ಡಿವಿಜಿ- ಬಿಜಿಎಲ್‌ ಸ್ವಾಮಿ, ತಂದೆ-ಮಗನ ಕೃತಿಗಳಿಗೆ ಇಂಗ್ಲೀಷ್‌ ರೂಪ; ಕಗ್ಗ, ಹಸುರು ಹೊನ್ನು ಅನುವಾದ ಕೃತಿ ಬಿಡುಗಡೆ ಖುಷಿ
ಕನ್ನಡ ಸುದ್ದಿ  /  ಕರ್ನಾಟಕ  /  ಡಿವಿಜಿ- ಬಿಜಿಎಲ್‌ ಸ್ವಾಮಿ, ತಂದೆ-ಮಗನ ಕೃತಿಗಳಿಗೆ ಇಂಗ್ಲೀಷ್‌ ರೂಪ; ಕಗ್ಗ, ಹಸುರು ಹೊನ್ನು ಅನುವಾದ ಕೃತಿ ಬಿಡುಗಡೆ ಖುಷಿ

ಡಿವಿಜಿ- ಬಿಜಿಎಲ್‌ ಸ್ವಾಮಿ, ತಂದೆ-ಮಗನ ಕೃತಿಗಳಿಗೆ ಇಂಗ್ಲೀಷ್‌ ರೂಪ; ಕಗ್ಗ, ಹಸುರು ಹೊನ್ನು ಅನುವಾದ ಕೃತಿ ಬಿಡುಗಡೆ ಖುಷಿ

ಮಂಕುತಿಮ್ಮನ ಕಗ್ಗ ಎನ್ನುವ ಡಿವಿಜಿ ಅವರ ಕೃತಿಯ ಪ್ರಭಾವ ಅಪರಿಮಿತ. ಅದೇ ರೀತಿ ಅವರ ಪುತ್ರ ಬಿಜಿಎಲ್‌ ಸ್ವಾಮಿ ಏಳು ದಶಕದ ಹಿಂದೆಯೇ ಕೊಟ್ಟ ಹಸುರುಹೊನ್ನು ಕೃತಿ ಈಗಲೂ ಜನರ ಮನಸಿನಲ್ಲಿ ಹಸುರಾಗಿಯೇ ಉಳಿದಿದೆ. ಅಂತಹ ಕೃತಿಗಳು ಈಗ ಇಂಗ್ಲೀಷ್‌ಗೆ ಅನುವಾದಗೊಂಡು ಬೆಂಗಳೂರಲ್ಲಿ ಬಿಡುಗಡೆಗೊಳ್ಳುವ ಸಂತಸದ ಕ್ಷಣ. ಲೇಖಕರ ಮಾತು, ಕಾರ್ಯಕ್ರಮದ ವಿವರ ಇಲ್ಲಿದೆ.

ಡಿವಿಜಿ ಹಾಗೂ ಬಿಜಿಎಲ್‌ ಸ್ವಾಮಿ ಅಪ್ಪ ಮಗನ ಕೃತಿಗಳು ಈಗಲೂ ಇಂಗ್ಲೀಷ್‌ಗೆ ಅನುವಾದವಾಗುತ್ತಿವೆ. ನಟರಾಜನ್‌ (ಎಡಚಿತ್ರ) ಹಾಗೂ ಜ್ಯೋತಿ ನಟರಾಜನ್‌ (ಬಲಚಿತ್ರ) ಅನುವಾದಕರು.
ಡಿವಿಜಿ ಹಾಗೂ ಬಿಜಿಎಲ್‌ ಸ್ವಾಮಿ ಅಪ್ಪ ಮಗನ ಕೃತಿಗಳು ಈಗಲೂ ಇಂಗ್ಲೀಷ್‌ಗೆ ಅನುವಾದವಾಗುತ್ತಿವೆ. ನಟರಾಜನ್‌ (ಎಡಚಿತ್ರ) ಹಾಗೂ ಜ್ಯೋತಿ ನಟರಾಜನ್‌ (ಬಲಚಿತ್ರ) ಅನುವಾದಕರು.

