Dr B. K. S. Varma no more: ಮೇರು ಚಿತ್ರಕಲಾವಿದ ಡಾ.ಬಿ.ಕೆ.ಎಸ್.ವರ್ಮಾ ಅಸ್ತಂಗತ; ಇಂದು ಅಪರಾಹ್ನ 3ರಿಂದ ಸಂಜೆ 4.30ರ ತನಕ ಅಂತಿಮ ದರ್ಶನ
Dr B. K. S. Varma no more: ಮೇರು ಚಿತ್ರಕಲಾವಿದ ಡಾ.ಬಿ.ಕೆ.ಎಸ್.ವರ್ಮ ಅವರು ಸೋಮವಾರ ಅಸ್ತಂಗತರಾದರು. ಹೃದಯಾಘಾತಕ್ಕೆ ಒಳಗಾಗಿ ಸಾವು ಸಂಭವಿಸಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಬೆಂಗಳೂರು: ಮೇರು ಚಿತ್ರಕಲಾವಿದ ಡಾ.ಬಿ.ಕೆ.ಎಸ್.ವರ್ಮ ಅವರು ಸೋಮವಾರ ಅಸ್ತಂಗತರಾದರು. ಹೃದಯಾಘಾತಕ್ಕೆ ಒಳಗಾಗಿ ಸಾವು ಸಂಭವಿಸಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಬೆಂಗಳೂರಿನಲ್ಲಿ ನೆಲೆಸಿದ್ದ ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮ ಹೃದಯಾಘಾತದಿಂದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇಂದು ಅಪರಾಹ್ನ 3ರಿಂದ ಸಂಜೆ 4.30ರ ತನಕ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಕನ್ನಡ ತಾಯಿ ಭುವನೇಶ್ವರಿ, ರಾಘವೇಂದ್ರ ಸ್ವಾಮಿ, ರಾಮ-ಹನುಮರ ಚಿತ್ರಗಳನ್ನು ನೋಡಿದಾಗೆಲ್ಲ ಬಿ.ಕೆ.ಎಸ್.ವರ್ಮರನ್ನು ಬಲ್ಲವರಿಗೆಲ್ಲ ಅವರ ನೆನಪಾಗುವುದು ವಾಡಿಕೆ. ವರ್ಮ ಅವರ ಚಿತ್ರ ನೋಡಿದ ಕೂಡಲೇ ಇದು ವರ್ಮ ಅವರದ್ದೇ ಚಿತ್ರ ಎಂದು ಅನೇಕ ಚಿತ್ರಕಲಾ ಅಭಿಮಾನಿಗಳು ಗುರುತಿಸುವಂತೆ ಇರುತ್ತಿತ್ತು ಅವರ ಚಿತ್ರಗಳು.
ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದಿದ್ದ ಬಿ.ಕೆ.ಎಸ್. ಅವರು ತೈಲವರ್ಣದಲ್ಲಿ ಚಿತ್ರ ಬಿಡಿಸುತ್ತಿದ್ದರು. ಕನ್ನಡಾಂಬೆ, ಭಾರತಮಾತೆ, ಪೂಜೆಯಲ್ಲಿ ಮೈಮರೆತ ರಾಘವೇಂದ್ರ ಸ್ವಾಮಿ, ಈಶ್ವರ ಕುಟುಂಬ ಕಲಾಕೃತಿಗಳು ಬಹುತೇಕರ ಮನೆಯಲ್ಲಿ, ದೇವರ ಕೋಣೆಗಳಲ್ಲಿ ರಾರಾಜಿಸುತ್ತಿವೆ.
ಆರಂಭದ ದಿನಗಳಲ್ಲಿ ಅವರು ತಮ್ಮ ಬೆರಳುಗಳನ್ನೇ ಬಳಸಿ ಚಿತ್ರ ಬರೆಯುತ್ತಿದ್ದರು ವರ್ಮ. ಎಂಬೋಸಿಂಗ್, ಥ್ರೆಡ್ ಪೇಂಟಿಂಗ್ ಮೂಲಕ ಕಲಾಕೃತಿ ರಚಿಸಿ ಜನಮೆಚ್ಚುಗೆ ಗಳಿಸಿದವರು. ಕೆಲವೇ ನಿಮಿಷಗಳಲ್ಲಿ ಅತ್ಯುತ್ತಮ ಕಲಾಕೃತಿ ಸೃಷ್ಟಿಸಿ ಚಪ್ಪಾಳೆ ಗಿಟ್ಟಿಸಿಕೊಂಡ ಕೆಲವೇ ಕಲಾಸೃಷ್ಟಿಕರ್ತರಲ್ಲಿ ವರ್ಮಾ ಒಬ್ಬರು. ಅವರು ಸಿನಿ ತಾರೆಗಳಾದ ಡಾ.ರಾಜ್‌ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್, ಅಂತಾರಾಷ್ಟ್ರಿಯ ಸುಪ್ರಸಿದ್ದ ಕಲಾವಿದರಾದ ಡಾ.ರೋರಿಕ್-ದೇವಿಕಾರಾಣಿ ದಂಪತಿ ಹಾಗೂ ಗಣೇಶ ಮತ್ತಿತ್ತರ ಹಿಂದೂ ದೇವಾನುದೇವತೆಗಳು ಚಿತ್ರಗಳು ಕಲಾ ಲೋಕದಲ್ಲಿ ಈಗಲೂ ಕುಲಾ ಕುಂಚದ ಅದ್ಭುತಗಳಾಗಿ ಎಂಥವರನ್ನೂ ನಿಬ್ಬೆರಗಾಗಿಸುತ್ತದೆ.
