆ ಸಂಪರ್ಕಕ್ಕೆ ಬರಲಿದೆ ಹೊಸ ಎಕ್ಸ್‌ಪ್ರೆಸ್ ವೇ,ಮೇಲ್ಸೇತುವೆ ಮೇಲೆ ಸಂಚಾರಕ್ಕೆ ಒತ್ತು
ಬೆಂಗಳೂರು -ಕನಕಪುರ ಮಾರ್ಗ ಮಧ್ಯದಲ್ಲಿನ ಸಂಚಾರ ದಟ್ಟಣೆಯನ್ನು ತಗ್ಗಿಸಲು ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಹಾಗೆ ಮೇಲ್ಸೇತುವೆ ಎಕ್ಸ್‌ಪ್ರೆಸ್ ವೇ ರೂಪಿಸಲು ಡಿಪಿಆರ್ ಸಿದ್ದಪಡಿಸಲಾಗುತ್ತಿದೆ.
ಬೆಂಗಳೂರು: ಬೆಂಗಳೂರು ಕನಕಪುರ ಮಾರ್ಗದಲ್ಲಿ ಹೆಚ್ಚಿರುವ ಜನದಟ್ಟಣೆಯನ್ನು ತಗ್ಗಿಸಿ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡುವ ಮಂಡ್ಯದ ಮಳವಳ್ಳಿ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಯಳಂದೂರು, ಮಲೈ ಮಹದೇಶ್ವರಬೆಟ್ಟ, ಚಾಮರಾಜನಗರಕ್ಕೆ ಹೋಗಿ ಬರುವವರಿಗೂ ಸುಸೂತ್ರವಾಗುವಂತೆ ಹೊಸ ಎಕ್ಸ್‌ಪ್ರೆಸ್ ವೇ ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಇದಲ್ಲದೇ ಹೊಸ ಎಕ್ಸ್‌ಪ್ರೆಸ್ ವೇ ಅನ್ನು ನೈಸ್ ರಸ್ತೆಯೊಂದಿಗೆ ಸಂರ್ಪಕಿಸಲು ಅನುವಾಗುವಂತೆಯೂ ರೂಪಿಸಲಾಗುತ್ತಿದೆ. ಶೀಘ್ರದಲ್ಲೇ ನೈಸ್ ರಸ್ತೆಯಿಂದ ಬನಶಂಕರಿಯನ್ನು ಸಂಪರ್ಕಿಸಲು ರೂ 1,200-ಕೋಟಿ ಮೇಲ್ಸೇತುವೆ ರೂಪದ ಎಕ್ಸ್‌ಪ್ರೆಸ್‌ವೇಗೆ ವಿಸ್ತೃತ ಯೋಜನಾ ವರದಿಯನ್ನು ಬಿಬಿಎಂಪಿ ತಯಾರಿಸಲಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹುಟ್ಟೂರಾದ ಕನಕಪುರ ಕಡೆಗೆ ಸಂಪರ್ಕ ಸುಧಾರಿಸುವ 10 ಕಿ.ಮೀ. ಯೋಜನೆಗೆ 1,200 ಕೋಟಿ ರೂ. ಖರ್ಚು ಮಾಡುವ ಇರಾದೆ ಹೊಂದಲಾಗಿದೆ.
ಏನಿದು ಯೋಜನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬನಶಂಕರಿ ಭಾಗವನ್ನು ನೈಸ್ ರಸ್ತೆಯೊಂದಿಗೆ ಸಂಪರ್ಕಿಸುವ ಉದ್ದೇಶಿತ ಎಕ್ಸ್‌ಪ್ರೆಸ್‌ವೇ ಕುರಿತು ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸುತ್ತಿದೆ. ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಪ್ರಸ್ತಾವಿತ ಎಕ್ಸ್‌ಪ್ರೆಸ್ ವೇಯ ಮೇಲ್ಸೇತುವೆಗೆ ಡಿಪಿಆರ್ ತಯಾರಿಸಲು ಟೆಂಡರ್ ಕರೆಯಲಾಗುವುದು ಎಂದು ಬಿಬಿಎಂಪಿ ಹಿರಿಯ ಎಂಜಿನಿಯರ್ ತಿಳಿಸಿದ್ದಾರೆ.
