Bangalore News: ಕೌಶಲ್ಯ ತರಬೇತಿಗೆ ಒತ್ತು, ಭಾಷಾ ಪ್ರಯೋಗಾಲಯ ಮತ್ತು ಫಿನಿಶಿಂಗ್ ಸ್ಕೂಲ್ ಆರಂಭಿಸಿದ ಬೆಂಗಳೂರು ವಿಶ್ವವಿದ್ಯಾನಿಲಯ
Bangalore University ವಿದ್ಯಾರ್ಥಿಗಳಲ್ಲಿನ ವೃತ್ತಿ ಕೌಶಲ್ಯಕ್ಕೆ ಪೂರಕವಾಗಿ ಬೆಂಗಳೂರು ವಿಶ್ವವಿದ್ಯಾನಿಲಯವು ಭಾಷಾ ಪ್ರಯೋಗಾಲಯ ಮತ್ತು ಫಿನಿಶಿಂಗ್ ಸ್ಕೂಲ್ ಅನ್ನು ಆರಂಭಿಸಿದೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಕನ್ನಡ ಮಾಧ್ಯಮದ ಹಿನ್ನಲೆಯಿಂದ ಬಂದಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಲಭಿಸಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಭಾಷಾ ಪ್ರಯೋಗಾಲಯ ಮತ್ತು ಫಿನಿಶಿಂಗ್ ಸ್ಕೂಲ್ ಆರಂಭಿಸಲು ನಿರ್ಧರಿಸಿದೆ. ಈ ವಿಶ್ವವಿದ್ಯಾಲಯಕ್ಕೆ ಆಗಮಿಸುವ ಬಹುತೇಕ ವಿದ್ಯಾರ್ಥಿಗಳು ಬೆಂಗಳೂರು ಸುತ್ತಮುತ್ತಲಿನ ಗ್ರಾಮೀಣ ಭಾಗದವರೇ ಆಗಿದ್ದು, ಇಂಗ್ಲೀಷ್ ಭಾಷೆಯಲ್ಲಿ ಕೌಶಲ್ಯ ಹೊಂದಿಲ್ಲ ಎಂಬ ಒಂದೇ ಕಾರಣಕ್ಕೆ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿರುವುದು ಸಾಬೀತಾಗಿದೆ. ಬಹು ರಾಷ್ಟ್ರೀಯ ಕಂಪನಿ ಸೇರಿದಂತೆ ಅನೇಕ ವಲಯಗಳಲ್ಲಿ ಭಾಷಾ ಕೌಶಲ್ಯನ್ನೂ ಪ್ರಮುಖ ಆಯ್ಕೆಯನ್ನಾಗಿ ಪರಿಗಣಿಸಲಾಗುತ್ತದೆ.
ಈ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಇಂಗ್ಲೀಷ್, ಕಂಪ್ಯೂಟರ್ ಮತ್ತು ಇತರ ಕೌಶಲ್ಯಗಳನ್ನು ಕಲಿಸಲು ಮುಂದಾಗಿರುವುದು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸ್ನಾಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳಿಗೆ ಈ ತರಬೇತಿ ನೀಡಲಾಗುತ್ತದೆ. ಪ್ರತಿ ತಂಡದಲ್ಲಿ 25 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ವಿಶ್ವವಿದ್ಯಾಲಯದಮೂಲಗಳು ತಿಳಿಸಿವೆ.
ಈ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಬಂದವರೇ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಮಾಧ್ಯಮದಲ್ಲಿ
ಶಿಕ್ಷಣ ಪಡೆದಿರುತ್ತಾರೆ. ಒಂದು ಕಡೆ ಸರ್ಕಾರಿ ನೌಕರಿಗಳಲ್ಲಿ ಕುಸಿತ ಕಂಡು ಬರುತ್ತಿದ್ದು ಯುವ ಜನತೆ ಖಾಸಗಿ ಉದ್ಯೋಗಾವಕಾಶಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ
ಎದುರಾಗಿದೆ. ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ನಂತೆ ಉದ್ಯೋಗ ಹುಡುಕುವಾಗ ಇಂಗ್ಲೀಷ್ ಸಂವಹನ ಕೌಶಲ್ಯ ಇಲ್ಲದೇ ಇರುವುದು ಪ್ರಮುಖ ಕೊರತೆಯಾಗಿ ಕಂಡು ಬಂದಿದೆ. ಎಲ್ಲ ರೀತಿಯ ಅರ್ಹತೆಗಳಿದ್ದರೂ ಭಾಷೆಯ ಮೇಲೆ ಹಿಡಿತ ಇಲ್ಲ ಎಂಬ ಒಂದೇ ಕಾರಣಕ್ಕೆ ಉದ್ಯೋಗ ವಂಚಿತರಾಗುತ್ತಿರುವುದು ಎಲ್ಲ ವಲಯಗಳಲ್ಲೂ ಕಂಡು ಬರುತ್ತಿದೆ.