ಅಪರೂಪದ ಅನುಭಾವ ಸಾಹಿತ್ಯ, ಮಂಕುತಿಮ್ಮನ ಕಗ್ಗದ ಮೂಲಕ ಮನೆಮಾತಾದ ಡಿ.ವಿ.ಗುಂಡಪ್ಪ (ಡಿವಿಜಿ), ಹಸುರು ಕೃತಿಗಳ ಮೂಲಕ ಕರುನಾಡ ಜನರ ಮನಸುಗಳಲ್ಲಿ ಹಸಿರಾಗಿಯೇ ಉಳಿದಿರುವ ಬಿಜಿಎಲ್‌ ಸ್ವಾಮಿ ಇಬ್ಬರೂ ಕನ್ನಡದ ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ. ಸಾಹಿತ್ಯ ಲೋಕದಲ್ಲಿ ತಂದೆ-ಮಗನ ಜೋಡಿಯ ಸಾಧನೆ ಅಪರೂಪದ್ದು. ಡಿವಿಜಿ ಅವರು ಮಂಕುತಿಮ್ಮನ ಕಗ್ಗ ಸಹಿತ ಹಲವಾರು ಕೃತಿಗಳ ಮೂಲಕ ನೂರು ವರ್ಷ ದಾಟಿದರೂ ಜೀವಂತವಾಗಿದ್ದಾರೆ. ಸಸ್ಯಶಾಸ್ತ್ರಜ್ಞರಾಗಿ ಕನ್ನಡದಲ್ಲಿ ಹಲವಾರು ಕೃತಿಗಳನ್ನು ನೀಡಿದ ಬಿಜಿಎಲ್‌ ಸ್ವಾಮಿ ಅವರು ಕೂಡ ಅಪ್ಪನ ಹಾದಿಯಲ್ಲೇ ಸಾಗಿದವರು. ಈ ಎರಡೂ ಕೃತಿಗಳು ಈಗ ಇಂಗ್ಲೀಷ್‌ಗೆ ಭಾಷಾಂತರಗೊಂಡಿವೆ. ಅದರಲ್ಲೂ ಡಿವಿಜಿ- ಬಿಜಿಎಲ್‌ ಸ್ವಾಮಿ ಅವರ ಕುಟುಂಬದವರೇ ಇಂತಹದೊಂದು ಅಪರೂಪದ ಪ್ರಯತ್ನ ಮಾಡಿದ್ದಾರೆ.

ಡಿವಿಜಿ ಅವರ ಮೊಮ್ಮಗ (ಮಗಳ ಮಗ), ಹೈದರಾಬಾದ್‌ನ ಬಿಎಚ್‌ಇಎಲ್‌ನಲ್ಲಿ ಎಂಜಿನಿಯರ್‌ ಆಗಿ ನಿವೃತ್ತ ಜೀವನ ನಡೆಸುತ್ತಿರುವ ಕೆ.ನಟರಾಜನ್‌, ಹಾಗೂ ಹೈದರಾಬಾದ್‌ನಲ್ಲೇ 27 ವರ್ಷ ಇಂಗ್ಲೀಷ್‌ ಉಪನ್ಯಾಸಕಿಯಾಗಿ ಕೆಲಸ ಮಾಡಿ ಬೆಂಗಳೂರಿಗೆ ಬಂದ ಜ್ಯೋತಿ ನಟರಾಜನ್‌ ದಂಪತಿ ಜೋಡಿ ಪುಸ್ತಕವನ್ನು ಇಂಗ್ಲೀಷ್‌ಗೆ ಅನುವಾದ ಮಾಡಿದ್ದಾರೆ. ನಟರಾಜನ್‌ ಅವರು ಮಂಕುತಿಮ್ಮನ ಕಗ್ಗವನ್ನು ‘ಎ ಯೋಕೆಲ್ಸ್‌ ಶೀಫ್ಸ್‌’ (A Yokels Sheafs) ಎನ್ನುವ ಹೆಸರಿನಲ್ಲಿ ಹಾಗೂ ಜ್ಯೋತಿ ನಟರಾಜನ್‌ ಅವರು ಹಸುರು ಹೊನ್ನು ಕೃತಿಯನ್ನು ‘ಎ ಗ್ರೀನ್‌ ಇಸ್‌ ಗೋಲ್ಡ್‌’ (A Green Is Gold) ಎನ್ನುವ ಹೆಸರಿನಲ್ಲಿ ಅನುವಾದಿಸಿದ್ದಾರೆ.

ಡಿವಿಜಿ ಬಳಗ ಪ್ರತಿಷ್ಠಾನವು ಈ ಎರಡೂ ಆಂಗ್ಲ ಕೃತಿಗಳನ್ನು ಪ್ರಕಟಿಸುತ್ತಿದೆ. ಕೃತಿಗಳ ಬಿಡುಗಡೆ ಕಾರ್ಯಕ್ರಮ 2024 ರ ಭಾನುವಾರ ಡಿಸೆಂಬರ್ 15 ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ ಕಲ್ಚರ್ ನಲ್ಲಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ನಟರಾಜನ್‌ ಹಾಗೂ ಜ್ಯೋತಿ ನಟರಾಜನ್‌ ದಂಪತಿ ಎಚ್‌ಟಿ ಕನ್ನಡದೊಂದಿಗೆ ಮಾತನಾಡಿದ್ದಾರೆ.

ಬಾಲ್ಯದಿಂದಲೇ ಅಜ್ಜನ ಪ್ರಭಾವ: ಕೆ ನಟರಾಜನ್

ನಾನು ಡಿವಿಜಿ ಅವರ ಮಗಳು ತಂಗಮ್ಮ ಪುತ್ರ. ಅಜ್ಜನ ಪ್ರಭಾವ ಬಾಲ್ಯದಿಂದಲೇ ನನ್ನ ಮೇಲೆ ಇತ್ತು. ಅವರ ಜ್ಞಾನ, ಮಾತು, ಬರವಣಿಗೆ, ವ್ಯಕ್ತಿತ್ವ ನಮ್ಮನ್ನೆಲ್ಲಾ ಗಾಢವಾಗಿ ಪ್ರಭಾವಿಸಿತ್ತು. ಅವರಿಂದ ಬೈಸಿಕೊಳ್ಳುತ್ತಲೇ ಅದೆಷ್ಟು ವಿಚಾರಗಳನ್ನು ಕಲಿತೆವು ಎಂದು ಈಗ ಅನ್ನಿಸುತ್ತದೆ. ಅದರಲ್ಲೂ ಅವರು ನೀಡಿದ ಮಂಕುತಿಮ್ಮನ ಕಗ್ಗ ಕೃತಿಯ ಸಾರ್ಥಕ್ಯ ಅಪರಿಮಿತ. ಪೀಳಿಗೆಗಳನ್ನು ದಾಟಿ ಈಗಲೂ ಅದೆಷ್ಟು ಜನರನ್ನು ಅದು ಪ್ರಭಾವಿಸಿದರೆ ಎಂದು ಒಂದು ಕ್ಷಣ ಯೋಚಿಸಿದರೆ ಭಾಷೆ, ಸಾಹಿತ್ಯಕ್ಕೆ ಅದೆಷ್ಟು ಶಕ್ತಿ ಇದೆ ಎನ್ನಿಸದೇ ಇರಲಾರದು. ಅಜ್ಜಿ ಮನೆಯಲ್ಲಿ ಅದೆಷ್ಟು ದಿನ ಕಳೆದಿದ್ದೀವೋ. ಅಜ್ಜನ ಪ್ರಭಾವಳಿ ನಮ್ಮ ಮೇಲೆ ಬಿದ್ದಿದ್ದು ಇದೇ ವೇಳೆಯೇ. ನಾನು ಎಂಜಿನಿಯರಿಂಗ್‌ ಓದಿ ಉದ್ಯೋಗ ಅರಸಿ ಹೈದ್ರಾಬಾದ್‌ಗೆ ಹೋದೆ. ನನ್ನಜ್ಜ ನಮ್ಮನ್ನಗಲಿದಾಗ ನನಗೆ 30 ವರ್ಷ. ಸಸ್ಯಶಾಸ್ತ್ರಜ್ಞರಾಗಿ ಹೆಸರು ಮಾಡಿದ್ದ ಸೋದರ ಮಾವ ಬಿಜಿಎಲ್‌ ಸ್ವಾಮಿ ಅವರ ಒಡನಾಟ ನನಗಿತ್ತು. ಕಗ್ಗವನ್ನು ಕೇಳುತ್ತಲೇ ಬೆಳೆದ ನನಗೆ ಓದುವ ಆಸಕ್ತಿ ಇತ್ತು. ಮೊದಲ ಬಾರಿಗೆ ಜೀವನ ಧರ್ಮ ಯೋಗ ಎನ್ನುವ ಪುಸ್ತಕವನ್ನು ನಾನು ಪ್ರಕಟಿಸಿದೆ. ಅದು ಭಗವದ್ಗೀತೆಯ ವ್ಯಾಖ್ಯಾನವನ್ನು ಮೋಕ್ಷ ಶಾಸ್ತ್ರವಾಗಿ ಬರೆಯದೆ ಆರೋಗ್ಯಕರ ಜೀವನ ನಡೆಸಲು ಕೈಪಿಡಿಯಾಗಿ ಬರೆದಿದ್ದಾರೆ. ಡಿವಿಜಿ ಅವರ ಭಾಷಣ ಆಧರಿಸಿದ ಕೃತಿ ಇದಾಗಿತ್ತು.

