ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ ಅರುಣ್ ಅಧಿಕಾರ ಸ್ವೀಕಾರ, ಸುಳ್ಳು ಸುದ್ದಿ ಹರಡುವವರಿಗೆ ಖಡಕ್ ವಾರ್ನಿಂಗ್
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ ಅರುಣ್ ಅಧಿಕಾರ ಸ್ವೀಕಾರ ಸ್ವೀಕರಿಸಿದ ಬಳಿಕ, ಸುಳ್ಳು ಸುದ್ದಿ ಹರಡುವವರಿಗೆ ಖಡಕ್ ವಾರ್ನಿಂಗ್ ನೀಡಿದ್ದು, ಕಠಿಣ ಶಿಕ್ಷೆ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ. ಸುಳ್ಳು ಸುದ್ದಿ ಹರಡುವವರ ಮಾಹಿತಿಯನ್ನು ನೀಡುವುದಕ್ಕೆ ಸಹಾಯವಾಣಿ ಸಂಖ್ಯೆಯನ್ನೂ ನೀಡಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಹೇಳಿದ್ದಾರೆ.
ಮಂಗಳೂರಿನ ಎಸ್ಪಿ ಕಚೇರಿಯಲ್ಲಿ ಯತೀಶ್ ಎನ್. ಅವರಿಂದ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದು ಜೊತೆಗೆ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಮತೀಯ ಪ್ರಕರಣ, ನೈತಿಕ ಪೊಲೀಸ್ ಗಿರಿ ಪ್ರಕರಣಗಳ ಬಗ್ಗೆಯೂ ಗಂಭೀರವಾಗಿ ಪರಿಗಣಿಸಲಾಗುವುದು.
ರೌಡಿ ಶೀಟರ್ ಗಳ ಚಲನವಲನಗಳ ಮೇಲೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ಮೇಲೆ ನಿಗಾ ಇರಿಸಲಾಗುವುದು. ಅಕ್ರಮ ಗೋಹತ್ಯೆ, ಸಾಗಾಟ, ಮಾದಕ ಪದಾರ್ಥಗಳ ಸಾಗಾಟ, ಮಾರಾಟ, ಸೇವನೆ, ಅಕ್ರಮ ಗಣಿಗಾರಿಕೆ, ಗ್ಯಾಂಬ್ಲಿಂಗ್, ಬೆಟ್ಟಿಂಗ್ ಹಾಗೂ ಇನ್ನಿತರ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ಸಾರ್ವಜನಿಕರಲ್ಲಿ ಯಾವುದೇ ಮಾಹಿತಿಗಳಿದ್ದಲ್ಲಿ ನೇರವಾಗಿ ಮುಕ್ತವಾಗಿ ಮೊಬೈಲ್ ಸಂಖ್ಯೆ 9480805301 ಅಥವಾ ಕಚೇರಿಗೆ ಸಂಖ್ಯೆ 08242220503ಗೆ ಮಾಹಿತಿ ನೀಡಬಹುದು ಎಂದವರು ಹೇಳಿದ್ದಾರೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)