ಹಿರಿಯ ಸಾಹಿತಿ, ಅನುವಾದಕ ಡಾ ಪಂಚಾಕ್ಷರಿ ಹಿರೇಮಠ ಇನ್ನಿಲ್ಲ, ಕರ್ನಾಟಕ ವಿವಿ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕರ ವ್ಯಕ್ತಿಚಿತ್ರ
Dr Panchakshari Hiremath Death: ಹಿರಿಯ ಸಾಹಿತಿ, ಅನುವಾದಕ ಡಾ ಪಂಚಾಕ್ಷರಿ ಹಿರೇಮಠ (ಡಾ.ಪಂಚಾಕ್ಷರಯ್ಯ ಹಿರೇಮಠ) ಶುಕ್ರವಾರ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಇಲ್ಲಿದೆ ಅವರ ವ್ಯಕ್ತಿ ಚಿತ್ರ.

Dr Panchakshari Hiremath Death: ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾದ್ಯಾಪಕ ಹಾಗೂ ಇಲ್ಲಿಯ ಜಯನಗರ ನಿವಾಸಿ ಡಾ ಪಂಚಾಕ್ಷರಯ್ಯ ಹಿರೇಮಠ (92) ಶುಕ್ರವಾರ ನಿಧನರಾದರು. ಕನ್ನಡ ಸಾಹಿತ್ಯ ರಂಗದಲ್ಲಿ ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ, ಸಂಪಾದಕ ಮತ್ತು ವಾಗ್ಮಿಯಾಗಿ ಗುರುತಿಸಿಕೊಂಡಿದ್ದ ಪಂಚಾಕ್ಷರಯ್ಯ ಹಿರೇಮಠ ಅವರು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಮಾ.15 ಶನಿವಾರ ಸಂಜೆ 4ಗಂಟೆಗೆ ಕೊಪ್ಪಳ ಜಿಲ್ಲೆ ಬಿಸರಳ್ಳಿ ಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹಿರಿಯ ಸಾಹಿತಿ, ಅನುವಾದಕ ಡಾ ಪಂಚಾಕ್ಷರಿ ಹಿರೇಮಠ ವ್ಯಕ್ತಿಚಿತ್ರ
ಮೂಲತಃ ಕೊಪ್ಪಳ ಜಿಲ್ಲೆ ಬಿಸರಹಳ್ಳಿಯಲ್ಲಿ 1933ರ ಜನವರಿ 6 ರಂದು ಪಂಚಾಕ್ಷರಿ ಹಿರೇಮಠ ಅವರು ಜನಿಸಿದರು. ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟ, ಚಳವಳಿಯ ಪ್ರಭಾವಕ್ಕೆ ಒಳಗಾಗಿ ತಮ್ಮ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ ಸ್ವಾತಂತ್ರ್ಯ ಸಮರಾಂಗಣಕ್ಕೆ ಧುಮುಕಿದರು. ಹೀಗಾಗಿ ನಾಲ್ಕು ಗೋಡೆಗಳ ನಡುವಿನ ಅವರ ಶಿಕ್ಷಣ ಅರ್ಧದಲ್ಲಿಯೆ ನಿಂತುಹೋಯಿತು. ಬಹುಮುಖ ವ್ಯಕ್ತಿತ್ವದ ಪಂಚಾಕ್ಷರಿಯವರು ಜೀವನದ ಅನೇಕ ರಂಗಗಳಲ್ಲಿ ತಮ್ಮನ್ನು ತಾವು ಕ್ರೀಯಾಶೀಲವಾಗಿ ತೊಡಗಿಸಿಕೊಂಡರು. ಹೈಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿರುವಾಗಲೆ ಅವರು ವಿದ್ಯಾರ್ಥಿ ಮುಖಂಡರಾಗಿದ್ದರು.