ನಿವೃತ್ತಿಯಾಗಿ ಬಂದ ನಂತರ ಬೆಂಗಳೂರಿನಲ್ಲಿ ಕೋವಿಡ್‌ ದಿನಗಳು ನಮ್ಮನ್ನು ಇನ್ನಿಲ್ಲದಂತೆ ಕಾಡಿದವು. ಎಲ್ಲೂ ಹೋಗುವ ಹಾಗಿಲ್ಲ. ಆಗ ಕಗ್ಗವನ್ನು ಇಂಗ್ಲೀಷ್‌ಗೆ ಅನುವಾದ ಮಾಡುವ ಬಹುದಿನಗಳ ಕನಸಿನ ಕೆಲಸ ಕೈಗೆತ್ತಿಕೊಂಡೆ. ಕೆಲವರು ಕಗ್ಗವನ್ನು ಇಂಗ್ಲೀಷ್‌ಗೆ ತಂದೆ. ನಾನು ಕಗ್ಗಗಳ ಜನಕನ ಸಂಗದಲ್ಲಿಯೇ ಬೆಳೆದನವಾಗಿದ್ದರಿಂದ ಅದರ ಅಗಾಧತೆಯ ಅರಿವಿತ್ತು. ಹಲವರ ಸಹಕಾರ ಪಡೆದು 196 ಪುಟಗಳ ಕೃತಿ ಸಿದ್ದಪಡಿಸಿದೆ. ಈಗ ಅದನ್ನು ಮೈಸೂರಿನ ಡಿವಿಜಿ ಬಳಗ ಪ್ರತಿಷ್ಠಾನ ಹೊರ ತರುತ್ತಿರುವುದು ನನಗೆ ಖುಷಿ ತಂದಿದೆ. (ಇದು ಕೆ.ನಟರಾಜನ್‌ ಅವರ ಮನದಾಳದ ನುಡಿ).

