ಕನ್ನಡ ಸುದ್ದಿ  /  Karnataka  /  Drinking Water Crisis In Karnataka As Reservoir Empty Bengaluru Mysuru Hubli To Face Drinking Water Problem Kub

Drinking Water Crisis: ಜಲಾಶಯಗಳ ನೀರಿನ ಮಟ್ಟ ಕುಸಿತ; ಕರ್ನಾಟಕದ ಹಲವು ನಗರಗಳಲ್ಲಿ ತಲೆದೋರಲಿದೆ ಕುಡಿಯುವ ನೀರಿನ ಸಮಸ್ಯೆ

Drinking Water Problem: ಕರ್ನಾಟಕದ ಹಲವು ಜಲಾಶಯಗಳ ನೀರಿನ ಮಟ್ಟ ಕುಸಿದು ಕುಡಿಯುವ ನೀರಿನ ಆತಂಕ ಶುರುವಾಗಿದೆ. ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಉಡುಪಿ ಸೇರಿದಂತೆ ಹಲವು ನಗರಗಳಲ್ಲಿ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಸನ್ನಿವೇಶ ಎದುರಾಗಿದೆ

ಮೈಸೂರು ಸಮೀಪ ಇರುವ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್ ಡ್ಯಾಂ)
ಮೈಸೂರು ಸಮೀಪ ಇರುವ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್ ಡ್ಯಾಂ)

ಬೇಸಿಗೆ ಬೇಗೆಯ ನಡುವೆ ನಿಮ್ಮ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆಯೇ? (Drinking Water Crisis) ಏಕೆಂದರೆ ಕರ್ನಾಟಕದ ಹಲವು ಜಲಾಶಯಗಳ ನೀರಿನ ಮಟ್ಟ ಕುಸಿದು ಕುಡಿಯುವ ನೀರಿನ ಆತಂಕ ಶುರುವಾಗಿದೆ. ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಉಡುಪಿ ಸೇರಿದಂತೆ ಹಲವು ನಗರಗಳಲ್ಲಿ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಸನ್ನಿವೇಶ ಎದುರಾಗಿದೆ.

ರಾಜ್ಯದಲ್ಲಿ 22 ಪ್ರಮುಖ ಜಲಾಶಯಗಳಿವೆ. ಇವುಗಳ ಒಟ್ಟು ಸಂಗ್ರಹ ಸಾಮರ್ಥ್ಯ 860.27 ಟಿಎಂಸಿ. ಆದರೆ ಮೇ 19ರ ಹೊತ್ತಿಗೆ 167.42 ಟಿಎಂಸಿ ನೀರು ಲಭ್ಯವಿದೆ. ಕಳೆದ ವರ್ಷ ಇದೇ ದಿನ 220.99 ಟಿಎಂಸಿ ನೀರಿನ ಲಭ್ಯತೆ ಜಲಾಶಯಗಳಲ್ಲಿದೆ. ಆದರೆ ಬಳಕೆಗೆ ಯೋಗ್ಯ ಇರುವುದು 79.60 ಟಿಎಂಸಿ (ಲೈವ್) ಸ್ಟೋರೇಜ್ ನೀರು ಮಾತ್ರ. ಅಂದರೆ ಒಂದು ವಾರದವರೆಗೆ ಮಾತ್ರ ಇದನ್ನು ಬಳಸಬಹುದು. ಸಮಸ್ಯೆ ತಪ್ಪಿಸಲು ನಗರ ಪ್ರದೇಶಗಳಲ್ಲಿ ದಿನ ಬಿಟ್ಟು ದಿನ ಇಲ್ಲವೇ ಮೂರು ದಿನಕ್ಕೊಮ್ಮೆ ನೀರು ಹರಿಸುವುದೂ ನಡೆದಿದೆ.

