KCET 2025: ಸಿಇಟಿ ಪಠ್ಯಕ್ರಮ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸಾಮಾನ್ಯ ಪ್ರವೇಶ ಪರೀಕ್ಷೆಗೆ ಜನವರಿ 23ರಿಂದ ಅರ್ಜಿ ಸಲ್ಲಿಸಿ
Karnataka CET Exam 2025: ಸಿಇಟಿ ಪಠ್ಯಕ್ರಮ/ಸಿಲೇಬಸ್ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ. ಎಂಜಿನಿಯರಿಂಗ್, ಪಶುವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಏಪ್ರಿಲ್ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ.

ಬೆಂಗಳೂರು: ಸಿಇಟಿ ಪಠ್ಯಕ್ರಮ/ಸಿಲೇಬಸ್ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ. ಎಂಜಿನಿಯರಿಂಗ್, ಪಶುವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಏಪ್ರಿಲ್ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಮತ್ತು ಜೀವವಿಜ್ಞಾನ ಸಿಲೇಬಸ್ ಅನ್ನು ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಹೇಳಿದ್ದಾರೆ. ಎನ್‌ಸಿಆರ್‌ಟಿಸಿ ಪಠ್ಯಕ್ರಮ ಮತ್ತು ಶಾಲಾ ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ಆಧಾರವಾಗಿಟ್ಟುಕೊಂಡು ಈ ಸಿಲೇಬಸ್ ರಚಿಸಲಾಗಿದೆ. ಈ ಸಿಲೇಬಸ್ ಅನ್ನು ಪಿಯು ಕಾಲೇಜುಗಳ ವಿಷಯ ತಜ್ಞರಿಂದ ಪರಿಶೀಲನೆ ಮಾಡಿಸಲಾಗಿದೆ. ಈ ಸಿಲೇಬಸ್ ನೋಡಿಕೊಂಡು ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಸಿಇಟಿ ಪರೀಕ್ಷೆ ಯಾವಾಗ?
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ನಡೆಸಲಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 23ರಿಂದ ಫೆಬ್ರುವರಿ 21ರವರೆಗೆ ಅವಕಾಶ ನೀಡಲಾಗಿದೆ. ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (ಡಿಸಿಇಟಿ), ಪಿಜಿಸಿಇಟಿ ಮತ್ತು ಎಂ.ಫಾರ್ಮಾ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗಳ ದಿನಾಂಕಗಳನ್ನೂ ಇತ್ತೀಚೆಗೆ ಘೋಷಿಸಲಾಗಿತ್ತು.
ಪರೀಕ್ಷಾ ಸಮಯ ಮತ್ತು ವಿಷಯ
- ಏಪ್ರಿಲ್ 16ರಂದು ಬೆಳಿಗ್ಗೆ 10.30ರಿಂದ ಭೌತವಿಜ್ಞಾನ
- ಏಪ್ರಿಲ್ 16ರಂದು ಮಧ್ಯಾಹ್ನ 2.30ರಿಂದ ರಸಾಯನ ವಿಜ್ಞಾನ
- ಏಪ್ರಿಲ್ 17ರಂದು ಬೆಳಿಗ್ಗೆ ಗಣಿತ
- ಏಪ್ರಿಲ್ 17ರಂದು ಮಧ್ಯಾಹ್ನ ಜೀವವಿಜ್ಞಾನ
- ಏ.18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ
ಜನವರಿ 23ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ
ಸಿಇಟಿ-2025 ರ ಅರ್ಜಿಯು ಎಲ್ಲಾ ಕೋರ್ಸುಗಳಿಗೆ ಸಾಮಾನ್ಯ ಅರ್ಜಿಯಾಗಿರುವುದರಿಂದ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಪ್ರವೇಶಾತಿಗೂ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೊಂದಾಯಿಸಿಕೊಂಡು, ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ. ಅದೇ ರೀತಿ ಆರ್ಕಿಟೆಕ್ಚರ್, ಬಿಪಿಟಿ, ಬಿಪಿಒ, ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳ ಪ್ರವೇಶಾತಿಗೆ ಇದೇ ಅರ್ಜಿ ಅನ್ವಯವಾಗುತ್ತಿದ್ದು, ಅವರು ಕೂಡ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ: cetonline.karnataka.gov.in