ಪೀಳಿಗೆಗೆ ವರ್ಗಾಯಿಸುವ ಖುಷಿ: ಜ್ಯೋತಿ ನಟರಾಜನ್

ನಾನು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವಳು. ಸಾಹಿತ್ಯದ ಹಿನ್ನಲೆ ಏನೂ ಇರಲಿಲ್ಲ. ಎಂಎ ಇಂಗ್ಲೀಷ್‌ ಮುಗಿಸಿ ಉಪನ್ಯಾಸಕಿಯಾಗಿದ್ದೆ. ಡಿವಿಜಿ ಅವರ ಕುಟುಂಬದ ಸೊಸೆಯಾಗುತ್ತೇನೆ ಎಂದಾಗ ಸಹಜವಾಗಿಯೇ ಪುಳಕವಾಗಿತ್ತು. ನಮ್ಮ ಮದುವೆ ಹೊತ್ತಿಗೆ ಡಿವಿಜಿ ಅವರು ಕಾಲವಾಗಿ ಕೆಲವೇ ದಿನಗಳಾಗಿತ್ತು. ಆದರೆ ಅವರ ಪ್ರಭಾವ ಇಡೀ ಕುಟುಂಬ ಮಾತ್ರವಲ್ಲದೇ ಎಲ್ಲೆಡೆ ಇತ್ತು. ಅವರ ಪುತ್ರ ಬಿಜಿಎಲ್‌ ಸ್ವಾಮಿ ಅವರು ತಂದೆಗಿಂತ ಭಿನ್ನ ಕ್ಷೇತ್ರ ಆಯ್ದುಕೊಂಡು ಸಸ್ಯಶಾಸ್ತ್ರದಲ್ಲಿ ದೊಡ್ಡ ಹೆಸರು, ಅಮೂಲ್ಯ ಕೃತಿಗಳನ್ನು ನೀಡಿದವರು. ಇಂತಹ ಕುಟುಂಬದಲ್ಲಿ ಗುರುತಿಸಿಕೊಂಡ ಹೆಮ್ಮೆ ಕೂಡ ಇದ್ದೇ ಇತ್ತು. ಪತಿಯವರು ಹೈದ್ರಾಬಾದ್‌ಗೆ ಉದ್ಯೋಗ ಅರಸಿ ಹೋಗಿದ್ದರಿಂದ ಅಲ್ಲಿಯೇ ನನ್ನ ಬದುಕು ಸ್ಥಳಾಂತರವಾಯಿತು. ಇಂಗ್ಲೀಷ್‌ ಅಧ್ಯಾಪಕಿಯಾಗಿ ಕೆಲಸ ಮಾಡಿಕೊಳ್ಳುತ್ತಲೇ ಡಿವಿಜಿ ಅವರ ಕೃತಿಗಳು, ಬಿಜಿಎಲ್‌ ಸ್ವಾಮಿ ಅವರ ಪುಸ್ತಕಗಳನ್ನು ಓದಿ ನಿಜಕ್ಕೂ ಪುಳಕಿತಳಾಗುತ್ತಿದ್ದೆ. ಎಂತಹ ಅನುಪಮ ಜ್ಞಾನ ಇಬ್ಬರದೂ ಎನ್ನಿಸುತ್ತಿತ್ತು. ಜತೆಯಲ್ಲಿದ್ದವರೂ ಇದೆಲ್ಲವನ್ನೂ ಚರ್ಚಿಸುತ್ತಿದ್ದರು. ಬಿಜಿಎಲ್‌ ಸ್ವಾಮಿ ಅವರದ್ದೂ ಇಪ್ಪತ್ತಕ್ಕೂ ಹೆಚ್ಚು ಕೃತಿ ಬಂದಿದ್ದರೂ ಹಸುರು ಹೊನ್ನು ಕೃತಿ ನನ್ನನ್ನು ಆಕರ್ಷಿಸಿತ್ತು. ಇಂಗ್ಲೀಷ್‌ ಓದಿದ್ದ ನನಗೆ ಸಸ್ಯಶಾಸ್ತ್ರದ ಜ್ಞಾನವೂ ಇರಲಿಲ್ಲ. ಈ ಕೃತಿ ಓದಿದ ಮೇಲೆ ಸಾಕಷ್ಟು ವಿಷಯ ತಿಳಿದುಕೊಂಡೆ. ಸಸ್ಯಶಾಸ್ತ್ರವನ್ನು ಕನ್ನಡದ ಅದೆಷ್ಟೋ ಹೊಸ ಪದಗಳಲ್ಲಿ ಕಟ್ಟಿಕೊಟ್ಟ ಅವರ ಜ್ಞಾನ ಸಂಪತ್ತು ನಿಜಕ್ಕೂ ಅಚ್ಚರಿ ಎನ್ನಿಸಿತ್ತು.