ಕಾವ್ಯ, ಗದ್ಯ, ಪತ್ರ ಸಾಹಿತ್ಯ, ಸಣ್ಣಕಥೆ, ಸಂಶೋಧನೆ, ಸಂಪಾದನೆ ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸಿದ್ಧಿ ಸಾಧಿಸಿದ್ದ ಇವರು ಬಹುಭಾಷಾ ಕೋವಿದರು. ಹಲವು ಭಾಷೆಗಳಿಂದ ಅನೇಕ ಸಾಹಿತ್ಯ ಕೃತಿ ರತ್ನಗಳನ್ನು ಕನ್ನಡಕ್ಕೆ ಅನುವಾದಿಸಿ, ಜೊತೆಗೆ ಅವುಗಳ ಬಗೆಗೆ ಕನ್ನಡದಲ್ಲಿ ಸ್ವತಂತ್ರವಾಗಿ ಬರೆದು ಭಾಷಾಬಾಂಧವ್ಯಕ್ಕೆ ನಾಂದಿ ಹಾಡಿದ್ದರು. 19 ಕಾವ್ಯ ಸಂಕಲನಗಳು, 11 ಕಥಾ ಸಂಕಲನಗಳು, ಉರ್ದು ಮತ್ತು ಹಿಂದಿಯಿಂದ ಕನ್ನಡಕ್ಕೆ ತಂದ 8 ಅನುವಾದಿತ ಕಾದಂಬರಿಗಳು, 13 ಪ್ರಬಂಧ ಮತ್ತು ವಿಮರ್ಶೆಯ ಕೃತಿಗಳು, 7 ಚಿಂತನ ಸಾಹಿತ್ಯ ಕೃತಿಗಳು, 6 ಜೀವನ ಚರಿತ್ರೆಗಳು, 3 ಪತ್ರ ಸಾಹಿತ್ಯ ಕೃತಿಗಳು, 2 ಚರಿತ್ರೆಗಳು, 7 ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದಿತ ನಾಟಕಗಳು, ಸಂಪಾದನೆಯ 8 ಕೃತಿಗಳು, ಹಿಂದಿ, ತೆಲಗು ಹಾಗೂ ಆಂಗ್ಲಭಾಷೆಗೆ ಭಾಷಾಂತರಗೊಂಡ 8 ಕೃತಿಗಳು ಸೇರಿ ಸುಮಾರು ನೂರಕ್ಕೂ ಹೆಚ್ಚು ಉಪಯುಕ್ತ ಕೃತಿಗಳನ್ನು ಕನ್ನಡ ಸಾರಸ್ವಲೋಕಕ್ಕೆ ಸಮರ್ಪಿಸಿ ಧನ್ಯತೆಯನ್ನು ಕಂಡ ಡಾ ಪಂಚಾಕ್ಷರಿ ಹಿರೇಮಠ ಅವರು ಅಪ್ಪಟ ಭಾವಜೀವಿ ಮತ್ತು ಕನಸುಗಾರರಾಗಿದ್ದರು.