ವಿಶೇಷವಾಗಿ ಬೆಂಗಳೂರು, ಮೈಸೂರು ಮಹಾನಗರಕ್ಕೆ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ನೀರು ಒದಗಿಸಲಾಗುತ್ತಿದೆ. ಈ ನಗರಗಳಿಗೆ ನೀರು ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಲಲ್ಲಿ ಬೋರ್‌ವೆಲ್ ನೀರು ಒದಗಿಸಲಾಗುತ್ತಿದೆ. ಬೇಸಿಗೆ ಮುಗಿದು ಮುಂಗಾರು ಆರಂಭವಾಗುವವರೆಗೂ ಈ ಎರಡೂ ನಗರಗಳಲ್ಲಿ ಸಮಸ್ಯೆಯಾಗದು. ಮಂಡ್ಯ ಜಿಲ್ಲೆ ಕೆಆರ್‌ಎಸ್‌ನ ಸಾಮರ್ಥ್ಯ 49.45 ಟಿಎಂಸಿ. ಪ್ರಸ್ತುತ 13.06 ಟಿಎಂಸಿ ಲಭ್ಯವಿದ್ದು, 4.68 ಟಿಎಂಸಿ ಬಳಸಬಹುದು. ವಿಜಯನಗರ-ಕೊಪ್ಪಳ ಜಿಲ್ಲೆಗೆ ಹೊಂದಿಕೊಂಡಂತಿರುವ ತುಂಗಭದ್ರ ಜಲಾಶಯದ ಸಾಮರ್ಥ್ಯ 105.78 ಟಿಎಂಸಿ. ಸದ್ಯ 3.72 ಟಿಎಂಸಿ ಮಾತ್ರ ನೀರು ಬಳಸಬಹುದು. ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ 123.08 ಟಿಎಂಸಿ ಸಾಮರ್ಥ್ಯವಿದ್ದರೂ 6.2ಟಿಎಂಸಿ ಬಳಕೆಗೆ ಲಭ್ಯ.

ಅಲಮಟ್ಟಿ ಜಲಾಶಯದಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ (ಸಂಗ್ರಹ ಚಿತ್ರ)
ಅಲಮಟ್ಟಿ ಜಲಾಶಯದಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ (ಸಂಗ್ರಹ ಚಿತ್ರ)

ಈ ವರ್ಷ ಬೇಸಿಗೆಗೂ ಮುನ್ನ ಗ್ರಾಮಾಂತರ ಪ್ರದೇಶಗಳಲ್ಲಿ ಕೆರೆ ತುಂಬಿಸುವ ಯೋಜನೆಯಡಿ ನೀರು ಹರಿಸಿದ್ದರಿಂದ ಜಲಾಶಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸಣ್ಣಪುಟ್ಟ ಸಮಸ್ಯೆಯಾದರೂ ಇನ್ನು 15 ದಿನಗಳವರೆಗೂ ನಿರ್ವಹಣೆ ಮಾಡಬೇಕಾಗುತ್ತದೆ ಎಂಬುದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಸ್ಪಷ್ಟನೆ.

ಬಳ್ಳಾರಿ ನಗರದಲ್ಲಿಯೇ ಜನಸಂಖ್ಯೆ ಮೂರು ಲಕ್ಷಕ್ಕೂ ಅಧಿಕವಿದೆ. ಈ ನಗರಕ್ಕೆ ತುಂಗಭದ್ರಾ ಜಲಾಶಯದಿಂದ ನೀರು ಬಳಸಲಾಗುತ್ತಿದೆ. ಜಲಾಶಯದಲ್ಲಿ ನೀರಿನ ಕೊರತೆ ಹಾಗೂ ಸಂಗ್ರಹಾಗಾರಗಳ ಅಲಭ್ಯತೆಯಿಂದ ನಗರದಲ್ಲಿ ನೀರು ಸರಬರಾಜು ವ್ಯತ್ಯಯವಾಗಿದೆ. ಮೂರು ದಿನಗಳಿಗೊಮ್ಮೆ ನೀರು ಕೊಡುವ ಸ್ಥಿತಿಯಿದೆ. ಕೆಲ ಬಡಾವಣೆಗಳಿಗೆ ಆರು ಇಲ್ಲವೇ ಒಂಬತ್ತು ದಿನಗಳಿಗೊಮ್ಮೆ ಕುಡಿಯುವ ನೀರು ಕೊಡುತ್ತಿದ್ದೇವೆ ಎನ್ನುತ್ತಾರೆ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ.

ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಕೆಆರ್ ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಕುಡಿಯುವ ನೀರಿನ ಆತಂಕವೇನೂ ಇಲ್ಲ. ಬೆಂಗಳೂರು, ಮೈಸೂರು ಮಹಾನಗರ ಸೇರಿ ಹಲವು ನಗರ, ಪಟ್ಟಣಗಳಿಗೆ ಬೇಸಿಗೆ ಮುಗಿಯುವವರೆಗೂ ನೀರು ಒದಗಿಸಲಾಗುತ್ತದೆ. ಮುಂಗಾರು ಜೂನ್ 4 ರಿಂದ ಆರಂಭವಾಗುವ ನಿರೀಕ್ಷೆ ಇರುವುದರಿಂದ ಅಲ್ಲಿವರೆಗೆ ನಿರ್ವಹಣೆ ಮಾಡಲಾಗುತ್ತದೆ ಎಂಬುದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ ಅವರ ವಿವರಣೆ.

IPL_Entry_Point