ಪತಿ ನಿವೃತ್ತಿಯಾದ ನಂತರ ಬೆಂಗಳೂರಿಗೆ ನಾನೂ ಸ್ಥಳಾಂತರಗೊಂಡೆ. ಕೋವಿಡ್‌ ಕಾಲದಲ್ಲಿ ಪತಿ ಅವರಿಗೆ ಕಗ್ಗವನ್ನು ಇಂಗ್ಲೀಷ್‌ಗೆ ಅನುವಾದಿಸಲು ಸಹಕರಿಸುತ್ತಿದ್ದೆ. ಆಗ ನೀವೂ ಹಸುರು ಹೊನ್ನು ಕೃತಿ ಏಕೆ ಇಂಗ್ಲೀಷ್‌ಗೆ ಬರೆಯಬಾರದು ಎನ್ನುವ ಉತ್ತೇಜನವನ್ನು ಡಿವಿಜಿ ಬಳಗದ ಕನಕರಾಜು ಅವರು ತುಂಬಿದರು. ಒಪ್ಪಿಕೊಂಡು ಕೆಲಸ ಶುರು ಮಾಡಿದೆ. ಓದುವುದು ಬೇರೆ. ಬರೆಯುವುದು ಬೇರೆ. ಇನ್ನು ಅನುವಾದಿಸುವುದು ಎಂದರೆ ಅದು ಸವಾಲಿನ ಕೆಲಸವೇ. ಏಕೆಂದರೆ ನಮ್ಮದನ್ನು ಬರೆದು ಸಮರ್ಥಿಸಿಕೊಳ್ಳಬಹುದು. ಅನುವಾದಿಸುವಾಗ ಮೂಲ ಲೇಖಕರ ಆಶಯಕ್ಕೆ ಅಡ್ಡಿಯಾಗದಂತ ನೋಡಿಕೊಳ್ಳುವ ಎಚ್ಚರಿಕೆಯನ್ನು ಇಟ್ಟುಕೊಂಡೇ ಕೆಲಸ ಮಾಡಿದೆ. ಗೂಗಲ್‌ ಜತೆಗೆ ಡಿಕ್ಷನರಿಗಳು ಸಹಾಯಕ್ಕೆ ಬಂದವು. ಇದೇ ವಿಷಯದ ಹಲವಾರು ತಜ್ಞರು ಬೆಂಬಲವಾಗಿ ನಿಂತರು. ಹೈದ್ರಾಬಾದ್‌ನಲ್ಲಿದ್ದ ಡಾ.ಶಾಮಲಾ ರವಿ ಎನ್ನುವವರು ಕೃತಿಯನ್ನು ಮತ್ತಷ್ಟು ತಿದ್ದಿ ತೀಡಿದರು. ಇದರಿಂದ ಹಸುರು ಹೊನ್ನು ಇಂಗ್ಲೀಷ್‌ ಕೃತಿ 462 ಪುಟಗಳಲ್ಲಿ ಹೊರ ಬಂದಿದೆ.

ಕನ್ನಡದ ಕೃತಿಗಳು ಆಂಗ್ಲ ಭಾಷೆಗೆ ಸಿಗಬೇಕು. ಎಲ್ಲೆಡೆ ಹರಡಬೇಕು ಎನ್ನುವ ಸದಾಶಯ ನಮ್ಮದು. ನಾವು ಮದುವೆಯಾಗಿ ಮುಂದಿನ ವರ್ಷಕ್ಕೆ 50 ವರ್ಷ. ಈ ಐದು ದಶಕದ ದಾಂಪತ್ಯ ಯಾನದ ನೆನಪಾಗಿ ಇಬ್ಬರೂ ಒಂದೊಂದು ಕೃತಿಯನ್ನು ಅನುವಾದಿಸಿದ ಖುಷಿ, ನೆಮ್ಮದಿಯಂತೂ ಇದೆ. ಈ ವಿಚಾರಗಳು ಇನ್ನಷ್ಟು ಜನರಿಗೆ ತಲುಪಿದರೆ ನಮ್ಮ ಪ್ರಯತ್ನ, ಡಿವಿಜಿ ಬಳಗದ ಕಾಯಕಕ್ಕೂ ಸಿಕ್ಕ ಮನ್ನಣೆ ಎಂದು ಜ್ಯೋತಿ ನಟರಾಜನ್‌ ಅಭಿಮಾನದ ಮಾತು ಹಂಚಿಕೊಂಡರು.

(ಸಂದರ್ಶನ ಮತ್ತು ನಿರೂಪಣೆ: ಕುಂದೂರು ಉಮೇಶ ಭಟ್ಟ)

ಕಾರ್ಯಕ್ರಮದ ವಿವರ ಇಲ್ಲಿದೆ

Whats_app_banner