ಸಂದ ಪ್ರಶಸ್ತಿ-ಪುರಸ್ಕಾರಗಳು
ಡಾ ಪಂಚಾಕ್ಷರಿ ಹಿರೇಮಠ ಅವರಿಗೆ ಲಭಿಸಿದ ಪ್ರಮುಖ ಪ್ರಶಸ್ತಿಗಳಿವು- ಅಮೇರಿಕೆಯ ಅರಿಝೋನಾದ ಜಾಗತಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(ಡಿ.ಲಿಟ್.) ಪದವಿ.-1985, ಪ್ರತಿಷ್ಠಿತ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ (ಡಾ.ಹಿರೇಮಠರ ‘ಮಿತ್ರದೇಶದ ಕವಿತೆಗಳು’ ಸಂಗ್ರಹಕ್ಕೆ)-1988, ಕರ್ನಾಟಕ ಸಾಹಿತ್ಯ ಅಕಾಡಮಿಯ ಅತ್ಯುನ್ನತ ‘ಗೌರವ ಪ್ರಶಸ್ತಿ’-1994, ಕರ್ನಾಟಕ ಸರಕಾರದಿಂದ ಪ್ರತಿಷ್ಠಿತ ‘ರಾಜ್ಯೋತ್ಸವ ಪ್ರಶಸ್ತಿ’ – 1997, ಪ್ರಯಾಗದಲ್ಲಿ ಜರುಗಿದ ಹಿಂದಿ ಸಮ್ಮೇಳನದಲ್ಲಿ ‘ಸಾಹಿತ್ಯ ಮಾರ್ತಾಂಡ’ ಪ್ರಶಸ್ತಿ-2003, ದಿಲ್ಲಿಯ ‘ಮಾನವ ಮಂದಿರ’ ಸಂಸ್ಥೆಯ ಆಚಾರ್ಯ ರೂಪಚಂದ್ರ ಅವರಿಂದ ‘ಯಶಸ್ವೀ ಕವಿ’ ಪದವಿ-2003, ಅನುವಾದ ಸಾಹಿತ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡಮಿಯ ಪುರಸ್ಕಾರ–2005, ಬಾಳೆಹೊನ್ನೂರಿನ ಶ್ರೀಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ‘ಸಾಹಿತ್ಯ ಶಿರೋರತ್ನ’ ಪದವಿ-2006, ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ‘ಸಾಹಿತ್ಯ ವಿಭೂಷಣಂ’ ಪದವಿ-2007, ಕಮಲಾ ಗೋಯಂಕಾ ಫೌಂಡೇಶನ್ ಪ್ರಶಸ್ತಿ-2010, ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ – 2010 (ಜನವರಿ 10 ಮತ್ತು 11), ಹುಬ್ಬಳ್ಳಿ ಮೂರುಸಾವಿರಮಠದ ‘ಶ್ರೀ ಮೂಜಗಂ ಸಾಹಿತ್ಯ ಪ್ರಶಸ್ತಿ’-2011, ಬೆಂಗಳೂರಿನ ಕುವೆಂಪು ಬಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ -2025
ಡಾ ಪಂಚಾಕ್ಷರಿ ಹಿರೇಮಠ ಪಾಲ್ಗೊಂಡ ಸಮ್ಮೇಳನಗಳು : ನೇಪಾಳದಲ್ಲಿ ಜರುಗಿದ ಸಾಹಿತ್ಯ ಸಮಾವೇಶಕ್ಕೆ ಅತಿಥಿಯಾಗಿ – 1984, ಗ್ರೀಸ್ ದೇಶದ ಕೊರ್ಫೂದಲ್ಲಿ ಜರುಗಿದ ಜಾಗತಿಕ ಕವಿ ಸಮ್ಮೇಳನ –1985, ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ದಲ್ಲಿ ಜರುಗಿದ ವಿಶ್ವ ಕವಿ ಸಮ್ಮೇಳನದ (ರಾಯಲ್ ಥಾಯ್ ಸರಕಾರದ ಆಹ್ವಾನದ ಮೇರೆಗೆ ಪಾಲ್ಗೊಂಡಿದ್ದು) – 1988, ಚೀನಾದ ರಾಜಧಾನಿ ಥಾಯ್ಪೆದಲ್ಲಿ ಜರುಗಿದ 15ನೆಯ ಅಂತಾರಾಷ್ಟ್ರೀಯ ಕವಿ ಸಮ್ಮೇಳನ – 1994.
