ಮೈಸೂರು: ಜೂನ್ 22ರಂದು ಡಿವಿಜಿ ಬಳಗ ಪ್ರತಿಷ್ಠಾನದ ಡಿವಿಜಿ ಪ್ರಶಸ್ತಿ ಪ್ರದಾನ ಸಮಾರಂಭ
ಡಿವಿಜಿ ಬಳಗ ಪ್ರತಿಷ್ಠಾನದ ಡಿವಿಜಿ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 22 ರಂದು ಮೈಸೂರಿನಲ್ಲಿ ನಡೆಯಲಿದೆ.

ಮೈಸೂರು: ಡಿವಿಜಿ ಬಳಗ ಪ್ರತಿಷ್ಠಾನದ 'ಡಿವಿಜಿ ಪ್ರಶಸ್ತಿ' ಪ್ರದಾನ ಸಮಾರಂಭ ಜೂನ್ 22 ರಂದು ಮೈಸೂರಿನ ರಮಾ ಗೋವಿಂದ ಸಭಾಂಗಣ, ಗಾನಭಾರತಿ ಕುವೆಂಪು ನಗರದಲ್ಲಿ ನಡೆಯಲಿದೆ. ಈ ಬಾರಿ ಖ್ಯಾತ ಸಾಹಿತಿ, ಕವಿ 'ತನಾಶಿ' ಎಂದೇ ಪ್ರಸಿದ್ಧರಾದ ಟಿ ಎನ್ ಶಿವಕುಮಾರ್ ಅವರಿಗೆ 2025 ರ ಡಿವಿಜಿ ಪ್ರಶಸ್ತಿ ನೀಡಲಾಗುವುದು ಎಂದು ಮೈಸೂರಿನ ಡಿವಿಜಿ ಬಳಗ ಪ್ರತಿಷ್ಠಾನದ ಸಂಚಾಲಕ ಕನಕರಾಜು ತಿಳಿಸಿದ್ದಾರೆ.
ಖ್ಯಾತ ವಾಗ್ಮಿ ವಿದ್ವಾನ್ ಜಿ ಎಸ್ ನಟೇಶ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಹಾಗೂ ಸಂಗೀತಗಾರರೂ ಮತ್ತು ಸಂಗೀತ ಶಾಸ್ತ್ರಜ್ಞರೂ ಆದ ವಿದ್ವಾನ್ ಡಾ. ರಾ ಸ ನಂದಕುಮಾರ್ ಅವರು ಭಾಗವಹಿಸಲಿದ್ದಾರೆ.
ಮೈಸೂರಿನ ರಮಾ ಗೋವಿಂದ ಸಭಾಂಗಣದಲ್ಲಿ ನಡೆಯುವ ಈ ಡಿವಿಜಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಎಲ್ಲರೂ ಬಂದು ಪಾಲ್ಗೊಳ್ಳುವಂತೆ ಕನಕರಾಜು ಆಹ್ವಾನ ನೀಡಿದ್ದಾರೆ.
ಡಿವಿಜಿ ಪ್ರಶಸ್ತಿ-2025 ಪ್ರಶಸ್ತಿ ಪುರಸ್ಕೃತರ ಪರಿಚಯ
ತನಾಶಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು ಟಿ ಎನ್ ಶಿವಕುಮಾರ್. ಮೂಲತಃ ಮಂಡ್ಯ ಜಿಲ್ಲೆಯವರಾದ ಇವರು ಕನ್ನಡದಲ್ಲಿ ಎಂ ಎ ಪದವೀಧರರು. ಕೆಲಕಾಲ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ನ್ಯಾಯಾಂಗ ಇಲಾಖೆಯಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಳೆಗನ್ನಡ, ಕನ್ನಡ ವ್ಯಾಕರಣ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿಯುಳ್ಳ ಇವರು ರಾಜ್ಯಾದ್ಯಂತ ಎರಡು ಸಾವಿರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ. ಪುಟ್ಟ ವಾಕ್ಯಗಳಲ್ಲಿ ದಿಟ್ಟ ನುಡಿ ಶೀರ್ಷಿಕೆಯ ಅಡಿಯಲ್ಲಿ ಹೊಸಗನ್ನಡದಲ್ಲಿ ರಾಮಾಯಣ ರಚಿಸಿದ್ದಾರೆ. ಶಿವಕುಮಾರ ಮುಕ್ತಕಗಳು ಎಂಬ ಹೆಸರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಚೌಪದಿಗಳನ್ನು ರಚಿಸಿದ್ದಾರೆ. ಸೋಮೇಶ್ವರ ಶತಕಕ್ಕೆ ಅರ್ಥ ಮತ್ತು ವ್ಯಾಖ್ಯಾನ ಬರೆದಿರುವ ಇವರು ಹರಿಭಕ್ತಿಸಾರಕ್ಕೂ ವಿವರಣೆ ನೀಡಿದ್ದಾರೆ. ಮಂಕುತಿಮ್ಮನ ಕಗ್ಗ ಹಾಗೂ ಮರುಳಮುನಿಯನ ಕಗ್ಗಕ್ಕೆ ಅರ್ಥ ಮತ್ತು ವ್ಯಾಖ್ಯಾನ ಬರೆದಿದ್ದಾರೆ. ಸಾವಿರಾರು ಭಾಮಿನಿ ಷಟ್ನದಿಗಳ ರಚನೆ ಮಾಡಿರುವ ಇವರು ಛಂದೋಬದ್ಧ ಕವಿತೆ ರಚನೆ ಮಾಡಿದ್ದಾರೆ. ಇವರು ಚೂಡಾರತ್ನ ಶತಕಕ್ಕೆ ಅರ್ಥ ಮತ್ತಾ ವ್ಯಾಖ್ಯಾನ ಹಾಗೂ ಭಾಮಿನಿ ಷಟ್ನದಿಯಲ್ಲಿ ಗಣೇಶಚರಿತೆ ಎಂಬ ಖಂಡಕಾವ್ಯವನ್ನೂ ಬರೆದಿದ್ದಾರೆ. ಇವರಿಗೆ ಸ್ವರ್ಣ ಸಿರಿ ಪ್ರಶಸ್ತಿ, ಶಿವಕುಮಾರವ್ಯಾಸ ಹಾಗೂ ಭಾಮಿನಿ ಗುರು ಎಂಬ ಬಿರುದುಗಳು ದೊರೆತಿವೆ. ಮಂಡ್ಯದ ಶಿವಶರಣೆ ಅಮ್ಮಯ್ಯಮ್ಮ ದುರ್ಗೆಗೌಡ ಪ್ರತಿಷ್ಠಾನದ ಆಧ್ಯಾತ್ಮರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ.