ಮಾದಕ ದ್ರವ್ಯ ಚಟುವಟಿಕೆ ಕಂಡರೆ ಪೊಲೀಸರಿಗೆ ಮಾಹಿತಿ ನೀಡುವುದು ಈಗ ಸುಲಭ; ನಶೆ ಮುಕ್ತ ಕರ್ನಾಟಕ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
Drug Free Karnataka: ಮಾದಕ ದ್ರವ್ಯ ಚಟುವಟಿಕೆ ಮಟ್ಟ ಹಾಕುವುದಕ್ಕಾಗಿ ಕರ್ನಾಟಕ ಪೊಲೀಸ್ ಇಲಾಖೆ ಮುಂದಾಗಿದೆ. ಮಾದಕ ದ್ರವ್ಯ ಚಟುವಟಿಕೆ ಮಾಹಿತಿ ನೀಡಿಕೆ ಸುಲಭ. ನಶೆ ಮುಕ್ತ ಕರ್ನಾಟಕ ಆ್ಯಪ್ ಡೌನ್‌ಲೋಡ್ ಮಾಡಿ, ಮಾಹಿತಿ ಇದ್ದರೆ ಅಲ್ಲಿ ಹಂಚಿಕೊಳ್ಳಿ.
Drug Free Karnataka: ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತು ಬಳಕೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವುದಕ್ಕಾಗಿ ಕರ್ನಾಟಕ ಪೊಲೀಸ್ ಇಲಾಖೆ ನಶೆ ಮುಕ್ತ ಕರ್ನಾಟಕ ಅಥವಾ ಡ್ರಗ್ಸ್ ಫ್ರೀ ಕರ್ನಾಟಕ (Drug Free Karnataka) ಎಂಬ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಿ ಬಳಕೆಗೆ ಬಿಟ್ಟಿದೆ. ಗಾಂಜಾ ಬೆಳೆಗಾರರು, ಅದನ್ನು ಮಾರಾಟ ಮಾಡುತ್ತಿರುವವರು, ಗ್ರಾಹಕರು, ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಿರುವ ಪ್ರಯೋಗಾಲಯಗಳು, ಸಂಗ್ರಹಣೆ ಮಾಡುತ್ತಿರುವ ಸಂಗ್ರಹಕಾರರು, ಸಾಗಾಣಿಕೆ ವ್ಯವಸ್ಥೆ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಅವುಗಳನ್ನು ಈ ಆಪ್ ಮೂಲಕ ಗೌಪ್ಯವಾಗಿ ಹಂಚಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಪೊಲೀಸರು ಈ ಮಾಹಿತಿ ಬಳಸಿಕೊಂಡು ಮಾದಕ ವಸ್ತು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ನಶೆ ಮುಕ್ತ ಕರ್ನಾಟಕ; ಮೊಬೈಲ್ ಅಪ್ಲಿಕೇಶನ್‌ನಲ್ಲಿ ಏನಿದೆ
ಕರ್ನಾಟಕ ಪೊಲೀಸ್ ಇಲಾಖೆ ಪರಿಚಯಿಸಿರುವ ನಶೆ ಮುಕ್ತ ಕರ್ನಾಟಕ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಆರು ಮುಖ್ಯ ವಿಚಾರಗಳು ಪ್ರಸ್ತಾಪವಾಗಿವೆ. ಮೊದಲನೇಯದು ಪೊಲೀಸರಿಗೆ ಮಾಹಿತಿ ನೀಡುವವರು ಮಾದಕ ವಸ್ತುವಿನ ಕಳ್ಳಸಾಗಣಿಕೆ, ಮಾದಕ ಬೆಳೆ ಸಾಗುವಳಿ ಮಾಡುವವವರ ಬಗ್ಗೆ, ಮಾದಕ ವಸ್ತು ಸಂಗ್ರಹಣೆ ಬಗ್ಗೆ, ಮಾದಕವಸ್ತು ಸೇವನೆ ಬಗ್ಗೆ, ರಹಸ್ಯ ಔಷಧ ತಯಾರಕ ಘಟಕಗಳ ಬಗ್ಗೆ ಆಯಾ ವಿಭಾಗದಲ್ಲಿ ಮಾಹಿತಿ ನೀಡಬಹುದು. ಇದಕ್ಕೆ ಹೊರತಾಗಿ ಮಾದಕ ವಸ್ತುಗಳ ಕುರಿತು ಮಾಹಿತಿ ಇದ್ದರೆ ಇತರೆ ವಿಭಾಗ ಕ್ಲಿಕ್ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಈ ರೀತಿ ಮಾಹಿತಿ ನೀಡುವಾಗ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಕೂಡ ಅಪ್ಲಿಕೇಶನ್‌ನಲ್ಲಿ ನೀಡಲಾಗಿದೆ. ಇದರಂತೆ ಡ್ರಗ್ಸ್ ಮತ್ತು ನೀವು, ಅಗತ್ಯ ಕ್ರಮಗಳು, ಆಕ್ಷೇಪಣೆಯ ಕ್ರಮಗಳು, ವಿದ್ಯಾರ್ಥಿಗಳಿಗೆ ಸಲಹೆ, ಮಾದಕ ವ್ಯಸನಕ್ಕೆ ಚಿಕಿತ್ಸೆ ಹೀಗೆ ವಿವರಗಳಿವೆ.