ಡಾ ಪಂಚಾಕ್ಷರಿ ಹಿರೇಮಠ ಅವರ ಸಾಹಿತ್ಯ-ಬದುಕು-ಸಾಧನೆ ಕುರಿತು ಪ್ರಕಟಗೊಂಡ ಕೃತಿಗಳು : ಪಂಚಾಕ್ಷರಿ ಹಿರೇಮಠರ ಕೃತಿಗಳು : ಒಂದು ಅಧ್ಯಯನ - ಪ್ರೊ. ಎ.ಎಚ್. ಮಾಸಾಪತಿ, ವಚನ ಪಂಚಾಕ್ಷರಿ – ಯಲ್ಲಪ್ಪ ಹಲಕುರ್ಕಿ, ಸ್ವಾತಂತ್ರ್ಯ ಸೇನಾನಿ, ಪ್ರಸಿದ್ಧ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ – ಡಾ.ಗವಿಸಿದ್ಧಪ್ಪ ಪಾಟೀಲ (ಗುಲಬರ್ಗಾ ವಿ.ವಿ.), ಅಜಾತ ಶತ್ರು ಡಾ.ಪಂಚಾಕ್ಷರಿ ಹಿರೇಮಠ - ಪ್ರೊ. ಸಿ.ವಿ.ಪಾಟೀಲ ಹಾಗೂ ಪ್ರೊ.ಎಚ್.ವಿ.ಭಿಕ್ಷಾವರ್ತಿಮಠ, ‘ಡಾ. ಪಂಚಾಕ್ಷರಿ ಹಿರೇಮಠ ಅವರ ಸಮಗ್ರ ಕಾವ್ಯ : ಒಂದು ಅಧ್ಯಯನ’ - ಪ್ರೊ.ಸೀತಾ (ಇದು ಕಲಬುರ್ಗಿ ವಿ.ವಿ. ಗೆ ಸಲ್ಲಿಸಿದ ಪಿ.ಎಚ್.ಡಿ. ಮಹಾಪ್ರಬಂಧ), ‘ಡಾ. ಪಂಚಾಕ್ಷರಿ ಹಿರೇಮಠ ಅವರ ಬದುಕು-ಬರಹ’ - ಪ್ರೊ. ಉಷಾ ಉದಯ ಹಿರೇಮಠ (ಇದು ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿ.ವಿ.ಗೆ ಸಲ್ಲಿಸಿದ ಪಿ.ಎಚ್.ಡಿ. ಮಹಾಪ್ರಬಂಧ), ‘ಡಾ. ಪಂಚಾಕ್ಷರಿ ಹಿರೇಮಠ ಅವರ ಮುಕ್ತಕಗಳು’ – ಗೀತಾ ಎಸ್. ಸ್ವಾಮಿ (ಈ ಕೃತಿಗೆ ಹಂಪಿ ಕನ್ನಡ ವಿ.ವಿ. ಎಂ.ಫಿಲ್ ಪದವಿ ಲಭಿಸಿದೆ), ‘ಡಾ. ಪಂಚಾಕ್ಷರಿ ಹಿರೇಮಠ ಅವರ ಸಮಗ್ರ ಕಾವ್ಯ’ - ಪ್ರಭಾವತಿ ಹಲಕುರ್ಕಿ (ಈ ಕೃತಿಗೆ ಧಾರವಾಡ ಕ.ವಿ.ವಿ. ಯಿಂದ ಎಂ.ಫಿಲ್. ಪದವಿ ಲಭಿಸಿದೆ.), ‘ಡಾ. ಪಂಚಾಕ್ಷರಿ ಹಿರೇಮಠ ಅವರ ಅನುವಾದಿತ ಕಥೆಗಳು’ - ಶ್ರೀದೇವಿ ಪೋಲೀಸ್ ಪಾಟೀಲ (ಈ ಕೃತಿಗೆ ಧಾರವಾಡ ಕ.ವಿ.ವಿ. ಯಿಂದ ಎಂ.ಫಿಲ್. ಪದವಿ ಲಭಿಸಿದೆ.), ‘ವಾತ್ಸಲ್ಯ’ (‘ಡಾ. ಪಂಚಾಕ್ಷರಿ ಹಿರೇಮಠ ಅವರ ಅಭಿನಂದನಾ ಗ್ರಂಥ) – ಡಾ.ಸಿ.ವ್ಹಿ.ವೇಣುಗೋಪಾಲ್ ಹಾಗೂ ಡಾ. ಬಸವರಾಜ ನಾಯ್ಕರ್.
ಬದುಕು-ಬರಹ, ನಡೆ-ನುಡಿಯಲ್ಲಿ ಸಾಮ್ಯತೆ ಸಾಧಿಸಿ ಲಿಂಗ ಮೆಚ್ಚಿ ಅಹುದಹುದೆನ್ನುವಂತೆ ಬದುಕಿದ್ದ ಡಾ. ಪಂಚಾಕ್ಷರಿ ಹಿರೇಮಠ ಅವರು ಸದಾ ಅಂತರ್ಮುಖಿಯಾಗಿ ಒಳಗಿನ ಬೆಳಗಿನೊಂದಿಗೆ ಕಾವ್ಯ ಪ್ರಭೆಯಲ್ಲಿ ಹೊಸ ಕಾವ್ಯ ಪ್ರತಿಮೆಗಳನ್ನು ಬೆಳಗಿಸಿದ್ದ ಶ್ರೇಷ್ಠ ಬರಹಗಾರರನ್ನು ಕಳೆದುಕೊಂಡು ಕನ್ನಡ ಸಾರಸ್ವತ ಲೋಕ ಬಡವಾಗಿದೆ.
ಡಾ ಪಂಚಾಕ್ಷರಿ ಹಿರೇಮಠ ಅವರ ಜೊತೆಗೆ ಒಡನಾಟ ಹೊಂದಿದ್ದ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಅವರು ಡಾ ಪಂಚಾಕ್ಷರಿ ಹಿರೇಮಠ ಅವರ ಅಗಲಿಕೆಗೆ ತೀವ್ರ ಶೋಕ ವ್ಯಕ್ತಪಡಿಸಿ, “ಕವಿಯಾದವನ ಶ್ರೇಯಸ್ಸು ಮತ್ತು ಪರಿಪೂರ್ಣತೆ ಇರುವುದು ಅವನು ‘ವ್ಯಷ್ಟಿ’ಯನ್ನಳಿದು ‘ಸಮಷ್ಟಿ’ಯಾಗುವುದರಲ್ಲಿಯೇ ಅಡಗಿದೆ. ಕವಿ ಕೇವಲ ವರ್ಣನೆಗೆ ನಿಲ್ಲುವುದಿಲ್ಲ; ನಿಲ್ಲಬಾರದು. ಅವನು ವರ್ಣನೆಯಿಂದ ಆಚೆ ಹೋಗುತ್ತಾನೆ. ಅಲ್ಲಿ ಕವಿ ತಾನು ಅನುಭವಿಸುವ ಅನುಭೂತಿಯ ವಾಹನವಾಗಲು ತನ್ನನ್ನು ತಾನು ಅಣಿಗೊಳಿಸುತ್ತಾನೆ. ಅಭೂತಪೂರ್ವ ಜ್ಯೋತಿಯಿಂದ ಅದನ್ನು ಬೆಳಗಿಸುತ್ತಾನೆ. ಕವಿ ತನ್ನ ಕಾವ್ಯ ಕ್ರಿಯೆಯಲ್ಲಿ ತೊಡಗಿದಾಗ ಅವನ ಆತ್ಮದ ಅಂತಃಸಂಗೀತವು ಮನ, ಬುದ್ಧಿ, ಹೃದಯದಿಂದ ಹೊರಟು ಕಂಠ ತಲುಪಿ ಶೃತಿ ಸರಸ್ವತಿಯ ಸ್ವರೂಪ ಪಡೆಯುತ್ತದೆ. ಆಗ ಅದು ನಿಜವಾದ ಕಾವ್ಯವೆನಿಸುತ್ತದೆ.” ಎಂದೆಲ್ಲ ಹೇಳುತ್ತಿದ್ದ ಡಾ ಪಂಚಾಕ್ಷರಿ ಹಿರೇಮಠ ಅವರ ಕಾವ್ಯದ ವಿಶ್ಲೇಷಣೆಯನ್ನು ಸ್ಮರಿಸಿಕೊಂಡಿದ್ದಾರೆ.