ಡಿಕೆಶಿ ಪತ್ರ
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿರುವ ಶಿವಕುಮಾರ್, ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಕನಕಪುರ ರಸ್ತೆಯೂ ಒಂದು. ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಮೆಟ್ರೊ ರೈಲು ಈ ರಸ್ತೆಯಲ್ಲಿ ಹಾದು ಹೋಗುವುದರಿಂದ ಗ್ರೇಡ್ ಸಪರೇಟರ್ ನಿರ್ಮಿಸುವುದು ಕಷ್ಟ. ಹಾಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯುಎಸ್‌ಎಸ್‌ಬಿ) ಪೈಪ್‌ಲೈನ್ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸುವ ಮೂಲಕ ಕನಕಪುರ ರಸ್ತೆಯಲ್ಲಿನ ಒತ್ತಡವನ್ನು ಕಡಿಮೆ ಮಾಡಬಹುದು. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಕಾರ್ಯಸಾಧ್ಯತಾ ವರದಿ ಮತ್ತು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಮುಖ್ಯ ಎಂಜಿನಿಯರ್ (ಬಿಬಿಎಂಪಿ ಯೋಜನಾ ಕೇಂದ್ರ) ಅವರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಡಿಸಿಎಂ ನಿರ್ದೇಶನದ ಮೇರೆಗೆ ಪ್ರಸ್ತಾವಿತ ಮೇಲ್ಸೇತುವೆಗೆ ಡಿಪಿಆರ್ ತಯಾರಿಸಲು ಟೆಂಡರ್ ಕರೆಯಲಾಗುವುದು ಎಂದು ಬಿಬಿಎಂಪಿ ಹಿರಿಯ ಎಂಜಿನಿಯರ್ ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ರಾಗಿಗುಡ್ಡದಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು ನಿರ್ಮಿಸಿದೆ. ಆದರೆ, ಕೊನೆ-ಕೊನೆಯ ಸಂಪರ್ಕ ಇಲ್ಲದ ಕಾರಣ ಸಂಚಾರ ದಟ್ಟಣೆ ಮುಂದುವರಿದಿದೆ. ಈ ಮಾರ್ಗದಲ್ಲಿ ಸಂಚಾರ ಸುಗಮಗೊಳಿಸಲು ಎಕ್ಸ್‌ಪ್ರೆಸ್‌ವೇಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುವುದು ಎಂಜಿನಿಯರ್ ವಿವರಣೆ.
ಯೋಜನೆಗೆ ಆಕ್ಷೇಪಣೆ
10,000 ಕೋಟಿಗೂ ಅಧಿಕ ಮೊತ್ತದ ಸುರಂಗ ರಸ್ತೆ ಮತ್ತು ಸ್ಕೈಡೆಕ್ ಯೋಜನೆಗಳ ವಿರುದ್ಧ ಆನ್‌ಲೈನ್ ಅಭಿಯಾನವನ್ನು ಆರಂಭಿಸಿರುವ ಬೆಂಗಳೂರಿನ ನಾಗರೀಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅವರು ಈ ಪ್ರಸ್ತಾವವನ್ನು ಖಂಡಿಸಿದ್ದಾರೆ, ಕನಕಪುರ ಮಾರ್ಗದಲ್ಲಿ ಎಕ್ಸ್‌ಪ್ರೆಸ್‌ವೇ ಬಗ್ಗೆ ಸ್ವಲ್ಪ ದಿನದ ಹಿಂದೆಯೇ ಸುಳಿವು ನೀಡಿದ್ದ ಅವರು ಅದು ಈಗ ಅಧಿಕೃತವಾಗಿದೆ ಎಂದು ಹೇಳಿದ್ದಾರೆ.
ನಗರಕ್ಕೆ ಸಮಗ್ರ ಚಲನಶೀಲತೆ ಯೋಜನೆ (ಸಿಎಂಪಿ) ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊಂದಿರುವ ಉನ್ನತ ಪ್ರಾಧಿಕಾರವಾದ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರವನ್ನು (ಬಿಎಂಎಲ್‌ಟಿಎ) ಸಂಪರ್ಕಿಸದೆ ಈ ನಿರ್ಧಾರಗಳನ್ನು ತೆಗೆದುಕೊಂಡಂತಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮಾರ್ಗ ಹೆಚ್ಚಳ ಮತ್ತು ಕೊನೆಯ ಮೈಲ್ ಸಂಪರ್ಕದಂತಹ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು' ಎಂಬುದು ಕಾತ್ಯಾಯಿನಿ ಅವರ ಸಲಹೆ.