ಮಾದಕ ವಸ್ತು ಮತ್ತು ನಿದ್ರಾಜನ್ಯ ಪದಾರ್ಥಗಳ ಕಾಯ್ದೆ 1985ರ ವ್ಯಾಪ್ತಿಗೆ ಬರುವ ಅಪರಾಧಗಳಿಗೆ ಏನು ಶಿಕ್ಷೆ, ಆ ಶಿಕ್ಷೆಯ ಮಾಹಿತಿ, ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಮಾದಕ ವಸ್ತುವಿನ ದುಷ್ಪರಿಣಾಮಗಳು, ಸಾರ್ವಜನಿಕರು ಪೊಲೀಸರಿಗೆ ಮಾದಕ ವಸ್ತುವಿನ ಕಳ್ಳಸಾಗಣೆ, ಮಾದಕ ಬೆಳೆಯ ಕೃಷಿ, ಅವುಗಳ ಸಂಗ್ರಹಣೆ, ಮಾದಕ ವ್ಯಸನಿಗಳ ಕುರಿತಾದ ಮಾಹಿತಿ, ಮಾದಕ ವಸ್ತುವಿನ ತಯಾರಿಕಾ ಘಟಕಗಳ ಕುರಿತಾಗಿ ಗುಪ್ತ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕನ್ನಡ ಅಥವಾ ಇಂಗ್ಲೀಷ್‌ನಲ್ಲಿ ಸದರಿ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿರುತ್ತದೆ.
ನಶೆ ಮುಕ್ತ ಕರ್ನಾಟಕ; ಮೊಬೈಲ್ ಅಪ್ಲಿಕೇಶನ್ ಬಳಸುವುದು ಹೇಗೆ?
1) ನಶೆ ಮುಕ್ತ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಬಳಸುವುದಕ್ಕಾಗಿ ಮೊದಲು, ಗೂಗಲ್ ಪ್ಲೇ ಸ್ಟೋರ್‌ನಿಂದ 'ನಶೆ ಮುಕ್ತ ಕರ್ನಾಟಕ' (ಡ್ರಗ್ ಫ್ರೀ ಕರ್ನಾಟಕ) ಆ್ಯಪ್ ಅನ್ನು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು.
2) ನಂತರ, ನಶೆ ಮುಕ್ತ ಭಾರತ ಆಪ್ಲಿಕೇಶನ್ ಅನ್ನು ಮೊಬೈಲ್ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಬೇಕು.
3) ಬಳಿಕ ಆ ಅಪ್ಲಿಕೇಶನ್‌ನಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ಮಾಹಿತಿ ಇದ್ದರೆ ಅವುಗಳ ವಿವರವನ್ನು ಇಂಗ್ಲಿಷ್ ಅಥವಾ ಕನ್ನಡದಲ್ಲಿ ವರದಿ ಮಾಡಬಹುದಾಗಿರುತ್ತದೆ.
ಈ ಮಾಹಿತಿ ಮತ್ತು ಸಂಬಂಧಿಸಿದ ಲೊಕೇಷನ್ ಮಾಹಿತಿಯನ್ನು ಈ ಅಪ್ಲಿಕೇಶನ್ ಸ್ಥಳೀಯ ಪೊಲೀಸರು, ಘಟಕಾಧಿಕಾರಿಗಳಾದ ಡಿಸಿಪಿ, ಎಸ್‌ಪಿ ಮತ್ತು ಉಸ್ತುವಾರಿ ಮೇಲಧಿಕಾರಿಗಳಿಗೆ ರವಾನಿಸುತ್ತದೆ. ಮಾಹಿತಿ ಪಡೆದ ಅಧಿಕಾರಿಯು ಆ ಮಾಹಿತಿಯ ಸತ್ಯಾಸತ್ಯ ಪರಿಶೀಲಿಸಿಕೊಂಡು ದಾಳಿ ನಡೆಸುವುದಕ್ಕೆ ಕ್ರಮ ತೆಗೆದುಕೊಳ್ಳುತ್ತಾರೆ.
ಕರ್ನಾಟಕ ನಶೆ ಮುಕ್ತ ಆಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ನೇರ ಲಿಂಕ್- https://play.google.com/store/apps/details?id=in.gov.drugfreekarnataka
ವಿಭಾಗ