ಕನ್ನಡ ಸುದ್ದಿ  /  ಕರ್ನಾಟಕ  /  Shantappa Kurubara: 12ನೇ ತರಗತಿ ಅನುತ್ತೀರ್ಣದಿಂದ ಯುಪಿಎಸ್‌ಸಿವರೆಗೆ; ಶಾಂತಪ್ಪ ಕುರುಬರ ಪ್ರಯಾಣ ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ

Shantappa Kurubara: 12ನೇ ತರಗತಿ ಅನುತ್ತೀರ್ಣದಿಂದ ಯುಪಿಎಸ್‌ಸಿವರೆಗೆ; ಶಾಂತಪ್ಪ ಕುರುಬರ ಪ್ರಯಾಣ ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ

Shantappa Kurubara: ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದೆ. ಇಂಗ್ಲಿಷ್‌ ದೊಡ್ಡ ಸವಾಲಾಗಿತ್ತು. ಯುಪಿಎಸ್‌ಸಿಗಾಗಿ ಪಿಎಸ್‌ಐ ಹುದ್ದೆ ತೊರೆಯಲು ಸಿದ್ಧವಿರಲಿಲ್ಲ. ಯಾಕೆಂದರೆ ನಾನು ಕುಟುಂಬಕ್ಕೆ ಏಕೈಕ ಆಧಾರವಾಗಿದ್ದೆ ಎಂದು ಶಾಂತಪ್ಪ ಕುರುಬರ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.

2023ನೇ ಸಾಲಿನ ಯುಪಿಎಸ್‌ಸಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 644ನೇ ರ‍್ಯಾಂಕ್ ಪಡೆದಿರುವ ಪಿಎಸ್‌ಐ ಶಾಂತಪ್ಪ ಕುರುಬರ.
2023ನೇ ಸಾಲಿನ ಯುಪಿಎಸ್‌ಸಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 644ನೇ ರ‍್ಯಾಂಕ್ ಪಡೆದಿರುವ ಪಿಎಸ್‌ಐ ಶಾಂತಪ್ಪ ಕುರುಬರ.

ಬೆಂಗಳೂರು: ಸಾಧಿಸಬೇಕೆಂಬ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಬಳ್ಳಾರಿ ಜಿಲ್ಲೆಯ ಗೆಣಿಕೆಹಾಳ್ ಗ್ರಾಮದ ಶಾಂತಪ್ಪ ಕುರುಬರ (Shantappa Kurubara) ಅವರು ತೋರಿಸಿಕೊಟ್ಟಿದ್ದಾರೆ. ಬಡತನದಿಂದ ಬಂದ ಶಾಂತಪ್ಪ ಅವರು ದ್ವಿತೀಯ ಪಿಯುಸಿಯಲ್ಲಿ ಫೇಲ್ ಆಗಿದ್ದವರು. ಆದರೆ ಛಲ ಬಿಡದೆ ಯುಪಿಎಸ್‌ಸಿಯ (UPSC) 2023ನೇ ಸಾಲಿನ ಪರೀಕ್ಷೆಯಲ್ಲಿ 644ನೇ ರ‍್ಯಾಂಕ್ ಪಡೆದು ದೇಶದ ಗಮನ ಸೆಳೆದಿದ್ದಾರೆ. ನಾಗರಿಕ ಸೇವಾ ಪರೀಕ್ಷೆ (Civil Service Examination) ಬರೆಯಲು ಇವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಒಂದಲ್ಲ, ಎರಡಲ್ಲ, ಐದಲ್ಲ, ಆರಲ್ಲ ಬರೋಬ್ಬರಿ 7 ಪ್ರಯತ್ನಗಳ ನಂತರ ಯುಪಿಎಸ್‌ಸಿಯಲ್ಲಿ ತೇರ್ಗಡೆಯಾಗಿದ್ದಾರೆ. 8ನೇ ಪ್ರಯತ್ನದಲ್ಲಿ ದೇಶಕ್ಕೆ 644ನೇ ರ‍್ಯಾಂಕ್ ಬಂದಿದ್ದಾರೆ. ಶಾಂತಪ್ಪ ನಡೆದು ಬಂದ ಹಾದಿ, ಎದುರಿಸಿದ ಸವಾಲುಗಳು ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನ ಆಧಾರಿತ '12th ಫೇಲ್' ಸಿನಿಮಾವನ್ನು ಹೋಲುತ್ತದೆ. ಮನೋಜ್ ಕುಮಾರ್ ಶರ್ಮಾ ಅವರು ಕೂಡ 12ನೇ ತರಗತಿ ಫೇಲ್ ಆಗಿದ್ದರು. ನಂತರ ಐಪಿಎಸ್ ಅಧಿಕಾರಿಯಾದರು.