ಶೈಕ್ಷಣಿಕವಾಗಿ ಎಲ್ಲ ಅರ್ಹತೆ ಹೊಂದಿದ್ದರೂ ಕೌಶಲ್ಯರಹಿತರು ಎಂಬ ಕಾರಣಕ್ಕೆ ಪ್ರತಿಭಾವಂತ ಪದವೀಧರರೂ ಖಾಸಗಿ ವಲಯದ ಉದ್ಯೋಗಳಿಂದ ವಂಚಿತರಾಗುತ್ತಿದ್ದಾರೆ. ಈ ಉದ್ಯೋಗಳಿಗೆ ನಮ್ಮ ವಿದ್ಯಾರ್ಥಿಗಳನ್ನೂ ಸಜ್ಜುಗೊಳಿಸುವ ನಿಟ್ಟಿನಲ್ಲಿ ಇಂಗ್ಲೀಷ್ ಭಾಷಾ ಸಂವಹನ, ಕಂಪ್ಯೂಟರ್ ತರಬೇತಿ ಮೊದಲಾದ ಕೌಶಲ್ಯಗಳನ್ನು ಕಲಿಸಬೇಕಾಗುತ್ತದೆ. ಆದ್ದರಿಂದ ಭಾಷಾ ಪ್ರಯೋಗಾಲಯ ಮತ್ತು ಫಿನಿಶಿಂಗ್ ಸ್ಕೂಲ್ ಆರಂಭಿಸಿದ್ದೇವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಂ.ಎಸ್.ಜಯಕರ್ ಹೇಳುತ್ತಾರೆ.
ಭಾಷಾ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳ ಇಂಗ್ಲೀಷ್ ಪರಿಣಿತಿಯ ಮಟ್ಟವನ್ನು ಅಳೆದು ಅವರಿಗೆ ಮೂಲ ಸಂವಹನಾ ತರಬೇತಿಯನ್ನು ನೀಡಲಾಗುತ್ತದೆ. ಪ್ರತಿ ಹಂತದಲ್ಲೂ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಹೆಚ್ಚಿಸಲಾಗುವುದು. ವಿದ್ಯಾರ್ಥಿಗಳು ಸಂಪೂರ್ಣವಾಗಿ ಇಂಗ್ಲೀಷ್ ಭಾಷೆಯನ್ನು ಕಲಿತುಕೊಂಡು ಸ್ವತಂತ್ರವಾಗಿ ಸಂವಹನ ನಡೆಸಬಲ್ಲರು ಎನ್ನವುದು ಖಚಿತವಾಗುವವರೆಗೂ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಫಿನಿಶಿಂಗ್ ಸ್ಕೂಲ್ ನಲ್ಲಿ ಸಂವಹನದ ಜೊತೆಗೆ ಕಂಪ್ಯೂಟರ್ ತರಬೇತಿ, ಸಮಸ್ಯೆಗಳ ನಿವಾರಣೆ, ಕ್ರಿಯೆಟೀವ್ ಥಿಂಕಿಂಗ್ ಗೆ ಪ್ರೋತ್ಸಾಹಿಸಲಾಗುವುದು. ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವರನ್ನು ಸಜ್ಜುಗೊಳಿಸಲಾಗುತ್ತದೆ. ಪರೀಕ್ಷೆ ಮತ್ತು ಸಂದರ್ಶನ ಎದುರಿಸುವುದು, ಸಾಮಾನ್ಯರೊಂದಿಗೆ ಇ ಮೇಲ್ ಮೂಲಕ ವ್ಯವಹರಿಸುವುದು, ಕಂಪನಿ ವ್ಯವಹಾರ ಮೊದಲಾದ ವಿಷಯಗಳನ್ನು ಕುರಿತು ತರಬೇತುಗೊಳಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಇಂತಹ ಕಾರ್ಯಕ್ರಮಗಳು ತುಂಬಾ ಸಹಾಯಕವಾಗುತ್ತವೆ. ಈ ತರಬೇತಿಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ಪ್ರತಿ ತಂಡಕ್ಕೆ 80 ಗಂಟೆಗಳ ತರಬೇತಿ ನೀಡಲಾಗುತ್ತದೆ. ನಮ್ಮ ಶಿಕ್ಷಕರ ತಂಡಗಳೂ ವಿದ್ಯಾರ್ಥಿಗಳಿಗೆ ಗರಿಷ್ಠ ಪ್ರಮಾಣದ ತರಬೇತಿ ನೀಡಲಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಈ ಕಾರ್ಯಕ್ರಮದ
ಸದುಪಯೋಗ ಪಡೆದುಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ. ಖಾಸಗಿಯಾಗಿ ಇಂತಹ ತರಬೇತಿ ಪಡೆಯಲು ವಿದ್ಯಾರ್ಥಿಗಳು ಸಾವಿರಾರು ರೂ.ಗಳ ಹಣವನ್ನು ವ್ಯಯಮಾಡಬೇಕಾಗುತ್ತದೆ. ವಿಶ್ವವಿದ್ಯಾಲಯವೊಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಇಂತಹ ಯೋಜನೆಯನ್ನು ಜಾರಿಗೊಳಿಸಿರುವುದುಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
ವರದಿ: ಎಚ್.ಮಾರುತಿ. ಬೆಂಗಳೂರು