ಅವರು, ಅತ್ತಿಬೆಲೆ ಬಳಿಯ ಕರ್ನೂರಿನಲ್ಲಿ 1949ರಲ್ಲಿ ಜನಿಸಿದ್ದರು. ತಂದೆ ಕೃಷ್ಣಮಾಚಾರ್ಯರು, ಸಂಗೀತಗಾರರಾಗಿದ್ದರು. ತಾಯಿ ಜಯಲಕ್ಷ್ಮಿ, ಚಿತ್ರ ಕಲಾವಿದರಾಗಿದ್ದರು. ಬಿಕೆಎಸ್ ವರ್ಮಾ ಅವರ ಸಾಧನೆಗೆ ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್‌ಗಾಂಧಿ ಪ್ರಶಸ್ತಿ ಲಭಿಸಿದ್ದವು. 2011ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ವರ್ಮ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ಸ್ಥಳದಲ್ಲೇ ಚಿತ್ರಬಿಡಿಸುವುದು (ಆನ್‌ಸ್ಪಾಟ್ ಡ್ರಾಯಿಂಗ್)
ಕಾವ್ಯದಲ್ಲಿ ಅಥವಾ ನೃತ್ಯ ರೂಪದಲ್ಲಿ ನೀಡಲಾದ ನಿರ್ದಿಷ್ಟ ವಿಷಯಗಳಿಗೆ ವರ್ಣಚಿತ್ರ ಬಿಡಿಸುವುದರಲ್ಲಿ ಬಿ.ಕೆ.ಎಸ್ ವರ್ಮ ಪರಿಣತಿ ಪಡೆದಿದ್ದಾರೆ. ಶತಾವಧಾನಿ ಗಣೇಶ್ ಅವರ ಜತೆಗೆ ವೇದಿಕೆ ಹಂಚಿಕೊಂಡ ಕಾರ್ಯಕ್ರಮದಲ್ಲಿ ವರ್ಮ ಅವರು, ಪ್ರೇಕ್ಷಕರು ಸೂಚಿಸಿದ ವಿಷಯಗಳ ಮೇಲೆ ಅವರು ಶತಾವಧಾನಿ ಗಣೇಶ್ ಅವರ ಹಾಡುಗಳಿಗೆ ಪೂರಕ ಚಿತ್ರ ರಚಿಸಿ ಗಮನಸೆಳೆದಿದ್ದರು. ಹೀಗೆ ಚಿತ್ರಬಿಡಿಸುವಾಗ ಅವರು, ನೂಲನ್ನು ಬ್ರಷ್ ಆಗಿ ಬಳಸುತ್ತಿದ್ದರು.
ಇದೇ ರೀತಿ 2006ರ ಡಿಸೆಂಬರ್ 19ರಂದು ಕೊಳಲು ವಾದನ ಕಾರ್ಯಕ್ರಮದಲ್ಲಿ, ಕೊಳಲು ವಾದಕರು ನುಡಿಸುವ ಹಾಡಿನ ಸಾಹಿತ್ಯಕ್ಕೆ ಪೂರಕ ಚಿತ್ರ ಬರೆದು ಗಮನಸೆಳೆದಿದ್ದರು.
ಶ್ರೀರಾಮಚಂದ್ರಾಪುರ ಮಠದ ಕೆಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರು. ಅಲ್ಲದೆ, ಶ್ರೀರಾಮಚಂದ್ರಾಪುರ ಮಠದಲ್ಲಿ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ಅತಿಥಿಗಳಿಗೆ, ಗಣ್ಯರಿಗೆ ನೀಡುವ ನೆನಪಿನ ಕಾಣಿಕೆ, ಜನ್ಮದಿನದ ಶುಭಾಶಯಗಳ ಉಡುಗೊರೆ ಡಾ.ಬಿ.ಕೆ.ಎಸ್ ವರ್ಮ ಅವರು ಬರೆದ ಚಿತ್ರಗಳೇ ಆಗಿವೆ.
ಕನ್ನಡಾಂಬೆ ಕಲಾಕೃತಿಗೆ ಮನ್ನಣೆ ಸಿಕ್ಕಿಲ್ಲ ಎಂದು ಬೇಸರ ಪಟ್ಟಿದ್ದರು…
ಜೀವವೇ ಮೈದಳಂತೆ ತೋರುವ ಕನ್ನಡಾಂಬೆಯ ಕಲಾಕೃತಿಗೆ ಮನಸೋಲದವರು ಯಾರೂ ಇರಲಾರರು. ಆದರೆ ಇದಕ್ಕೆ ಮನ್ನಣೆ ಸಿಗದೇ ಇದ್ದಾಗ, ಅವರ ಕೃತಿ ಎಂಬುದನ್ನು ನಮೂದಿಸದೇ ಇದ್ದಾಗ ಬಹಳ ನೊಂದುಕೊಂಡಿದ್ದರು ಬಿ.ಕೆ.ಎಸ್ ವರ್ಮ ಅವರು.