ಟ್ರೆಂಡಿಂಗ್​ ಸುದ್ದಿ

ಪ್ರಸ್ತುತ ಬೆಂಗಳೂರಿನ ಡಿಸಿಪಿ ಕಮಾಂಡ್ ಸೆಂಟರ್‌ನಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಶಾಂತಪ್ಪ ಕುರುಬರ ಅವರು ಈಗಾಗಲೇ ಹಲವು ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆದಿದ್ದಾರೆ. ಶೌಚಾಲಯಗಳನ್ನು ನಿರ್ಮಿಸುವುದು, ವಲಸೆ ಕಾರ್ಮಿಕರಿಗೆ ಶಿಕ್ಷಣ ಹಾಗೂ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಮಾರ್ಗದರ್ಶನ ಸೇರಿದಂತೆ ಹಲವು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಶಾಂತಪ್ಪ ಕುರುಬರ ಅವರು ಕೃಷಿ ಕುಟುಂಬದಲ್ಲಿ ಜನಿಸಿದವರು. ಇವರು ಹುಟ್ಟಿದ ಒಂದು ವರ್ಷಕ್ಕೆ ತಂದೆಯನ್ನು ಕಳೆದುಕೊಳ್ಳುತ್ತಾರೆ. ಆರ್ಥಿಕವಾಗಿ ತುಂಬಾ ಕಷ್ಟುಗಳನ್ನು ಎದುರಿಸುತ್ತಾರೆ. ಇವರ ಕುಟುಂಬದಲ್ಲಿ ಶಿಕ್ಷಣಕ್ಕೆ ಅಷ್ಟೊಂದು ಮಹತ್ವ ಇರುವುದಿಲ್ಲ. ಶಾಂತಪ್ಪ ಅವರು ಪ್ರಥಮ ಪಿಯುಸಿಯಲ್ಲಿ ಫೇಲ್ ಆಗಿ ಪೂರಕ ಪರೀಕ್ಷೆಯಲ್ಲಿ ಪಾಸ್ ಆಗಿ ದ್ವಿತೀಯ ಪಿಯುಸಿಗೆ ಪ್ರವೇಶಿಸುತ್ತಾರೆ. ಬಳಿಕ ದ್ವಿತೀಯ ಪಿಯುಸಿಯಲ್ಲೂ ಅನುತೀರ್ಣರಾಗುತ್ತಾರೆ. ಒಂದು ವರ್ಷದ ಗ್ಯಾಪ್ ಬಳಿಕ 2009 ರಲ್ಲಿ ಶೇಕಡಾ 39 ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ಪಿಯುಸಿಯನ್ನು ಪಾಸ್ ಮಾಡಿಕೊಳ್ಳುತ್ತಾರೆ. ದ್ವಿತೀಯ ಪಿಯುಪಸಿ ಅನುತೀರ್ಣರಾದಾಗ ಒಂದು ವರ್ಷದ ಗ್ಯಾಪ್ ಆಗುತ್ತದೆ. ಇದು ಇವರ ಜೀವನದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ.

ತಾವು ನಡೆದು ಬಂದ ಹಾದಿಯ ಬಗ್ಗೆ ಶಾಂತಪ್ಪ ಕುರುಬರ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ್ದಾರೆ. ಅದರ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ. ನಾವು ಕೃಷಿ ಮತ್ತು ಕಾರ್ಮಿಕ ಸಮುದಾಯದಿಂದ ಬಂದವರು. ಈ ಹಿಂದೆ ಗ್ರಾಮೀಣ ಭಾಗದಲ್ಲಿ ಶಿಕ್ಷಣ ವ್ಯವಸ್ಥೆ ಗಟ್ಟಿಯಾಗಿರಲಿಲ್ಲ. ನಾನು 12ನೇ ತರಗತಿ ಪಾಸ್ ಮಾಡಲು ವಿಫಲವಾದ ನಂತರ ನನ್ನ ಜೀವನ ವ್ಯರ್ಥ ಅಂತ ಭಾವಿಸಿದೆ. ಜನರು ನನ್ನ ಪ್ರಯೋಜನಕ್ಕೆ ಬಾರದವನು ಅನ್ನೋ ರೀತಿಯಲ್ಲೇ ನೋಡಿತು. ಹಳ್ಳಿ ಜನರು ಕಥೆಗಳನ್ನು ಕಟ್ಟಿ ನನ್ನ ವ್ಯಕ್ತಿತ್ವದ ಬಗ್ಗೆ ನೋವು ತರುವಂತೆ ಮಾತನಾಡಿಕೊಂಡರು. ಆದರೆ ಇದ್ಯಾವುದಕ್ಕೂ ತಲೆ ಕೆಡೆಸಿಕೊಳ್ಳದೆ ಜೀವನದ ಉದ್ದೇಶವನ್ನು ಅರಿತುಕೊಂಡೆ ಎಂದು ಸಂಕಷ್ಟದ ದಿನಗಳನ್ನು ಸ್ಮರಿಸಿದ್ದಾರೆ.

ಪುಸ್ತಕಗಳು ಯಶಸ್ಸಿನ ಕೀಲಿಕೈ ಎಂಬುದನ್ನು ಅರಿತುಕೊಂಡೆ. ಒಂದು ವರ್ಷದ ಗ್ಯಾಪ್ ಬಳಿಕ 2009ರಲ್ಲಿ ದ್ವಿತೀಯ ಪಿಯುಸಿಯನ್ನು ಶೇಕಡಾ 39 ರಷ್ಟು ಅಂಕಗಳೊಂದಿಗೆ ಪಾಸ್ ಮಾಡಿಕೊಂಡೆ. ಆ ನಂತರ ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಸಾಮಾನ್ಯ ಬಿಎಸ್‌ಸಿಯಲ್ಲಿ ಮೂರು ವರ್ಷದ ಕೋರ್ಸ್‌ಗೆ ಸೇರಿಕೊಂಡೆ. ಓದಿನ ಬಗ್ಗೆ ಆಸಕ್ತಿ ಹೆಚ್ಚಿತು. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ವಚನಕಾರ ಸಿದ್ದಲಿಂಗ ಸ್ವಾಮೀಜಿ ಹಾಗೂ ಮಾಜಿ ಸಿಎಂ ಡಿ ದೇವರಾಜ ಅರಸು ಅವರ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ಸಾಮಾಜಿಕ ಕಾರ್ಯಕ್ರಗಳಲ್ಲೂ ತೊಡಗಿಸಿಕೊಂಡಿದ್ದೇನೆ ಎಂದು ಶಾಂತಪ್ಪ ಹೇಳಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವುದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ನೀಡುವ ಗುರಿಯನ್ನು ಹಾಕಿಕೊಂಡು ಅದರಂತೆ ಕೆಲಸಗಳನ್ನು ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

2014 ರಲ್ಲಿ ಮೊದಲ ಬಾರಿಗೆ ಯುಪಿಎಸ್ಇಯ ನಾಗರಿಕ ಸೇವಾ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ ನಿರಾಸೆಯನ್ನು ಅನುಭವಿಸುತ್ತಾರೆ. ಇದಾದ ಬಳಿಕ ಅಂದರೆ ಬರೋಬ್ಬರಿ 10 ವರ್ಷಗಳ ಬಳಿಕ 8ನೇ ಪ್ರಯತ್ನದಲ್ಲಿ ಯುಪಿಎಸ್‌ಸಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಆದರೆ ಇದಕ್ಕೂ ಮುನ್ನ ಅಂದ್ರೆ 2016 ರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪಿಎಸ್‌ಐ ಆಗಿ ತಮ್ಮ ಪೊಲೀಸ್ ಸೇವೆಯನ್ನು ಪ್ರಾರಂಭಿಸುತ್ತಾರೆ. ಸಬ್‌ಇನ್ಸ್‌ಪೆಕ್ಟರ್ ಸೇವೆಯನ್ನು ಮಾಡುತ್ತಲೇ ಎಲ್ಲಾ ಅಡೆತಡೆಗಳನ್ನು ಮೀರಿ 2023ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 644ನೇ ರ‍್ಯಾಂಕ್ ಪಡೆದಿದ್ದಾರೆ. ಈ ವೇಳೆ ತಮ್ಮ ಈ ಸಾಧನೆಗೆ ನೆರವಾದ ಪೊಲೀಸ್ ಅಧಿಕಾರಿಗಳನ್ನೂ ಸ್ಮರಿಸಿದ್ದಾರೆ.

ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದೆ. ಇಂಗ್ಲಿಷ್‌ಗೆ ಹೊಂದಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಯುಪಿಎಸ್‌ಸಿಗಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಪಿಎಸ್‌ಐ ಹುದ್ದೆಯನ್ನು ತೊರೆಯಲು ನಾನು ಸಿದ್ಧವಿರಲಿಲ್ಲ. ಯಾಕೆಂದರೆ ನಾನು ಕುಟುಂಬಕ್ಕೆ ಏಕೈಕ ಆಧಾರವಾಗಿದ್ದೆ. ಹೀಗಾಗಿ ಪಿಎಸ್‌ಐ ಸೇವೆಯ ಜೊತೆಯಲ್ಲೇ ಯುಪಿಎಸ್‌ಸಿಗೆ ತಯಾರಿ ನಡೆಸಿದ್ದೆ ಎಂದು ಶಾಂತಪ್ಪ ಕುರುಬರ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

IPL_Entry_Point